ಗುರುಪುರದ ಮಲ್ಲಯ್ಯನ ವಚನದ ಓದು

– ಸಿ.ಪಿ.ನಾಗರಾಜ.

ವಚನಗಳು, Vachanas

ಹೆಸರು: ಗುರುಪುರದ ಮಲ್ಲಯ್ಯ

ದೊರೆತಿರುವ ವಚನಗಳು: 4

ವಚನಗಳ ಅಂಕಿತನಾಮ: ಪುರದ ಮಲ್ಲಯ್ಯ

==================================================================

ಹೊತ್ತಿಗೊಂದು ಪರಿಯಹ ಮನವ ಕಂಡು
ದಿನಕ್ಕೊಂದು ಪರಿಯಹ ತನುವ ಕಂಡು
ಅಂದಂದಿಗೆ ಭಯದೋರುತ್ತಿದೆ
ಒಂದು ನಿಮಿಷಕ್ಕನಂತವನೆ ನೆನೆವ ಮನವ ಕಂಡು
ಅಂದಂದಿಗೆ ಭಯವಾಗುತ್ತಿದೆ
ಈ ಮನ ನಿಮ್ಮ ನೆನೆಯಲೀಯದು
ಮನ ಹಗೆಯಾದುದಯ್ಯಾ
ಸದ್ಗುರುವೆ ಪುರದ ಮಲ್ಲಯ್ಯಾ

ಕಾಲದ ಉರುಳುವಿಕೆ/ಸಾಗುವಿಕೆ/ಕಳೆಯುವಿಕೆಯ ಪ್ರತಿಯೊಂದು ಗಳಿಗೆಯಲ್ಲಿಯೂ ವ್ಯಕ್ತಿಯ ಮಯ್ – ಮನದಲ್ಲಿ ಉಂಟಾಗುವ ತಲ್ಲಣಗಳನ್ನು ಮತ್ತು ಬದಲಾವಣೆಗಳನ್ನು ಕುರಿತು ಈ ವಚನದಲ್ಲಿ ಹೇಳಲಾಗಿದೆ.

(ಹೊತ್ತು+ಗೆ+ಒಂದು; ಹೊತ್ತು=ಕಾಲ/ಸಮಯ/ವೇಳೆ; ಹೊತ್ತಿಗೆ=ಕಾಲಕ್ಕೆ/ಸಮಯಕ್ಕೆ/ವೇಳೆಗೆ; ಪರಿ+ಅಹ; ಪರಿ=ರೀತಿ/ಬಗೆ/ಚಲಿಸು/ಕೆದರು/ಚೆದರು/ಚಂಚಲವಾಗು/ಬದಲಾಗು; ಅಹ=ಆಗುವ/ಉಂಟಾಗುವ/ಜರುಗುವ/ನಡೆದುಕೊಳ್ಳುವ; ಮನ=ಮನಸ್ಸು; ಕಂಡು=ನೋಡಿ/ಅರಿತು/ತಿಳಿದು;

ಹೊತ್ತಿಗೊಂದು ಪರಿಯಹ ಮನವ ಕಂಡು=ಜೀವನದ ಪ್ರತಿಯೊಂದು ಗಳಿಗೆಯಲ್ಲೂ ಹಿಂದೆ ನಡೆದಿರುವ ಮತ್ತು ಮುಂದೆ ನಡೆಯಲಿರುವ ಒಳಿತು ಕೆಡುಕಿನ ಆಗುಹೋಗುಗಳನ್ನು ಕುರಿತು ಆತಂಕ/ತಲ್ಲಣ/ಹೆದರಿಕೆ/ಹಿಂಜರಿಕೆ/ಕೋಪ/ತಾಪ/ಆನಂದ/ಉಲ್ಲಾಸ/ಸೇಡು/ಹಗೆತನ/ಒಲವು/ನಲಿವು ಮುಂತಾದ ನೂರೆಂಟು ಬಗೆಯ ಒಳಮಿಡಿತಗಳಿಂದ ತನ್ನ ಮನಸ್ಸು ಚಡಪಡಿಸುತ್ತಿರುತ್ತದೆ ಎಂಬುದನ್ನು ಅರಿತುಕೊಳ್ಳುವುದು/ತಿಳಿದುಕೊಳ್ಳುವುದು/ನೋಡುವುದು ಎಂಬ ತಿರುಳಿನಲ್ಲಿ ಈ ನುಡಿಗಳು ಬಳಕೆಯಾಗಿವೆ;

ದಿನ+ಕ್ಕೆ+ಒಂದು; ದಿನ=ಒಂದು ಹಗಲು ಮತ್ತು ಒಂದು ರಾತ್ರಿಯನ್ನು ಒಳಗೊಂಡ ಇಪ್ಪತ್ತನಾಲ್ಕು ಗಂಟೆಗಳ ಸಮಯ; ತನು=ಮಯ್/ದೇಹ/ಶರೀರ; ದಿನಕ್ಕೊಂದು ಪರಿಯಹ ತನುವ ಕಂಡು=ಹುಟ್ಟಿನಿಂದ ಸಾವಿನ ತನಕ ವ್ಯಕ್ತಿಯ ತನುವಿನ ಆಕಾರ , ಕಳೆ/ಕಾಂತಿ/ತೇಜಸ್ಸು ಮತ್ತು ಕಸುವು/ಶಕ್ತಿಯು ಬಾಲ್ಯ/ಹರೆಯ/ಮುಪ್ಪಿನ ಹಂತಗಳಲ್ಲಿ ಬದಲಾಗುತ್ತಿರುವುದನ್ನು ಅರಿತುಕೊಳ್ಳುವುದು/ತಿಳಿದುಕೊಳ್ಳುವುದು ಎಂಬ ತಿರುಳಿನಲ್ಲಿ ಈ ನುಡಿಗಳು ಬಳಕೆಗೊಂಡಿವೆ;

ಅಂದು+ಅಂದು+ಇಗೆ; ಅಂದು=ಆ ದಿನ/ ಆ ವೇಳೆ/ ಆ ಸಮಯ; ಅಂದಿಗೆ=ಆ ಕಾಲಕ್ಕೆ/ಸಮಯಕ್ಕೆ/ವೇಳೆಗೆ ; ಅಂದಂದಿಗೆ=ಆಯಾಯ ಕಾಲಕ್ಕೆ/ಸಮಯಕ್ಕೆ/ವೇಳೆಗೆ; ಭಯ+ತೋರುತ್ತ+ಇದೆ; ಭಯ=ಹೆದರಿಕೆ/ಅಂಜಿಕೆ/ಪುಕ್ಕಲುತನ ; ತೋರು=ಗೋಚರಿಸು/ಉಂಟಾಗು/ಕಾಣು ; ತೋರುತ್ತಿದೆ=ಉಂಟಾಗುತ್ತಿದೆ/ಕಂಡುಬರುತ್ತಿದೆ ;

ಅಂದಂದಿಗೆ ಭಯದೋರುತ್ತಿದೆ=ಕಾಲ ಉರುಳಿದಂತೆಲ್ಲಾ ಮಯ್ಯಲ್ಲಿನ ಕಸುವು ಕುಗ್ಗುತ್ತಿರುವುದು ಮತ್ತು ಮನದಲ್ಲಿ ಎಡೆಬಿಡದೆ ಒಂದೇ ಸಮನೆ ತುಡಿಯುತ್ತಿರುವ ಒಳಮಿಡಿತಗಳಿಂದಾಗಿ ವ್ಯಕ್ತಿಯ ಜೀವನದಲ್ಲಿ ಯಾವುದೊಂದೂ ಇದ್ದಂತೆಯೇ ಇರುವುದಿಲ್ಲ, ಎಲ್ಲವೂ ಬದಲಾಗುತ್ತಿದೆಯೆಂಬ ಮತ್ತು ಹುಟ್ಟಿದ್ದೆಲ್ಲವೂ ಅಳಿಯುತ್ತದೆ/ನಾಶವಾಗುತ್ತದೆ/ಇಲ್ಲವಾಗುತ್ತದೆಯೆಂಬ ವಾಸ್ತವ/ದಿಟ/ಸತ್ಯದ ಸಂಗತಿಯು ಅರಿವಿಗೆ ಬಂದು ಹೆದರಿಕೆಯುಂಟಾಗುತ್ತಿದೆ;

ನಿಮಿಷ+ಕ್ಕೆ+ಅನಂತ+ಅನ್+ಎ; ನಿಮಿಷ=ಕಣ್ಣಿನ ರೆಪ್ಪೆಯನ್ನು ಒಮ್ಮೆ ಮಿಟುಕಿಸುವುದು/ಒಂದು ಸಲ ಕಣ್ಣ ರೆಪ್ಪೆಯನ್ನು ಹೊಡೆಯಲು ತೆಗೆದುಕೊಳ್ಳುವ ಕಾಲ/ಗಳಿಗೆ/ಸಮಯ; ನಿಮಿಷಕ್ಕೆ=ಒಂದು ಗಳಿಗೆಗೆ; ಅನಂತ=ಕೊನೆಯಿಲ್ಲದ/ಮೇರೆಯಿಲ್ಲದ/ಮಿತಿಯಿಲ್ಲದ/ಎಲ್ಲೆಯಿಲ್ಲದ; ಅನ್=ಅನ್ನು; ನೆನೆ=ಹಿಂದೆ ನಡೆದ ಸಂಗತಿಗಳನ್ನು ಮನದಲ್ಲಿ ಮತ್ತೆ ಸ್ಮರಿಸುವುದು/ಕುರಿತು ಚಿಂತಿಸುವುದು; ನೆನೆವ=ನೆನೆದುಕೊಳ್ಳುವ ;

ಒಂದು ನಿಮಿಷಕ್ಕನಂತವನೆ ನೆನೆವ ಮನವ ಕಂಡು= ಎಚ್ಚರವಿದ್ದ ಸಮಯದಲ್ಲಿ ವ್ಯಕ್ತಿಯ ಮನಸ್ಸು ಒಳಮಿಡಿತಗಳಿಂದ ತುಡಿಯದೆ ಒಂದು ಗಳಿಗೆಯೂ ಇರಲಾರದು. ಅಗತ್ಯವಾದಾಗ ಇತರರೊಡನೆ ಬಹಿರಂಗದಲ್ಲಿ ಮಾತಿನ ಮೂಲಕ ವ್ಯವಹರಿಸುವಂತೆಯೇ , ವ್ಯಕ್ತಿಯು ತನ್ನ ಅಂತರಂಗದ ಮನದಲ್ಲಿ ತಾನೇ ಬಹುಬಗೆಯ ಆಲೋಚನೆ/ಚಿಂತನೆ/ಕಲ್ಪನೆಗಳಿಗೆ ಒಳಗಾಗುತ್ತಿರುತ್ತಾನೆ. ಇತರರ ಕಲ್ಪನೆಗೂ ಬಾರದಿರುವಂತಹ ಒಳಿತು ಕೆಡುಕಿನ ನೂರಾರು ಬಗೆಯ ಒಳಮಿಡಿತಗಳು ಯಾವುದೇ ಹತೋಟಿಯಿಲ್ಲದೆ ಒಂದೇ ಸಮನೆ ಮನದಲ್ಲಿ ಮೂಡುತ್ತಿರುತ್ತವೆ ಎಂಬುದನ್ನು ಅರಿತುಕೊಳ್ಳುವುದು ಎಂಬ ತಿರುಳಿನಲ್ಲಿ ಈ ನುಡಿಗಳು ಬಳಕೆಯಾಗಿವೆ; ಭಯ+ಆಗುತ್ತ+ಇದೆ; ಆಗು=ಉಂಟಾಗು/ಜರುಗು/ನಡೆ;

ಈ ಮನ=ಈ ರೀತಿ ಪ್ರತಿಯೊಂದು ಗಳಿಗೆಯಲ್ಲೂ ಒಳಮಿಡಿತಗಳಿಂದ ಕೂಡಿ ನೂರೆಂಟು ಬಗೆಯ ತುಡಿತಗಳಿಂದ ಕೂಡಿರುವ ಮನಸ್ಸು/ಒಳಿತು ಕೆಡುಕಿನ ನಡುವೆ ಸಿಲುಕಿ ಇಬ್ಬಗೆಯಲ್ಲಿ ಹೊಯ್ದಾಡುತ್ತಿರುವ ಮನಸ್ಸು; ನಿಮ್ಮ=ದೇವರಾದ ನಿಮ್ಮನ್ನು/ದೇವರನ್ನು; ನೆನೆ+ಅಲ್+ಈ+ಅದು; ನೆನೆಯಲ್=ನೆನೆದುಕೊಳ್ಳಲು; ಈ/ಈಯು=ಕೊಡು/ಅವಕಾಶವನ್ನು ನೀಡು/ಎಡೆಗೊಡು; ಈಯದು=ಬಿಡುತ್ತಿಲ್ಲ/ಕೊಡುತ್ತಿಲ್ಲ;

ಈ ಮನ ನಿಮ್ಮ ನೆನೆಯಲೀಯದು=ದೇವರನ್ನು ನೆನೆಯುವುದು ಎಂದರೆ ವ್ಯಕ್ತಿಯು ತನಗೆ ಒಳಿತನ್ನು ಬಯಸುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಉಂಟುಮಾಡುವಂತಹ ನಡೆನುಡಿಗಳನ್ನು ಹೊಂದಿರುವುದು. ಆದರೆ ಸದಾಕಾಲ ಒಂದಲ್ಲ ಒಂದು ಬಗೆಯ ಚಿಂತನೆ/ಕಲ್ಪನೆ/ಆಲೋಚನೆಗಳಲ್ಲಿ ತೊಡಗಿರುವ ವ್ಯಕ್ತಿಯ ಮನಸ್ಸು ಒಳಿತು ಕೆಡುಕುಗಳ ನಡುವೆ ತುಯ್ದಾಡುತ್ತಿರುವುದರಿಂದ ಒಳಿತಿನ ಹಾದಿಯಲ್ಲಿ ನಡೆಯಲು ಆಗುತ್ತಿಲ್ಲ ಎಂಬ ತಿರುಳಿನಲ್ಲಿ ಈ ನುಡಿಗಳು ಬಳಕೆಯಾಗಿವೆ;

ಹಗೆ+ಆದುದು+ಅಯ್ಯಾ; ಹಗೆ=ಶತ್ರು ; ಆದುದು=ಆಗಿದೆ/ಆಗಿರುವುದು ; ಅಯ್ಯಾ=ಇತರರನ್ನು ಒಲವು ನಲಿವುಗಳಿಂದ ಮಾತನಾಡಿಸುವಾಗ ಬಳಸುವ ಪದ; ಮನ ಹಗೆಯಾದುದಯ್ಯಾ=ಒಳಿತಿನ ನಡೆನುಡಿಗಳನ್ನು ಹೊಂದದಿರಲು ಮನಸ್ಸಿನಲ್ಲಿ ತುಡಿಯುತ್ತಿರುವ ಕೆಡುಕಿನ ಒಳಮಿಡಿತಗಳೇ ಕಾರಣವಾಗಿವೆ ಎಂಬ ಕಳವಳ/ಸಂಕಟವನ್ನು ಈ ನುಡಿಗಳು ಸೂಚಿಸುತ್ತಿವೆ;

ಸದ್ಗುರು=ಒಳ್ಳೆಯ ಗುರು/ಒಳ್ಳೆಯ ನಡೆನುಡಿಗಳನ್ನು ತನ್ನ ಗುಡ್ಡ/ಶಿಶ್ಯರ ವ್ಯಕ್ತಿತ್ವದಲ್ಲಿ ರೂಪಿಸುವ ವ್ಯಕ್ತಿ; ಪುರ=ಪಟ್ಟಣ/ನಗರ/ಕೋಟೆ; ಮಲ್ಲಯ್ಯ=ಶಿವನ ಹೆಸರು; ಪುರದ ಮಲ್ಲಯ್ಯ=ಗುರುಪುರದ ಮಲ್ಲಯ್ಯನ ವಚನಗಳ ಅಂಕಿತನಾಮ)

 

( ಚಿತ್ರ ಸೆಲೆ:  sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: