ಒಲವು, love

ಕವಿತೆ: ಒಲವಿನ ಕಾಣಿಕೆ

–  ಅಶೋಕ ಪ. ಹೊನಕೇರಿ.

love, ಒಲವು

ಅಂಕು ಡೊಂಕಾಗಿ
ಕಲ್ಲು ಮುಳ್ಳುಗಳ ಬೆಟ್ಟ ಗುಡ್ಡಗಳ
ಕಣಿವೆ ಕಂದಕಗಳ ನಡುವೆ
ಹರಿವ ನದಿಯದು ಹಾತೊರೆಯುವುದು
ಶರದಿಗೆ ಒಲವೆಂಬ ಚುಂಬನದ
ಕಾಣಿಕೆ ನೀಡಲು ಶರದಿಯೊಳಗೊಂದಾಗಿ
ತಾನು ಸಾರ‍್ತಕ್ಯಗೊಳ್ಳಲು

ತುಂತುರು ಗನಿಯದು
ಮೇಗಗಳಾಗಿ ಆಗಸದಿಂದ
ಹನಿ ಹನಿಯಾಗಿ ಒಲವಿನ
ಕಾಣಿಕೆಯಾಗಿ ಮಳೆಗರೆದು
ಬುವಿಯ ತೆಕ್ಕೆಗೆ ಸೇರುವುದು
ತನ್ನ ಬದುಕು ಬುವಿಯ
ಮಣ್ಣೊಳು ಬೆಸೆತು ಪಾವನವಾಗಲು

ಹರೆಯದ ಅವ್ಯಕ್ತ ಬಾವಗಳು
ಸ್ಪುರಣೆಗೊಂಡು ಅವನವಳು
ಇವಳವನು ಆಕರ‍್ಶಿತರಾಗಿ
ಒಲವೆಂಬ ಮಾದುರ‍್ಯತೆಯ
ಸಹ್ಯ ಸುಡುವಿಕೆಯಲಿ
ಮೈ ಮನಗಳು ಹಿತವಾದ
ಪುಳಕದಲಿ ಬೆಸೆತು
ಒಲವೆಂಬ ಕಾಣಿಕೆಯಲಿ ನವ
ಮೊಳೆಕೆಯೊಡೆದು ಬಂದಿಸುವುದು
ಅದೇ ಒಲವೆಂಬ ಬಾವ ಬಂದನದಲಿ
ಒಲವಿನ ಕಾಣಿಕೆಯ ಅನುಬಾವ
ದಿಗ್ಬಂದನದಲಿ

ಬುವಿಯೆಶ್ಟು ಸತ್ಯವೋ
ಪ್ರೇಮವೆಂಬ ಅನುಬಾವ
ಅಶ್ಟೇ ಸತ್ಯಸ್ಯ ಸತ್ಯ
ಆಗಸವೆಶ್ಟು ವಿಕಾಸಕ್ಕೆ
ಮೂಕ ಸಾಕ್ಶಿಯೋ
ಪ್ರೀತಿಯ ಒಲವೆಂಬ ಬಂದ
ಬೂಮ್ಯಾಕಾಶದಶ್ಟೇ ದಿಟ

ಬೂಮಿ ಆಕಾಶ ಇರುವರೆಗೂ
ಒಲವೆಂಬ ಅನುಬಂದ ಅಳಿಸಲಾರದು
ಪ್ರೀತಿಯ ಕಾಣಿಕೆ ಕೊಡುಗೆಯಾಗಿ
ಪಡೆದು ಜೀವ ವಿಕಾಸವದು
ಎಂದಿಗೂ ಎಂದೆಂದಿಗೂ ನಿಲ್ಲದು
ಎಂದಿಗೂ ಎಂದೆಂದಿಗೂ ನಿಲ್ಲದು

(ಚಿತ್ರಸೆಲೆ: pexels.com)

1 ಅನಿಸಿಕೆ

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: