ಚಿಂತೆಗೆ ಹೇಳಿಬಿಡಿ ಗುಡ್ ಬೈ

– ವೆಂಕಟೇಶ ಚಾಗಿ.

worried, tension, depression, ಚಿಂತೆ, ಕೊರಗು

ಅಂದು ಬೈಕ್ ಕೈ ಕೊಟ್ಟಿದ್ದರಿಂದ ಯಾವುದೋ ಕೆಲಸಕ್ಕಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ತುಂಬಾ ದಿನಗಳ ಬಳಿಕ ಕಂಡ ಪರಿಚಿತ ಆಸಾಮಿ, “ಸಾರ್ ಹೇಗಿದಿರಾ? ಎಶ್ಟು ದಿನ ಆಯ್ತು ನಿಮ್ಮನ್ನ ನೋಡಿ” ಅಂದ. ಅದಕ್ಕೆ ನಾನು, “ಚೆನ್ನಾಗಿದೀನಪ್ಪಾ. ನೀ ಹೇಗಿದಿಯಾ?” ಅಂದೆ. ಅದಕ್ಕವನು “ಸುಮ್ನಿರಿ ಸಾರ್, ಚಿಂತೆ ಮಾಡಿ ಮಾಡಿ ಎಶ್ಟು ಸೊರಗಿ ಹೋಗಿದೀರಾ? ಮೊದಲಿನಂಗೆ ಇಲ್ಲ ನೀವು.” ಎಂದ. ನನಗಾವ ಚಿಂತೆ? ನಾನು ಅಶ್ಟೊಂದು ಸೊರಗಿದೀನಾ? ಹೀಗೊಂದು ಹೊಸ ಚಿಂತೆನೇ ಶುರುವಾಗೋಯ್ತು!

ಚಿಂತೆ ಇಲ್ಲದೇ ಇರೋಕೆ ನಮ್ಮಿಂದಾಗೋದಿಲ್ವೆ? ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಚಿಂತೆ ಇದ್ದೇ ಇರುತ್ತೆ. ಕೆಲಸ ಇಲ್ಲದವರಿಗೆ ಕೆಲಸ ಇಲ್ಲವಲ್ಲ ಎಂಬ ಚಿಂತೆ. ಕೆಲಸ ಇರುವವರಿಗೆ ಕೆಲಸ ಮಾಡಬೇಕಲ್ಲ ಅನ್ನುವ ಚಿಂತೆ. ಹೀಗೆ ಹುಟ್ಟಿನಿಂದ ಸಾಯೋವರೆಗೂ ಹಲವಾರು ಬಗೆಯ ಚಿಂತೆಗಳಲ್ಲೇ ನಾವು ಬದುಕುತ್ತೇವೆ. ಒಂದೇ ವಿಶಯಕ್ಕೆ ಸಂಬಂದಿಸಿದ ಚಿಂತೆ ತಲೆ ಕೊರೆಯಲು ಪ್ರಾರಂಬಿಸಿದರೆ ಆಹಾರ, ನಿದ್ರೆಯ ಪರಿಗ್ನಾನ ಇರುವುದೇ ಇಲ್ಲ. ಅಯ್ಯೋ ನನಗೆ ಹೀಗಾಗಿಬಿಟ್ತಲ್ಲ, ಅಯ್ಯೋ ನನಗೆ ಅದು ಸಿಗಲಿಲ್ಲವಲ್ಲ ಅಂತ ಕೊರಗುತ್ತಾ ಚಿಂತಿಸುವ ಜನರಿದ್ದಾರೆ.

ಹುಟ್ಟಿನಿಂದ ಸಾಯೋವರೆಗೂ ಚಿಂತೆ ಮಾಡದ ಜನರು ಬೂಮಿ ಮೇಲೆ ಇಲ್ಲ ಎಂದರೆ ತಪ್ಪಾಗಲಾರದು. ಚಿತೆ – ಸತ್ತಾಗ ಮನುಶ್ಯನ ದೇಹವನ್ನು ಸುಟ್ಟರೆ, ಚಿಂತೆ – ಮನುಶ್ಯ ಜೀವಂತ ಇರುವಾಗಲೇ ಸುಡುತ್ತದೆ.

ಚಿಂತೆ ಇಲ್ಲದ ಮನುಶ್ಯ ಇಲ್ಲ ಎಂದಮೇಲೆ ಚಿಂತೆ ಮಾಡದೇ ಇರಲು ಸಾದ್ಯವೆ? ಇಲ್ಲ. ಚಿಂತೆ ಮಾಡಿಸುವ ವಿಶಯವನ್ನು ಚಿಂತನೆಗೆ ಪರಿವರ‍್ತಿಸಿ, ಆ ವಿಶಯಕ್ಕೆ ಒಂದು ಸೂಕ್ತವಾದ ಯೋಗ್ಯ ಆರೋಗ್ಯಕರ ನಿರ‍್ದಾರವನ್ನು ತೆಗೆದುಕೊಂಡಲ್ಲಿ ಚಿಂತೆ ಅಲ್ಲಿಗೇ ಕೊನೆಗೊಳ್ಳುತ್ತದೆ.

ಜೀವನ ಅಮೂಲ್ಯವಾದುದು. ಈ ಜೀವನವನ್ನು ಕಳೆದುಕೊಂಡರೆ ಮತ್ತೆ ಪಡೆಯುವ ಮಾತೇ ಇಲ್ಲ. ಜಗತ್ತಿನಲ್ಲಿ ಅಸಂಕ್ಯಾತ ಜನ ಹುಟ್ಟು-ಸಾವು ಕಂಡಿದ್ದಾರೆ. ಆದರೆ ಮರುಹುಟ್ಟು ಕಂಡವರು ಯಾರೂ ಇಲ್ಲ. ಅಂದಮೇಲೆ ಹೀಗಿರುವ ಬದುಕನ್ನು ಸುಂದರವಾಗಿಸುವುದು ಯೋಗ್ಯವಲ್ಲವೆ? ಚಿಂತೆ ಎಂಬ ಚಿತೆಯಲ್ಲಿ ಬೆಂದು ಬದುಕುವುದಕ್ಕಿಂತ ಸಮಸ್ಯೆಗಳನ್ನು ಚಿಂತನೆಗೆ ಒಳಪಡಿಸಿ ಯೋಗ್ಯ ಪರಿಹಾರವನ್ನು ಹುಡುಕಿ ಜೀವಿಸುವುದು ಉತ್ತಮ.

ಚಿಂತೆಗೆ ಈಗಲೇ ಒಂದು ಗುಡ್ ಬೈ ಹೇಳಿಬಿಡೋಣ. ಕುಶಿಯಿಂದ ಬದುಕಲು ಕಲಿಯೋಣ.

(ಚಿತ್ರ ಸೆಲೆ: blog.helpingadvisors.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: