‘ಜಸ್ಟ್ ರೂಮ್ ಎನಪ್’ – ಒಕ್ಕಲಿರುವ ವಿಶ್ವದ ಅತ್ಯಂತ ಪುಟ್ಟ ದ್ವೀಪ

– ಕೆ.ವಿ.ಶಶಿದರ.

ಪುಟ್ಟ ದ್ವೀಪ 1, Small Island 1

1982 ರವರೆಗೂ ಮಂದಿ ನೆಲೆಸಿರುವ ವಿಶ್ವದ ಅತ್ಯಂತ ಪುಟ್ಟ ದ್ವೀಪ ಎಂಬ ಕ್ಯಾತಿ ಪಡೆದಿದ್ದುದು ‘ಬಿಶಪ್ ರಾಕ್ ಐಲ್ಯಾಂಡ್’. ಇದು ‘ಇಂಗ್ಲೀಶ್ ಐಲ್ಸ್ ಆಪ್ ಸಿಲ್ಲಿ’ಯ ಒಂದು ಬಾಗವಾಗಿದ್ದು ದೀಪಸ್ತಂಬವನ್ನು ಮಾತ್ರ ಹೊಂದಿತ್ತು. ಇಲ್ಲಿ ವಾಸವಿದ್ದವರು ದೀಪಸ್ತಂಬವನ್ನು ನಿರ‍್ವಹಿಸುತ್ತಿದ್ದವರು. ಹೊಸ ಅನ್ವೇಶಣೆಗಳು ಹೊರ ಬರುತ್ತಿದ್ದಂತೆ, ದೀಪಸ್ತಂಬದ ನಿರ‍್ವಹಣಾ ವೆಚ್ಚವನ್ನು ಕಡಿತಗೊಳಿಸಲು 1982ರಲ್ಲಿ ಸ್ವಯಂಚಾಲಿತ ಯಂತ್ರಗಳನ್ನು ದೀಪಸ್ತಂಬದ ನಿರ‍್ವಹಣೆಗೆ ಅಳವಡಿಸಲಾಯಿತು. ಜನರ ಅವಶ್ಯಕತೆ ಬೇಡದ ಕಾರಣ ಅಲ್ಲಿದ್ದ ಎಲ್ಲಾ ನಿರ‍್ವಾಹಕರನ್ನೂ ವಾಪಸ್ಸು ಕರೆಸಲಾಯಿತು. ಅಂದಿನಿಂದ ಇದು ಒಕ್ಕಲಿರುವ ವಿಶ್ವದ ಅತ್ಯಂತ ಚಿಕ್ಕ ದ್ವೀಪ ಎಂಬ ತನ್ನ ಕ್ಯಾತಿಯನ್ನು ಕಳಚಿಕೊಂಡಿತು. ‘ಜಸ್ಟ್ ರೂಮ್ ಎನಪ್’ ದ್ವೀಪ ಆ ಹೆಸರನ್ನು ಪಡೆದುಕೊಂಡಿತು.

‘ಜಸ್ಟ್ ರೂಮ್ ಎನಪ್ ‘ ದ್ವೀಪ ಎಲ್ಲಿದೆ?

ನ್ಯೂಯಾರ‍್ಕ್ ನ ಅಲೆಕ್ಸಾಂಡ್ರಿಯಾ ಕೊಲ್ಲಿಯ ತೌಸಂಡ್ ಐಲ್ಯಾಂಡ್ಸ್ ದ್ವೀಪ ಸಮೂಹದಲ್ಲಿರುವ ‘ಜಸ್ಟ್ ಎನಪ್ ರೂಮ್’ ಎಂಬ ಪುಟ್ಟ ದ್ವೀಪ, ಒಕ್ಕಲಿರುವ ವಿಶ್ವದ ಅತ್ಯಂತ ಪುಟ್ಟ ದ್ವೀಪ ಎಂಬ ಕ್ಯಾತಿಯನ್ನು ತನ್ನ ಹೆಗಲಿಗೇರಿಸಿಕೊಂಡಿತು. ಜಸ್ಟ್ ಎನಪ್ ರೂಮ್‍ನ ಹಿಂದಿನ ಹೆಸರು ‘ಹಬ್ ಐಲ್ಯಾಂಡ್’ ಎಂದು. ಅಮೇರಿಕಾ ಮತ್ತು ಕೆನಡಾದಲ್ಲಿ ಹರಿಯುವ 100 ಮೈಲಿ ಉದ್ದದ ಸೆಂಟ್ ಲಾರನ್ಸ್ ನದಿಯಲ್ಲಿನ ತೌಸಂಡ್ ಐಲ್ಯಾಂಡ್ ಕ್ಯಾತಿಯ ದ್ವೀಪ ಸಮೂಹದಲ್ಲಿ ಈ ಪುಟ್ಟ ದ್ವೀಪ ಸಹ ಒಂದು. ತೌಸಂಡ್ ಐಲ್ಯಾಂಡ್ ಎಂದು ಈ ದ್ವೀಪ ಸಮೂಹವನ್ನು ಕರೆದರೂ ವಾಸ್ತವಾಗಿ ಇಲ್ಲಿರುವ ದ್ವೀಪಗಳ ಸಂಕ್ಯೆ 1864. ಪುಟ್ಟ ದ್ವೀಪ 2, Small Island 2

ಈ ಪುಟ್ಟ ದ್ವೀಪದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು!

ದ್ವೀಪವೆಂದು ಪರಿಗಣಿಸಬೇಕಾದಲ್ಲಿ ಬೂ ಪ್ರದೇಶವು ಕನಿಶ್ಟ ಒಂದು ಚದರ ಅಡಿ ವಿಸ್ತೀರ‍್ಣ ಹೊಂದಿರಬೇಕು, ಅದು ವರ‍್ಶ ಪೂರ‍್ತಿ ನೀರಿನ ಮಟ್ಟಕ್ಕಿಂತಲೂ ಮೇಲೆ ಉಳಿಯಬೇಕು ಮತ್ತು ಕನಿಶ್ಟ ಒಂದು ಮರ ಇರಬೇಕು ಎಂಬುದು ಮಾನದಂಡ. ಜಸ್ಟ್ ರೂಮ್ ಎನಪ್ ದ್ವೀಪ ಈ ಎಲ್ಲಾ ಮಾನದಂಡಗಳನ್ನು ಹೊಂದಿದ್ದು ದ್ವೀಪವೊಂದಕ್ಕೆ ಬೇಕಾದ ಅವಶ್ಯಕತೆಯನ್ನು ಪೂರೈಸುತ್ತದೆ. ಹತ್ತಿರದ ದ್ವೀಪದಿಂದ ಕೇವಲ 500 ಅಡಿ ದೂರದಲ್ಲಿರುವ ಇದನ್ನು 1950ರಲ್ಲಿ ಸೈಜ್ ಲ್ಯಾಂಡ್‍ನ ಕುಟುಂಬ ಕರೀದಿಸಿತು. ಈ ದ್ವೀಪದಲ್ಲಿ ಒಂದು ಮರವನ್ನು ನೆಟ್ಟ ನಂತರ ಒಂದಿಂಚೂ ಸ್ತಳವನ್ನು ಬಿಡದೆ ಎಲ್ಲಾ ಜಾಗವನ್ನು ಉಪಯೋಗಿಸಿಕೊಂಡು ಕಾಟೇಜ್ ನಿರ‍್ಮಿಸಿದರು. ಕಾಟೇಜ್, ಪುಟ್ಟ ಬೀಚ್ ಹಾಗೂ ಪೊದೆ ಇದರ ವಿಶೇಶ. ಈ ದ್ವೀಪದಲ್ಲಿ ಇವಿಶ್ಟು ಬಿಟ್ಟು ಬೇರಾವುದಕ್ಕೂ ಸ್ತಳಾವಕಾಶವಿಲ್ಲದ ಹಿನ್ನೆಲೆಯಲ್ಲಿ ಇದನ್ನು ‘ಜಸ್ಟ್ ರೂಮ್ ಎನಪ್’ ಎಂದು ಕರೆದರು. ಈ ಪುಟ್ಟ ದ್ವೀಪದಲ್ಲಿ ಒಂದು ಹೆಜ್ಜೆ ತಪ್ಪಿಟ್ಟರೂ ನೀರಿಗೆ ಜಾರಿ ಬೀಳುವುದು ಶತಸಿದ್ದ. ಎಚ್ಚರಿಕೆ ಬಹಳ ಅವಶ್ಯಕ.

ಈ ದ್ವೀಪದ ವಿಸ್ತೀರ‍್ಣ ಟೆನ್ನಿಸ್ ಕೋರ‍್ಟ್ ವಿಸ್ತೀರ‍್ಣಕ್ಕಿಂತ ತುಸು ಹೆಚ್ಚು!

ಈ ಐತಿಹಾಸಿಕ ದ್ವೀಪದ ಒಟ್ಟು ವಿಸ್ತೀರ‍್ಣ ಬಿಶಪ್ ರಾಕ್‍ನ ಅರ‍್ದಕ್ಕಿಂತಲೂ ಕಡಿಮೆ. ಜಸ್ಟ್ ರೂಮ್ ಎನಪ್ ನ ಸಂಪೂರ‍್ಣ ವಿಸ್ತೀರ‍್ಣ 3300 ಚದರ ಅಡಿ. ಟೆನ್ನಿಸ್ ಕೋರ‍್ಟ್ ವಿಸ್ತೀರ‍್ಣಕ್ಕಿಂತ ಕೊಂಚ ಹೆಚ್ಚು.( ಟೆನ್ನಿಸ್ ಕೋರ‍್ಟ್ ವಿಸ್ತೀರ‍್ಣ 2808 ಚದರ ಅಡಿ).  ಈ ದ್ವೀಪದಲ್ಲಿ ಸೈಜ್ ಲ್ಯಾಂಡ್‍ನ ಕುಟುಂಬ ಕಾಟೇಜ್ ನಿರ‍್ಮಿಸಿದ್ದರ ಹಿಂದಿನ ಉದ್ದೇಶ ರಜಾ ದಿನಗಳಲ್ಲಿ ಯಾವುದೇ ಜಂಜಾಟವಿಲ್ಲದೆ ಆರಾಮವಾಗಿ ನೆಮ್ಮದಿಯಾಗಿ ಪ್ರಕ್ರುತಿ ಸೌಂದರ‍್ಯ ಸವಿಯುತ್ತಾ ಕಾಲ ಕಳೆಯಲೆಂದು. ಆದರೆ ಸೈಜ್ ಲ್ಯಾಂಡ್‍ನ ಕುಟುಂಬದವರ ಆಸೆ ಕೈಗೂಡಲಿಲ್ಲ. ಸೆಂಟ್ ಲಾರೆನ್ಸ್ ನದಿಯಲ್ಲಿ ವಿಹಾರಾರ‍್ತವಾಗಿ ದೋಣಿಗಳಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಪ್ರವಾಸಿಗೂ ಈ ಮನೆ ಅತ್ಯಂತ ಆಕರ‍್ಶಕವಾಗಿ ಕಂಡಿತು. ‘ಒಮ್ಮೆ ನೋಡುವ’ ಎಂದು ಎಲ್ಲಾ ದೋಣಿಗಳೂ ಕುತೂಹಲದಿಂದ ಇದರ ಸುತ್ತಾ ಸುತ್ತಿ ಹೋಗುವಂತಾದ ಕಾರಣ ಇದರಲ್ಲಿದ್ದವರಿಗೆ ನೆಮ್ಮದಿ ಹಾಳಾಗಿ ಕಟ್ಟಿದ ಉದ್ದೇಶ ವಿಪಲವಾಯಿತು.

ಪ್ರವಾಸಿಗರಿಗೆ ಆಕರ‍್ಶಣೆಯ ತಾಣವಾಗಿರುವ ಹಾಗೂ ಒಕ್ಕಲಿರುವ ವಿಶ್ವದ ಅತಿ ಪುಟ್ಟ ದ್ವೀಪವೆಂಬ ಗಿನ್ನೆಸ್ ದಾಕಲೆಯ ಈ ಪುಟ್ಟ ದ್ವೀಪದ ನಿರ‍್ವಹಣೆಯ ಹೊಣೆಯನ್ನು ಪ್ರಸ್ತುತ ‘ತೌಸಂಡ್ ಐಲೆಂಡ್ ಬ್ರಿಡ್ಜ್ ಅತಾರಿಟಿ’ ಹೊತ್ತಿದೆ.

( ಮಾಹಿತಿ ಮತ್ತು ಚಿತ್ರ ಸೆಲೆ: cnntraveler.com, telegraph.co.uk, thesun.co.uk, ladbible.com, amorq.com )

1 ಅನಿಸಿಕೆ

  1. ಲೇಖನ ಓದಿ ಸಂತೋಷವಾಯಿತು . ೨೦೧೭ರಲ್ಲಿ ನಾನು ಹಾಗೂ ನನ್ನ ಪತ್ನಿ ಥೌಸಂಡ್ ಐಲ್ಯಾಂಡ್ ಪ್ರವಾಸಕ್ಕೆ ಹೋದಾಗ , ಈ ಪುಟ್ಟ ಐಲ್ಯಾಂಡ್ ನ್ನು cruise ನಲ್ಲಿ ಕುಳಿತು ನೋಡಿ ಆನಂದ ಪಟ್ಟಿದ್ದೇವೆ . ಲೇಖನ ಬರೆದ ಸ್ನೇಹಿತ ಶಶಿಧರ ಅವರಿಗೆ ಧನ್ಯವಾದಗಳು.?

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.