ಸೌಂದರ‍್ಯ ವಸ್ತುಗಳ ಸಂಗ್ರಹಾಲಯ – ಮಲಕ್ಕಾ
– ಕೆ.ವಿ.ಶಶಿದರ.
ಮಲೇಶ್ಯಾದ ಮಲಕ್ಕಾದಲ್ಲಿರುವ ‘ಪೀಪಲ್ಸ್ ಮ್ಯೂಸಿಯಮ್’ನ ಈ ವಿಬಾಗ ಬೇರೆಲ್ಲವುಗಳಿಗಿಂತ ತೀರ ವಿಬಿನ್ನ. ಈ ವಿಬಾಗವನ್ನು ಅನೇಕ ಜನಾಂಗದ ಸಾಂಪ್ರದಾಯಿಕ ಹಾಗೂ ಸಂಸ್ಕ್ರುತಿ ದತ್ತ ಸೌಂದರ‍್ಯದ ವಿವಿದ ವ್ಯಾಕ್ಯಾನಗಳಿಗೆ ಮೀಸಲಿಡಲಾಗಿದೆ. ಇತಿಹಾಸದಲ್ಲಿ ಸೌಂದರ‍್ಯಕ್ಕಾಗಿ ಅನುಸರಿಸುತ್ತಿದ್ದ ಎಲ್ಲಾ ವಿದಿ ವಿದಾನಗಳ ವಿವರಗಳನ್ನೂ ಇಲ್ಲಿ ದಾಕಲಿಸಿಡುವ ಪ್ರಯತ್ನ ಮಾಡಲಾಗಿದೆ.
ಹಲವು ಆಪ್ರಿಕನ್ ಬುಡಕಟ್ಟು ಜನಾಂಗದವರಲ್ಲಿ ಚಾಲ್ತಿಯಲ್ಲಿದ್ದ ಹಲ್ಲನ್ನು ಅರದಿಂದ ಉಜ್ಜುವ ಕ್ರಿಯೆಯಾಗಲಿ, ಕಲಾತ್ಮಕವಾಗಿ ಗಾಯ ಮಾಡಿ ಉಬ್ಬು ಕಲೆ ಉಳಿಸುವುದಾಗಲಿ, ಹಚ್ಚೆಯ ಕಲೆಯಾಗಲಿ, ಚೇದಿಸುವ ಕಲೆಯಾಗಲಿ, ತಲೆಬುರುಡೆಯನ್ನು ಉದ್ದ ಮಾಡುವ ಕ್ರಿಯೆಯಾಗಲಿ, ತುಟಿ ಮತ್ತು ಕುತ್ತಿಗೆಯ ಅಳತೆಯ ಬಲವಂತದ ಹಿಗ್ಗಿಸುವಿಕೆಯಾಗಲಿ, ಪಾದಗಳನ್ನು ಚಿಕ್ಕದಾಗಿಸುವ ಕ್ರಿಯೆಯಾಗಲಿ – ಹೀಗೆ ಸೌಂದರ‍್ಯ ಹೆಚ್ಚಿಸಲು ಅನಾದಿ ಕಾಲದಿಂದಲೂ ನಡೆದುಬಂದಿರುವ ಬೇರೆ ಬೇರೆ ಪ್ರಕ್ರಿಯೆಗಳ ದಾಕಲೆ ಈ ವಸ್ತು ಸಂಗ್ರಹಾಲಯದಲ್ಲಿದೆ.
ಸೌಂದರ‍್ಯ ಹೆಚ್ಚಿಸುವ ಪ್ರಕ್ರಿಯೆಯ ಚಿತ್ರಗಳು ಮತ್ತು ಅದಕ್ಕೆ ಬಳಕೆಯಾದ ಶ್ರುಂಗಾರ ವಸ್ತುಗಳೂ ಇಲ್ಲಿವೆ
ಇತಿಹಾಸದಲ್ಲಿ ಮಾನವನಿಗೆ ಸೌಂದರ‍್ಯ ಪ್ರಗ್ನೆ ಮೂಡಿಬಂದಾಗಿನಿಂದ ಇಂದಿನ ಅವದಿಯವರೆಗೂ ಅನುಸರಿಸಿದ ಬಲವಂತದ ಮಾರ‍್ಪಾಡುಗಳ ಬಗ್ಗೆ ಚಿತ್ರಗಳನ್ನು ಹಾಗೂ ಶ್ರುಂಗಾರ ಸಾಮಗ್ರಿಗಳನ್ನು ಈ ವಸ್ತು ಸಂಗ್ರಹಾಲಯದಲ್ಲಿ ಸಂಗ್ರಹಿಸಿ ಇಟ್ಟಿರುವುದೊಂದು ವೈಶಿಶ್ಟ್ಯ. ಪ್ರತಿಯೊಂದು ಸೌಂದರ‍್ಯ ವರ‍್ದಕದ ಪ್ರಬುತ್ವವನ್ನು ಇಲ್ಲಿ ವಿವರಿಸಿದ್ದು, ಅದಕ್ಕೆ ಪೂರಕವಾಗಿ ಸಂಬಂದಿತ ಚಾಯಾ ಚಿತ್ರಗಳನ್ನು ಇರಿಸಲಾಗಿದೆ. ಹಲ್ಲನ್ನು ಅರೆಯುವ ಮತ್ತು ಕುತ್ತಿಗೆಯನ್ನು ಹಿಗ್ಗಿಸುವ ಸಂಪ್ರದಾಯ ಪ್ರಕ್ರಿಯೆಯ ಚಿತ್ರಗಳು ಪ್ರದರ‍್ಶನದ ಬಹುಬಾಗವನ್ನು ಆಕ್ರಮಿಸಿಕೊಂಡಿದೆ. ಬಲವಂತವಾಗಿ ಈ ಸೌಂದರ‍್ಯ ಹೆಚ್ಚಿಸುವ ಪ್ರಕ್ರಿಯೆಯಲ್ಲಿ ಒಳಗಾದವರ ನೋವು ಮತ್ತು ಸಂಕಟವನ್ನು ಬಿಂಬಿಸುವ ಚಿತ್ರಗಳೂ ಇದರಲ್ಲಿರುವುದು ಮತ್ತೊಂದು ವಿಶೇಶ.
ಆಪ್ರಿಕನ್ ಬುಡಕಟ್ಟು ಜನಾಂಗದವರ ವಿಚಿತ್ರ ಪದ್ದತಿ!
ನಂಬಲಿಕ್ಕೆ ಈ ವಿಶಯ ಕಶ್ಟವೆನಿಸಬಹುದು. ಹುಲಿಗಳ ದಾಳಿಯಿಂದ ಯುವತಿಯರನ್ನು ರಕ್ಶಿಸಲು ಅವರ ಕುತ್ತಿಗೆಗೆ ತಾಮ್ರದ ಉಂಗುರಗಳನ್ನು ಹಾಕುತ್ತಿದ್ದ ಸಂಪ್ರದಾಯ ಆಪ್ರಿಕನ್ ಬುಡಕಟ್ಟು ಜನಾಂಗದವರಲ್ಲಿ ಇತ್ತಂತೆ. ಇದು ಕುತ್ತಿಗೆಯನ್ನು ಉದ್ದ ಮಾಡಲು ಸಹ ಸಹಾಯಕಾರಿ. ಕುತ್ತಿಗೆ ಉದ್ದ ಹೆಚ್ಚಾಗುತ್ತಿದ್ದಂತೆ ಒಂದೊಂದೆ ತಾಮ್ರದ ಉಂಗುರವನ್ನು ಹೆಚ್ಚಿಸುವುದು ಅವರಲ್ಲಿ ರೂಡಿಯಲ್ಲಿದೆ. ಕುತ್ತಿಗೆಯ ಉದ್ದ ಹೆಚ್ಚಾದಶ್ಟೂ ಹೆಣ್ಣಿನ ಸೌಂದರ‍್ಯ ಹೆಚ್ಚುತ್ತದಂತೆ. ಹಾಗೆಂದು ಕುತ್ತಿಗೆ ಉದ್ದವಾದೊಡನೆ ಉಂಗುರವನ್ನು ತೆಗೆಯುವಂತಿಲ್ಲ. ಸಾಕಶ್ಟು ಉದ್ದವಾಗಿರುವ ಕುತ್ತಿಗೆಯಿಂದ ತಾಮ್ರದ ಉಂಗುರಗಳನ್ನು ತೆಗೆದರೆ ಕುತ್ತಿಗೆ ಕುಸಿದು, ಕೂಡಲೇ ಉಸಿರುಗಟ್ಟಿ ಪ್ರಾಣಕ್ಕೆ ಅಪಾಯ ಶತಸಿದ್ದ. ಆದ ಕಾರಣ ಅನಿವಾರ‍್ಯವಾಗಿ ಉಂಗುರಗಳನ್ನು ಕುತ್ತಿಗೆಯಲ್ಲಿ ಹಾಗೇಯೇ ಉಳಿಸಿಕೊಳ್ಳುತ್ತಾರಂತೆ.
ಹೆಚ್ಚು ಮಂದಿಯನ್ನು ಸೆಳೆಯುತ್ತಿರುವ ವಸ್ತು ಸಂಗ್ರಹಾಲಯ
ಕೆಳ ತುಟಿಯನ್ನು ಹಿಗ್ಗಿಸಲು ಉಪಯೋಗಿಸುವ ತುಟಿ ಪಲಕಗಳು ನಮ್ಮನ್ನು ಶತಶತಮಾನಗಳಶ್ಟು ಹಿಂದಕ್ಕೆ ಕರೆದೊಯ್ಯುತ್ತವೆ. ಅನೇಕ ಆಪ್ರಿಕನ್ ಹಾಗೂ ಬ್ರೆಜಿಲಿಯನ್ ಸಂಸ್ಕ್ರುತಿಯಲ್ಲಿ ಇದು ಅತ್ಯಂತ ಜನಪ್ರಿಯ ಶಿಶ್ಟಾಚಾರ. ಮಲಕ್ಕಾದ ವಸ್ತುಸಂಗ್ರಹಾಲಯದಲ್ಲಿ ಈ ಶಿಶ್ಟಾಚಾರವನ್ನು ವಿವಿದ ಹಂತಗಳೊಂದಿಗೆ ಪ್ರದರ‍್ಶಿಸಲಾಗಿದೆ. ಈ ವಸ್ತು ಸಂಗ್ರಹಾಲಯದಲ್ಲಿ ಪಾಶ್ಚಾತ್ಯ ಪ್ರಪಂಚದ ಮತ್ತೊಂದು ಕುತೂಹಲಕಾರಿ ಪ್ರದರ‍್ಶನವೆಂದರೆ ‘ಇಂಗ್ಲೀಶ್ ಇತಿಹಾಸದಲ್ಲೇ ಅತ್ಯಂತ ಪ್ರಸಿದ್ದ ಮಹಿಳೆ’, ಅತಿ ಸಪೂರ ಸೊಂಟ ಹೊಂದಿದ್ದ ಎತೆಲ್ ಗ್ರಾಂಗರ್ ಅವರ ಚಿತ್ರ. ಈಕೆಯ ಸೊಂಟದ ಸುತ್ತಳತೆ ಕೇವಲ 13 ಇಂಚು. ಅಂದರೆ ಬಹುಶಹ ಬೆನ್ನು ಮೂಳೆ ಮಾತ್ರ ಹಾದು ಹೋಗುವಶ್ಟು ಸ್ತಳಾವಕಾಶ ಇರಬಹುದು ಅನ್ನಿಸುತ್ತದಲ್ಲವೆ?
ಪೀಪಲ್ಸ್ ಮ್ಯೂಸಿಯಮ್ ಆಪ್ ಮಲಕ್ಕಾದ ಮೂರನೆ ಮಹಡಿಯಲ್ಲಿರುವ ಸೌಂದರ‍್ಯ ವಸ್ತು ಸಂಗ್ರಹಾಲಯ ಪ್ರಾರಂಬವಾಗಿದ್ದು 1996ರಲ್ಲಿ. ಅತ್ಯಂತ ಕುತೂಹಲಕಾರಿಯಾದ ಈ ವಸ್ತು ಸಂಗ್ರಹಾಲಯ ನೋಡಲು ಸಾಕಶ್ಟು ಜನರು ವಿಶ್ವದೆಲ್ಲೆಡೆಯಿಂದ ಬರುತ್ತಾರೆ.
( ಮಾಹಿತಿ ಮತ್ತು ಚಿತ್ರ ಸೆಲೆ: expatior.com, atlasobscura.com )
good article ?