ಮಕ್ಕಳ ಕತೆ: ಕಾಡಿನ ರಾಜ
– ವೆಂಕಟೇಶ ಚಾಗಿ.
ಅದೊಂದು ಸುಂದರವಾದ ಕಾಡು. ಆ ಕಾಡಿನಲ್ಲಿ ಹಲವಾರು ಬಗೆಯ ಪ್ರಾಣಿ-ಪಕ್ಶಿಗಳು ನಲಿವಿನಿಂದ ತಮ್ಮ ಜೀವನವನ್ನು ನಡೆಸುತ್ತಿದ್ದವು. ಬಗೆ ಬಗೆಯ ಗಿಡ-ಮರಗಳು, ಬೆಟ್ಟ-ಗುಡ್ಡಗಳು ಮತ್ತು ಜಲಪಾತಗಳಿಂದ ಆ ಕಾಡು ಆಕರ್ಶಣೀಯವಾಗಿತ್ತು. ಪ್ರಶಾಂತ ವಾತಾವರಣ ಇದ್ದ ಕಾರಣ ಆ ಕಾಡಿಗೆ ಶಾಂತವನ ಎಂಬ ಹೆಸರು ಇದ್ದಿತು.
ಶಾಂತವನದ ರಾಜ ಸಿಂಹ. ಇವನ ಹೆಸರು ಗಾಂಡೀವ. ದೊಡ್ಡ ಕಾಡಿನ ರಾಜನಾದರೂ ವಿನಾಕಾರಣ ಯಾವುದೇ ಪ್ರಾಣಿಗಳಿಗೆ ತೊಂದರೆ ಕೊಡುತ್ತಿರಲಿಲ್ಲ. ಹಸಿವಾದಾಗ ಬೇಟೆಯಾಡಿ ಗಾಂಡೀವ ತನ್ನ ಹಸಿವನ್ನು ನೀಗಿಸಿಕೊಳ್ಳುತ್ತಿದ್ದ. ಯಾವಾಗಲೂ ಕಾಡಿನ ರಕ್ಶಣೆಯ ಬಗ್ಗೆ ಗಮನ ಹರಿಸುತ್ತಿದ್ದ. ಗಾಂಡೀವನ ಹೆದರಿಕೆಯಿಂದ ಬೇರೆ ಕಾಡಿನ ಪ್ರಾಣಿಗಳು ಶಾಂತವನದೆಡೆಗೆ ಸುಳಿಯುತ್ತಿರಲಿಲ್ಲ. ಮಾನವರೂ ಸಹ ಬೇಟೆಯಾಡಲು ಕಾಡಿನೊಳಕ್ಕೆ ಬರುತ್ತಿರಲಿಲ್ಲ. ಗಾಂಡೀವ ಕಾಡಿನ ವ್ಯಾಜ್ಯಗಳನ್ನು ನ್ಯಾಯಯುತವಾಗಿ ಬಗೆಹರಿಸಿ, ತಪ್ಪಿತಸ್ತರಿಗೆ ಸರಿಯಾದ ಶಿಕ್ಶೆಯನ್ನು ನೀಡುತ್ತಿದ್ದ. ಇದರಿಂದಾಗಿ ಎಲ್ಲ ಪ್ರಾಣಿ-ಪಕ್ಶಿಗಳು ನೆಮ್ಮದಿಯಿಂದ ಜೀವನ ನಡೆಸುವಂತಾಗಿತ್ತು.
ಶಮುಕ ಎನ್ನುವ ನರಿ ಅದೇ ಕಾಡಿನಲ್ಲಿ ವಾಸವಾಗಿತ್ತು. ಅದು ಗಾಂಡೀವನ ಬಗ್ಗೆ ಅಸೂಯೆ ಬಾವನೆ ಹೊಂದಿತ್ತು. ಹೇಗಾದರೂ ಮಾಡಿ ಗಾಂಡೀವ ರಾಜನನ್ನು ಕೆಳಗಿಸಿ, ತಾನೇ ರಾಜನಾಗಬೇಕೆಂಬ ಬಯಕೆ ಬಹುದಿನಗಳಿಂದ ಶಮುಕನಿಗೆ ಇತ್ತು. ಆಗಾಗ ಇತರೆ ಪ್ರಾಣಿಗಳಿಗೆ ರಾಜನ ಬಗ್ಗೆ ತಪ್ಪು ಮಾಹಿತಿಯನ್ನು ನೀಡುತ್ತಾ, ಗಾಂಡೀವನ ಮೇಲೆ ಬೇರೆ ಪ್ರಾಣಿಗಳ ಅಪನಂಬಿಕೆ ಬೆಳೆಸುವಲ್ಲಿ ಯಶಸ್ಸು ಕಂಡಿತು.
ಒಂದು ದಿನ ಶಮುಕ ನರಿ ಕಾಡಿನ ಪ್ರಾಣಿ ಸಮುದಾಯವನ್ನೆಲ್ಲ ಕರೆದು ತಾನೇ ರಾಜನಾಗುವ ಬಯಕೆಯನ್ನು ತಿಳಿಸಿತು. ತಾನು ರಾಜನಾದರೆ ಒಳ್ಳೆಯ ಆಹಾರ ನೀಡುವುದಾಗಿ ಬರವಸೆ ನೀಡಿತು. ಅದರಂತೆ ಎಲ್ಲಾ ಪ್ರಾಣಿಗಳು ನರಿಯ ಬೆಂಬಲಕ್ಕೆ ನಿಂತವು. ಕಾಡಿನ ರಾಜ ಗಾಂಡೀವನ ಬಳಿ ಎಲ್ಲಾ ಪ್ರಾಣಿಗಳು ಒಟ್ಟಾಗಿ ಬಂದು ಶಮುಕನನ್ನೇ ನಾವು ರಾಜನನ್ನಾಗಿ ಒಪ್ಪಿಕೊಂಡಿದ್ದೇವೆ ಎಂದವು. ಅದಕ್ಕೆ ಗಾಂಡೀವ, ನರಿಯ ಕಪಟತನವನ್ನು ತಿಳಿಸಿ ಹೇಳಿದರೂ ಪ್ರಾಣಿಗಳು ಒಪ್ಪದಿದ್ದಾಗ ಗಾಂಡೀವ ತನ್ನ ಸ್ತಾನವನ್ನು ಬಿಟ್ಟುಕೊಟ್ಟನು.
ಶಮುಕ ರಾಜನಾದ ನಂತರ ಯಾರಲ್ಲಿಯೂ ಅಂಜಿಕೆ ಇರದಂತಾಯ್ತು. ಶಮುಕ ಎಲ್ಲರಿಗೂ ಬೇಟೆಯಾಡಲು ಮುಕ್ತ ಅವಕಾಶ ನೀಡಿದನು. ಬಲಶಾಲಿಯಾದ ಪ್ರಾಣಿಗಳು ಸಾದು ಪ್ರಾಣಿಗಳನ್ನು ಬೇಟೆಯಾಡತೊಡಗಿದವು. ಮಾನವರು ಕಾಡಿನ ಒಳಹೊಕ್ಕು ಕಾಡಿನಲ್ಲಿರುವ ಬೆಲೆಬಾಳುವ ಮರಗಳನ್ನು ಕಡಿಯತೊಡಗಿದರು, ಪ್ರಾಣಿಗಳನ್ನು ಬೇಟೆಯಾಡತೊಡಗಿದರು. ಇದರಿಂದಾಗಿ ಕಾಡಿನ ಪ್ರಾಣಿಗಳಿಗೆ ತುಂಬಾ ತೊಂದರೆಯಾಗತೊಡಗಿತು. ರಾಜನಾಗಿದ್ದ ನರಿ ಶಮುಕನಿಗೆ ಕಾಡನ್ನು ಹಾಗೂ ಕಾಡಿನ ಪ್ರಾಣಿಗಳನ್ನು ರಕ್ಶಿಸಲು ಸಾದ್ಯವಾಗಲಿಲ್ಲ. ರಾಜನ ಮಾತನ್ನು ಯಾರೂ ಕೇಳದಾದರು. ಮನುಶ್ಯರು ಶಮುಕನನ್ನೇ ಹೊಡೆದು ಓಡಿಸಿಬಿಟ್ಟರು. ಕಾಡಿನ ಸ್ತಿತಿ ಗಂಬೀರವಾಗತೊಡಗಿತು. ಇದನ್ನು ಅರಿತ ಕೆಲವು ಬುದ್ದಿವಂತ ಪ್ರಾಣಿಗಳು ಮತ್ತೆ ಗಾಂಡೀವನನ್ನು ರಾಜನನ್ನಾಗಿ ಮಾಡಬೇಕೆಂದು ಯೋಚಿಸಿದವು. ಇದಕ್ಕೆ ಕಾಡಿನ ಎಲ್ಲ ಪ್ರಾಣಿಗಳು ಒಪ್ಪಿಗೆ ಸೂಚಿಸಿ ಒಂದು ತೀರ್ಮಾನ ತೆಗೆದುಕೊಂಡವು. ಎಂದೆಂದಿಗೂ ಗಾಂಡೀವನೇ ತಮ್ಮ ಮುಂದಾಳು ಎಂದು ಒಪ್ಪಿಕೊಂಡು, ಸಿಂಹವನ್ನು ಕಾಡಿನ ರಾಜನನ್ನಾಗಿ ಪಟ್ಟಾಬಿಶೇಕ ಮಾಡಿದವು. ಕೆಲವು ದಿನಗಳ ನಂತರ ಕಾಡು ಮತ್ತೆ ಮೊದಲಿನಂತಾಗಿ, ಶಾಂತವನವಾಯಿತು.
(ಚಿತ್ರ ಸೆಲೆ: pixabay.com)
ಇತ್ತೀಚಿನ ಅನಿಸಿಕೆಗಳು