ಸಕಲೇಶ ಮಾದರಸನ ವಚನಗಳ ಓದು – 2ನೆಯ ಕಂತು

– ಸಿ.ಪಿ.ನಾಗರಾಜ.

ವಚನಗಳು, Vachanas

ಜನಮೆಚ್ಚೆ ಶುದ್ಧನಲ್ಲದೆ
ಮನಮೆಚ್ಚೆ ಶುದ್ಧನಲ್ಲವಯ್ಯಾ
ನುಡಿಯಲ್ಲಿ ಜಾಣನಲ್ಲದೆ
ನಡೆಯಲ್ಲಿ ಜಾಣನಲ್ಲವಯ್ಯಾ
ವೇಷದಲ್ಲಿ ಅಧಿಕನಲ್ಲದೆ
ಭಾಷೆಯಲ್ಲಿ ಅಧಿಕನಲ್ಲವಯ್ಯಾ
ಧನ ದೊರಕದಿದ್ದಡೆ ನಿಸ್ಪೃಹನಲ್ಲದೆ
ಧನ ದೊರಕಿ ನಿಸ್ಪೃಹನಲ್ಲವಯ್ಯಾ
ಏಕಾಂತ ದ್ರೋಹಿ
ಗುಪ್ತ ಪಾತಕ
ಯುಕ್ತಿ ಶೂನ್ಯಂಗೆ
ಸಕಲೇಶ್ವರದೇವ ಒಲಿ ಒಲಿಯೆಂದಡೆ
ಎಂತೊಲಿವನಯ್ಯಾ.

( ಮೊದಲನೆಯ ಕಂತು )

ನಿಸರ‍್ಗ ಸಹಜವಾದ ಕಾಮ/ಹಸಿವು ಮತ್ತು ಮಾನವ ನಿರ‍್ಮಿತವಾದ ಸಾಮಾಜಿಕ ಕಟ್ಟುಪಾಡು/ಸಂಪ್ರದಾಯ/ನೀತಿನಿಯಮಗಳ ನಡುವೆ ಸಿಲುಕಿರುವ ಮಾನವ ಜೀವಿಯ ಮಯ್ ಮನಗಳ ಇಬ್ಬಗೆಯ ತೊಳಲಾಟವನ್ನು ಈ ವಚನದಲ್ಲಿ ಹೇಳಲಾಗಿದೆ.

ಜಗತ್ತಿನ ಜೀವರಾಶಿಗಳಲ್ಲಿ ಮಾನವಜೀವಿಯನ್ನು ಹೊರತುಪಡಿಸಿ, ಇನ್ನುಳಿದ ಪ್ರಾಣಿ/ಹಕ್ಕಿ/ಕ್ರಿಮಿ/ಕೀಟಗಳೆಲ್ಲವೂ ನಿಸರ‍್ಗದ ನೆಲೆಯಲ್ಲಿ ಬೆತ್ತಲೆಯಾಗಿ/ಬರಿ ಮಯ್ಯಲ್ಲಿ ಹುಟ್ಟಿ ಬೆಳೆದು ಬಾಳಿ ಬೆತ್ತಲೆಯಾಗಿಯೇ ಸಾಯುತ್ತವೆ. ತನ್ನ ಮಯ್ಯನ್ನು ಬಟ್ಟೆಯಿಂದ ಮುಚ್ಚಿಕೊಂಡಿರುವ ಮಾನವ ಜೀವಿಯು ಮಾತ್ರ ಇತ್ತ ನಿಸರ‍್ಗದ ನೆಲೆಯಲ್ಲಿ ಒಂದು ಪ್ರಾಣಿಯಾಗಿ, ಅತ್ತ ತಾನೇ ಕಟ್ಟಿಕೊಂಡಿರುವ ಕುಟುಂಬ, ಜಾತಿ,ಮತ, ವಿದ್ಯೆ, ಕಾನೂನು ಮುಂತಾದ ಒಕ್ಕೂಟಗಳ ನೆಲೆಯಲ್ಲಿ ಸಾಮಾಜಿಕ ಮಾನವ ಪ್ರಾಣಿಯಾಗಿದ್ದಾನೆ. ಆದುದರಿಂದಲೇ ಬದುಕಿನ ಉದ್ದಕ್ಕೂ “ ಸರಿ/ತಪ್ಪು, ನೀತಿ/ಅನೀತಿ, ನ್ಯಾಯ/ಅನ್ಯಾಯ, ಒಳ್ಳೆಯದು/ಕೆಟ್ಟದ್ದು “ ಎಂಬ ನಡೆನುಡಿಗಳ ನಡುವೆ ಹೊಯ್ದಾಡುತ್ತಿರುತ್ತಾನೆ.

( ಜನ=ಸಮಾಜದಲ್ಲಿರುವ ವ್ಯಕ್ತಿಗಳು/ಮಾನವರು; ಮೆಚ್ಚು=ಒಲಿ/ಪ್ರೀತಿಸು/ಬಯಸು/ಹೊಗಳು/ಕೊಂಡಾಡು/ಒಪ್ಪು; ಶುದ್ದನ್+ಅಲ್ಲದೆ; ಶುದ್ದ=ಚೊಕ್ಕಟ/ಶುಚಿ/ಕೊಳೆಯಿಲ್ಲದಿರುವುದು; ಶುದ್ದನ್=ಯಾವುದೇ ಬಗೆಯ ಕೆಟ್ಟ ನಡೆನುಡಿಗಳಿಲ್ಲದೆ, ಒಳ್ಳೆಯತನದಿಂದ ಬಾಳುತ್ತಿರುವವನು; ಅಲ್ಲದೆ=ಮಾತ್ರ/ಕೇವಲ; ಮನ=ಮನಸ್ಸು/ಚಿತ್ತ; ಶುದ್ದನ್+ಅಲ್ಲ+ಅಯ್ಯಾ; ಅಯ್ಯಾ=ಇತರರನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ;

ಜನಮೆಚ್ಚೆ ಶುದ್ದನಲ್ಲದೆ ಮನಮೆಚ್ಚೆ ಶುದ್ದನಲ್ಲವಯ್ಯಾ=ನಯವಂಚನೆಯ ನಡೆನುಡಿಗಳಿಂದ ನೋಡುವವರ ಕಣ್ಣಿಗೆ ನಾನು ಒಳ್ಳೆಯ ವ್ಯಕ್ತಿಯಂತೆ ಕಾಣಿಸಿಕೊಳ್ಳುತ್ತ ಜನರನ್ನು ಮರುಳುಮಾಡುತ್ತಿದ್ದೇನೆ. ಆದರೆ ನನ್ನ ಮನದೊಳಗೆ ಸಹಮಾನವರಿಗೆ ಮತ್ತು ಸಮಾಜಕ್ಕೆ ಕೇಡನ್ನು ಬಗೆಯುವಂತಹ ಕೆಟ್ಟ ಒಳಮಿಡಿತಗಳು ಒಂದೇ ಸಮನೆ ತುಡಿಯುತ್ತಿವೆ.

ನುಡಿ+ಅಲ್ಲಿ; ನುಡಿ=ಮಾತು/ಸೊಲ್ಲು; ನುಡಿಯಲ್ಲಿ=ಆಡುವ ಮಾತುಗಳಲ್ಲಿ; ಜಾಣನ್+ಅಲ್ಲದೆ; ಜಾಣ=ಚತುರನಾದವನು/ಕುಶಲನಾದವನು/ಯಾವುದನ್ನು ಮಾಡುವುದರಿಂದ ತನಗೆ ಒಳಿತಾಗುತ್ತದೆ ಇಲ್ಲವೇ ಕೆಡುಕಾಗುತ್ತದೆ ಎಂಬುದನ್ನು ಅರಿಯಬಲ್ಲವನು; ನಡೆ+ಅಲ್ಲಿ; ನಡೆ=ದಿನನಿತ್ಯ ಮಾಡುವ ಕೆಲಸ/ವ್ಯವಹಾರ/ಆಚರಣೆ; ಜಾಣನ್+ಅಲ್ಲ+ಅಯ್ಯಾ; ನುಡಿಯಲ್ಲಿ ಜಾಣನಲ್ಲದೆ ನಡೆಯಲ್ಲಿ ಜಾಣನಲ್ಲವಯ್ಯಾ=ಕೇಳುವವರು ಮರುಳಾಗುವಂತೆ ಚೆನ್ನಾಗಿ ಮಾತನಾಡುತ್ತೇನೆಯೇ ಹೊರತು, ಜನಸಮುದಾಯಕ್ಕೆ ಮತ್ತು ಸಮಾಜಕ್ಕೆ ಒಳಿತನ್ನುಂಟುಮಾಡುವಂತಹ ಯಾವುದೇ ಕೆಲಸವನ್ನು ಮಾಡುತ್ತಿಲ್ಲ;

ವೇಷ+ಅಲ್ಲಿ; ವೇಷ=ಉಡುಗೆ ತೊಡುಗೆ/ಉಟ್ಟು ಕೊಳ್ಳುವ ಬಟ್ಟೆ ತೊಟ್ಟು ಕೊಳ್ಳುವ ಒಡವೆ; ವೇಷದಲ್ಲಿ=ಮಯ್ಯನ್ನು ಸಿಂಗರಿಸಿಕೊಳ್ಳುವ ಉಡುಗೆ ತೊಡುಗೆಗಳಲ್ಲಿ; ಅಧಿಕನ್+ಅಲ್ಲದೆ; ಅಧಿಕ=ಹೆಚ್ಚಿನದು/ಮೇಲಾದುದು/ಉತ್ತಮವಾದುದು; ಅಧಿಕನ್=ಹೆಚ್ಚಿನವನು/ಉತ್ತಮನಾದವನು; ಭಾಷೆ+ಅಲ್ಲಿ; ಭಾಷೆ=ಮಾತು/ನುಡಿ/ಸೊಲ್ಲು; ವೇಷದಲ್ಲಿ ಅಧಿಕನಲ್ಲದೆ ಭಾಷೆಯಲ್ಲಿ ಅಧಿಕನಲ್ಲ=ಮಯ್ ಮೇಲೆ ತೊಟ್ಟಿರುವ ಬೆಲೆಬಾಳುವ ಉಡುಗೆ ತೊಡುಗೆಗಳಿಂದ ನೋಡುವವರ ಕಣ್ಮನಗಳಿಗೆ ಸಿರಿವಂತನಂತೆ/ದೊಡ್ಡ ಗದ್ದುಗೆಯಲ್ಲಿರುವ ವ್ಯಕ್ತಿಯಂತೆ ಕಾಣುತ್ತಿದ್ದೇನೆ. ಆದರೆ ನಾನು ಆಡುವ ಮಾತುಗಳು ಸತ್ಯ/ದಿಟ/ನಿಜದಿಂದ ಕೂಡಿಲ್ಲ;

ಧನ=ಸಂಪತ್ತು/ಹಣ/ಆಸ್ತಿಪಾಸ್ತಿ/ಒಡವೆವಸ್ತು; ದೊರಕದೆ+ಇದ್ದಡೆ; ದೊರಕು=ಸಿಗುವುದು/ಸಿಕ್ಕುವುದು; ದೊರಕದೆ=ಸಿಗದೆ/ಸಿಕ್ಕದೆ; ಇದ್ದಡೆ=ಇದ್ದರೆ; ನಿಸ್ಪೃಹನ್+ಅಲ್ಲದೆ; ನಿಸ್ಪೃಹನ್=ಕೆಟ್ಟ ಆಸೆಗಳಿಲ್ಲದವನು/ಕೆಟ್ಟ ಬಯಕೆಗಳಿಲ್ಲದವನು/ಪ್ರಾಮಾಣಿಕ ವ್ಯಕ್ತಿ/ಇತರರ ಒಡವೆವಸ್ತುಗಳನ್ನು ದೋಚಿಕೊಳ್ಳಬೇಕೆಂಬ ಉದ್ದೇಶವಿಲ್ಲದವನು; ದೊರಕಿ=ಸಿಕ್ಕಾಗ/ತನ್ನ ವಶಕ್ಕೆ ದೊರೆತಾಗ; ನಿಸ್ಪೃಹನ್+ಅಲ್ಲ+ಅಯ್ಯಾ; ಧನ ದೊರಕದಿದ್ದಡೆ ನಿಸ್ಪೃಹನಲ್ಲದೆ ಧನ ದೊರಕಿ ನಿಸ್ಪೃಹನಲ್ಲವಯ್ಯಾ=ಹಣಕಾಸಿನ ವ್ಯವಹಾರಗಳೇ ಇಲ್ಲದಿದ್ದಾಗ ನಾನು ತುಂಬಾ ಪ್ರಾಮಾಣಿಕನಾಗಿದ್ದೆ. ಆದರೆ ಹಣಕಾಸಿನ ವ್ಯವಹಾರವನ್ನು ನಡೆಸಲು ಅವಕಾಶ ದೊರೆತಾಗ ನನ್ನ ಮನಸ್ಸು ಬಹುಬಗೆಯ ಆಸೆಗಳಿಗೆ ಒಳಗಾಗಿ, ಇತರರ/ಜನಸಮುದಾಯದ/ಸಮಾಜದ ಸಂಪತ್ತನ್ನು ದೋಚತೊಡಗಿದ್ದೇನೆ; ಹಣಕಾಸು/ಸಂಪತ್ತಿನ ವ್ಯವಹಾರ ತಮ್ಮ ಕಯ್ಯಿಗೆ ಬಂದಾಗ ಮಾನವ ಸಮುದಾಯದಲ್ಲಿ ಬಹುತೇಕ ಮಂದಿ ಸಾಮಾಜಿಕ ಮನ್ನಣೆ/ಅಂತಸ್ತಿಗೆ ಕಾರಣವಾದ ಅಪಾರವಾದ ಆಸ್ತಿಪಾಸ್ತಿಯನ್ನು ಗಳಿಸಿಕೊಂಡು, ತಾವು ಮತ್ತು ತಮ್ಮ ಕುಟುಂಬದ ಮಂದಿ ಮುದದಿಂದ ಬಾಳುವುದಕ್ಕಾಗಿ ಇತರರ ಸಂಪತ್ತನ್ನು ಲಪಟಾಯಿಸಲು ತೊಡಗುತ್ತಾರೆ ಎಂಬ ತಿರುಳಿನಲ್ಲಿ ಬಳಕೆಯಾಗಿರುವ ನುಡಿಗಳು;

ಏಕಾಂತ=ವ್ಯಕ್ತಿಯು ಒಂಟಿಯಾಗಿರುವುದು/ಒಬ್ಬಂಟಿಯಾಗಿರುವುದು/ಇತರರಿಂದ ದೂರವಿರುವುದು; ದ್ರೋಹಿ=ವಂಚಕ/ಕೇಡಿಗ/ಮೋಸಗಾರ/ನಂಬಿದವರಿಗೆ ಹಾನಿಯನ್ನುಂಟುಮಾಡುವವನು; ಏಕಾಂತದ್ರೋಹಿ=ಇತರರಿಗೆ ತಿಳಿಯದಂತೆ ಬಹುಬಗೆಯ ನೀಚ/ಕೆಟ್ಟ ಕೆಲಸಗಳಲ್ಲಿ ತೊಡಗಿದವನು;

ಗುಪ್ತ=ಗುಟ್ಟು/ರಹಸ್ಯ/ಇತರರಿಗೆ ಕಾಣದಿರುವುದು/ತಿಳಿಯದಿರುವುದು; ಪಾತಕ=ಪಾಪದ ಕೆಲಸ/ಸಹಮಾನವರಿಗೆ ಮತ್ತು ಸಮಾಜಕ್ಕೆ ಕೇಡನ್ನು ಬಗೆಯುವ ನಡೆನುಡಿ; ಗುಪ್ತ ಪಾತಕ=ಇತರರಿಗೆ ಕಾಣದಂತೆ/ತಿಳಿಯದಂತೆ ಕೆಟ್ಟಕೆಲಸಗಳಲ್ಲಿ ತೊಡಗಿದವನು/ಪಾಪಿ/ನೀಚ;

ಯುಕ್ತಿ=ಯಾವುದೇ ಒಂದು ಕೆಲಸವನ್ನು ಮಾಡಲು ಅಗತ್ಯವಾದ ಕುಶಲತೆ/ನಿಪುಣತೆ/ಉಪಾಯ/ತಂತ್ರ; ಶೂನ್ಯ=ಬರಿದಾದುದು/ಏನು ಇಲ್ಲದಿರುವುದು; ಶೂನ್ಯಂಗೆ=ಶೂನ್ಯನಿಗೆ; ಯುಕ್ತಿಶೂನ್ಯನು=ಒಳ್ಳೆಯ ನಡೆನುಡಿಗಳಿಂದ ತನಗೆ ,ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ಹಂಬಲವಿಲ್ಲದವನು/ಗುರಿಯಿಲ್ಲದವನು;

ಸಕಲೇಶ್ವರದೇವ=ಶಿವ/ಈಶ್ವರ/ದೇವರು; ಒಲಿ=ಒಪ್ಪು/ಮೆಚ್ಚು; ಒಲಿ+ಎಂದಡೆ; ಎಂದಡೆ=ಎಂದರೆ; ಎಂತು+ಒಲಿವನ್+ಅಯ್ಯಾ; ಎಂತು=ಹೇಗೆ ತಾನೆ/ಯಾವ ರೀತಿಯಲ್ಲಿ/ಯಾವ ಬಗೆಯಲ್ಲಿ ; ಒಲಿವನ್=ಮೆಚ್ಚುವನು/ಒಪ್ಪುವನು; ಸಕಲೇಶ್ವರದೇವ ಒಲಿ ಒಲಿಯೆಂದಡೆ ಎಂತೊಲಿವನಯ್ಯಾ=ದೇವರು ಮೆಚ್ಚುವಂತೆ ವ್ಯಕ್ತಿಯು ಬಾಳಬೇಕಾದರೆ , ಅವನಲ್ಲಿ ಒಳ್ಳೆಯ ನಡೆನುಡಿಗಳು ಇರಬೇಕು. ಆದರೆ ಮಾನವಜೀವಿಯು ನಿಸರ‍್ಗದಸೆಳೆತ ಮತ್ತು ಸಾಮಾಜಿಕ ಕಟ್ಟುಪಾಡುಗಳ ನಡುವೆ ಸಿಲುಕಿರುವುದರಿಂದ , ಜೀವನದಲ್ಲಿ ಹೆಜ್ಜೆಹೆಜ್ಜೆಗೂ ಒಳಿತು ಕೆಡುಕುಗಳ ನಡುವೆ ತೊಳಲಾಡುತ್ತಿದ್ದಾನೆ ಎಂಬ ವಾಸ್ತವವನ್ನು/ಸತ್ಯವನ್ನು/ದಿಟವನ್ನು ಈ ನುಡಿಗಳು ಸೂಚಿಸುತ್ತಿವೆ.)

( ಚಿತ್ರ ಸೆಲೆ:  sugamakannada.com )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.