ಡಾಗ್ ಅಂಡ್ ಬೋನ್: ವಿಶ್ವದ ಅತ್ಯಂತ ಪುಟ್ಟ ಪಬ್

– ಕೆ.ವಿ.ಶಶಿದರ.

ಪಬ್ pub

ಡಾಗ್ ಅಂಡ್ ಬೋನ್, ಅಂದರೆ ನಾಯಿ ಮತ್ತು ಮೂಳೆ. ಇದನ್ನು ಕೇಳಿದಾಗ, ಮೂಳೆ ಕಚ್ಚಿಕೊಂಡು ಮರದ ಮೇಲೆ ಕೂತಿದ್ದ ಕಾಗೆಯಿಂದ, ಅದನ್ನು ಕಸಿದುಕೊಳ್ಳಲು ನರಿ ಹೂಡಿದ ಉಪಾಯವು ನೆನೆಪಾಗುತ್ತದೆ ಅಲ್ಲವೆ? ಆದರೆ ಅದಕ್ಕೂ ಇದಕ್ಕೂ ಯಾವುದೇ ಸಂಬಂದವಿಲ್ಲ. ಯಾಕೆಂದರೆ ನಾಯಿ ಮತ್ತು ಮೂಳೆ ಎನ್ನುವುದು ಒಂದು ಪಬ್ಬಿನ ಹೆಸರು.

“ಡಾಗ್ ಅಂಡ್ ಬೋನ್” ಎಂಬ ಈ ಪಬ್ಬು ತನ್ನ ಹಿರಿಮೆಯನ್ನು ಮೆರೆಯುತ್ತಿದ್ದು ಗಿನ್ನೆಸ್ ಬುಕ್ ಆಪ್ ರೆಕಾರ‍್ಡ್ಸ್ ನಲ್ಲಿ ಸ್ತಾನ ಪಡೆದಿದೆ. ಹೌದು, ವಿಶ್ವದಲ್ಲೇ ಅತ್ಯಂತ ಪುಟ್ಟ ಪಬ್ ಎಂದು ಇದು ದಾಕಲೆ ಸ್ತಾಪಿಸಿದೆ. ಇದು 90 ಚದರ ಸೆಂಟಿಮೀಟರ್ ಅಳತೆಯಲ್ಲಿದೆ. ಅಂದರೆ ಕೇವಲ 9 ಚದರ ಅಡಿಯ ಸ್ತಳ. ಸಾಮಾನ್ಯವಾಗಿ ಇಶ್ಟು ಜಾಗವನ್ನು ಟೆಲಿಪೋನ್ ಬೂತಾಗಿ ಬಳಸುತ್ತಾರೆ. ನಿಜ. ಅಂತಹ ಒಂದು ಟೆಲಿಪೋನ್ ಬೂತ್‍ನಲ್ಲೇ ಇದರ ಅಸ್ತಿತ್ವ.

ಪಬ್ ಆಗಿ ಬದಲಾದ ಟೆಲಿಪೋನ್ ಬೂತ್!

ಡಾಗ್ ಅಂಡ್ ಬೋನ್ ಪುಟ್ಟ ಪಬ್ ಇರುವುದು ಆಂಗ್ಲರ ನಾಡು ಕೆಂಬ್ರಿಡ್ಜ್ ಶೈರ್ ನ ಒಂದು ಸಣ್ಣ ಹಳ್ಳಿ ಶೆಪ್ರತ್ ಎಂಬಲ್ಲಿ. ಈ ವಿಶಿಶ್ಟ ಪಬ್ ತೆರೆಯಲು ಮುಂದಾಗಿದ್ದು ಒಬ್ಬ ಸ್ತಳೀಯ ಬಡಗಿ. ಈತ ಅಲ್ಲಿನ ಟೆಲಿಪೋನ್ ಇಲಾಕೆಯಲ್ಲಿ ಹಾಳಾಗಿದ್ದ ಟೆಲಿಪೋನ್ ಬೂತ್ ಒಂದನ್ನು ಕರೀದಿಸಿ ಅದನ್ನು ಪಬ್ಬಾಗಿ ಬದಲಾಯಿಸಿದ. ಅದರ ಮೂರು ಬದಿಯಲ್ಲಿ ಬಿಯರ್ ಇಡಲು ರ‍್ಯಾಕ್‍ಗಳನ್ನು ಹೊಂದಿಸಿದ. ಮುಂದೆ ಒಬ್ಬರು ಮಾತ್ರ ನಿಂತು ಗ್ರಾಹಕರಿಗೆ ಬಿಯರ್ ಸರಬರಾಜು ಮಾಡುವಶ್ಟು ಮುಂಗಟ್ಟೆಗೆ ಸ್ತಳಾವಕಾಶ ಕಲ್ಪಿಸಿದ. ಇಲ್ಲಿ ಕರೀದಿಸಿದ ಬಿಯರ್ ಮಗ್ಗುಗಳನ್ನು ಹಿಡಿದ ಗ್ರಾಹಕರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಹರಟುತ್ತಾ ಕುಡಿಯಬೇಕು. ಇದು ಒಂದು ರೀತಿಯ ಹೊರಾಂಗಣ ಪಬ್.

ಪ್ರಾರಂಬದಲ್ಲಿ ಇದನ್ನು ಒಂದು ರಾತ್ರಿ ಮಾತ್ರ ತೆರೆಯಲಾಗಿತ್ತು. ಸ್ತಳೀಯ ಜನಕ್ಕೆ ಬಿಯರ್ ಮೇಲೆ ಅತಿ ಆಸೆ. ಈ ನವನವೀನ ಪಬ್ ತೆರೆದ ಕೂಡಲೆ ಸುಮಾರು ಎಪ್ಪತ್ತು ಜನ ಕ್ಯೂ ನಿಂತರು. ಇಲ್ಲಿ ಸಿಗುವ ಬಿಯರ್ ವಿಲಕ್ಶಣವಾಗಿ ಇರಬಹುದೆಂಬ ಬ್ರಮೆಯಿಂದ.

ಇದರ ಪ್ರಾರಂಬದ ಹಿಂದೆ ರೋಚಕ ಕತೆಯಿದೆ

‘ಡಾಗ್ ಅಂಡ್ ಬೋನ್’ ಪ್ರಾರಂಬಕ್ಕೂ ಮುನ್ನ ಈ ಹಳ್ಳಿಯಲ್ಲಿ ‘ದ ಪ್ಲೋ’ ಎಂಬ ಹೆಸರಿನ ಪುಟ್ಟ ಪಬ್ ಇತ್ತು. ತದನಂತರ ಅದನ್ನು ರೆಸ್ಟೋರೆಂಟ್ ಆಗಿ ಬದಲಿಸಿದ ಮಾಲೀಕ, ಮತ್ತೆ ಅದೇ ಜಾಗದಲ್ಲಿ ಮನೆ ಕಟ್ಟಲು ಹೊರಟ. ಈ ಕಾರಣದಿಂದ ಅನಿವಾರ‍್ಯವಾಗಿ ಪಬ್ ಅನ್ನು ಕೆಡವಬೇಕಾಯಿತು. ಇದಕ್ಕೆ ಸ್ತಳೀಯರಿಂದ ಸಾಕಶ್ಟು ಪ್ರತಿರೋದ ಬಂತು. ಎರಡನೇ ಮಹಾಯುದ್ದದಲ್ಲಿ ಪೈಲಟ್‍ಗಳಾಗಿದ್ದವರು ಇದನ್ನು ಉಪಯೋಗಿಸುತ್ತಿದ್ದ ಕಾರಣ ಐತಿಹಾಸಿಕವಾಗಿ ಇದನ್ನು ಉಳಿಸಿಕೊಳ್ಳಬೇಕೆಂಬ ಹಂಬಲ ಅವರದು. ದಕ್ಶಿಣ ಕೆಂಬ್ರಿಡ್ಜ್ ಶೈರ್ ಕೌನ್ಸಿಲ್‍ನ ಯೋಜಕರನ್ನು, ಇದನ್ನು ಕೆಡವದಂತೆ ಉಳಿಸಲು ಹಾಗೂ ಪಬ್ ಆಗೇ ಮುಂದುವರೆಸಲು ತಾಕೀತು ಮಾಡಿದರೂ ಪ್ರಯೋಜನ ಸೊನ್ನೆ. ಕೊನೆಗೂ ‘ದ ಪ್ಲೋ’ ಮುಚ್ಚಿತು.
ಇದರಿಂದ ಸ್ತಳೀಯರಿಗೆ ಬಿಯರ್ ಕರೀದಿಸಿ ಕುಡಿಯಲು, ಬಿಯರ್ ನ ಸವಿ ಆನಂದಿಸಲು ಸರಿಯಾದ ಸ್ತಳದ ಕೊರತೆಯಾಯಿತು. ಬಿಯರ್ ಪ್ರಿಯರು ಕೋಪಗೊಂಡು ಸಂಕಟದಿಂದ ಪಾರಾಗಲು ಪ್ರಾರಂಬಿಸಿದ್ದೇ ‘ಡಾಗ್ ಅಂಡ್ ಬೋನ್’ ಪಬ್.

ಈ ಪಬ್ ಪ್ರಾರಂಬವಾದಂದಿನಿಂದ ಸಂತುಶ್ಟರಾದ ಆ ಹಳ್ಳಿಯ ಜನ ದೊಡ್ಡ ಪಬ್ ಮರಳಿ ಸ್ತಾಪನೆಯಾಗುತ್ತದೆ ಎಂಬ ಬ್ರಮೆಯಲ್ಲಿದ್ದಾರೆ. ವಿಶ್ವದ ಅತಿ ಪುಟ್ಟ ಪಬ್ ಎಂದು ಹೆಸರುಗಳಿಸಿರುವ ಡಾಗ್ ಅಂಡ್ ಬೋನ್ ಪಬ್ ಗ್ರೇಟ್ ಬ್ರಿಟನ್‍ ಅಲ್ಲೂ ಸಹ ಪ್ರಸಿದ್ದಿ. ಇದಕ್ಕೆ ವಿಶ್ವ ಮಾನ್ಯತೆ ದೊರಕುವ ಮುನ್ನ ಬ್ರಿಟನ್ನಿನಲ್ಲಿ ‘ದ ನಟ್ ಶೆಲ್’ ಎಂಬ ಪಬ್ ಅತಿ ಸಣ್ಣದೆಂದು ಕ್ಯಾತಿಗಳಿಸಿತ್ತು. 16.5 ಮತ್ತು 6.5 ಅಡಿ ಸ್ತಳದಲ್ಲಿದ್ದ ಇದು ಬ್ರಿಟನ್ನಿನ ಅತಿ ಸಣ್ಣ ಪಬ್ ಎಂದು ಗಿನ್ನೆಸ್ ದಾಕಲಾತಿ ಪುಸ್ತಕದಲ್ಲಿ ನಮೂದಾಗಿತ್ತು.

ಬಹಳಶ್ಟು ಜನ ಡಾಗ್ ಅಂಡ್ ಬೋನ್ ಪಬ್‍ನಲ್ಲಿ ಬಿಯರನ್ನು ಕರೀದಿಸಿ, ರಸ್ತೆ ಬದಿ ನಿಂತು, ಬಿಯರ್ ಸೇವಿಸುವ ಆನಂದಕ್ಕಾಗಿ ದೂರದ ಪ್ರದೇಶಗಳಿಂದ ಇಲ್ಲಿಗೆ ಬರುವುದುಂಟು.

(ಮಾಹಿತಿ ಸೆಲೆ: bestourism.com, dailymail.co.uk, www.aol.co.uk)
(ಚಿತ್ರ ಸೆಲೆ: royston-crow)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications