‘ಈ ಬಂದನ ಜನುಮ ಜನುಮದ ಅನುಬಂದನ’

– ವೆಂಕಟೇಶ ಚಾಗಿ.

ಮದುವೆ, Marriage

ಮೈ ಮೇಲಿನ ಅರಿಶಿಣ ಇನ್ನೂ ಮರೆಯಾಗಿಲ್ಲ. ಅಂಗೈಯಲ್ಲಿನ ಮದರಂಗಿಯ ಅಲಂಕಾರ ಇನ್ನೂ ಮಾಸಿಲ್ಲ. ಮಂಗಳ ವಾದ್ಯದ ಸದ್ದು ಇನ್ನೂ ಕಿವಿಯಲ್ಲಿ ಗುನುಗುನುತ್ತಿದೆ. ಗೆಳೆಯರು, ಹಿತೈಶಿಗಳು, ಬಂದುಗಳು ಕರೆ ಮಾಡಿ ಶುಬಾಶಯಗಳನ್ನು ಹೇಳುತ್ತಿದ್ದಾರೆ. ಹೊಸದೊಂದು ಜಗತ್ತು ಕಣ್ಣೆದುರು ತೆರೆದಿದೆ. ಅದೇನೋ ಮುಜುಗರ, ಅದೇನೋ ಕುಶಿ. ಹೊಸ ಜೀವನಕ್ಕೆ ಕಾಲಿಟ್ಟ ಗಳಿಗೆ ಅದ್ವಿತೀಯ. ಒಂದು ಗಂಡು ಒಂದು ಹೆಣ್ಣಿನ ನಡುವೆ ಮುರಿಯಲಾಗದ ಬಂದನವೊಂದು ಮೂಡಿದೆ. ಈ ಬಂದನಕ್ಕೆ ಗೆಳೆಯರು, ಬಂದುಗಳು, ಹಿರಿಯರು, ಮನೆಯವರು, ಹಿತೈಶಿಗಳು ಹೀಗೆ ಹಲವರು ಬಂದು ಹಾರೈಸಿ ಅಕ್ಶತೆಯನ್ನೂ ಹಾಕಿದ್ದಾಗಿದೆ. ಈಗ ಮುಂದಿನ ಹಾದಿ ಸುಗಮವಾಗಿದೆ. ಸ್ಪಶ್ಟವಾಗಿ ಗೋಚರಿಸುತ್ತಿದೆ. ಈ ಬಂದ  ಗಟ್ಟಿಯಾಗಿ ಉಳಿಯಬೇಕಾಗಿದೆ ಅಶ್ಟೇ!

ಮದುವೆಯ ಈ ಬಂದನ ಎಂದೆಂದಿಗೂ ಮುರಿಯದ ಅನುಬಂದ. ಮದುವೆಯ ನಂತರ ಗಂಡು-ಹೆಣ್ಣಿಗೆ ಹೊಸ ಜೀವನ ತೆರೆದುಕೊಳ್ಳುತ್ತದೆ. ಈ ಹೊಸ ಜೀವನ ಅನೇಕ ಸುಂದರ ಸಂತೋಶದ ಕ್ಶಣಗಳನ್ನು ಕೊಡುವುದಲ್ಲದೇ ಕಶ್ಟದ ಸಂದರ‍್ಬಗಳನ್ನು ಸವಾಲುಗಳನ್ನು ತಂದೊಡ್ಡುತ್ತದೆ. ಈ ಎಲ್ಲಾ ಸವಾಲುಗಳನ್ನು ಜಾಗರೂಕತೆಯಿಂದ ಜಾಣತನದಿಂದ ಎದುರಿಸಿದಾಗ ಈ ಬಂದನ ಶಾಶ್ವತವಾಗಿ ಉಳಿಯುತ್ತದೆ. ಈ ಶಾಶ್ವತತೆಗೆ ಮೂಲ ಅಡಿಪಾಯ ಹೊಂದಾಣಿಕೆ. ಇಲ್ಲಿ ಹೊಂದಾಣಿಕೆ ಎಂಬುದು ಗಂಡ ಹೆಂಡತಿಗಶ್ಟೇ ಸೀಮಿತವಲ್ಲ. ಈ ಬಂದನ ಬೆಸೆಯಲು ಕಾರಣರಾದ ಮನೆಯವರು ಮತ್ತು, ಹಿತೈಶಿಗಳಿಗೂ ಅನ್ವಯಿಸುತ್ತದೆ.

ಮದುವೆ ಎಂಬ ಈ ಬಂದ ಎನ್ನುವುದು ಜನುಮ ಜನುಮದ ಅನುಬಂದವಾಗಿದೆ. ಆದರ‍್ಶ ದಂಪತಿಗಳನ್ನು ರೂಪಿಸುವ ಒಂದು ಅಪೂರ‍್ವ ಅವಕಾಶ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವುದು ದಂಪತಿಗಳ ಕೈಯಲ್ಲೇ ಇರುತ್ತದೆ. ಸಂಸಾರದ ಸರಿಗಮದಲ್ಲಿ ಚಾಡಿ ಮಾತುಗಳು, ಅಸೂಯೆ, ನಿರ‍್ಲಕ್ಶ್ಯತೆ, ಅಸಬ್ಯ ವರ‍್ತನೆ, ಬೈಗುಳ, ಅನುಮಾನ, ದೂರುವಿಕೆ – ಇಂತ ನಡವಳಿಕೆಯನ್ನು ಯಾರೊಬ್ಬರೂ ತೋರಿದರೂ ಸಾಕು, ಮದುವೆಯೆಂಬ ಈ ನಂಟು ಸಡಿಲಗೊಳ್ಳಲು. ಇದರಿಂದ ಬೇಸರದ ವರ‍್ತನೆಗಳು, ಸಹಿಸಲಾಗದ ಕಶ್ಟಗಳು ಎದುರಾಗುತ್ತವೆ. ಕೊನೆಗೆ ಈ ಬಾಂದವ್ಯ ಸಡಿಲಗೊಂಡು ವಿಚ್ಚೇದನದ ಹಾದಿ ಹಿಡಿಯುತ್ತದೆ. ಆಗ, ನೂರಾರು ಜನರ ಹಾರೈಕೆ ವ್ಯರ‍್ತವಾಗುತ್ತವೆ, ಗಂಡು-ಹೆಣ್ಣು ಮದುವೆಯಾಗುವಾಗ ಕಂಡಿದ್ದ ಕನಸುಗಳು ನುಚ್ಚು ನೂರಾಗುತ್ತವೆ.

ಜೀವನ ಏರುಪೇರಿನ ಪಯಣ ಎಂಬ ತಿಳುವಳಿಕೆ ಬಹು ಮುಕ್ಯ. ಸಂಸಾರದಲ್ಲಿ ಸಿಹಿ ಕಹಿ ಅನುಬವಗಳು ಸಹಜ. ಆದ್ದರಿಂದ ಜಾಗರೂಕತೆಯಿಂದ ಮುನ್ನಡೆಯುವುದು ಜಾಣತನ. ಈ ಜಾಣತನ, ತಿಳುವಳಿಕೆ ಸಂಸಾರದ ನೌಕೆಯನ್ನು ಸರಾಗವಾಗಿ ಮುನ್ನಡೆಸಲು ನೆರವಾಗುತ್ತದೆ. ಆಗ ಆ ದಂಪತಿಗಳ ಅನುಬವಕ್ಕೆ ಬರುವುದು ‘ಈ ಬಂದ ಜನುಮ ಜನುಮದ ಅನುಬಂದ’ ಎಂಬ ಮಾತು.

(ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications