ಕಂಬದ ಮಾರಿತಂದೆಯ ವಚನವೊಂದರಿಂದ ಆಯ್ದ ಸಾಲುಗಳ ಓದು

– ಸಿ.ಪಿ.ನಾಗರಾಜ.

ವಚನಗಳು, Vachanas

ಹೆಸರು: ಕಂಬದ  ಮಾರಿತಂದೆ
ಕಾಲ: ಕ್ರಿ.ಶ.ಹನ್ನೆರಡನೆಯ ಶತಮಾನ
ದೊರೆತಿರುವ ವಚನಗಳು: 11
ವಚನಗಳ ಅಂಕಿತನಾಮ: ಕದಂಬಲಿಂಗ

==========================================================

ನುಡಿವಲ್ಲಿ ಏನನಹುದು ಏನನಲ್ಲಾಯೆಂಬ
ಠಾವನರಿಯಬೇಕು
ಮಾತ ಬಲ್ಲೆನೆಂದು ನುಡಿಯದೆ
ನೀತಿವಂತನೆಂದು ಸುಮ್ಮನಿರದೆ
ಆ ತತ್ಕಾಲದ ನೀತಿಯನರಿದು
ಸಾತ್ವಿಕ ಲಕ್ಷಣದಲ್ಲಿಪ್ಪಾತನ ಲಕ್ಷಣವೇ
ನಿರೀಕ್ಷಣ ಕದಂಬಲಿಂಗಾ

ನಾವು ಆಡುವ ಮಾತುಗಳು ಸತ್ಯ/ದಿಟ/ನಿಜ/ವಾಸ್ತವದ ತಿಳುವಳಿಕೆಯಿಂದ ಕೂಡಿ, ಹಿತಮಿತವಾಗಿರಬೇಕು ಎಂಬ ಸಂಗತಿಯನ್ನು ಈ ಸಾಲುಗಳಲ್ಲಿ ಹೇಳಲಾಗಿದೆ.

“ಹಿತಮಿತವಾದ ಮಾತು“ ಎಂದರೆ ನಾವು ಆಡುವ ಮಾತುಗಳು ಕೇಳುವವರ ಮನಸ್ಸಿಗೆ ಅರಿವು ಮತ್ತು ಆನಂದವನ್ನು ನೀಡುವಂತಿರಬೇಕು. ನಾವು ಆಡುವ ಮಾತಿನ ಮೇಲೆ ನಿಗ/ಎಚ್ಚರ/ಹತೋಟಿಯನ್ನಿಟ್ಟುಕೊಂಡು ಅಗತ್ಯವಿದ್ದಾಗ ಮಾತನಾಡುವುದನ್ನು ಮತ್ತು ಅಗತ್ಯವಿಲ್ಲದಿದ್ದಾಗ ಸುಮ್ಮನಿರುವುದನ್ನು ಕಲಿತಿರಬೇಕು.

( ನುಡಿ+ಅಲ್ಲಿ; ನುಡಿ=ಮಾತು/ಸೊಲ್ಲು; ನುಡಿವಲ್ಲಿ=ಮಾತನಾಡುವಾಗ/ಮಾತನಾಡುವುದಕ್ಕೆ ಮೊದಲು; ಏನ್+ಅನ್+ಅಹುದು; ಏನ್=ಯಾವುದು; ಅನ್=ಅನ್ನು; ಏನನ್=ಯಾವುದನ್ನು/ಯಾವುದೇ ಒಂದು ಸಂಗತಿಯನ್ನು/ವಿಚಾರವನ್ನು; ಅಹುದು=ನಿಜ/ದಿಟ/ವಾಸ್ತವ/ಸತ್ಯ; ಏನ್+ಅನ್+ಅಲ್ಲಾ+ಎಂಬ; ಅಲ್ಲ=ಇಲ್ಲ/ಆ ರೀತಿಯಲ್ಲಿಲ್ಲ/ಆ ಬಗೆಯಲ್ಲಿಲ್ಲ; ಎಂಬ=ಎನ್ನುವ; ಠಾವು+ಅನ್+ಅರಿ+ಬೇಕು; ಠಾವು=ಎಡೆ/ಜಾಗ/ತಾಣ/ತಾವು/ನೆಲೆ; ಅರಿ=ತಿಳಿ/ಕಲಿ; ಅರಿಯಬೇಕು=ತಿಳಿದುಕೊಳ್ಳಬೇಕು/ಅರಿತುಕೊಳ್ಳಬೇಕು;

ನುಡಿವಲ್ಲಿ ಏನನಹುದು ಏನನಲ್ಲಾಯೆಂಬ ಠಾವನರಿಯಬೇಕು=ಮಾನವ ಸಮುದಾಯದ ಬದುಕಿನಲ್ಲಿ “ಯಾವುದು ಸರಿ/ಯಾವುದು ತಪ್ಪು; ಯಾವುದು ದಿಟ/ಯಾವುದು ದಿಟವಲ್ಲ; ಯಾವುದು ವಾಸ್ತವ/ಯಾವುದು ತಪ್ಪು ಗ್ರಹಿಕೆ“ ಎಂಬ ಸಂಗತಿಗಳನ್ನು ಚೆನ್ನಾಗಿ ಅರಿತುಕೊಂಡು ಮಾತನಾಡಬೇಕಾದರೆ ಮಾನವ ಸಮುದಾಯ ಕಟ್ಟಿಕೊಂಡಿರುವ ಸಾಮಾಜಿಕ ಒಕ್ಕೂಟಗಳಾದ “ಜಾತಿ/ಮತ/ದೇಗುಲ“ ಗಳಿಂದ ಮಾನವರ ಬದುಕಿನ ಮೇಲಾಗಿರುವ ಪರಿಣಾಮಗಳನ್ನು ಮೊದಲು ಮನದಟ್ಟು ಮಾಡಿಕೊಳ್ಳಬೇಕು.

ಜಾತಿ/ಮತದ ಕಟ್ಟುಪಾಡುಗಳು ಮತ್ತು ಸಂಪ್ರದಾಯಗಳು ಹೇಗೆ ಮಾನವ ಸಮುದಾಯವನ್ನು ಅನೇಕ ಗುಂಪುಗಳಾಗಿ ವಿಂಗಡಿಸಿ, ಬೇರೆ ಬೇರೆ ಜಾತಿ/ಮತಗಳಿಗೆ ಸೇರಿದ ಜನರ ನಡುವೆ ಪರಸ್ಪರ ಅಪನಂಬಿಕೆ/ಅಸೂಯೆ/ಹಗೆತನ/ಮೇಲು ಕೀಳಿನ ಒಳಮಿಡಿತಗಳನ್ನು ಜನಮನದಲ್ಲಿ ನೆಲೆಗೊಳಿಸಿ, ಇಡೀ ಮಾನವ ಸಮುದಾಯದ ಸಂಕಟ/ನೋವು/ಯಾತನೆ/ಅಪಮಾನ/ಹಸಿವು/ಬಡತನ/ಕ್ರೂರತನದ ನಡೆನುಡಿಗಳಿಗೆ ಕಾರಣವಾಗಿವೆ ಎಂಬ ವಾಸ್ತವವನ್ನು ತಿಳಿದುಕೊಳ್ಳಬೇಕು.

ದೇಗುಲಗಳಲ್ಲಿ ನಡೆಯುವ ಆಚರಣೆಗಳು ಸಿರಿವಂತರ/ಉಳ್ಳವರ/ಗದ್ದುಗೆಯನ್ನೇರಿದವರ ಪರವಾಗಿದ್ದುಕೊಂಡು ದುಡಿಯುವ ವರ‍್ಗದ ಬಡಜನರನ್ನು ದೇವರ ಹೆಸರಿನಲ್ಲಿ ಮತ್ತು ಸಂಪ್ರದಾಯಗಳ ಮುಂದುವರಿಕೆಯ ನೆಪದಲ್ಲಿ ಹೇಗೆ ವಂಚಿಸುತ್ತಿವೆ ಎಂಬುದನ್ನು ಅರಿತುಕೊಳ್ಳಬೇಕು ಎಂಬ ತಿರುಳಿನಲ್ಲಿ ಈ ನುಡಿಗಳು ಬಳಕೆಯಾಗಿವೆ;

ಮಾತು+ಅ; ಮಾತು=ನುಡಿ/ಸೊಲ್ಲು; ಮಾತ=ಮಾತನ್ನು; ಬಲ್ಲೆನ್+ಎಂದು; ಬಲ್=ತಿಳಿ/ಅರಿ; ಬಲ್ಲೆನ್=ತಿಳಿದಿದ್ದೇನೆ/ಅರಿತಿದ್ದೇನೆ; ನುಡಿ=ಹೇಳು; ಮಾತಬಲ್ಲೆನೆಂದು ನುಡಿಯುವುದು=ತಾನು ಚೆನ್ನಾಗಿ ಮಾತನಾಡಬಲ್ಲೆ ಅಂದರೆ ಕೇಳುವವರ ಮನವನ್ನು ಸೆಳೆಯುವಂತಹ/ಮೆಚ್ಚಿಸುವಂತಹ/ಒಪ್ಪಿಸುವಂತಹ ಬಗೆಯಲ್ಲಿ ಸೊಗಸಾಗಿ ಮಾತನಾಡುತ್ತೇನೆ/ಮಾತುಗಾರಿಕೆಯಿಂದಲೇ ಎಲ್ಲವನ್ನೂ ಗೆಲ್ಲಬಲ್ಲೆ/ಎಲ್ಲರನ್ನೂ ಮಣಿಸಬಲ್ಲೆ ಎಂಬ ಕೆಚ್ಚಿನಿಂದ/ಸೊಕ್ಕಿನಿಂದ/ಕೊಬ್ಬಿನಿಂದ ಮಾತನಾಡುವುದು; ಮಾತಬಲ್ಲೆನೆಂದು ನುಡಿಯದೆ=ತನ್ನ ಮಾತಿನ ಕುಶಲತೆಯನ್ನು/ಚತುರತೆಯನ್ನು ತೋರಿಸಿಕೊಳ್ಳುವುದಕ್ಕಾಗಿಯೇ ಮಾತನಾಡದೆ;

ನೀತಿವಂತನ್+ಎಂದು; ನೀತಿವಂತ=ಒಳ್ಳೆಯ ನಡೆನುಡಿಯುಳ್ಳವನು/ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವವನು; ಸುಮ್ಮನೆ+ಇರದೆ; ಸುಮ್ಮನೆ=ಮಾತನಾಡದೆ/ತೆಪ್ಪಗೆ/ಏನನ್ನೂ ಹೇಳದೆ; ನೀತಿವಂತನೆಂದು ಸುಮ್ಮನಿರುವುದು=ತಾನೊಬ್ಬನೇ ನೀತಿವಂತನೆಂಬ ಒಳಮಿಡಿತದಿಂದ ಕೂಡಿ, ಇತರರಿಗಿಂತ ತಾನು ಮೇಲು ಎಂಬ ತಪ್ಪು ಗ್ರಹಿಕೆಗೆ ಒಳಗಾಗಿ, ತನ್ನ ಕಣ್ಣಮುಂದೆ ನಡೆಯುವ ಯಾವುದೇ ಬಗೆಯ ಪ್ರಸಂಗಗಳಿಗೂ ಏನೊಂದು ಬಗೆಯ ಪ್ರತಿಕ್ರಿಯೆಯನ್ನು ತೋರಿಸದೆ/ಮನದಲ್ಲಿ ಚಡಪಡಿಕೆಗೆ ಒಳಗಾಗದೆ ಅಂದರೆ ಕುಟುಂಬದಲ್ಲಿ/ದುಡಿಯುವ ನೆಲೆಯಲ್ಲಿ/ಸಾಮಾಜಿಕ ವ್ಯವಹಾರಗಳಲ್ಲಿ ಒಳ್ಳೆಯ ಕೆಲಸ ನಡೆದಾಗ ಅದನ್ನು ಮೆಚ್ಚಿ ಬೆಂಬಲಿಸಿದೆ, ಕೆಟ್ಟ ಕೆಲಸ ನಡೆದಾಗ ಆತಂಕಗೊಂಡು ಅದನ್ನು ಅಲ್ಲಗಳೆಯದೆ, ಎಲ್ಲರಿಂದ/ಎಲ್ಲದರಿಂದ ದೂರವಾಗಿ ತನ್ನ ಪಾಡಿಗೆ ತಾನು ಇರುವುದು;

ನೀತಿವಂತನೆಂದು ಸುಮ್ಮನಿರದೆ=ನೀತಿವಂತನೆಂಬ ಒಳಮಿಡಿತವನ್ನು ಬಿಟ್ಟು , ಕಣ್ಣ ಮುಂದೆ ನಡೆಯುವ ಪ್ರಸಂಗಗಳಿಗೆ ಮಿಡಿಯುವ/ಪ್ರತಿಕ್ರಿಯೆಯನ್ನು ತೋರಿಸುವ ವ್ಯಕ್ತಿಯಾಗಿ ರೂಪುಗೊಂಡು;

ತತ್ಕಾಲ=ಯಾವುದೇ ಒಂದು ಪ್ರಸಂಗ ನಡೆದ/ಉಂಟಾದ ಸಮಯ; ನೀತಿ+ಅನ್+ಅರಿದು; ನೀತಿ=ಒಳ್ಳೆಯ ನಡೆನುಡಿ/ಆಚಾರ ವಿಚಾರ/ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ಕೆಲಸ; ಅರಿದು=ತಿಳಿದುಕೊಂಡು/ಅರಿತುಕೊಂಡು; ಆ ತತ್ಕಾಲದ ನೀತಿಯನರಿದು=ಆ ಸಮಯದಲ್ಲಿ ನಡೆದಿರುವ ಪ್ರಸಂಗದಲ್ಲಿನ ಒಳಿತು ಕೆಡುಕಿನ ನಡೆನುಡಿಗಳನ್ನು ಒರೆಹಚ್ಚಿ ನೋಡಿ, ಯಾವುದು ತನ್ನನ್ನು ಒಳಗೊಂಡಂತೆ ಎಲ್ಲರಿಗೂ ಒಳಿತನ್ನು ಉಂಟುಮಾಡುತ್ತದೆಯೋ ಅದನ್ನು ನೀತಿಯೆಂದು ತಿಳಿದುಕೊಂಡು;

ಸಾತ್ವಿಕ=ಒಳ್ಳೆಯದು/ಸರಿಯಾದುದು/ಸರಳವಾದುದು/ಪ್ರಾಮಾಣಿಕವಾದುದು; ಲಕ್ಷಣ+ಅಲ್ಲಿ+ಇಪ್ಪ+ಆತನ; ಲಕ್ಷಣ=ಗುರುತು/ಕುರುಹು/ಚಿಹ್ನೆ/ಗುರಿ/ಉದ್ದೇಶ; ಇಪ್ಪ=ಇರುವ/ನಡೆದುಕೊಳ್ಳುವ/ಜೀವಿಸುವ/ಬದುಕುವ; ಆತನ್+ಅ; ಆತನ=ವ್ಯಕ್ತಿಯ/ಅಂತಹವನ; ಲಕ್ಷಣವೇ=ಜೀವನದ ನಡೆನುಡಿಗಳ ಚಹರೆಗಳೇ/ರೀತಿನೀತಿಗಳೇ ; ನಿರೀಕ್ಷಣ=ನೋಡುವುದು/ಕಾಣುವುದು/ನೋಟ;

ಸಾತ್ವಿಕ ಲಕ್ಷಣದಲ್ಲಿಪ್ಪಾತನ ಲಕ್ಷಣವೇ ನಿರೀಕ್ಷಣ= ಸರಳತನ, ಪ್ರಾಮಾಣಿಕತನ ಮತ್ತು ಹಿತಮಿತವಾದ ನಡೆನುಡಿಗಳಿಂದ ಕೂಡಿ ಬಾಳುವವನ ಜೀವನದ ರೀತಿನೀತಿಯೇ ದೊಡ್ಡದು/ಒಳ್ಳೆಯದು ಎಂಬುದನ್ನು ತಿಳಿದುನೋಡುವುದು/ಅರಿತುಕೊಳ್ಳುವುದು ಎಂಬ ತಿರುಳಿನಲ್ಲಿ ಈ ನುಡಿಗಳು ಬಳಕೆಗೊಂಡಿವೆ; ಕದಂಬಲಿಂಗ=ಶಿವ/ಈಶ್ವರ/ಕಂಬದ ಮಾರಿತಂದೆಯ ವಚನಗಳ ಅಂಕಿತನಾಮ.)

( ಚಿತ್ರ ಸೆಲೆ:  sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. n shravan says:

    chennagide.

ಅನಿಸಿಕೆ ಬರೆಯಿರಿ:

%d bloggers like this: