ಕತೆ: ಗಡ, ಗೋಬಿ ಮಂಚೂರಿ, ಮೀನು ಮತ್ತು ಬ್ಯಾಟು

– ಪ್ರಶಾಂತ ಎಲೆಮನೆ.

ಎರಡೊಂದ್ ಎರಡು
ಎರಡೆರಡ್ಲಿ ನಾಲ್ಕು 
ಎರಡು ಮೂರಲಿ ಆರು ..
 ಅಂತ ದಿನಕರ ಏರು ದನಿಯಲ್ಲಿ ನಿಂತು ಹೇಳ್ತಿದ್ರೆ, ಅವನ ಹಿಂದಿಂದ ವೀರಪ್ಪ ಮಾಸ್ಟ್ರು ಸಂಗೀತದ ಪಟ್ಟಂತೆ ಒಂದೇ ಸಮನೆ ತಲೆದೂಗುತ್ತಲೆ ಕುಂತಿದ್ರು.ಇನ್ನೇನು ಮುಂದಿನ ಸರದಿ ಗಡನದ್ದೆ. ಅಂದಹಾಗೆ ಗಡನ ನಿಜವಾದ ಹೆಸರು ನಿತೀಶ. ಶಾಲೆಯ ಮಾಸ್ತರಿಂದ ಹಿಡಿದು ಎಲ್ಲರಿಗೂ ಅವನು ಹಾಜರಿ ಹಾಕುವ 10 ರಿಂದ 10.10ರ ವರಿಗೆ ಮಾತ್ರ ನಿತೀಶ, ಆಮೇಲೆಲ್ಲಾ ಅವನು ಗಡನೆ. ಗಡನಿಗೆ ಮಗ್ಗಿ ನೈವೇದ್ಯ, ಮಗ್ಗಿ ಅವನ ತಲೆ ಒಳಗೆ ಹೋಗೋದೆ ಇಲ್ಲ! ಅಂತ ದರಣಿ ಕೂತರೆ ಪಾಪ ಅವನೇನು ಮಾಡಿಯಾನು. ಆದರೆ ಎಂದಿನಂತೆ ಗಡನ ಮನಸು ಇವತ್ತು ಮಗ್ಗಿ ಗೊತ್ತಿಲ್ಲ ಅಂತ ಹೆದರಿ ಕುಂತಿಲ್ಲ. ದೂರದಲ್ಲಿ ಹೋಗೊ ಕಾರು, ಬಸ್ಸು, ಹಿಂದಿನ ದಿನದ ಗೌರಿ ಬಾರಮ್ಮ ದಾರಾವಾಹಿಯಲ್ಲೂ ಅವನ ಮನಸಿಲ್ಲ. ಅವನ ಮನಸೆಲ್ಲ ಇದ್ದದ್ದು ಪರಲೋಕ ಸೇರಿರೊ ಎರಡು ಪುಟ್ಟ ಮೀನಿನ ಮೇಲೆ. ಏನಾಯಿತೆಂದರೆ ಕೆರೆ ಕಟ್ಟೆ ಅಲೆದು ಗಡ ಎರಡು ಮೀನನ್ನ ಹಿಡಿದು ಸಣ್ಣ ನೀರಿನ ಪೊಟ್ಟಣದಲ್ಲಿ ಅವನ್ನ ಹಾಕಿ ಚಡ್ಡಿ ಜೇಬಲ್ಲಿ ಇಟ್ಕೊಂಡು ಮನೆಗೆ ಬಂದ. ಮೂರೂ ಹೊತ್ತು ಅಲೆಯೊ, ಓದದ ಮಗನನ್ನ ನೋಡಿ ಕೆಂಡಾಮಂಡಲವಾದ ತಾಯಿ ಗೌರ, ಮಗನನ್ನ ಹಿಡ್ಕೊಂಡು ಚೆನ್ನಾಗಿ ಬಾರಿಸಿದಳು. ಆ ಬಾರಿಸೊ ಬರದಲ್ಲಿ ಗೌರಳಿಂದ ನೀರಿನ ಪೊಟ್ಟಣ ಪಚಕ್ ಆಗಿತ್ತು.
 
ಎಂದಿನಂತೆ ಗಡನ ಮಗ್ಗಿಯ ಸರತಿ ಬಂತು, ಮೂರರ ಮಗ್ಗಿ ಜಪ್ಪಯ್ಯ ಅಂದ್ರೂ 15ರ ಮುಂದೆ ಗಡನಿಗೆ ತಳ್ಳಲಾಗಲಿಲ್ಲ. ಎರಡು ಬೆತ್ತದ ಏಟು ತಿಂದು ಹೋಗಿ ಕುಂತ ಗಡನಿಗೆ ವಜ್ರಮುನಿಯಂತೆ ಕಾಣೊ ವೀರಪ್ಪ ಮಾಸ್ತರ ಮೇಲೆ ಸಿಟ್ಟು ಹೆಚ್ಚಾಯಿತೆ ಹೊರತು ಅವರ ಬೆತ್ತದ ಮೇಲಲ್ಲ. ಯಾಕಂದರೆ ಆ ಬೆತ್ತದ ವಿಶ್ವಕರ‍್ಮ ಇವನೇ! ಮಾಸ್ತರರ ಕೋಲು ಯಾವಾಗ ಮುರಿದರೂ ಹೊಸ ಕೋಲು ಕಡಿಯೋ ಕೆಲಸ ಗಡನದ್ದೆ. ಯಾವ ಬೆಟ್ಟದ ಯಾವ ಬೆತ್ತವಾದರೂ ಸರಿಯೇ,  ಹುಡುಕಿ, ಮಸೆದು, ನುಣುಪಾಗಿಸಿ ಕೂಡುವವನು ಇವನೆ. ಹಾಗಂತ ಬೆತ್ತ ಇದುವರೆಗೆ ಗಡನ ಮೇಲೆ ಕನಿಕರ ತೋರಿಸಿದ್ದಿಲ್ಲ  ಅನ್ನೋದು ಬೇರೆ ಮಾತು.
 
ಇತ್ತೀಚೆಗೆ ಗಡನಿಗೆ ಮೀನಿನ ಮೇಲೆ ವಿಶೇಶ ಅಕ್ಕರೆ ಬಂದುಬಿಟ್ಟಿತ್ತು. ಅಮ್ಮನ ಕಲ್ಲು ಇಡ್ಲಿ, ನೀರು ದೋಸೆಯ ಆಚೆಗಿನ ಗೋಬಿ ಮಂಚೂರಿ ಅವನ ಕನಸು. ಗೋಬಿ ಮಂಚೂರಿ ತಿನ್ನಬೇಕಂತಲೆ ತಾಯಿ ಗೌರಳನ್ನ ಊರ ಜಾತ್ರೆಗೆ ಎಳಕೊಂಡು ಹೋಗಿದ್ದ ಗಡ. ಆದರೆ ಗೌರಳಿಗೆ ಅಲ್ಲಿ ಬಳೆ, ಮಿರಮಿರ ಮಿನುಗುವ ಪಾತ್ರೆ ಸಾಮಾನು ನೋಡಿ, ಕೊಳ್ಳುವ ಬರದಲ್ಲಿ  ಗೋಬಿ ಮಂಚೂರಿಗಂತ ಇಟ್ಟಿದ್ದ ದುಡ್ಡು ಕಾಲಿಯಾಗಿ ಹೋಗಿತ್ತು. ಕೊನೆಗೆ ಬಣ್ಣಿಸಿ, ಬೆದರಿಸಿ ಮಗನಿಗೆ ಕೊಡಿಸಿದ್ದು 2 ಬೆತ್ತಾಸು. ಅದೇ ಜಾತ್ರೇಲಿ ಬಣ್ಣ ಬಣ್ಣದ ಮೀನನ್ನ ಹೂಜಿಯಲ್ಲಿಟ್ಟು ಮಾರುವ ಮಂದಿಯನ್ನ ನೋಡಿದ್ದ ಗಡ. ‘ಬಣ್ಣದ ಮೀನಿಗೆ ಇಶ್ಟು ದುಡ್ಡಾ! ನಾನು ಹಿಡಿದು ಮಾರಬಹುದಲ್ಲ, ಗೋಬಿ ಮಂಚೂರಿಗೆ ಕಾಸನ್ನ ತಾನೆ ಮಾಡ್ಕೊಬಹುದಲ್ಲ’ ಅಂತ ಅವನ ತಲೆಗೆ ಬಂದದ್ದು ಆವಾಗಲೇ.
 
ಹೀಗೆ ಮೊದಲ ದಿನ ಹಿಡಿದ ಮೀನು ತಾಯಿಯ ಕೋಪಕ್ಕೆ ಸಿಕ್ಕು ಪರಲೋಕವಾಸಿಯಾದ ಮೇಲೆ, ರಾಮ್ ಬಟ್ಟರ ಮಗ ಮೋಹನನ ಜೊತೆ ಒಂದು ಕರಾರು ಮಾಡಿಕೊಂಡ. ಅದರ ಪ್ರಕಾರ ಮೋಹನನಿಗೆ ಗಡ ಮತ್ತಿಯದ್ದೊ, ಬೀಟೆಯದ್ದೊ ಒಂದು ಬ್ಯಾಟು ಮಾಡಿ ಕೊಡಬೇಕು. ಇದರ ಬದಲು ಮೋಹನ ಗಡನಿಗೆ ಅವರದೆ ಕೆರೆಯಲ್ಲಿ ಮೀನು ಹಿಡಿಯಲು ಸಹಾಯ ಮಾಡಬೇಕು. ಗಡನಿಗೆ ಮೀನು ತಿಂದು ಗೊತ್ತೇ ವಿನಾ ಹಿಡಿದು ಗೊತ್ತಿಲ್ಲ. ಮೋಹನನಿಗೊ ಹಿಡಿದು ಗೊತ್ತಿಲ್ಲ, ತಿಂದೂ ಗೊತ್ತಿಲ್ಲ, ಅವನಿಗೆ ಗೊತ್ತಿರೋದು ನೋಡಿ ಅಶ್ಟೆ.
 
ಸರಿ, ಮರುದಿನ ಶಾಲೆಯಿಂದ ಬಂದವರೆ ಪಾಟಿ-ಚೀಲ ಬಿಸಾಕಿ ಮೀನು ಹಿಡಿಯೋಕೆ ಹೊರಟರು.ಊರ ಹೊಳೆಯಲ್ಲಿರುವ ಸಣ್ಣ ಸಣ್ಣ ಗುಂಡಿ ನೋಡಿ, ಅದರ ನೀರನ್ನ ಗಡ ಕೆದಕಿ ಬಿಡೋದು. ಕೆದಕಿದಾಗ ಮೇಲೆ ಬರೊ ಮೀನನ್ನ ಮೋಹನ ಹಿಡಿಯುವುದು ಅಂತ ಅವರ ಉಪಾಯ. ಗಡ ನೀರು ಕದಡುವುದು, “ಬಂತ್ ಕಾಣ್, ಬಂತ್ ಕಾಣ್ ” ಅಂತ ಕೂಗಿ, ಮೋಹನ ಸಣ್ಣ ಜಾಲರಿ ಹಾಕೋದ್ರೊಳಗೆ ಮೀನು ಮಾಯ. ಅದರಲ್ಲೂ ಕಪ್ಪೆಗೊದ್ದವೆಲ್ಲ ಬಂದು ಒಮ್ಮೊಮ್ಮೆ ಇವರ ಕೆಲಸ ಕೆಡುಸುತಿತ್ತು. ಅಂತೂ ಇಂತೂ ಗುದ್ದಾಡಿ ಕೆಲವು ಹಿಡಿದು, ಕೆಲವು ಬಿಟ್ಟು ಮನೆಗೆ ಸೇರಿದ ಗಡನಿಗೆ ಮೀನು ಇಡೋದೆಲ್ಲಿ ಅಂತ ಸಮಸ್ಯೆ. ಬಚ್ಚಲ ಸಣ್ಣ ತಪ್ಪಲೆ ತಂದು ಅದರಲ್ಲಿ ಮೀನು ಹಾಕಿ ಅಪ್ಪನಿಗೊ, ಅಮ್ಮನಿಗೊ ಸಿಗಲಾರದಂತೆ ಅಡಗಿಸಿಟ್ಟ.
 
ಕೈಯಲ್ಲಿ ಹಿಡಿಯೋದು ಆಗದ ಮಾತು, ರಾಮ್ ಬಟ್ಟರ ಹೊಳೆಕಟ್ಟೆಯಲ್ಲಾದರೆ ಜಾಸ್ತಿ ಮೀನು ಹಿಡೀಬೋದು ಅಂತ ಮರುದಿನ ಗಡ ಒಂದು ಬುಟ್ಟಿ, ಹಗ್ಗ ಹಿಡಿದು ಹೊರಟ. ಅದು ರಾಮ್ ಬಟ್ಟರು ಬೇಸಿಗೆಗೆ ತೋಟಕ್ಕೆಲ್ಲ ನೀರು ಹಾಯಿಸೋಕೆ ಹೊಳೆಗೆ ಬಿದಿರ ಗಳ, ಮರಳ ಚೀಲ, ಕಲ್ಲು ,ಮಣ್ಣು ಹಾಕಿ ಕಟ್ಟಿದ ಕಟ್ಟೆ. ಅದರಲ್ಲಿ ನೀರು ಸುಮಾರು ನಿಲ್ಲಿಸಿದ್ದರಿಂದ ಸಾಕಶ್ಟು ಮೀನೂ ಇತ್ತು. ಬುಟ್ಟಿಗೆ ಹಗ್ಗ ಕಟ್ಟಿ ನೀರಲ್ಲಿ ಇಳಿ ಬಿಡೋದು ಮೇಲಿಂದ ಮೋಹನ ಕಾಳು ಹಾಕೋದು. ಕಾಳು ತಿನ್ನೋಕೆ ಬಂದಾಗ ಬುಟ್ಟಿ ಎತ್ತಿ ಬಿಡೋದು ಅಂತ ಉಪಾಯ. ಆದರೆ ಇವರು ಕಾಳು ಹಾಕಿದಾಗ ಇವರಂದುಕೊಂಡಂತೆ ಮೀನು ಬರಲಿಲ್ಲ, ಬಂದರೂ ಕೆಲವೇ ಕೆಲವು. ಅವು ಕೂಡ ಇವರು ಬುಟ್ಟಿ ಎತ್ತೊದ್ರೊಳಗೆ ಮಾಯವಾಗ್ತಿತ್ತು. ಅಂತೂ ಇಂತೂ ಒದ್ದಾಡಿ ಕೊಸರಾಡಿ ನಾಲ್ಕಾರು ಮೀನು ಹಿಡಿದು ಕೊಳಗ ತುಂಬಿದಾಗ ಸಂಜೆಯಾಗಿತ್ತು. ಗಡ ತನ್ನ ತಪ್ಪಲೆಗೆ ಮೀನು ತಂದು ಹಾಕಿದ್ದ.
 
ಗೌರ ಹಿಂದಿನ ದಿನವೆ ಮಾರನಕಟ್ಟೆಗೆ ಹರಕೆ ತೀರಿಸೋಕೆ ಹೋಗಿದ್ದರಿಂದ ಗಡನಿಗೆ ಹೊಸತೊಂದು ಉಪಾಯ ಹೊಳೆದಿತ್ತು. ಗೌರಳ ಹಳೆ ಸೀರೆಯಲ್ಲಿ ಮೀನು ಹಿಡಿದರೆ ಹೇಗೆ? ಒಂದೇ ಸಲ ಜಾಸ್ತಿ ಹಿಡೀಬೋದು ಅಂತ. ಮರುದಿನ ಮೋಹನ ಒಂದು ಕಡೆ ಗಡ ಇನ್ನೊಂದು ಕಡೆ ಸೀರೆ ಹಿಡಿದು, ಮೀನು ಸೀರೆ ಮೇಲೆ ಬಂದಮೇಲೆ ಸೀರೆನ ಎತ್ತಿ ಬಿಡೋದು ಅಂತ ಹೇಳಿ ಇಬ್ಬರೂ ನೀರಿಗಿಳಿದರು. ಮೀನೇನೊ ಸೀರೆಯ ಮೇಲೆ ಬರ‍್ತಿತ್ತು, ಆದರೆ ಇಬ್ಬರು ಸೇರಿ ಸೀರೆ ಎತ್ತೊ ಹೊತ್ತಿಗೆ ಮೀನು ಮಾಯ. ಅಶ್ಟರಲ್ಲಿ ಮೊದಲೇ 2 ದಿನದಿಂದ ಮೀನು ಹಿಡಿಯೋಕೆ ಬಂದಿದ್ದ ಮೋಹನನ ತಲೆ ಕೆಟ್ಟಿತ್ತು, “ಮೊದಲು ಬ್ಯಾಟು ಮಾಡಿ ಕೊಡು ನಡಿ, ಇಲ್ಲದಿದ್ರೆ ಮೀನು ಹಿಡಿಯೋಕೆ ನಂಗ್ ಸಾದ್ವಿಲ್ಲೆ” ಅಂತ ರಣರಂಗದಲ್ಲೆ ಕೂತ ಮೋಹನ. ಹಾಗಂತ ಗಡನಿಗೆ ಮೋಹನನಿಗೆ ಬ್ಯಾಟು ಮಾಡಿಕೊಡುವ ಯೋಚನೆಯು ಇರಲಿಲ್ಲ. ಬೇಕಾದಾಗ ತೆಂಗಿನ ಹೆಡೆಯಲ್ಲೆ ಮಾಡಿ ಕೊಟ್ಟರಾಯಿತು ಅಂದುಕೊಂಡಿದ್ದ. ಯಾವಾಗ ಮೋಹನ ಈಗಲೇ ಮಾಡಿಕೊಡು ಅಂತ ಕೂತನೋ ಗಡನಿಗೆ ಉಪದ್ರ ಆಯ್ತು. “ನಾಳೆ ಕಾಂಬ, ಈಗ ಹಿಡಿ ಮರ‍್ರೆ” ಅಂತ ಗಡ ಅನ್ನೋದ್ರೊಳಗೆ ಮೋಹನ ತೋಟದ ಒಂದು ಮೂಲೆಯಿಂದ ಮನೆಯ ಜಗುಲಿ ಸೇರಿದ್ದ.
 
ಗಡನಿಗೆ ತಾನೇ ಏನಾರು ಮಾಡುವ ಅಂತ, ತಾನೇ ಒಂದು ಗಾಳಕ್ಕೆ ಸೀರೆ ಕಟ್ಟಿ, ಇನ್ನೊಂದು ಕಡೆ ಸೀರೆ ಹಿಡಿದು ಮೀನು ಹಿಡಿಯುವ ಅಂತ ಇನ್ನೊಂದು ಯೋಚನೆ ಮಾಡಿದ. ಗಾಳಕ್ಕೆ ಸೆರೆಯನ್ನೂ ಕಟ್ಟಿದ. ಹಿಂದಿನ ದಿನ ರಾತ್ರಿ, ತೋಟಕ್ಕೆ ನುಗ್ಗಿದ್ದ ಹಂದಿಗಳು ಈ ಕೆರೆ ಕಟ್ಟೆಯನ್ನು ಲಗಾಡಿ ಎಬ್ಬಿಸಿತ್ತು. ಮರಳು ಚೀಲ, ಗಳ ,ಕಲ್ಲುಗಳೆಲ್ಲ ಜಾರಿದ್ದವು. ಯಾವಾಗ ಗಡ ಗಳಕ್ಕೆ ಸೀರೆ ಕಟ್ಟಿದನೊ ಸರಿಯಾಗಿ ಅದೇ ಸಮಯಕ್ಕೆ ಗಳವು ಮೀಟಿ ಗಡ ತಂದಿದ್ದ ಸೀರೆ ಪರ್..ಪರ್  ಅಂತ ಹರೀತು. ಗಳ ಮೀಟಿದ್ದರಿಂದ ಮರಳ ಚೀಲ, ಕಲ್ಲೆಲ್ಲ ಇನ್ನೂ ಜಾರಿ ಒಂದು ಕಡೆಯಿಂದ ಕಟ್ಟೆ ಒಡೆದುಕೊಂಡು ನೀರು ಸುರ್  ಅಂತ ಹೋಗೋಕೆ ಶುರುವಾಯ್ತು. “ಇದರ ವಾಲೆ ಕಳೀಕೆ” ಅಂತ ಸೀರೆ ಬಿಡಿಸಿ ಮನೆಕಡೆ ಓಡಿದ ಗಡ.
 
ಹರಿದ ಸೀರೆಯನ್ನ ಒಣಗಿಸಿ, ಮನೆಯೊಳಗೆ ಹೋಗಿ ನೋಡಿದರೆ ತಪ್ಪಲೆಯೆ ನಾಪತ್ತೆ. ಎದೆಯೊಳಗೆಲ್ಲೊ ಪುಕು ಪುಕು, ಸೀದಾ ಬಚ್ಚಲ ಮನೆಗೆ ಓಡಿದ ಗಡ. ಅಲ್ಲಿ ತಬ್ಬಲಿಯಾಗಿ ಬಿದ್ದಿತ್ತು ತಪ್ಪಲೆ. ಬೆಂಕಿಯಲ್ಲಿ ಹಂಡೆಯ ನೀರು ಕೊತ ಕೊತ ಕುದೀತಿತ್ತು.
 
ಗಡ ರಾಮ್ ಬಟ್ಟರ ಮನೆ ಕಡೆಗೆ ಓಡಿದ, ಗೌರಿ ಬಾರಮ್ಮ ನೋಡುತ್ತಾ ಕುಂತಿದ್ದ ಮೋಹನನ್ನ, ” ಲೇ, ಮೋಹನ ಬ್ಯಾಟ್ ಮಾಡಿ ಕೊಡ್ತೆ ನಡಿ, ಒಳ್ಳೆ ಮರ ಕಂಡಿಟ್ಟಿದೆ. ಯಾರಿಗೂ ನಾವು ಮೀನು ಹಿಡೀಕೋಗಿದ್ದು ಕೇಳುಕಾಗ, ಏನಂತೀ ?”. ಮೊದಲು ಹಿಂದೂ ಮುಂದು ಯೋಚಿಸಿ ತಲೆ ಕೆರಕೊಂಡ ಮೋಹನ ” ಸರಿ ನಡಿ, ಬ್ಯಾಟು ಒಳ್ಳೇದು ಬೇಕು” ಅಂದ.
 
ಇನ್ನೇನು ಬೆಟ್ಟ ಹತ್ತಬೇಕು, ಅದೇ ಸಮಯಕ್ಕೆ ಏದುಸಿರು ಬೇಡುತ್ತ ಬಂದ ಗಜಾನನ ಬಸ್ಸು ಗೌರಳನ್ನ ಇಳಿಸಿ, ಮುಂದೆ  ಹೋಗೋದ ಬ್ಯಾಡ್ವಾ ಅನ್ಕೋತ ಹೊರಟಿತು. ಗೌರ ಬಸ್ಸು ಇಳಿಯುವುದನ್ನೆ ನೋಡ್ತಿದ್ದ ಗಡ “ಅಯ್ಯೋ, ನಾಳಿಗೆ ಬತ್ಲು ಅಂದ್ಕಂಡಿದ್ದೆ” ಅಂತ ಹೇಳಿ, ಮೋಹನನ ಕಡೆ ತಿರುಗಿ, “ಏ ಮೋಹನ, ಇಲ್ಲೆ ಇರ ಬತ್ತೆ” ಅಂತ ಹೇಳಿ ಕೆಳಗೆ ಹಾರಿ ಮನೆ ಕಡೆಗೆ ಓಡಿದ.
( ಚಿತ್ರ ಸೆಲೆ:  pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: