ಆಪ್ರಿಕಾದ ಬುಡಕಟ್ಟಿನವರ ‘ಬುರುಂಡಿ ಡ್ರಮ್ಸ್’

– ಕೆ.ವಿ.ಶಶಿದರ.

ಬುರುಂಡಿ ಡ್ರಮ್ಸ್ Burundi Drums

ವಿಶ್ವದಲ್ಲಿ ನೂರಾರು ತರಹೇವಾರಿ ಸಂಗೀತ ವಾದ್ಯಗಳಿವೆ. ದೇಶ ಸಂಸ್ಕ್ರುತಿ ಸಂಪ್ರದಾಯಗಳಿಗೆ ಅನುಗುಣವಾಗಿ ನಾನಾ ರೀತಿಯ ವಾದ್ಯಗಳ ಹುಟ್ಟನ್ನು ಕಾಣಬಹುದು. ಎಲ್ಲಾ ವಾದ್ಯಗಳ ಮೂಲ ಅವಶ್ಯಕತೆ ಸ್ವರ ಹೊರಹೊಮ್ಮಿಸುವುದು. ಕೆಲ ವಾದ್ಯಗಳನ್ನು ಕೆಲವು ಸಂದರ‍್ಬಗಳಲ್ಲಿ ಮಾತ್ರ ನುಡಿಸುವ ಪರಿಪಾಟ ಬೆಳೆದು ಬಂದಿದೆ. ದಾರ‍್ಮಿಕ ಹಾಗೂ ಸಂತೋಶ ಸಮಾರಂಬಗಳಲ್ಲಿ ಬಳಸುವ ವಾದ್ಯಗಳು ಒಂದು ರೀತಿಯದಾದರೆ, ಸಾವು ಅತವಾ ನೋವಿನ ಸಮಯದಲ್ಲಿ ಉಪಯೋಗಿಸುವ ವಾದ್ಯಗಳೇ ಬೇರೆ. ಕೆಲವು ಒಳ್ಳೆಯ ಸಂದರ‍್ಬಗಳಿಗಾಗಿ ಮೀಸಲಾದ ವಾದ್ಯ ಒಂದಿದೆ ಅದುವೇ ಬುರುಂಡಿಯ ಡ್ರಮ್.

ಆಪ್ರಿಕಾದ ರಾಜ್ಯ ಬುರುಂಡಿಯಲ್ಲಿ ಬಳಸುವ ಡ್ರಮ್ ಅಲ್ಲಿನ ನೆಲಸಿಗರಿಗೆ ಅತಿ ಪವಿತ್ರವಾದ ವಾದ್ಯ. ಇದನ್ನು ಸಂಗೀತಕ್ಕೆ ಮಾತ್ರ ಬಳಸುತ್ತಿರಲಿಲ್ಲ, ಬದಲಾಗಿ ಈ ಪವಿತ್ರ ವಾದ್ಯವನ್ನು ದಾರ‍್ಮಿಕ ಉದ್ದೇಶಕ್ಕಾಗಿ, ದೊರೆಯ ಪಟ್ಟಾಬಿಶೇಕ ಹಾಗೂ ರಾಜವಂಶದವರ ಶವ ಸಂಸ್ಕಾರಕ್ಕಾಗಿ ಮತ್ತು ಊಮನಗುರೊ (ಸೋರ‍್ಗಮ್) ಉತ್ಸವದಂತಹ ಅಸಾದಾರಣ ಗಟನೆಗಳ ಸಂದರ‍್ಬದಲ್ಲಿ ಮಾತ್ರ ಉಪಯೋಗ ಮಾಡಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ರಾಶ್ಟ್ರೀಯ ಹಬ್ಬಗಳ ಆಚರಣೆಗಾಗಿ ಮಾತ್ರ ಇದರ ಉಪಯೋಗವನ್ನು ಮೀಸಲಿಡಲಾಗಿದೆ.

ಬುಡಕಟ್ಟಿನವರ ಬದುಕಿನಲ್ಲಿ ಹಾಸುಹೊಕ್ಕಿರುವ ಡ್ರಮ್‍ಗಳು

ಬುರುಂಡಿಯ ಡ್ರಮ್ ಬಾರಿಸುವವರ ಇತಿಹಾಸವನ್ನು ಕೆದಕಿ ನೋಡಿದಲ್ಲಿ ಅದು ವಂಶಪಾರಂಪರ‍್ಯವಾಗಿ ಬಂದ ಬಳುವಳಿಯಾಗಿದೆ. ವರ‍್ಶಾನುವರ‍್ಶಗಳಿಂದ ಡ್ರಮ್ ಬಾರಿಸುವ ಕಲೆಯನ್ನು ಕಾಪಾಡಿಕೊಂಡು ಬಂದ ಡ್ರಮ್ಮಿಗರು 1960ರ ನಂತರದ ದಿನಗಳಲ್ಲಿ ವಿಶ್ವಾದ್ಯಂತ ಹೆಚ್ಚು ಜನಪ್ರಿಯರಾಗಿದ್ದಾರೆ.

ಬುರುಂಡಿಯ ಡ್ರಮ್‍ಗಳು ಪವಿತ್ರ ವಸ್ತುವಾದ್ದರಿಂದ ಪ್ರಕ್ರುತಿಯೊಂದಿಗೆ ನಿಕಟ ಸಂಬಂದ ಹೊಂದಿವೆ. ಇವು ಪಲವತ್ತತೆ, ಪುನರುತ್ಪಾದನೆ ಮತ್ತು ಮವಾಮಿ ರಾಜರನ್ನು ಪ್ರತಿನಿದಿಸುತ್ತದೆ. ಈ ಡ್ರಮ್ಮುಗಳ ಬಾಗಗಳನ್ನು ಪಲವತ್ತತೆಯ ಪರಿಕಲ್ಪನೆಯ ಮೇಲೆ ಹೆಸರಿಸಲಾಗಿದೆ. ಡ್ರಮ್ಮಿನ ಮೇಲಿನ ಚರ‍್ಮವನ್ನು ಇಕಾಹಿ ಎನ್ನುತ್ತಾರೆ. ತಾಯಿ ತನ್ನ ಮಗುವನ್ನು ಎದೆಗವಚಿಕೊಂಡಂತೆ ಇದು ಕಾಣುತ್ತದೆ. ಡ್ರಮ್ಮಿನ ಗೂಟಗಳನ್ನು ಅಮಬೆರೆ ಎನ್ನಲಾಗುತ್ತದೆ. ಉರುಗೊರಿ ಎನ್ನುವುದು ಡ್ರಮ್ಮಿನ ಚರ‍್ಮಕ್ಕೆ ಬಿಗಿಯಾಗಿ ಬಿಗಿದಿರುವ ಹುರಿ. ಇದು ಮಾತ್ರುತ್ವದ ಕಿರೀಟವಿದ್ದಂತೆ. ಡ್ರಮ್ಮಿನ ಹೊರಳನ್ನು ಇಂಡಾ ಅಂದರೆ ಹೊಟ್ಟೆ ಎಂದು ಮತ್ತು ಪಾದವನ್ನು ಉಮಕೊಂಡೋ ಅಂದರೆ ಹೊಕ್ಕಳ ಬಳ್ಳಿ ಎನ್ನುತ್ತಾರೆ.

ಈ ಡ್ರಮ್‍ಗಳನ್ನು ಮಾಡಲು ಬಳಸುವ ಮರ ಯಾವುದು?

ಡ್ರಮ್ಮುಗಳನ್ನು ವಿಶೇಶ ಮರವಾದ ಡಿ-ಲುಮಗಾಂಗೊಮದಿಂದ ಮಾಡಲಾಗುತ್ತದೆ. ಬುರುಂಡಿಯ ಬಾಶೆಯಲ್ಲಿ ಡಿ-ಲುಮಗಾಂಗೊಮ ಎಂದರೆ ‘ಡ್ರಮ್ಮುಗಳನ್ನು ಮಾತನಾಡಿಸುವ ಮರ’ ಎಂಬ ಅರ‍್ತವಂತೆ. 20ನೇ ಶತಮಾನದ ಆದಿಯಿಂದಲೂ ಈ ಜಾತಿಯ ಮರಗಳು ಸಿಗುವುದು ಬಹಳ ಕಡಿಮೆ. ಬುಡಕಟ್ಟು ಜನಾಂಗದವರು ಈ ಪವಿತ್ರ ಮರವನ್ನು ಹುಡುಕಿಕೊಂಡು ದೂರ ದೂರ ಕಾಡಿನಲ್ಲಿ ಸಾಗುತ್ತಾರೆ. ಮರ ಸಿಕ್ಕಲ್ಲಿ ಅದರ ಮೇಲೆ ತಮ್ಮದೇ ಆದ ಗುರುತನ್ನು ಹಾಕಿ, ನಂತರ ಡ್ರಮ್ಮರುಗಳು ತಲೆಯ ಮೇಲೆ ಹೊತ್ತು ತಂದಿರುವ ಡ್ರಮ್ಮುಗಳನ್ನು ಬಾರಿಸುತ್ತಾ ಮರದ ಸುತ್ತಲೂ ಸುತ್ತುತ್ತಾರೆ. ಗಿಡಮೂಲಿಕೆಗಳಿಂದ ತಯಾರಿಸಲಾದ ರಸವನ್ನು ಮರದ ಮೇಲೆ ಸಿಂಪಡಿಸುವ ಕಾರ‍್ಯ ತಂಡದ ನಾಯಕನದು. ಮರದ ಎಲೆಗಳಲ್ಲಿ ಅವಿತಿರುತ್ತವೆ ಎಂದು ಬಾವಿಸಲಾದ ಹೆಬ್ಬಾವುಗಳು ಈ ರಸದ ಸಿಂಪಡಿಕೆಯಿಂದ ಹೊರಹೋಗುತ್ತವೆ ಎಂದು ಅವರ ನಂಬಿಕೆ. ಇದಾದ ನಂತರ ಮಾತ್ರ ಮರವನ್ನು ಕತ್ತರಿಸುವುದು.

ಈ ಡ್ರಮ್‍ಗಳನ್ನು ಸಂಗ್ರಹಿಸಿಡುವುದು ಪ್ರಾಚೀನ ಸುರಕ್ಶಿತ ತಾಣದಲ್ಲಿ. ಇವು ಮತ್ತೆ ನುಡಿಸಲು ಬಳಸುವವರೆಗೂ ಅಲ್ಲೇ ಇರುತ್ತವೆ. ಸುರಕ್ಶಿತ ಸ್ತಳದ ಮದ್ಯ ಬಾಗದಲ್ಲಿ ಇಂಕಿರಣ್ಯಾ ಡ್ರಮ್ಮನ್ನು (ಅತಿ ದೊಡ್ಡ ಡ್ರಮ್) ಹಾಗೂ ಅದರ ಸುತ್ತಲೂ ಸಣ್ಣ ಸಣ್ಣ ಡ್ರಮ್ಮುಗಳನ್ನು ಜೋಡಿಸುವುದು ಬುರುಂಡಿಯವರ ಕ್ರಮ.

ಪ್ರಸಿದ್ದ ದಾರ‍್ಮಿಕ ಕೇಂದ್ರಗಳಲ್ಲಿ ಒಂದಾದ ‘ಗಿಶೋರಾ’ದಲ್ಲಿ ಇದುವರೆಗೂ ಬಡಿಯದಿರುವ ಎರಡು ಡ್ರಮ್‍ಗಳನ್ನು ಇಡಲಾಗಿದೆ. ಅವುಗಳನ್ನು ‘ರುಸಿಟೆಮೆ’ (ಯಾರಿಗಾಗಿ ನಾವು ಅರಣ್ಯವನ್ನು ತೆರವುಗೊಳಿಸುತ್ತೇವೋ) ಮತ್ತು ‘ಮುರಿಮುರ‍್ವಾ’ (ಯಾರಿಗಾಗಿ ನಾವು ಕ್ರುಶಿ ಮಾಡುತ್ತೇವೋ) ಎನ್ನುತ್ತಾರೆ. ಉಳಿದ ಡ್ರಮ್‍ಗಳಲ್ಲಿ ಒಂದಾದ ‘ಇನಾಕಿಗಾಬಿರೊ’(ಬೂಮಿ ತಾಯಿ) ಅನ್ನು ಹಿಗಿರೊ ಬೆಟ್ಟದಲ್ಲಿ, ಬಂಗಾ ಬೆಟ್ಟದಲ್ಲಿ ನ್ಯಬುಹೊರೊ (ಶಾಂತಿಯ ವಿತರಕ) ಡ್ರಮ್ಮನ್ನು ಮತ್ತು ಪ್ರತಿ ಹೊಸ ರಾಜನ ಪಟ್ಟಾಬಿಶೇಕಕ್ಕೆ ಉಪಯೋಗಿಸಲು ನವೀಕರಿಸಿದ ‘ರುಕಿನ್ಜೊ’ ಡ್ರಮ್ಮನ್ನು ಮಗಾಂಬ ಬೆಟ್ಟದ ಸುರಕ್ಶಿತ ಪ್ರದೇಶದಲ್ಲಿ ಇಟ್ಟು ಕಾಪಾಡುತ್ತಾರೆ. ನುಡಿಸುವ ಸಂದರ‍್ಬದಲ್ಲಿ ಮಾತ್ರ ಅವನ್ನು ಅಲ್ಲಿಂದ ತೆಗೆಯಲಾಗುತ್ತದೆ. ಅದರ ಕಾರ‍್ಯ ಮುಗಿಯುತ್ತಿದ್ದಂತೆ ಮತ್ತೆ ಗೂಡು ಸೇರುತ್ತವೆ.

ಡ್ರಮ್ಮುಗಳನ್ನು ತಯಾರಿಸುವ, ನುಡಿಸುವ ಹಾಗೂ ಸಂರಕ್ಶಿಸುವ ಕಾರ‍್ಯ ಹುಟು ಕುಟುಂಬಕ್ಕೆ ಸೇರಿದ್ದು. ಹಿಂದಿನ ಕಾಲದಲ್ಲಿ ಸುರಕ್ಶಿತ ಪ್ರದೇಶಗಳಲ್ಲಿ ಸಂರಕ್ಶಿಸಲ್ಪಟ್ಟ ಡ್ರಮ್‍ಗಳನ್ನು ಕಾಯುವ ಕಾಯಕ ಹುಟು ಕುಟುಂಬದವರಿಗೇ ಮೀಸಲು. ಅದರ ಸಂಪೂರ‍್ಣ ಜವಾಬ್ದಾರಿ ಸಹ ಅವರದ್ದೇ.

(ಮಾಹಿತಿ ಸೆಲೆ: heavenlyplanet.com, dailymail.co.uk, music.africamuseum.be, traditionscustoms.com)
(ಚಿತ್ರ ಸೆಲೆ: musicinafrica.net)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: