ಇವರ ಚಿತ್ರಕಲೆಗೆ ಎಮ್ಮೆಯೇ ಕ್ಯಾನ್ವಾಸ್!
– ಕೆ.ವಿ.ಶಶಿದರ.
ಶುಬ ಕೆಲಸಗಳಿಗೆ ಮುಂದು ಮಾಡದಿರುವ ಸಾಕು ಪ್ರಾಣಿಗಳಲ್ಲಿ ಪ್ರಮುಕವಾದದ್ದು ಎಮ್ಮೆ. ಆದರೆ ಇಲ್ಲೊಂದು ಕಡೆ ಎಮ್ಮೆಗಳು, ಕಲಾವಿದರ ಸ್ರುಜನಶೀಲತೆ, ಕಲ್ಪನೆ ಮತ್ತು ಕೌಶಲ್ಯವನ್ನು ಪ್ರದರ‍್ಶಿಸಲು ಅತ್ಯುತ್ತಮ ಕ್ಯಾನ್ವಾಸ್ ಆಗಿ ಹಾಗೂ ಸಾರ‍್ವಜನಿಕರನ್ನು ಬೆರಗುಗೊಳಿಸುವ ಕೆಲಸವೊಂದಕ್ಕೆ ಬಳಕೆಯಾಗುತ್ತಿವೆ.
ಹೌದು, ಚೀನಾ, ಲಾವೋಸ್ ಮತ್ತು ವಿಯಟ್ನಾಮ್ ಜನರು ನೈರುತ್ಯ ಚೀನಾದ ಯುನಾನ್ ಪ್ರಾಂತ್ಯದ ಜಿಯಾಂಗ್‍ಚೆಂಗ್ ಜಿಲ್ಲೆಯಲ್ಲಿ ‘ಸ್ಯಾಶೆ-ತ್ರೋಯಿಂಗ್ ಕಾರ‍್ನಿವಾಲ್’ನ್ನು ಜಂಟಿಯಾಗಿ ಆಯೋಜಿಸುತ್ತಾರೆ. ಇದರ ಅಂಗವಾಗಿ, ಎಮ್ಮೆಯ ದೇಹದ ಮೇಲೆ ರಚಿಸುವ ಚಿತ್ರಗಳ ಪ್ರದರ‍್ಶನದ ಸ್ಪರ‍್ದೆಯೊಂದನ್ನು ನಡೆಸಲಾಗುತ್ತದೆ. 2018ರಲ್ಲಿ ನಡೆದ ಸ್ಪರ‍್ದೆಯಲ್ಲಿ ಈ ಮೂರೂ ದೇಶಗಳ 30ಕ್ಕೂ ಹೆಚ್ಚು ತಂಡಗಳು ಇದರಲ್ಲಿ ಬಾಗವಹಿಸಿದ್ದವು. ಅತ್ಯುತ್ತಮವಾಗಿ ಪೇಂಟ್ ಮಾಡಿರುವ ಎಮ್ಮೆಯ ಮಾಲೀಕರಿಗೆ ಒಂದು ಲಕ್ಶ ಯುವಾನ್ ಬಹುಮಾನವಾಗಿ ನೀಡಲಾಗಿತ್ತು (ಅಂದಾಜು 15,000 ಯು.ಎಸ್ ಡಾಲರ್ ಗಳು).
ಎಮ್ಮೆಗಳ ಮೇಲೆ ಚಿತ್ರ ಬಿಡಿಸುವುದು ಸುಲಬದ ಕೆಲಸವಲ್ಲ!
ಪ್ರಕರ ಬಣ್ಣಗಳ ಪೈಂಟ್‍ನಿಂದ ಅಲಂಕಾರಗೊಳ್ಳುವ ಎಮ್ಮೆಗಳ ಮೇಲಿನ ಚಿತ್ರಕಲೆಗೆ, ಚೀನಾದ ಅಬಿವ್ರುದ್ದಿ, ಸ್ತಳೀಯ ಸಂಸ್ಕ್ರುತಿ, ಮೂರೂ ನೆರೆಹೊರೆ ದೇಶಗಳ ನಡುವಿನ ಸಂಬಂದ ಹಾಗೂ ಸ್ನೇಹ ಇವೇ ಮುಂತಾದವುಗಳು ಪ್ರಮುಕ ವಸ್ತುಗಳಾಗಿರುತ್ತವೆ. ಎಮ್ಮೆಯ ದೇಹದ ಮೇಲೆ ಚಿತ್ರ ಬಿಡಿಸುವ ಕೆಲಸ ಸುಲಬದ್ದೇನಲ್ಲ. ಎಮ್ಮೆ ದೇಹದ ಮೇಲಿನ ಸಣ್ಣ ಸಣ್ಣ ಕೂದಲುಗಳನ್ನು ಶೇವ್ ಮಾಡಿ ಮೊದಲು ತೆಗೆದು, ನಂತರ ಚರ‍್ಮವನ್ನು ಚೆನ್ನಾಗಿ ತೊಳೆದು ಚಿತ್ರಕಾರರು ತಮ್ಮ ಕೈಚಳಕ ತೋರಿಸಲು ತೊಡಗುತ್ತಾರೆ. ಒಂದು ಎಮ್ಮೆಯ ಮೇಲೆ ಚಿತ್ರ ಬಿಡಿಸಲು ಕನಿಶ್ಟ ಐದಾರು ಗಂಟೆಗಳ ಸಮಯ ಹಿಡಿಯುತ್ತದೆ.
ಎಮ್ಮೆಯ ಮೇಲಿನ ಚಿತ್ರಕಲೆ: ಹಿನ್ನೆಲೆ
ಎಮ್ಮೆಯ ಮೇಲೆ ಚಿತ್ರಗಳನ್ನು ಬಿಡಿಸಿಕೊಂಡು ಬರುತ್ತಿರುವ ಪದ್ದತಿಯ ಹಿಂದೆ ಒಂದು ಕತೆ ಇದೆ. ಆ ಕತೆಯ ಪ್ರಕಾರ, ಬಹಳ ಹಿಂದೆ ಈ ಹಳ್ಳಿಯ ಎಮ್ಮೆಯೊಂದರ ಮೇಲೆ ಒಂದು ಬಾರಿ ಹುಲಿ ಆಕ್ರಮಣ ಮಾಡಲು ಬಂದಿತ್ತು. ಎಮ್ಮೆಯ ಸುತ್ತ ಇದ್ದ ಬೇರೆ ಪ್ರಾಣಿಗಳು ಹುಲಿಯನ್ನು ಕಂಡು ದೌಡಾಯಿಸಿದವು. ಹೀಗೆ ಓಡುವಾಗ ಅವುಗಳು ಎಮ್ಮೆಯ ಮೇಲೆ ಕೆಸರು ಎರಚಿದವು. ಇದರಿಂದ ಎಮ್ಮೆ ಬಯಂಕರ ಸ್ವರೂಪ ತಾಳಿ, ಎಲ್ಲರನ್ನೂ ಹೆದರಿಸುವಂತಾಗಿತ್ತು. ಇದನ್ನು ಕಂಡ ಹುಲಿ ಈ ವಿಚಿತ್ರ ಪ್ರಾಣಿಯಿಂದ ತನ್ನ ಪ್ರಾಣಕ್ಕೆ ಎಲ್ಲಿ ಅಪಾಯವಾಗುತ್ತದೋ ಎಂದು ಕಾಲು ಕಿತ್ತಿತು. ಇದರಿಂದ ಪಾಟ ಕಲಿತ ಸ್ತಳೀಯ ಹಳ್ಳಿ ಜನ ಅಂದಿನಿಂದ, ಕಾಡುಪ್ರಾಣಿಗಳನ್ನು ಓಡಿಸುವ ಸಲುವಾಗಿ ಜಾನುವಾರುಗಳ ದೇಹದ ಮೇಲೆ ಚಿತ್ರ ಬಿಡಿಸಲು ಆರಂಬಿಸಿದರು.
ಸ್ಯಾಶೆ ಎಸೆಯುವ ಉತ್ಸವದ ಬಗ್ಗೆ
ಲಾವೋಸ್ ಹಾಗೂ ವಿಯಟ್ನಾಂ ಎರಡೂ ದೇಶಗಳ ಗಡಿಯನ್ನು ಹಂಚಿಕೊಂಡಿರುವ ಏಕೈಕ ಪ್ರಾಂತ್ಯ ಜಿಯಾಂಗ್‍ಚೆಂಗ್. ಇದು ಇರುವುದು ಪ್ಯು ಯೆರ್ ನ ಯುನಾನ್ ನಲ್ಲಿ. 2009 ರಿಂದ ಪ್ರಾರಂಬವಾದ ದ್ವೈವಾರ‍್ಶಿಕ ಸ್ಯಾಶೆ ಎಸೆಯುವ ಉತ್ಸವವನ್ನು, ಚೀನಾ, ಲಾವೋಸ್ ಮತ್ತು ವಿಯಟ್ನಾಮ್ ದೇಶಗಳಲ್ಲಿ ಆಯೋಜಿಸಲಾಗುತ್ತದೆ.
ಯುನಾನ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ಯಾಶೆ ಎಸೆಯುವ ಉತ್ಸವ ಅತಿ ಜನಪ್ರಿಯವಾದ ಸಾಂಪ್ರದಾಯಿಕ ಚಟುವಟಿಕೆ. ಸ್ಯಾಶೆಗಳಲ್ಲಿ ಬೀಜಗಳು, ದಾನ್ಯಗಳು ಅತವಾ ಮಸಾಲೆ ಪದಾರ‍್ತಗಳನ್ನು ತುಂಬಿಸಲಾಗುತ್ತದೆ. ತದನಂತರ ಅದನ್ನು ವಿವಿದ ರಿಬ್ಬನ್ನುಗಳಿಂದ ಅಲಂಕರಿಸಲಾಗುತ್ತದೆ ( ರಿಬ್ಬನ್ – ಪ್ರೀತಿಯ ಸಂಕೇತವಾಗಿ ಬಳಕೆಯಾಗುತ್ತದೆ ). ಇತ್ತೀಚಿನ ದಿನಗಳಲ್ಲಿ ಈ ಉತ್ಸವ, ದೇಶಗಳ ನಡುವಿನ ಗೆಳೆತನವನ್ನು ವ್ಯಕ್ತ ಪಡಿಸಲು ಕೂಡ ಪ್ರಮುಕ ವೇದಿಕೆಯಾಗಿ ಬದಲಾಗುತ್ತಿರುವುದು ಒಳ್ಳೆಯ ವಿಚಾರ.
( ಮಾಹಿತಿ ಮತ್ತು ಚಿತ್ರ ಸೆಲೆ: news.cgtn.com, en.ntvbd.com )
ಇತ್ತೀಚಿನ ಅನಿಸಿಕೆಗಳು