ನನ್ನ ಗೆಳೆಯ ಸೂರಿ

– ದೀಪು ಬಸವರಾಜಪುರ.

( ಹೊನಲು 5 ವರುಶ ಪೂರೈಸಿದ ಹೊತ್ತಿನಲ್ಲಿ ಏರ‍್ಪಡಿಸಿದ್ದ ಕತೆ-ಕವಿತೆ ಸ್ಪರ‍್ದೆಯಲ್ಲಿ ಬಹುಮಾನ ಪಡೆದ ಕವಿತೆ )

ಸೂರಿಯ ಬೆಳಕನು ಸಾಲವ ಪಡೆದು
ಇರುಳಲಿ ಹಚ್ಚಿದೆ ಒಂದು ದೀಪ

ಮಾರನೆ ದಿನ
ಸಾಲವ ಕೇಳಲು ಬಂದನು ಸೂರಿ
ಇನ್ನೂ ಮಲಗಿಹೆ ನಾ ಕಂಬಳಿ ತೂರಿ
ಸೂರಿಯ ಕೋಪ ನೆತ್ತಿಗೆ ಏರಿ
ಮುಂಜಾನೆಯ ನುಂಗಿ
ಬೆಳಿಗ್ಗೆಯ ಬೀಳಿಸಿ
ಮುಟ್ಟಿಸಿದ ಬಿಸಿ

ಎದ್ದು ಬಂದೆ ತಲೆ ಎತ್ತಿ
ಸುಟ್ಟನವ ನನ್ನ ಮೂತಿ
ನೆರಳ ಕರೆದೆ ಕೈ ಎತ್ತಿ
ನೋವನೆಲ್ಲ ಬದಿಗೊತ್ತಿ

ಸೂರಿಯಿರದ ರಾತ್ರಿಯಲಿ
ಸೌರಕೋಶ ನೆರವಿನಲಿ
ಅವನ ಬೆಳಕ ಬಳಸಿಕೊಂಡೆ
ನನ್ನ ಕೋಣೆ ಬೆಳಗಿಸಿಕೊಂಡೆ

ನಾ ಎಸಗಿದ್ದು ತಪ್ಪಾ?
ಸೂರಿಗೇಕೆ ನನ್ನ ಮೇಲೆ ಕೋಪ?
ಸುಡುತಿಹನೆನ್ನ ಏರಿಸಿ ತನ್ನ ತಾಪ

ಒದರಿದೆ ಏನೇನೋ
ಕೇಳಿ ಈ ಯಾತನೆಯ ಕೂಗನು
ಮೋಡಗಳು ನೆರವಿಗೆ ಬಂದವು
ಪಾಪ ಸೂರಿ ಕಾಣದೆ ಮರೆಯಾದ
ಕಾಣೆಯಾದರೂ ಬೆಳಕ ಚೆಲ್ಲುತ್ತಿದ್ದ
ಅವನಿಗೆ ಕೋಪ ಕಡಿಮೆಯಾಯಿತೇನೊ?

ಪುಸ್ತಕದ ಹಾಳೆ ತೆರೆದವು
ಓದಿದ ಪಾಟ ಕರೆದವು
ಹಾಳೆ ತಿರುವಿದೆ
ಕಣ್ಣಾನಂದಗೊಂಡವು

ಮತ್ತೆ ಬಂದನು ಸೂರಿ
ಮೋಡಗಳ ನಡುವೆ ತೂರಿ

“ಎಲೆ ಮರುಳೆ,
ಹಗಲಲಿ ಗೆಯ್ಯುವ ಕೆಲಸವ,
ನಿದ್ದೆಯ ಹೀರಿ ಇರುಳಲ್ಲೇಕೆ ಮಾಡುವೆ?
ನಿನ್ನ ಮೇಲೆ ಎನಗಿಲ್ಲ ಕೋಪ
ನೀ ಏಳುವ ವೇಳೆಗೆ ಹೆಚ್ಚಿಹುದೆನ್ನ ತಾಪ
ಸಿಗು ಮುಂಜಾನೆ
ನಗು ಮೊಗವ ತೋರುವೆ
ನನಗಿಲ್ಲ ಯಾವ ಸಾಲಗಾರ
ನನಗೆ ನಾನೇ ಜೊತೆಗಾರ
ನಾನೊಬ್ಬನೆ ನಿನಗೆ ನೇಸರ”
ಉಲಿದ ಮೆಲ್ಲಗೆ ಸೂರಿ

ಹೋದ ಹಾಗೆ ಜಾರಿ
ಮುಂಜಾನೆಯ ಕನಸಾ ತೋರಿ
ಮಲಗಿಸಿದ ಮತ್ತೆ ನಿದ್ದೆ ಹೇರಿ
ನನ್ನ ಕಡುಗೆಳೆಯ ಸೂರಿ

(ಚಿತ್ರ ಸೆಲೆ: publicdomainpictures.net)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Sandeep A says:

    ಸರಳ ಹಾಗೂ ಸಹಜವಾಗಿ ಮೂಡಿ ಬಂದಿದೆ

ಅನಿಸಿಕೆ ಬರೆಯಿರಿ: