ಶುರುವಾಯಿತು ಕ್ರಿಕೆಟ್ ಹಬ್ಬ – ಐ.ಪಿ.ಎಲ್ 2018 (ಕಂತು-2)

– ರಾಮಚಂದ್ರ ಮಹಾರುದ್ರಪ್ಪ.

ಐಪಿಎಲ್ 11, ಐಪಿಎಲ್ 2018, IPL 11, IPL 2018

ಹಿಂದಿನ ಬರಹದಲ್ಲಿ ಐ ಪಿ ಎಲ್ ನ ನಾಲ್ಕು ತಂಡಗಳ ಬಗ್ಗೆ ತಿಳಿಸಲಾಗಿತ್ತು. ಈ ಬರಹದಲ್ಲಿ ಇನ್ನುಳಿದ ತಂಡಗಳ ಬಗ್ಗೆ ನೋಡೋಣ

ರಾಜಸ್ತಾನ್ ರಾಯಲ್ಸ್

ಐಪಿಎಲ್  2018 ಮುನ್ನ

ಪಂದ್ಯಗಳು : 116
ಗೆಲುವು : 59
ಸೋಲು : 53

ತಂಡದಲ್ಲಿ ಶೇನ್ ವಾರ‍್ನ್ ರ ಹೊರತು ಯಾವ ದೊಡ್ಡ ಆಟಗಾರರೂ ಇಲ್ಲದೇ 2008 ರ ಮೊದಲನೇ ಐಪಿಎಲ್ ಗೆದ್ದು ಅಚ್ಚರಿ ಮೂಡಿಸಿದ್ದ ರಾಜಸ್ತಾನ್ ತಂಡ ಅದಾದ ನಂತರ ಕೇವಲ ಎರಡು ಬಾರಿ ಸೆಮಿ ಪೈನಲ್ ತಲುಪಿದೆ. ಇಲ್ಲಿಯ ತನಕ ಒಟ್ಟು ಎಂಟು ಐಪಿಎಲ್ ಪಂದ್ಯಾವಳಿಗಳಲ್ಲಿ ಪಾಲ್ಗೊಂಡಿರೋ ರಾಜಸ್ತಾನ್, ಚೆನ್ನೈ ನಂತೆ ತಂಡದ ಒಡೆಯರ ಜೂಜು ಪ್ರಕರಣದಿಂದ ಎರಡು ವರ‍್ಶ ನಿಶೇದಕ್ಕೊಳಗಾಗಿತ್ತು. ಒಂದು ಮದ್ಯಮ ವರ‍್ಗದ ಕುಟುಂಬದ ಹಾಗೆ ಇಲ್ಲಿಯ ತನಕ ಹರಾಜಿನಲ್ಲಿ ಅಳೆದು ತೂಗಿ ಆಟಗಾರರನ್ನು ಕಡಿಮೆ ಬೆಲೆಗೆ ಆರಿಸುತ್ತಿದ್ದ ರಾಜಸ್ತಾನ್, 2018 ರ ಹರಾಜಿನಲ್ಲಿ ಬೆನ್ ಸ್ಟೋಕ್ಸ್ ರನ್ನು ಪಡೆಯಲು12.5 ಕೋಟಿ ಮತ್ತು ಉನಾಡ್ಕಟ್ ರನ್ನು ಪಡೆಯಲು 11.5 ಕೋಟಿ ಚೆಲ್ಲಿ ಇತರರು ಬೆರಗು ಕಣ್ಗಳಿಂದ ತಮ್ಮತ್ತ ನೋಡುವಂತೆ ಮಾಡಿತು. ಇವೆರಡು ಕೊಳ್ಳಿಕೆಗಳು ಈ ಬಾರಿಯ ಹರಾಜಿನ ಎರಡು ಹೆಚ್ಚು ದುಬಾರಿ ಕೊಳ್ಳಿಕೆಗಳಾದವು. ಜೊತೆಗೆ ಇನ್ನೂ ಅಂತರಾಶ್ಟ್ರೀಯ ಕ್ರಿಕೆಟ್ ಆಡದ ಕರ‍್ನಾಟಕದ ಕ್ರಿಶ್ಣಪ್ಪ ಗೌತಮ್ ರನ್ನು 6.4 ಕೋಟಿಗಳಿಗೆ ಆರಿಸಿತು. ಇದನ್ನು ನೋಡಿದರೆ ರಾಜಸ್ತಾನ್ ತಂಡದ ಉದ್ದೇಶ ತಿಳಿಯುತ್ತದೆ. ತಮಗೆ ಬೇಕಾದ ಆಟಗರಾರನ್ನು ಪಡೆಯಲು ಎಶ್ಟು ಹಣ ಬೇಕಾದರೂ ಚೆಲ್ಲೋ ದೈರ‍್ಯ ಈ ತಂಡದ ಒಡೆಯರು ತೋರಿರುವುದು ಕಾಣುತ್ತದೆ. ಇದೊಂದು ದೊಡ್ಡ ಬದಲಾವಣೆ ಎಂದೇ ಹೇಳಬೇಕು.

ಸ್ಮಿತ್ ರ ನಿಶೇದದಿಂದ ನಾಯಕತ್ವದ ಹೊಣೆ ಈಗ ರಹಾನೆ ಅವರ ಪಾಲಾದರೆ ಸಹಾಯಕರಾಗಿ ವಾರ‍್ನ್ ಮರಳಿರೋದು ತಂಡಕ್ಕೆ ಆನೆ ಬಲ ಬಂದಂತಾಗಿದೆ. ರಹಾನೆ ಜೊತೆಗೆ ಬಟ್ಲರ್, ತ್ರಿಪಾಟಿ, ಸಾಮ್ಸನ್, ಕ್ಲಾಸನ್, ಡಾರ‍್ಸಿ ಶಾರ‍್ಟ್ ಮುಕ್ಯ ಬ್ಯಾಟ್ಸ್ಮನ್ ಗಳಾದರೆ ಉನಾಡ್ಕಟ್, ಲಾಪ್ಲಿನ್, ಚಮೀರಾ, ದವಳ್ ಕುಲ್ಕರ‍್ಣಿ ಮತ್ತು ಅನುರೀತ್ ಸಿಂಗ್ ತಂಡದ ಪ್ರಮುಕ ಬೌಲರ್ ಗಳು. ಆದರೆ ಈ ತಂಡದ ದೊಡ್ಡ ಶಕ್ತಿ ಇವರ ಬಳಿಯಿರೋ ಆಲ್ ರೌಂಡರ್ ಗಳು. ಯಾವ ತಂಡದಲ್ಲೂ ಇಶ್ಟು ಆಲ್ ರೌಂಡರ್ ಗಳಿಲ್ಲ. ಬೆನ್ ಸ್ಟೋಕ್ಸ್, ಆರ‍್ಚರ್, ಬಿನ್ನಿ, ಶ್ರೇಯಸ್ ಗೋಪಾಲ್ ಮತ್ತು ಗೌತಮ್ ಬ್ಯಾಟ್ ಮತ್ತು ಬಾಲ್ ಎರಡರಿಂದಲೂ ಪಂದ್ಯ ಗೆಲ್ಲಿಸುವ ಅಳವು ಹೊಂದಿದ್ದಾರೆ. ಕರ‍್ನಾಟಕದ ಮೂವರು ಆಟಗಾರರು ರಾಜಸ್ತಾನ್ ತಂಡದಲ್ಲಿರೋದರಿಂದ ಕನ್ನಡಿಗರೂ ಸಹ ಈ ತಂಡದ ಪಂದ್ಯಗಳನ್ನು ಆಸಕ್ತಿಯಿಂದ ನೋಡೋದು ದಿಟ. ರಾಜಸ್ತಾನ್ ತಂಡ ಹಳೆ ಕಹಿ ಅನುಬವಗಳನ್ನು ಮರೆತು ಹೊಸ ತಂಡ ಕಟ್ಟಿ ಈ ಬಾರಿಯ ಐಪಿಎಲ್ ಗೆಲ್ಲಲು ಸಜ್ಜಾಗಿದೆ.

ಕಿಂಗ್ಸ್ ಇಲೆವೆನ್ ಪಂಜಾಬ್

ಐಪಿಎಲ್  2018 ಮುನ್ನ

ಪಂದ್ಯಗಳು : 148
ಗೆಲುವು : 70
ಸೋಲು : 78

ಎಲ್ಲಾ ಹತ್ತು ಐಪಿಎಲ್ ಗಳಲ್ಲಿ ಪಾಲ್ಗೊಂಡಿರುವ ಪಂಜಾಬ್ ತಂಡ 2008 ರಲ್ಲಿ ಒಮ್ಮೆ ಸೆಮಿ ಪೈನಲ್ ಮತ್ತು 2014 ರಲ್ಲಿ ಪೈನಲ್ ತಲುಪಿರೋದನ್ನು ಬಿಟ್ಟರೆ ಇನ್ನುಳಿದ ಎಂಟು ಐಪಿಎಲ್ ಗಳಲ್ಲಿ ಕೊನೆ ನಾಲ್ಕರ ಗಟ್ಟವನ್ನೂ ತಲುಪಿಲ್ಲ.  ಒಮ್ಮೆಯೂ ಪ್ರಶಸ್ತಿ ಗೆಲ್ಲದೇ ಆರಕ್ಕೇರದ ಮೂರಕ್ಕಿಳಿಯದ ತಂಡವಾಗಿ ಉಳಿದಿರುವ ಪಂಜಾಬ್ ಗೆ ಕಸುವು ತುಂಬಲು ಈ ಬಾರಿಯ ಹರಾಜಿನಲ್ಲಿ ತಂಡದ ಒಡೆಯರು ಪಾಲ್ಗೊಂಡರು. ಹಳೆ ತಂಡದಿಂದ ಅಕ್ಸರ್ ಪಟೇಲ್ ಒಬ್ಬರನ್ನಶ್ಟೇ ಉಳಿಸಿಕೊಂಡ ಪಂಜಾಬ್ ಹಿಂದು ಮುಂದು ನೋಡದೇ ಎಲ್ಲಾ ತಂಡಗಳಿಗಿಂತ ಹೆಚ್ಚು ಹಣ ಚೆಲ್ಲಿ ತಮಗೆ ಬೇಕಾದ ತಂಡವನ್ನುಕಟ್ಟಿಕೊಂಡಿದೆ.  ಅಶ್ವಿನ್ ರನ್ನು ನಾಯಕರನ್ನಾಗಿ ಆರಿಸಿ ಅವರ ಸುತ್ತಲೂ ತಂಡವನ್ನು ಕಟ್ಟಿದ್ದಾರೆ. ಕರ‍್ನಾಟಕದ ಕೆ ಎಲ್ ರಾಹುಲ್ ರನ್ನು 11 ಕೋಟಿಗಳಿಗೆ ಆರಿಸಿದ್ದು ತಂಡದ ದೊಡ್ಡ ಕೊಳ್ಳಿಕೆ ಆಯಿತು. ರಾಹುಲ್ ರೊಟ್ಟಿಗೆ ಕ್ರಿಸ್ ಗೇಲ್, ಪಿಂಚ್, ಕರುಣ್ ನಾಯರ್, ಮಾಯಾಂಕ್, ಯುವರಾಜ್ ಸಿಂಗ್, ಮನೋಜ್ ತಿವಾರಿ, ಮಿಲ್ಲರ್ ತಂಡಕ್ಕೆ ಬ್ಯಾಟಿಂಗ್ ಬಲ ತುಂಬಲಿದ್ದಾರೆ. ಯಾವ ತಂಡದಲ್ಲೂ ಇಲ್ಲದ ಆಕ್ರಮಣಕಾರಿ ಬ್ಯಾಟ್ಸ್ಮನ್ ಗಳು ಪಂಜಾಬ್ ನಲ್ಲಿದ್ದಾರೆ. ಅಶ್ವಿನ್ ಜೊತೆಗೆ ಟೈ, ಅಕ್ಸರ್, ಸ್ರಾನ್, ಮೋಹಿತ್ ಶರ‍್ಮ, ಆಕಾಶ್ ದೀಪ್ ಬೌಲಿಂಗ್ ಜವಾಬ್ದಾರಿಯನ್ನು ಹಂಚಿಕ್ಕೊಳ್ಳಲ್ಲಿದ್ದಾರೆ. ಮತ್ತು ಆಲ್ ರೌಂಡರ್ ಸ್ಟೋನಿಸ್ ರ ಇರುವಿಕೆ ತಂಡಕ್ಕೆಸಮತೋಲನ ನೀಡಿದೆ.

ಪಂಜಾಬ್ ನಲ್ಲೂ ಸಹ ರಾಜಸ್ತಾನ ತಂಡದಲ್ಲಿರುವಂತೆ ಮೂವರು ಕನ್ನಡಿಗರಿದ್ದಾರೆ. ರಾಹುಲ್, ಕರುಣ್ ಮತ್ತು ಮಾಯಾಂಕ್ ಜೊತೆಗೆ ಬೌಲಿಂಗ್ ತರಬೇತುದಾರರಾಗಿ ವೆಂಕಟೇಶ್ ಪ್ರಸಾದ್ ತಂಡದಲ್ಲಿರೋದನ್ನ ಕಂಡರೆ ಒಂದು ಹಂತಕ್ಕೆ ಈ ತಂಡವನ್ನು ಕಿಂಗ್ಸ್ ಇಲೆವೆನ್ ಕರ‍್ನಾಟಕ ಎಂದೇ ಹೆಸರಿಸಬೇಕು ಎಂದೆನಿಸದೇ ಇರದು. ಮೇಲ್ನೋಟಕ್ಕೆ ಹಾಳೆ ಮೇಲೆ ಬಲಾಡ್ಯ ತಂಡವಾಗಿ ಕಾಣುತ್ತಿರೋ ಪಂಜಾಬ್ ಈ ಬಾರಿ ಐಪಿಎಲ್ ಗೆದ್ದರೆ, ಅಚ್ಚರಿಯಂತೂ ಕಂಡಿತ ಅಲ್ಲ. ಏಕೆಂದರೆ ತಂಡಕ್ಕೆ ಗೆಲ್ಲಲು ಬೇಕಾದ ಎಲ್ಲಾ ಸರಕುಗಳು ಅವರ ಬಳಿ ಇದೆ.

ದೆಹಲಿ ಡೇರ್ ಡೆವಿಲ್ಸ್

ಐಪಿಎಲ್  2018 ಮುನ್ನ

ಪಂದ್ಯಗಳು : 142
ಗೆಲುವು : 62
ಸೋಲು : 80

ಐಪಿಎಲ್ ಮೊದಲ್ಗೊಂಡಾಗಿನಿಂದಲೂ ಇರುವ ತಂಡಗಳ ಪೈಕಿ ಒಮ್ಮೆಯೂ ಪೈನಲ್ ಕೂಡ ಪ್ರವೇಶಿಸದ ಒಂದೇ ಒಂದು ತಂಡ ದೆಹಲಿ. 2008, 09 ಮತ್ತು 2012 ರಲ್ಲಿ ಸೆಮಿಪೈನಲ್ ತಲುಪಿರೋದೇ ಈ ತಂಡದ ಶ್ರೇಶ್ಟ ಸಾದನೆ. ಎಲ್ಲರಿಂಗಿಂತ ಹೆಚ್ಚು ಪಂದ್ಯಗಳನ್ನು ಸೋತಿರೋ ಕುಕ್ಯಾತಿಗೂ ಕೂಡ ದೆಹಲಿ ತಂಡ ಪಾತ್ರವಾಗಿದೆ. 2010 ರಿಂದಾಚೆಗೆ ಪ್ರತಿ ಬಾರಿ ಹರಾಜಿನಲ್ಲಿ ಎಡವುತ್ತಾ ಯಾವುದೇ ತರ‍್ಕವಿಲ್ಲದೇ ಹಣವನ್ನು ಚೆಲ್ಲುತ್ತಾ ಸಮತೋಲನವಿಲ್ಲದ ತಂಡವನ್ನು ಆರಿಸುತ್ತಿದ್ದ ದೆಹಲಿ ಒಡೆಯರು ಈ ಬಾರಿಯ ಹರಾಜಿನಲ್ಲಿ ತಮ್ಮ ತಪ್ಪನ್ನು ತಿದ್ದಿಕೊಂಡು ಒಳ್ಳೆ ತಂಡವನ್ನು ಆರಿಸಿದ್ದಾರೆ. ಹರಾಜಿಗಿಂತ ಮೊದಲೇ ಮೋರಿಸ್, ಪಂತ್ ಮತ್ತು ಶ್ರೇಯಸ್ ಅಯ್ಯರ್ ರನ್ನು ಉಳಿಸಿಕೊಂಡು ಗಂಬೀರ್ ರನ್ನು ಹರಾಜಿನಲ್ಲಿ ಆರಿಸಿ ನಾಯಕರನ್ನಾಗಿ ನೇಮಿಸಿದ್ದಾರೆ. ಕೋಲ್ಕತ್ತಾ ತಂಡದ ನಾಯಕರಾಗಿ ಎರಡು ಐಪಿಎಲ್ ಗೆದ್ದಿರುವ ಗಂಬೀರ್ ರನ್ನು ದೆಹಲಿ ತಂಡದ ನಾಯಕರನ್ನಾಗಿ ಆರಿಸಿದ್ದು ಒಳ್ಳೆ ನಿರ‍್ದಾರ ಎಂದೇ ಹೇಳಬೇಕು. ಗಂಬೀರ್ ರ ಜೊತೆಗೆ ಸ್ಪೋಟಕ ಹೊಡೆತಗಳಿಗೆ ಹೆಸರುವಾಸಿಯಾದ ಅಯ್ಯರ್, ಪಂತ್, ಮಾಕ್ಸ್ವೆಲ್, ಜೇಸನ್ ರೇಯ್ ಮತ್ತು ಕಾಲಿನ್ ಮನ್ರೋ ಬ್ಯಾಟಿಂಗ್ ಹೊಣೆ ಹೊರಲಿದ್ದಾರೆ. ಬೌಲಿಂಗ್ ನಲ್ಲಿ ಅನುಬವವುಳ್ಳ ಅಮಿತ್ ಮಿಶ್ರ, ನದೀಮ್, ಬೋಲ್ಟ್, ಶಮಿ, ಪ್ಲನ್ಕೆಟ್ ರನ್ನು ಆರಿಸುವ ಮೂಲಕ ಒಳ್ಳೆ ಬೌಲಿಂಗ್ ತಂಡವನ್ನೇ ದೆಹಲಿ ಕಟ್ಟಿದೆ. ಇವರೊಟ್ಟಿಗೆ ಮೋರಿಸ್, ವಿಜಯ್ ಶಂಕರ್, ಕ್ರಿಸ್ಚನ್ ಆಲ್ ರೌಂಡರ್ ಗಳಾಗಿ ತಂಡದ ನೊಗ ಹೊರಲಿದ್ದಾರೆ.

ಒಟ್ಟಾರೆ ತಂಡವನ್ನು ನೋಡಿದರೆ ಕಳೆದ ಎಂಟು ವರ‍್ಶಗಳಲ್ಲಿ ಆರಿಸಲ್ಪಟ್ಟ ಶ್ರೇಶ್ಟ ದೆಹಲಿ ತಂಡ ಇದು ಎನ್ನಬಹುದು. ಗಂಬೀರ್ ರ ಮುಂದಾಳತ್ವದಲ್ಲಿ ಈ ತಂಡ ಒಳ್ಳೆ ಪ್ರದರ‍್ಶನ ನೀಡಲಿದೆ ಎನ್ನೋ ನಂಬಿಕೆ ತಂಡದ ಒಡೆಯರಿಗಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ದೆಹಲಿ ಅಬಿಮಾನಿಗಳೂ ಕೂಡ ಈಬಾರಿಯ ತಂಡದ ಮೇಲೆ ಹೆಚ್ಚು ಬರವಸೆ ವ್ಯಕ್ತ ಪಡಿಸಿದ್ದಾರೆ. ಮತ್ತು ಕ್ರಿಕೆಟ್ ಪಂಡಿತರೂ ಸಹ ಈ ಬಾರಿ ದೆಹಲಿ ಪ್ರಶಸ್ತಿ ಗೆಲ್ಲೋ ನೆಚ್ಚಿನ ತಂಡಗಳಲ್ಲೊಂದು ಎಂದು ಹೇಳಿದ್ದಾರೆ. ಹಾಗಾಗಿ ದೆಹಲಿ ತಂಡ ತನ್ನ ಹಳೆ ಸೋಲುಗಳನ್ನು ಮರೆತು ಗೆಲುವಿನಿಂದ ಇತಿಹಾಸ ಬರೆಯುವ ತವಕದಲ್ಲಿದೆ.

ಕೋಲ್ಕತ್ತಾ ನೈಟ್ ರೈಡರ‍್ಸ್

ಐಪಿಎಲ್  2018 ಮುನ್ನ

ಪಂದ್ಯಗಳು : 142
ಗೆಲುವು : 77
ಸೋಲು : 69

ಬಾಲಿವುಡ್ ನಟ ಶಾರುಕ್ ಕಾನ್ ಒಡೆತನದ ಕೋಲ್ಕತ್ತಾ ತಂಡ ಐಪಿಎಲ್ ಮೊದಲ್ಗೊಂಡಾಗಿನಿಂದಲೂ ಸದಾ ಸುದ್ದಿಯಲ್ಲಿರುವ ತಂಡ. ಮೊದಲ ಮೂರು ವರ‍್ಶಗಳಲ್ಲಿಒಮ್ಮೆಯೂ ಕೊನೆ ನಾಲ್ಕರ ಗಟ್ಟ ತಲುಪಲಾಗದೆ ಕಂಗೆಟ್ಟಿತ್ತು. ಆದರೆ ಅದಾದ ನಂತರ ತಂಡದ ಒಡೆಯರು ಜಾಣ್ಮೆಯಿಂದ ಆಟಗಾರರನ್ನು ಆರಿಸಿ ತಂಡವನ್ನು ಗೆಲುವಿನ ಹಾದಿಗೆ ತಂದರು. ಹಿಂದೆ 2011 ರಲ್ಲಿ ಗಂಬೀರ್ ರನ್ನು ನಾಯಕರನ್ನಾಗಿ ಆರಿಸಿ ಗೆಲುವಿಗೆ ಮುನ್ನುಡಿ ಬರೆದಿದ್ದರು. ಎರಡು ಬಾರಿ ಪ್ರಶಸ್ತಿ ಗೆದ್ದಿರುವುದು ತಂಡದ ಅಳವಿಗೆ ಹಿಡಿದ ಕನ್ನಡಿ. ಆದರೆ 2018 ರ ಹರಾಜಿನಲ್ಲಿ ಒಡೆಯರು ಆರಿಸಿರುವ ತಂಡ ಮೇಲ್ನೋಟಕ್ಕೆ ಮೊದಲಿದ್ದ ತಂಡಕ್ಕಿಂತ ಕೊಂಚ ದುರ‍್ಬಲವಾಗಿ ಕಂಡು ಬರುತ್ತದೆ. ಮೊದಲೇ ಸುನಿಲ್ ನಾರೈನ್, ರಸಲ್ ರನ್ನು ಉಳಿಸಿಕೊಂಡು ಹರಾಜಿನಲ್ಲಿ ದಿನೇಶ್ ಕಾರ‍್ತಿಕ್ ರನ್ನು ಆರಿಸಿ ನಾಯಕರನ್ನಾಗಿ ನೇಮಿಸಿದೆ. ಮತ್ತು ಹರಾಜಿನಲ್ಲಿ ಬೇರೆ ತಂಡದ ಪಾಲಾಗಲಿದ್ದ ಉತ್ತಪ್ಪ ಮತ್ತು ಕ್ರಿಸ್ ಲಿನ್ ರನ್ನು RTM ಬಳಸಿ ಉಳಿಸಿಕೊಂಡಿದೆ. ಕಾರ‍್ತಿಕ್, ನಿತೀಶ್ ರಾಣಾ, ಉತ್ತಪ್ಪ, ಲಿನ್, ಶುಬ್ಮನ್ ಗಿಲ್, ಇಶಾಂಕ್ ಜಗ್ಗಿ ತಂಡದ ಬ್ಯಾಟ್ಸ್ಮನ್ ಗಳಾದರೆ ಕುಲದೀಪ್ ಯಾದವ್, ಪಿಯೂಶ್ ಚಾವ್ಲಾ, ನಾರೈನ್, ವಿನಯ್ ಕುಮಾರ್ ಮತ್ತು ಜಾನ್ಸನ್ ಮುಕ್ಯ ಬೌಲರ್ ಗಳು. ರಸಲ್, ಟಾಮ್ ಕರ‍್ರನ್, ಡೇಲ್ಪೋರ‍್ಟ್ ತಂಡದಲ್ಲಿರೋ ಆಲ್ ರೌಂಡರ್ ಗಳು.

ಈ ಬಗೆಯಲ್ಲಿ ತಂಡ ರೂಪುಗೊಂಡಿದ್ದು ಕೊಲ್ಕಾತಾ ಬೆಂಬಲಿಗರಲ್ಲಿ ತುಸು ಬೇಸರ ತಂದಿದ್ದು ಸುಳ್ಳಲ್ಲ. ಹರಾಜಿನಲ್ಲಿ ಕೊಲ್ಕಾತಾ ಎಡವಿದೆ, ಈಗಲೂ ಇದು ಪರಿಪೂರ‍್ಣ ತಂಡದಂತೆ ಕಾಣುತ್ತಿಲ್ಲ, ಪ್ರಶಸ್ತಿ ಗೆಲ್ಲುವುದು ದೂರದ ಮಾತು ಎಂದು ಕ್ರಿಕೆಟ್ ಪಂಡಿತರು ತಮ್ಮ ಅಬಿಪ್ರಾಯವನ್ನು ಹೇಳಿದ್ದಾರೆ. ಆದರೂ ಒಂದು ತಂಡ ಕಣಕ್ಕಿಳಿಯುವುದಕ್ಕಿಂತ ಮೊದಲೇ ಅದರ ಹಣೆಬರಹ ತೀರ‍್ಮಾನ ಮಾಡೋದು ತಪ್ಪಾದೀತು. ಟಿ-20 ಆಟದಲ್ಲಿ ಏನಾದರೂ ನಡೆಯಬಹುದು ಅನ್ನೋದು ಎಲ್ಲರಿಗೂ ತಿಳಿದೇ ಇದೆ. ಈಗಿರುವ ತಂಡವನ್ನು ಕಾರ‍್ತಿಕ್ ಹೇಗೆ ಮುನ್ನಡೆಸುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

2018 ರ ಐಪಿಎಲ್ ನ ಒಟ್ಟು ಐದು ತಂಡಗಳಲ್ಲಿ ಕರ‍್ನಾಟಕದ ಹನ್ನೊಂದು ಮಂದಿ ಆಟಗಾರರಿದ್ದಾರೆ. ಜೊತೆಗೆ ಈ ಬಾರಿ ಸ್ಟಾರ್ ಸುವರ‍್ಣ ಪ್ಲಸ್ ಚ್ಯಾನೆಲ್ ನಲ್ಲಿ ಕನ್ನಡದಲ್ಲಿ ಕ್ರಿಕೆಟ್ ನೋಡುವ ಅವಕಾಶ ಇರುವುದು ಕನ್ನಡಿಗರಿಗೆ ಇನ್ನಿಲ್ಲದ ಸಂತಸ ತಂದಿದೆ.

( ಚಿತ್ರಸೆಲೆ:  newsekaaina.com, )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: