ಸಣ್ಣಕತೆ: ಹಣೆಬರಹ

– ಅಶೋಕ ಪ. ಹೊನಕೇರಿ.

ಮರುಬೂಮಿ, desert

ಹೋಯ್ ಹೋಯ್… ಹುರ‍್ರಾ… ಎಂದು ಎತ್ತುಗಳನ್ನು ಹುರಿದುಂಬಿಸುತ್ತಾ, ಬಾಬಣ್ಣ ಬತ್ತದ ಹೊರೆ ತುಂಬಿದ ಎತ್ತಿನ ಗಾಡಿಯನ್ನು ಪ್ರಯಾಸದಿಂದ ನಡೆಸುತ್ತಿದ್ದ. ಎತ್ತುಗಳು ಬಾರವಾದ ಕಾಲುಗಳಿಂದ ಗಾಡಿ ಎಳೆಯುತ್ತಿದ್ದವು. ಹಗ್ಗದಿಂದ ಸೊಂಟಕ್ಕೆ ಕಟ್ಟಿದ್ದ ಚೊಣ್ಣವನ್ನು ಗಟ್ಟಿಯಾಗಿ ಹಿಡಿದು ಎದುರುಗಡೆಯಿಂದ ಬಸವ ಓಡೋಡಿ ಬರುತಿದ್ದ. ಕೈಯಲ್ಲಿ ಐದರ ಗಟ್ಟಿ ಬೀಳದಂತೆ ಬಿಗಿಯಾಗಿ ಹಿಡಿದಿದ್ದ. ಬಾಬಣ್ಣ ಅವನ ಅವಸರ ಕಂಡು “ಎಲ್ಲಿಗೆ ಓಡ್ತಿಯಲೇ…” ಎಂದ.

“ಬಾಬಣ್ಣ ಬಾಬಣ್ಣ… ಇವತ್ತು ಉಶಕ್ಕಗೆ ನೋಡಕ್ಕ ಬರ‍್ತವರಣ್ಣೋ. ಅದಕ್ಕೆ ಶರಬತ್ತು ಮಾಡಕ್ಕೆ ನಿಂಬೆಹಣ್ಣು ತರಕ್ಕೆ ಕಾಕನಂಗಡಿಗೆ ಹೋಗ್ತೀವ್ನಿ” ಎಂದ ಬಸವ.

“ಹೌದ? ಹ್ಮಂ.. ಹೋಗೋಗು ಬೇಗನೆ ಬಾ”.

ಪಾಪ ಉಶಾನೂ ಮದುವೆ ವಯಸ್ಸಿಗೆ ಬಂದು ಬಹಳ ವರ‍್ಶ ಆಯ್ತು. ನೋಡೋಕೆ ಬರೋ ಪುಣ್ಯಾತ್ಮ ಒಳ್ಳೆಯವನಿದ್ದರೆ ಸಾಕು. ಉಶಾ ನನ್ನ ದೊಡ್ಡಪ್ಪನ ಮಗಳಾದರೂ ಸ್ವಂತ ತಂಗಿ ತರಾನೆ ಇದಾಳೆ. ಇಬ್ಬರದ್ದು ಒಂದೇ ವಯಸ್ಸು, ಸಣ್ಣವರಿದ್ದಾಗಿನಿಂದ್ಲೂ ಕೂಡಿ ಆಡಿ ಬೆಳೆದವರು. ನನಗೂ ಅವಳಿಗೂ ಆರೇ ತಿಂಗಳು ವ್ಯತ್ಯಾಸ. ನಾನಾಗಲೇ ಮದುವೆಯಾಗಿ ಎರಡು ಮಕ್ಕಳ ತಂದೆ. ಆಗ್ಲಿ, ಆಗ್ಲಿ… ದೇವರ ದಯೆಯಿಂದ ಈ ಸಂಬಂದ ಗಟ್ಟಿಯಾಗ್ಲಿ ಎಂದುಕೊಳ್ಳುತ್ತಾ, ಬಾಬಣ್ಣ ಎತ್ತನ್ನು ಹೋಯ್ ಹೋಯ್ ಎಂದು ಹುರಿದುಂಬಿಸುತ್ತ ಹಳ್ಳದ ಬದಿಯ ಬಂಡಿ ಜಾಡಿನಲ್ಲಿ ಸಾಗುತಿದ್ದ.

ಇತ್ತ ಉಶಾಳ ಕಾಲು ಮಾತ್ರ ನೆಲದ ಮೇಲೆ ನಿಲ್ಲುತ್ತಿಲ್ಲ. “ನನ್ನ ನೋಡಕ್ಕೆ ಬರೋ ಸುರಸುಂದರಾಂಗ ಹೆಂಗಿದಾನೋ… ನನ್ನ ಮದುವೆ ಆದ್ರೆ ಚೆನ್ನಾಗಿ ನೊಡ್ಕಂಡಾನ? ಅವನೆಲ್ಲೋ ಪಟ್ಟಣದಾಗಿದಾನಂತೆ, ನನ್ನಂತ ಹಳ್ಳಿ ಮುಕ್ಕಿಗೆ ಚೆನ್ನಾಗಿ ನೋಡ್ಕಂಡಾನ… ಮೊಗೆ ಮೊಗೆದು ತೆಗೆದಶ್ಟು ತುಂಬೋ ಕಾಲುವೆ ನೀರ ತರಹ ಕಾಲಿಯಾಗಲಾರದಶ್ಟು ಪ್ರೀತಿ ಕೊಟ್ಟಾನ?”. ಅವಳ ಮನಸ್ಸು ಹಕ್ಕಿಯಂತೆ ಗಾಳಿಯಲ್ಲಿ ತೇಲುತ್ತಿದೆ. ಕಣ್ಣುಗಳಲ್ಲಿ ಆಸೆ ಚಿಗುರೊಡೆದು ಏನನ್ನೋ ಹುಡುಕುತ್ತಿವೆ. ನಿಂತಲ್ಲಿ ನಿಲ್ಲಲಾರಳು, ಕುಂತಲ್ಲಿ ಕೂರಲಾರಳು. ಅವ್ವ ಕೆಳಗೆ ಹೆಗ್ಗಡೆರ ಗದ್ದೆಗೆ ಹೋಗವಳೆ. ಗಂಡಿನ ಕಡೆಯವರು ನೋಡಕ್ಕೆ ಬರ‍್ತೀನಿ ಅಂದವರಲ್ಲ, ಅದಕ್ಕೆ ಹೇಳಕೊಂಡು ಬೇಗನೆ ಬರ‍್ತೀನಿ ಅಂತ ಹೋಗವಳೇ. ಅಪ್ಪ ಇದ್ದಿದ್ರೆ ಇವತ್ತು ಸಂಬ್ರಮದಿಂದ ಓಡಾಡಿರೋನು. ಅಪ್ಪನ ನೆನೆದು ಅವಳ ಕಣ್ಣಾಲಿಗಳು ತುಂಬಿ ಬಂದವು. ಸಾವರಿಸಿಕೊಂಡು ಗಂಡಿನ ಕಡೆಯವರು ಸಾಯಂಕಾಲ ನಾಲ್ಕು ಗಂಟೆಗೆ ಬರ‍್ತೀವಿ ಅಂದವರೆ. ಈಗಿನ್ನೂ ಗಂಟೆ ಹನ್ನೊಂದು, ಬುಟ್ಟೀಲಿ ತುಂಬಿರೋ ಒಗೆಯೋ ಬಟ್ಟೆನಾದ್ರೂ ಹಳ್ಳಕ್ಕೆ ಹೋಗಿ ಒಗೆದು ತರ‍್ತೀನಿ ಎಂದು ಲಗುಬಗೆಯಿಂದ ತಲೆ ಮೇಲೆ ಬುಟ್ಟಿ ಹೊತ್ತು, ಹಳ್ಳದ ಕಡೆಗೆ ಮನಸ್ಸಿನ ತುಂಬ ಆಸೆ ಹೊತ್ತು ನಡೆದಳು.

ಜುಳು ಜುಳು ಹರಿಯುವ ಸ್ವಚ್ಚ ನೀರಿನಲ್ಲಿ ಮುಕವ ಕಂಡು ನಾಚುತ್ತಿದ್ದಳು. ನನ್ನ ಕಟ್ಟಿಕೊಳ್ಳುವ ಸರದಾರ ಪಕ್ಕದಲ್ಲಿ ಕುಳಿತಂತೆ, ಬೊಗಸೆಯಲಿ ಮೊಗವೆತ್ತಿ ಚುಂಬಿಸಿದಂತೆ, ಮೊಗದ ಮೇಲೆ ಹೊಯ್ದಾಡೋ ಮುಂಗುರುಳ ಸರಿಸಿ, ಕಣ್ಣಲ್ಲಿ ಕಣ್ಣಲ್ಲಿ ಕಣ್ಣಿಟ್ಟು ಏನೋ ಕೇಳಿದ ಹಾಗೆ… ಅವಳು ಈ ಲೋಕದಲ್ಲಿ ಇಲ್ಲವೆ ಇಲ್ಲ!

ಎದುರಿನ ಒತ್ತಾದ ಪೊದೆಯೊಳಗೆ ಏನೋ ಸರ ಸರ ಸದ್ದು. ಅತ್ತಿತ್ತ ಹೊರಳುವ ಕಣ್ಣು ಉಶೆಯ ಮೇಲೆ ನೆಟ್ಟಿದೆ. ಹಸಿವಿನಿಂದ ಮೈಯೆಲ್ಲ ಆಕ್ರೋಶ ತುಂಬಿಕೊಂಡ ಒಂಟಿಸಲಗ ನಿನ್ನೆ ಕೆಳಗದ್ದೆಯ ಹೆಗ್ಗಡೆಯವರ ಬತ್ತದ ಗದ್ದೆಗಿಳಿದು ದ್ವಂಸ ಮಾಡಿತ್ತು. ಕೆಳಗದ್ದೆ ಊರವರೆಲ್ಲ ಸೇರಿ ಮದ್ದು-ಗಂಡು, ಪಟಾಕಿ, ತಮಟೆಯ ಸದ್ದು ಮಾಡಿ ಈ ಒಂಟಿ ಸಲಗವನ್ನು ಕಾಡಿಗಟ್ಟೋ ಪ್ರಯತ್ನ ಮಾಡಿದ್ದರು. ಇದರಿಂದ ಒಂಟಿ ಸಲಗ ಮತ್ತಶ್ಟು ವ್ಯಗ್ರವಾಗಿದ್ದ . ಉಶೆಗೂ ಸಲಗವಿರುವ ಪೊದೆಗೂ ನಾಲ್ಕು ಮೀಟರ್ ಮಾತ್ರ ಅಂತರ. ಮೊದಲೇ ವ್ಯಗ್ರವಾಗಿದ್ದ ಸಲಗ ಮನುಶ್ಯರನ್ನು ಕಂಡು ಮತ್ತಶ್ಟು ಉಗ್ರವಾಯ್ತು. ದಾಪುಗಾಲಿನ ಹೆಜ್ಜೆ ಇಡುತ್ತ ಪೊದೆಯಿಂದ ದುತ್ತನೆ ತನ್ನೆದುರಿಗೆ ಬಂದು ನಿಂತ ಸಲಗವ ಕಂಡು ಕನಸಿನ ಲೋಕದಲಿ ವಿಹರಿಸುತ್ತಿದ್ದ ಉಶೆ ಜರ‍್ರನೆ ದರೆಗಿಳಿದು ಬಂದಳು. ಜಂಗಾ‌ ಬಲವೇ ಉಡುಗಿ ಹೋಯ್ತು. ತನ್ನೆಲ್ಲ ಶಕ್ತಿ ಕ್ರೋಡೀಕರಿಸಿ, ಎದ್ದು ನಾಲ್ಕು ಹೆಜ್ಜೆ ಓಡುವಶ್ಟರಲ್ಲಿ ಸಲಗದ ಸೊಂಡಿಲಿನಲ್ಲಿ ಮುದ್ದೆಯಾದಳು. ಸಲಗದ ಕಾಲಿನ ಹೊಸೆತಕ್ಕೆ ಸಿಕ್ಕು ಅಪ್ಪಚ್ಚಿಯಾದಳು. ಕಂಡ ಕನಸೆಲ್ಲ ಕ್ಶಣಾರ‍್ದದಲ್ಲಿ ಮಣ್ಣಲ್ಲಿ ಮಣ್ಣಾಗಿ ಮಸಣ ಸೇರಿತ್ತು.

ಹಳ್ಳದ ಬಂಡಿ ಜಾಡಿನಲ್ಲಿ ಬಂದ ಬಾಬಣ್ಣ ಉಶೆಯ ದೇಹ ಚಿದ್ರವಾಗಿ ಬಿದ್ದಿದ್ದನ್ನು ಕಂಡು ನೋವಿನಿಂದ ಚೀರಿಕೊಂಡ. ಅಯ್ಯೋ ಕ್ರೂರ ವಿದಿಯೇ ಎಂದು ಮನಸಾರೆ ಬೈಯತೊಡಗಿದ. ಬಸವ ನಿಂಬೆಹಣ್ಣು ಕೊಂಡು ಹಿಂತಿರುಗುತ್ತಿದ್ದಾಗ ಬಾಬಣ್ಣನ ಚೀರಾಟ ಕಂಡು ಅತ್ತ ಓಡಿದ. ಅಕ್ಕನ ಸಾವನ್ನು ಕಂಡು ಕಣ್ಶೀರ ದಾರೆಯೊಂದಿಗೆ ದರೆಗೆ ಕುಸಿದ, ಕೈಯೊಳಗಿನ ನಿಂಬೆಹಣ್ಣು ಉರುಳಿ ಅಕ್ಕನ ರಕ್ತ ಸಿಕ್ತ ಕೆನ್ನೆ ಮುಟ್ಟುತ್ತಿದ್ದವು. ಮಾನವ ಬಯಸುವುದು ಒಂದಾದರೆ ಆಗುವುದು ಮತ್ತೊಂದು. ಇದೇ ವಿದಿಯಾಟ. ನೋಡ ಬಂದ ಗಂಡಿನ ಕಡೆಯವರು ಉಶೆಯ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಬಾರವಾದ ಹೆಜ್ಜೆ ಹಾಕಿದರು.

(ಚಿತ್ರ ಸೆಲೆ: sketchdrawingmart.com )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.