ಪುಟ್ಟ ಬರಹ : ಅನಿರೀಕ್ಶಿತ

ವೆಂಕಟೇಶ ಚಾಗಿ.

bike-accident

ಅದೇ ತಾನೇ ಕವಿಗೋಶ್ಟಿಯಿಂದ ಮನೆಗೆ ಮರಳುತ್ತಿದ್ದೆ. ಅಶ್ಟರಲ್ಲಿ ಜಂಗಮವಾಣಿಯ ರಿಂಗಣವಾಯಿತು. ಕಾವ್ಯ ತಾನು ಊರಿಗೆ ಹೋಗುತ್ತಿರುವುದಾಗಿ ತಿಳಿಸಿ, ಜೊತೆಗೆ ನನ್ನನ್ನು ಬರಲು ಕೇಳಿಕೊಂಡಳು. ಸರಿಯಾಗಿ ಮೂರು ಗಂಟೆಗೆ ಹೊರಡುವ ಬಸ್ ಗೆ ಬರಲು ಹೇಳಿದಳು.

ತುಂಬಾ ದಿನಗಳ ನಂತರ ಬೇಟಿಯಾಗುತ್ತಿದ್ದುದ್ದರಿಂದ ಮಾತುಗಳು ಸಾಕಶ್ಟು ಉಳಿದಿದ್ದವು. ಮೊಬೈಲ್ ನಲ್ಲಿ ಅಶ್ಟು ಮಾತನಾಡಿದ್ದರೂ ನೇರವಾಗಿ ಮಾತನಾಡಿದ್ದು ಬಹಳ ಕಡಿಮೆ. ಬಡತನದಿಂದ ಬಂದ ಕಾವ್ಯ ತನ್ನ ಮನೆಯ ಜವಾಬ್ದಾರಿ ಹೊತ್ತಿದ್ದಳು. ನಾವಿಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದೆವು. ನೋಡುವವರ ಕಣ್ಣಿಗೆ ನಾವು ಪ್ರೇಮಿಗಳಾಗಿದ್ದೆವು. ಅದಕ್ಕಾಗಿ ನೇರ ಬೇಟಿ ತುಂಬಾ ಕಡಿಮೆಯಾಗಿತ್ತು, ಆದರೆ ಮೊಬೈಲ್ ನಲ್ಲಿ ತುಂಬಾ ಹತ್ತಿರವಾಗಿದ್ದೆವು.

ಕವಿಗೋಶ್ಟಿಯಿಂದ ಮನೆಗೆ ಬರುತ್ತಿದ್ದಂತೆ ಸಮಯವಾಗಿಬಿಟ್ಟಿತ್ತು. ಕೈಗೆ ಸಿಕ್ಕ 2-3 ಬಟ್ಟೆಗಳನ್ನು ಬ್ಯಾಗ್ ನಲ್ಲಿ ತುರುಕಿಕೊಂಡು ಬೈಕ್ ಏರಿದ್ದೆ. ಆಗಾಗ ಟ್ರಾಪಿಕ್ ನಲ್ಲಿ ಸಿಲುಕಿದರೂ ಅವಕಾಶ ಸಿಕ್ಕಲ್ಲಿ ತೂರಿ ಮುಂದೆ ಹೊರಟೆ. ಅಶ್ಟರಲ್ಲಿ ಕಾವ್ಯ ಕರೆ ಮಾಡಿ ಬಸ್ಸು ನನ್ನ ಹಿಂದೆಯೇ ಬರುತ್ತಿರುವುದಾಗಿ ಹೇಳಿದಳು. ಸರ‍್ಕಲ್ ನಲ್ಲಿ ಸಿಗ್ನಲ್ ಕಂಡು ಬೈಕ್ ಅಲ್ಲೇ ಬಿಟ್ಟು ಬಸ್ ಏರಿದೆ. ಅವಳ ಪಕ್ಕದಲ್ಲಿ ಕಾಲಿ ಇದ್ದ ಸೀಟಿನಲ್ಲಿ ಕುಳಿತೆ.

ತಡವಾಗಿದ್ದಕ್ಕೆ ಸಾರಿ ಎಂದೆ. ಆದರೆ ಹುಸಿಮುನಿಸಿನಿಂದ ಮುಕವನ್ನು ಕಿಟಕಿಯತ್ತ ತಿರುಗಿಸಿದ್ದಳು. ಆದರೂ ನಾನೇ ಮಾತು ಪ್ರಾರಂಬಿಸಿದೆ. ಕವಿಗೋಶ್ಟಿಯಿಂದ ಬರುವುದು ತಡವಾಯಿತು ಎಂದೆ. ಅಶ್ಟರಲ್ಲಿ ಅವಳ ಕಣ್ಣಲ್ಲಿ ನೀರು ಹನಿಯಿತು. ಇಶ್ಟಕ್ಕೆ ಅಳುವುದೇ ಎಂದು ಹೇಳಿ ಕಣ್ಣೀರು ಒರೆಸಲು ಪ್ರಯತ್ನಿಸಿದೆ. ಅವಳ ದುಕ್ಕ ನಿಲ್ಲಲಿಲ್ಲ. ಕವಿಗೋಶ್ಟಿಯ ಎಲ್ಲ ಗಟನಾವಳಿಗಳನ್ನು ಕಣ್ ಕಟ್ಟುವಂತೆ ವಿವರಿಸಿದೆ. ನನಗೆ ನೀಡಿದ ಪ್ರಶಸ್ತಿಯನ್ನು ತೋರಿಸಲು ಬಯಸಿದೆ. ಆದರೆ ನನ್ನ ಪ್ರಶಸ್ತಿ ಪತ್ರ ನೆನಪಿನ ಕಾಣಿಕೆ ಎಲ್ಲವೂ ನನ್ನ ಬೈಕ್ ನಲ್ಲೇ ಇದ್ದವು. ಬೈಕ್ ನಲ್ಲೆ ಬಿಟ್ಟಿರುವುದಾಗಿ ಸರ‍್ಕಲ್ ನಲ್ಲಿದ್ದ ಬೈಕ್ ತೋರಿಸಿದೆ.

ಅತ್ತ ನೋಡಿದರೆ ನನ್ನ ಬೈಕ್ ಸುತ್ತ ಜನ. ನನ್ನ ಬೈಕ್ ಕೆಳಗೆ ಬಿದ್ದಿದೆ. ಪಕ್ಕದಲ್ಲಿ ಯಾರೋ ಒಬ್ಬ ಯುವಕ ಸತ್ತು ಬಿದ್ದಿದ್ದಾನೆ. ಗಮನವಿಟ್ಟು ನೋಡಿದಾಗ ಅದು ನಾನೇ! ಮಾತು ನಿಂತಿತು. ಕಣ್ಣುಗಳು ಹನಿಗಳಿಂದ ತುಂಬಿ ಮಂಜಾಗತೊಡಗಿದವು. ಎಲ್ಲವೂ ಹಗುರವಾದಂತೆ ಬಾಸವಾಗತೊಡಗಿತು. ನೋಡನೋಡುತ್ತಿದ್ದಂತೆ ಅವಳಿಂದ ದೂರವಾಗತೊಡಗಿದೆ. ಆದರೂ ಅವಳೆಡೆಗೆ ಒಂದು ದ್ರುಶ್ಟಿ ಇತ್ತು, ಆಕಾಶದಲ್ಲಿ ಲೀನವಾಗುವ ತನಕ…

( ಚಿತ್ರ ಸೆಲೆ : odishasuntimes.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks