ಲಾಮೂವಿನ ಸಗಣಿಯಲ್ಲಿ ಓಡುವ ಹಡಗು!

– ಕೆ.ವಿ. ಶಶಿದರ.

puno

ದಕ್ಶಿಣ ಅಮೇರಿಕಾದ ಅತಿ ದೊಡ್ಡ ಸರೋವರ ಟಿಟಿಕಾಕಾ. ಇದು ಪೆರು ಮತ್ತು ಬೊಲಿವಿಯಾದ ಗಡಿಯಲ್ಲಿದೆ. ಈ ಸರೋವರವು 190 ಕಿಲೋಮೀಟರ್ ಉದ್ದ ಮತ್ತು 80 ಕಿಲೋಮೀಟರ್ ಅಗಲ (ಅತಿ ಅಗಲದ ಪ್ರದೇಶದಲ್ಲಿ) ಹಾಗೂ 3800 ಮೀಟರ್ ಎತ್ತರದ ಪ್ರದೇಶದಲ್ಲಿದೆ. ವಿಶ್ವದಲ್ಲೇ ಈ ಸರೋವರವನ್ನು ಸಂಚಾರಿ ಯೋಗ್ಯ ಸರೋವರ ಎಂದು ಗುರುತಿಸಲಾಗಿದೆ. ಪೆರೂವಿನಿಂದ ಬೊಲಿವಿಯನ್ ಕಡೆಗೆ ಹಾಗೂ ವಿರುದ್ದ ದಿಕ್ಕಿನಲ್ಲಿ ಸರಕು ಸರಂಜಾಮು ಮತ್ತು ಪ್ರಯಾಣಿಕರನ್ನು ಸಾಗಿಸಲು ಇದು ಅತ್ಯುಪಯುಕ್ತ ಸರೋವರ. ಎಲ್ಲಾ ರೀತಿಯ ವಾಣಿಜ್ಯ ಹಡಗುಗಳು ಇದರ ಉಪಯೋಗವನ್ನು ಪಡೆಯುತ್ತದೆ.

ಇತಿಹಾಸ ಪೂರ‍್ವದಲ್ಲಿ ಈ ಸರೋವರದ ಸುತ್ತಲೂ ವಾಸಿಸುವ ಸ್ತಳೀಯರು ಟೊಟೊರಾ ಎಂಬ ನದಿ ನೀರಿನಲ್ಲಿ ಬೆಳೆಯುವ ಜೊಂಡಿನಿಂದ ಮಾಡಿದ ದೋಣಿಗಳನ್ನು ಬಳಸಿ ಸಂಚರಿಸುತ್ತಿದ್ದರು. ಟೊಟೊರಾ ಜೊಂಡು ಟಿಟಿಕಾಕಾ ಸರೋವರದ ನೀರಿನಲ್ಲಿ ಹೇರಳವಾಗಿ ಬೆಳೆಯುತ್ತಿದ್ದ ಕಾರಣ ಅದರ ಸದುಪಯೋಗ ಮಾಡಿಕೊಂಡಿದ್ದರು. ಇದೇ ಜೊಂಡನ್ನು ಉಪಯೋಗಿಸಿಕೊಂಡು ಸಣ್ಣ ಸಣ್ಣ ತೇಲಾಡುವ ದ್ವೀಪಗಳನ್ನೂ ಸಹ ಅವರು ವಿನ್ಯಾಸಗೊಳಿಸಿದ್ದರು. ಯೂರೋಪಿಯನ್ ವಸಾಹತುಗಾರರು ಇಲ್ಲಿಗೆ ಲಗ್ಗೆಯಿಟ್ಟಾಗ, ಸ್ಪ್ಯಾನಿಶ್ ದೇಶದವರು ಮರದ ದೋಣಿಗಳನ್ನು ಪರಿಚಯಿಸಿದರು. ನಂತರದ ವರ‍್ಶಗಳಲ್ಲಿ, ಅಂದರೆ 19ನೇ ಶತಮಾನದಲ್ಲಿ ಕಬ್ಬಿಣದ ಹಡಗುಗಳು, ಜೊಂಡಿನ ಮತ್ತು ಮರದ ದೋಣಿಗಳ ಸ್ತಳವನ್ನು ಕ್ರಮೇಣ ಆಕ್ರಮಿಸಿಕೊಂಡಿತು. ಈ ಸಮಯದಲ್ಲಿನ ದೋಣಿಗಳಲ್ಲಿ ಒಂದಾದ ‘ಯಾಪುರಾ’ವನ್ನು ಪೆರುವಿಯನ್ ನೌಕಾಪಡೆಯು ಇಂದಿಗೂ ಬಳಸಲಾಗುತ್ತಿದೆ. ಅದಕ್ಕೆ ‘ಬಿಎಪಿ ಪುನೋ’ ಎಂದು ಪುನರ್ ನಾಮಕರಣ ಮಾಡಲಾಗಿದೆ.

1861ರಲ್ಲ್ಲಿ ಪೆರೂವಿಯನ್ ಸರ‍್ಕಾರವು ‘ಯಾಪುರಾ’ ಮತ್ತು ‘ಯಾವರಿ’ ಹಡುಗುಗಳ ನಿರ‍್ಮಾಣಕ್ಕೆ ಹಸಿರು ನಿಶಾನೆ ತೋರಿಸಿತು. ಇವುಗಳ ತಯಾರಿಕಾ ಗುತ್ತಿಗೆಯನ್ನು ಬರ‍್ಮಿಂಗ್‌ಹ್ಯಾಮ್‍ನಲ್ಲಿನ ಜೇಮ್ಸ್ ವ್ಯಾಟ್ ಪೌಂಡ್ರಿಯು ಪಡೆಯಿತು. ಈ ಗುತ್ತಿಗೆದಾರರು ಆರಂಬದಲ್ಲಿ ನಿರ‍್ಮಾಣ ಪೂರ‍್ಣಗೊಳಿಸಲು ಆರು ತಿಂಗಳ ಅವದಿಯ ಬೇಡಿಕೆಯಿಟ್ಟಿದ್ದರು. ಆದರೆ ತಯಾರಾದ ಈ 210 ಟನ್ ಲೋಹದ ಹಡುಗನ್ನು ಸರಿಯಾದ ಕ್ರಮದಲ್ಲಿ ಬಿಚ್ಚಿ, ಟಿಟಿಕಾಕಾ ಸರೋವರಕ್ಕೆ ತಂದು, ಅದನ್ನು ಮತ್ತೆ ಜೋಡಿಸುವುದು ಪ್ರಯಾಸಕರ ಕೆಲಸವಾಗಿತ್ತು. 3800 ಮೀಟರ್ ಎತ್ತರಕ್ಕೆ ಇಶ್ಟು ತೂಕದ ಬಾಗಗಳನ್ನು ಸಾಗಿಸಲು ಹೇಸರಗತ್ತೆ ಮತ್ತು ಕೂಲಿ ಆಳುಗಳನ್ನು ಬಳಸಬೇಕಾದ ಅನಿವಾರ‍್ಯತೆ ಇತ್ತು. ಈ ಕಾರ‍್ಯ ನಿರ‍್ವಹಿಸಲು ಗುತ್ತಿಗೆದಾರ ಕಂಪನಿಗೆ ತಲೆನೋವಾಯ್ತು. ತಯಾರಾದ ಹಡುಗನ್ನು ಸಣ್ಣ ಸಣ್ಣ ಬಾಗಗಳಾಗಿ ವಿಂಗಡಿಸಿ ತಕ್ನಾ ಮತ್ತು ಪುನೋ ನಡುವಿನ ಪ್ರದೇಶದಲ್ಲಿ ಶೇಕರಿಸಿ ಇಡಲಾಯಿತು.

ಇವುಗಳಿಗೆ ಪುಟವಿಟ್ಟಂತೆ, ಅಲ್ಲಿ ಸಂಬವಿಸಿದ ಬೂಕಂಪ, ರೈತರ ದಂಗೆ, ಪೆರೂವಿನ ಮೇಲೆ ಸ್ಪಾನಿಶ್‍ರ ಎರಡನೇ ಆಕ್ರಮಣ ಮತ್ತಶ್ಟು ವಿಳಂಬಕ್ಕೆ ಕಾರಣವಾಯಿತು. ಇವೆಲ್ಲವುಗಳನ್ನು ಮೆಟ್ಟಿನಿಂತ ಮೇಲೆ 1870ರ ಕ್ರಿಸ್‌ಮಸ್ ದಿನದಂದು ಮೊದಲ ಹಡಗು ‘ಯವಾರಿ’ ಲೋಕಾರ‍್ಪಣೆಯಾಯಿತು. ಇದಾದ ಹದಿನೈದು ತಿಂಗಳ ನಂತರ, ಅಂದರೆ 1872ರಲ್ಲಿ ಎರಡನೇ ಹಡಗು ‘ಯಾಪುರಾ’ ತನ್ನ ಯಾನವನ್ನು ಪ್ರಾರಂಬಿಸಿತು. ಯಾಪುರಾ ಮತ್ತು ಯವಾರಿ ಹಡಗುಗಳ ವಿನ್ಯಾಸದಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ. ಉದ್ದದಲ್ಲಿ ಎರಡೂ 100 ಮೀಟರ್ ಉದ್ದವಿತ್ತು. 60 ಅಶ್ವಶಕ್ತಿ, ಎರಡು ಸಿಲೆಂಡರ್ ಸ್ಟೀಮ್ ಇಂಜಿನ್ ಅನ್ನು ಅವುಗಳಿಗೆ ಅಳವಡಿಸಲಾಗಿತ್ತು. ಇಂಜಿನ್ ಹಬೆಯಿಂದ ಚಲಿಸುತ್ತಿದ್ದ ಕಾರಣ, ಹಬೆಯ ಉತ್ಪಾದನೆಗೆ ಸ್ತಳೀಯರು ಉರುವಲಾಗಿ ‘ಲಾಮಾ’ ಸಗಣಿಯನ್ನು ಬಳಸುತ್ತಿದ್ದದು ವಿಶೇಶ. ಯವಾರಿಯನ್ನು 1914ರಲ್ಲಿ ನವೀಕರಣಗೊಳಿಸಿ ಹೊಸ ಇಂಜಿನ್ ಅಳವಡಿಸಲಾಯಿತು. ನಂತರದ ದಿನಗಳಲ್ಲಿ ಇವುಗಳ ನಿರ‍್ವಹಣೆಗೆ ಪೆರೋವಿಯನ್ ನೌಕಾಪಡೆಯಲ್ಲಿ ಹಣವಿಲ್ಲದೆ ಹೋದಾಗ ಯವಾರಿಯನ್ನು ನಿವ್ರುತ್ತಿಗೊಳಿಸಲಾಯಿತು. ಯಾಪುರಾವನ್ನು ಆಸ್ಪತ್ರೆಯನ್ನಾಗಿ ಪರಿವರ‍್ತಿಸಲಾಯಿತು. ಪರಿವರ‍್ತಿತ ಹಡಗಿಗೆ ‘ಬಿಎಪಿ ಪುನೋ’ ಎಂದು ಪುನರ್ ನಾಮಕರಣ ಮಾಡಿದ್ದು, ಈಗಲೂ ಇದು ಸುತ್ತ ಮುತ್ತಲಿನ ಹಳ್ಳಿಯಲ್ಲಿ ವಾಸಿಸುವ ಸಮುದಾಯಗಳಿಗೆ ವೈದ್ಯಕೀಯ ಸೇವೆಯನ್ನು ಒದಗಿಸುತ್ತಿದೆ. 1987ರಲ್ಲಿ ಯವಾರಿಯನ್ನು ಲಾಬರಹಿತ ಸಂಸ್ತೆಯೊಂದು ಕರೀದಿಸಿ, ಅದನ್ನು ಸಂಗ್ರಹಾಲಯವನ್ನಾಗಿ ಪರಿವರ‍್ತಿಸಿತು. ಅದೂ ಸಹ ಈಗ ಪುನೋ ಕೊಲ್ಲಿಯಲ್ಲಿ ಬೀಡುಬಿಟ್ಟಿದೆ.

(ಮಾಹಿತಿ ಸೆಲೆ: amusingplanet.com, theguardian.com)

(ಚಿತ್ರ ಸೆಲೆ: amusingplanet.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: