ಕ್ರಿಸ್ಮಸ್,christmass

ಕ್ರಿಸ್ಮಸ್ ಹಿರಿಮೆ ಸಾರುವ ಹಾಡು!

– ಅಜಯ್ ರಾಜ್.

ಕ್ರಿಸ್ಮಸ್,christmass

ಡಿಸೆಂಬರ್ ತಿಂಗಳು ಬಂತೆಂದರೆ ಸಾಕು ಕ್ರಿಸ್ಮಸ್ ಹತ್ತಿರದಲ್ಲಿದೆ ಎನ್ನುವ ಬೆಚ್ಚಗಿನ ಬಾವ ನಮ್ಮನ್ನು ಆವರಿಸಿಕೊಂಡುಬಿಡುತ್ತದೆ. ನಮಗೆಲ್ಲರಿಗೂ ತಿಳಿದಿರುವಂತೆ ಕ್ರಿಸ್ಮಸ್ ಹಬ್ಬ ಎಂದರೆ ಯೇಸುಕ್ರಿಸ್ತನ ಹುಟ್ಟುಹಬ್ಬ. ಕ್ರೈಸ್ತರ ಅತಿ ದೊಡ್ಡ ಹಬ್ಬಗಳಲ್ಲಿ ಒಂದು. ತಿಂಗಳ ದಿನಗಳು ಕಳೆದಂತೆಲ್ಲಾ ಜಗಮಗಿಸುವ ದೀಪಾಲಂಕಾರಗಳು, ನಕ್ಶತ್ರಗಳು, ಕೇಕ್, ಚಾಕೊಲೇಟ್ ಮತ್ತು ಇನ್ನಿತರ ಸಿಹಿತಿಂಡಿಗಳು ಹಬ್ಬದ ವಾತಾವರಣವನ್ನು ಉಂಟುಮಾಡುತ್ತವೆ. ಇನ್ನು ಕ್ರೈಸ್ತರ ಮನೆಗಳಲ್ಲಂತೂ ಪುಟ್ಟ ಪುಟ್ಟ ಕ್ರಿಸ್ಮಸ್ ಗುಡಿಸಲುಗಳು ಮತ್ತು ಕ್ರಿಸ್ಮಸ್ ಟ್ರೀಗಳು ಕಡ್ಡಾಯವಾಗಿರುತ್ತವೆ. ಇಡೀ ಪ್ರಂಪಂಚವೇ ಕ್ರಿಸ್ಮಸ್ ಹಬ್ಬವನ್ನು ಸಂಬ್ರಮದಿಂದ ಆಚರಿಸುತ್ತದೆ.

ಕ್ರಿಸ್ಮಸ್ ಹಬ್ಬದ ಮತ್ತೊಂದು ವಿಶಿಶ್ಟವೆಂದರೆ ಕ್ಯಾರಲ್ಸ್. ಅಂದರೆ ಕ್ರಿಸ್ತನ ಜನನದ ಕತಾನಕವನ್ನು ಹೊಂದಿರುವ ಗೀತೆಗಳು. ಇಂತಹ ಗೀತೆಗಳಲ್ಲಿ ಸುಪ್ರಸಿದ್ದವಾದ ಒಂದು ಗೀತೆಯ ಬಗ್ಗೆಯೇ ನಾನು ಹೇಳ ಹೊರಟಿರುವುದು. ಹೌದು, ಅದು ಸೈಲೆಂಟ್ ನೈಟ್ ಹೋಲಿ ನೈಟ್ ಎಂಬ ಅತಿ ಮದುರ ಮಹೋನ್ನತ ಗೀತೆ. ಜಗತ್ತಿನ ಸುಮಾರು ಮುನ್ನೂರಕ್ಕೂ ಹೆಚ್ಚು ಬಾಶೆ, ಉಪಬಾಶೆಗಳಿಗೆ ಅನುವಾದವಾಗಿರುವ ಈ ಗೀತೆಯನ್ನು ಬಹುಶಹ ಕೇಳದವರೇ ಇಲ್ಲ ಎನ್ನಬಹುದು. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕ, ಮುದುಕರಾದಿಯಾಗಿ ಈ ಹಾಡನ್ನು ಕೇಳಿಸಿಕೊಂಡಾಕ್ಶಣ ಎಲ್ಲರೂ ಗುನುಗುತ್ತಾರೆ. ಮೂಲತಹ ಜರ‍್ಮನ್ ಬಾಶೆಯಲ್ಲಿ ರಚಿತವಾದ ಈ ಹಾಡಿನ ಸ್ವರ ಮಾದುರ‍್ಯಕ್ಕೆ ಮನಸೋಲದವರೇ ಇಲ್ಲ. ಈ ಸುಂದರ, ಸುಶ್ರಾವ್ಯ ಗೀತೆಯು ಹುಟ್ಟಿದ ಬಗೆಯೇ ಒಂದು ರೋಚಕ ಕತೆ.

ಒಬೆರ‍್ನಡಾರ್ ಎಂಬುದು ಆಸ್ಟ್ರಿಯಾ ದೇಶದ ಜರ‍್ಮನ್ ಮನೆಮಾತಿನ ಒಂದು ಪುಟ್ಟ ಹಳ್ಳಿ. 1818 ರ ಡಿಸೆಂಬರ್ ತಿಂಗಳಿನ ಚಳಿಗಾಲ. ಅಲ್ಲಿನ ಬೀಕರ ಚಳಿಗೆ ಹಳ್ಳಿಯ ಪಕ್ಕದ ಸಾಲ್ಜ್ ಹೊಳೆಯು ಹೆಪ್ಪುಗಟ್ಟುತ್ತಿದ್ದ ಸಮಯ. ಹಳ್ಳಿಯ ಸಂತ ನಿಕೋಲಾಸ್ ಚರ‍್ಚು ಕ್ರಿಸ್ತ ಜಯಂತಿಯ ಆಚರಣೆಗೆ ಸಿದ್ದವಾಗುತ್ತಿತ್ತು. ಅಲ್ಲಿನ ಚರ‍್ಚಿನ ಪಾದ್ರಿ ಪಾದರ್ ಜೋಸೇಪ್ ಮೊಹ್ರ್ ಇನ್ನು ತರುಣ. ಆತ ಆ ಚರ‍್ಚಿಗೆ ಬಂದು ಕೇವಲ ಒಂದು ವರ‍್ಶವಾಗಿತ್ತಶ್ಟೇ. ಮದ್ಯರಾತ್ರಿಯ ಪೂಜೆಗೆ ಸಕಲ ಸಿದ್ದತೆಯನ್ನು ಕೈಗೊಳ್ಳಲು ಎರಡು ತಾಸು ಮುಂಚಿತವಾಗಿಯೇ ಚರ‍್ಚಿನೊಳಗೆ ಆಗಮಿಸಿದ ಪಾದರ್ ಮೊಹ್ರ್ ದೊಡ್ಡ ಹಬ್ಬಗಳಿಗೆಂದೇ ಉಪಯೋಗಿಸಲ್ಪಡುತ್ತಿದ್ದ ಚರ‍್ಚಿನ ಪೈಪ್ ಆರ‍್ಗಾನಿನ ಮೇಲೆ ಮೆಲ್ಲನೆ ಕೈಯಾಡಿಸಿ, ಅದರ ಮೇಲಿದ್ದ ದೂಳನ್ನೆಲ್ಲಾ ಬಹಳ ನಾಜೂಕಾಗಿ ಒರೆಸಿ, ಬಹಳ ಅಬಿಮಾನ ಮತ್ತು ಹೆಮ್ಮೆಯಿಂದ ನುಡಿಸಲು ಪ್ರಾರಂಬಿಸುತ್ತಾರೆ. ಆದರೆ, ಆ ಪೈಪ್ ಆರ‍್ಗಾನಿನಿಂದ ಶಬ್ದವೇ ಹೊರಡುವುದಿಲ್ಲ. ಮೂರು ದಿನಗಳ ಹಿಂದೆಯಶ್ಟೇ ನಗರದಿಂದ ವೀಣಾವಾದಕನನ್ನು ಕರೆಸಿ, ರಿಪೇರಿ ಮಾಡಿಸಿಟ್ಟಿದ್ದ ಪೈಪ್ ಆರ‍್ಗಾನ್ ಇನ್ನೇನು ಕ್ರಿಸ್ತ ಜಯಂತಿಗೆ ಇನ್ನೆರಡು ತಾಸು ಉಳಿದಿದೆ ಎನ್ನುವಶ್ಟರಲ್ಲಿ ಶಬ್ದವನ್ನೇ ಹೊರಡಿಸುತ್ತಿಲ್ಲವೆಂಬುದನ್ನು ತಿಳಿದು ಪಾದರ್ ಮೊಹ್ರ್ ದಿಗ್ಬ್ರಾಂತರಾಗುತ್ತಾರೆ. ಕೊಂಚ ಸವಾರಿಸಿಕೊಂಡ ನಂತರ, ಒಮ್ಮಲೆ ಏನೋ ಹೊಳೆದಂತಾಗಿ ಪಕ್ಕದೂರಿನ ಪ್ರಾಂಜ್ ಜೇವೆರ್ ಗ್ರುಬೇರ್ ಎಂಬ ಸ್ಕೂಲ್ ಮೇಶ್ಟ್ರ ಮನೆಗೆ ಆಗಮಿಸುತ್ತಾರೆ. ಪ್ರಾಂಜ್ ಜೇವೆರ್ ಗ್ರುಬೇರ್ ಅವರು ಕೇವಲ ಮೇಶ್ಟ್ರು ಮಾತ್ರ ಆಗಿರದೆ ಆರ‍್ಗನ್ ನಿಪುಣರೂ ಹಾಗೂ ಚರ‍್ಚಿನ ಗಾನ ವ್ರುಂದದ ಮುಕ್ಯಸ್ತರು ಆಗಿದ್ದರು. ಚರ‍್ಚಿನಲ್ಲಿ ನಡೆದಿರುವ ಅನಾಹುತವನ್ನು ಗ್ರುಬೇರ್ ಮೇಶ್ಟ್ರಿಗೆ ವಿವರಿಸಿದ ಪಾದರ್ ಮೊಹ್ರ್, ತಾನು ಒಂದೆರಡು ವರ‍್ಶಗಳ ಹಿಂದೆ ಕ್ರಿಸ್ಮಸ್‍ಗಾಗಿ ಗೀಚಿಟ್ಟುಕೊಂಡಿದ್ದ “ಸ್ಟಿಲ್ಲೇ ನಾಕ್ಟ್, ಹೈಲಿಗೆ ನಾಕ್ಟ್” ಎಂಬ ನಾಲ್ಕೈದು ಸಾಲುಗಳ ಪೇಪರನ್ನು ಅವರಿಗೆ ಕೊಟ್ಟು ಅದಕ್ಕೆ ರಾಗ ಸಂಯೋಜಿಸಿ ಕೊಡುವಂತೆ ದುಂಬಾಲು ಬೀಳುತ್ತಾರೆ. ಗ್ರುಬೇರ್ ತಮ್ಮ ಗಿಟಾರನ್ನು ತೆಗೆದುಕೊಂಡು ಗೀತಸಾಹಿತ್ಯದ ಮೇಲೆ ಕಣ್ಣಾಡಿಸುತ್ತಾ, ಯಾವುದೋ ಒಂದು ರಾಗವನ್ನು ಗುನುಗಿದಾಗ, ಆಶ್ಚರ‍್ಯವೆಂಬಂತೆ ಅಲ್ಲಿನ ಪದಗಳೆಲ್ಲಾ ಸುಲಲಿತವಾಗಿ ರಾಗಕ್ಕೆ ಮಿಳಿತವಾಗಿ ಅದೊಂದು ಸುಂದರ ಹಾಡಾಗಿ ರೂಪುಗೊಂಡಿತು.

ಇದನ್ನೇ ಅಂದು ಒಬೆರ‍್ನಡಾರ್ ಹಳ್ಳಿಯ ಚರ‍್ಚಿನಲ್ಲಿ ಕ್ರಿಸ್ತಜಯಂತಿಯ ಮದ್ಯರಾತ್ರಿ ಹಾಡಿದಾಗ, ಜನರೆಲ್ಲರೂ ಈ ಹಾಡನ್ನು ಮನದುಂಬಿ ಹಾಡಿ ಪುನೀತರಾದರು. ನಾವು ಈ ಹಾಡನ್ನು ಎಂದೂ ಮರೆಯಲಾರೆವು ಎಂದು ಹೇಳಿ ಮತ್ತೊಮ್ಮೆ ಗುನುಗಿದರು. ಅಲ್ಲಿಂದ ಎಶ್ಟೋ ದಿನಗಳವರೆಗೆ ಹಳ್ಳಿಯ ಜನರು ಈ ಹಾಡನ್ನು ಗುನುಗಿದ್ದೇ ಗುನುಗಿದ್ದು. ಈ ಮೊದಲೇ ಹೇಳಿದಂತೆ ಈ ಸುಂದರ ಸುಮದುರ ಗೀತೆ ಪ್ರಪಂಚದ ಸುಮಾರು ಮನ್ನೂರಕ್ಕೂ ಹೆಚ್ಚು ಬಾಶೆ, ಉಪಬಾಶೆಗಳಿಗೆ ಅನುವಾದಗೊಂಡಿದೆ.

ಇದಾಗಿ ಸುಮಾರು ನೂರು ವರ‍್ಶಗಳು ಕಳೆದವು. ಅದು 1914 ನೇ ಇಸವಿ. ಮೊದಲ ಮಹಾಯುದ್ದ ಪ್ರಾರಂಬವಾಗಿ ನಾಲ್ಕೈದು ತಿಂಗಳಾಗಿತ್ತು. ಜರ‍್ಮನ್ ಸಶಸ್ತ್ರ ಪಡೆಗಳು ಅದಾಗಲೇ ಯೂರೋಪಿನ ಬಹುಬಾಗವನ್ನು ಆಕ್ರಮಿಸಿಕೊಂಡಿದ್ದವು. ಇತ್ತ ಬ್ರಿಟಿಶ್ ಹಾಗೂ ಪ್ರೆಂಚ್ ಪಡೆಗಳು ಜಂಟಿಯಾಗಿ ಜರ‍್ಮನ್ ಸೇನೆಯನ್ನು ಹಿಮ್ಮೆಟ್ಟಿಸಲು ಹರಸಹಾಸ ಪಡುತ್ತಿದ್ದವು. ಈ ಸಂದರ‍್ಬದಲ್ಲಿ ಯುದ್ದದಲ್ಲಿ ನಿರತರಾಗಿದ್ದ ಸಾವಿರಾರು ಸೈನಿಕರ ಪತ್ನಿಯರು ಕ್ರಿಸ್ಮಸ್ ಹಬ್ಬಕ್ಕಾದರೂ ತಮ್ಮ ಗಂಡಂದಿರನ್ನು ಮನೆಗೆ ಕಳುಹಿಸಬೇಕೆಂದು ಸೇನಾದಿಪತಿಗಳಿಗೆ ಪತ್ರ ಬರೆದರೂ ಅವರ ಕೋರಿಕೆಯನ್ನು ಮನ್ನಿಸಲಿಲ್ಲ. ನೆನಪಿಡಿ, ಯುದ್ದದಲ್ಲಿ ಬಾಗವಹಿಸಿದ ಸಾವಿರಾರು ಸೈನಿಕರಲ್ಲಿ ಬಹುಪಾಲು ಚಿಗುರು ಮೀಸೆಯ, ಹದಿನೆಂಟು ತುಂಬದ ಹುಡುಗರೇ ಇದ್ದರು. ಇದಾಗ್ಯೂ ಅಂದಿನ ವಿಶ್ವಗುರುಗಳಾಗಿದ್ದ ಪೋಪ್ ಹದಿನೈದನೇ ಬೆನೆಡಿಕ್ಟರು ಕಡೇಪಕ್ಶ ಸಮ್ಮನಸ್ಸುಗಳು ಹಾಡುವ ಕ್ರಿಸ್ಮಸ್ ರಾತ್ರಿಯಲ್ಲಾದರೂ ಕದನ ವಿರಾಮ ಗೋಶಿಸಬೇಕು ಎಂದು ಮನವಿ ಮಾಡಿಕೊಂಡರೂ ಉಬಯ ಸೇನಾನಾಯಕರು ಅವರ ಮನವಿಯನ್ನು ತಳ್ಳಿಹಾಕಿದರು.

ಎರಡೂ ಸೇನಾ ಪಡೆಗಳ ನಡುವೆ ಒಂದು ವಿಶಾಲ ಯುದ್ದ ಬೂಮಿ. ಎರಡೂ ಬದಿಯ ಸೈನಿಕರು ಕಂದಕ ಅಗೆದು ಅದರಲ್ಲಿ ಹುದುಗಿಕೊಂಡು ವಿರೋದಿ ಪಡೆಗಳತ್ತ ಬಂದೂಕನ್ನು ಮುಕಮಾಡಿದ್ದರು. ಕಂದಕದಿಂದ ಕೊಂಚ ಮೇಲೆ ತಲೆ ಎತ್ತಿದರೂ ಸರಿಯೇ ಹಾರಿ ಬರುವ ಬಂದೂಕಿನ ಗುಂಡುಗಳಿಗೆ ಬಲಿಯಾಗಿಬಿಡುತ್ತಿದ್ದರು. ಇಂತಹ ವಿಶಮ ಸನ್ನಿವೇಶದಲ್ಲಿ ಕ್ರಿಸ್ಮಸ್ ಹಬ್ಬಕ್ಕೆ ಕೆಲವೇ ತಾಸುಗಳು ಬಾಕಿ ಇದ್ದವು. ಇನ್ನೇನು ಕ್ರಿಸ್ಮಸ್ ಗಳಿಗೆ ಬಂತು ಎನ್ನುವಶ್ಟರಲ್ಲಿ, ಯುದ್ದಬೂಮಿಯ ಮೌನದ ನಡುವೆ, ಬೀಸುತ್ತಿದ್ದ ಚುಮುಚುಮು ಕುಳಿರ‍್ಗಾಳಿಯ ಅಲೆಗಳಲ್ಲಿ ತೇಲಿಕೊಂಡು ಬಂದ ಒಂದು ರಾಗ ಬ್ರಿಟಿಶ್ – ಪ್ರೆಂಚ್ ಪಡೆಗಳ ಕಿವಿ ನಿಮಿರುವಂತೆ ಮಾಡಿತ್ತು. ಜರ‍್ಮನ್ ಕ್ಯಾಂಪಿನಿಂದ ಸೈನಿಕನೊಬ್ಬ ತನ್ನೆಲ್ಲಾ ದೈರ‍್ಯವನ್ನು ಒಟ್ಟುಮಾಡಿ ಕಂದಕದಿಂದ ಎದ್ದು “ಸ್ಟಿಲ್ಲೇ ನಾಕ್ಟ್… ಹೈಲಿಗೆ ನಾಕ್ಟ್” ಎಂದು ಬಾವಪರವಶನಾಗಿ ಹಾಡುತ್ತಿದ್ದ. ಇದಾದ ಕೆಲ ಕ್ಶಣಗಳಲ್ಲೇ ಅಚ್ಚರಿ ಎಂಬಂತೆ ಬ್ರಿಟಿಶ್ – ಪ್ರೆಂಚ್ ಪಡೆಗಳ ಕಂದಕದಿಂದ “ಆಲ್ ಇಸ್ ಕಾಮ್… ಆಲ್ ಇಸ್ ಬ್ರೈಟ್…” ಎಂಬ ಉತ್ತರ ಅದೇ ರಾಗದಲ್ಲಿ ಬಂತು. ಇದರ ಬೆನ್ನಲ್ಲೇ ಜರ‍್ಮನ್ ಸೈನಿಕರು ಹ್ಯಾಪಿ ಕ್ರಿಸ್‍ಮಸ್ ಎಂದು ಕೂಗಿದರೆ, ಬ್ರಿಟಿಶ್ ಸೈನಿಕರು ಪ್ರತ್ಯುತ್ತರವಾಗಿ ಮೆರ‍್ರಿ ಕ್ರಿಸ್ಮಸ್ ಎಂದು ಕೂಗಿದರು. ಆಗ ಉಬಯ ಸೇನೆಗಳ ಸೈನಿಕರು ಕಂದಕಗಳಿಂದ ಆಚೆಗೆ ಜಿಗಿದು ಪರಸ್ಪರ ಕ್ರಿಸ್ಮಸ್ ಶುಬಾಶಯಗಳನ್ನು ವಿನಿಮಯ ಮಾಡಿಕೊಂಡರಲ್ಲದೆ ತಮ್ಮಲ್ಲಿದ್ದ ಸಿಹಿಯನ್ನು ಹಂಚಿಕೊಂಡರು. ಎರಡೂ ಸೇನೆಗಳ ಸೇನಾದಿಪತಿಗಳು ಪ್ರೀತಿ ಮತ್ತು ಶಾಂತಿಯ ಗುರುತಾಗಿ ತಮ್ಮ ಕೋಟಿನ ಎರಡು ಗುಂಡಿಗಳನ್ನು ಕಿತ್ತು ಪರಸ್ಪರರ ಕೈಗಿತ್ತರು. ಇದೇ ಸಮಯದಲ್ಲಿ ಯುದ್ದ ಕೈದಿಗಳನ್ನು ಪರಸ್ಪರರಿಗೆ ಗೌರವಪೂರ‍್ವಕವಾಗಿ ಮರಳಿಸಲಾಯಿತು, ಯುದ್ದದಲ್ಲಿ ಗಾಯಗೊಂಡವರಿಗೆ ಉಪಶಮನ ದೊರೆಯಿತು ಹಾಗೂ ಎರಡೂ ಕಡೆ ಸತ್ತು ಅನಾತರಾಗಿ ಬಿದ್ದಿದ್ದ ಸೈನಿಕರ ಶವಗಳಿಗೆ ಗೌರವಪೂರ‍್ವಕ ಸಾಮೂಹಿಕ ಅಂತ್ಯಕ್ರಿಯೆ ನಡೆಸಲಾಯಿತು. ಹೀಗೆ ಇದುವರೆಗೂ ಕೇವಲ ಬಂದುಕೂ ಮತ್ತು ಪಿರಂಗಿಗಳೇ ಬೆಂಕಿಕಾರುತ್ತಿದ್ದ ರಣಾಂಗಣದಲ್ಲಿ ಶಾಂತಿ ಮತ್ತು ಪ್ರೀತಿಯ ಸಂಕೇತವಾದ ಮೇಣದ ಬತ್ತಿಗಳು ಹೊತ್ತಿಕೊಂಡವು. ಕ್ರಿಸ್ತನ ಜನನದ ಸಂದೇಶ ಅವರಲ್ಲಿ ಪ್ರತಿದ್ವನಿಸಿತ್ತು. ಅಲ್ಲಿಗೆ ಸೈಲೆಂಟ್ ನೈಟ್ ಎಂಬ ಹಾಡು ಮೊದಲನೇ ವಿಶ್ವಯುದ್ದವನ್ನು ತನ್ನ ಹ್ರುದಯಸ್ಪರ‍್ಶಿ ಆಲಾಪನೆಯ ಮೂಲಕ ತಾತ್ಕಾಲಿಕವಾಗಿ ನಿಲ್ಲಿಸಿತ್ತು. ಇಂದಿಗೂ ಸಹ ಈ ಸುಪ್ರಸಿದ್ದ ಹಾಡನ್ನು ವಿಶ್ವದೆಲ್ಲೆಡೆ ಅತ್ಯಂತ ಉಲ್ಲಾಸದಿಂದ ಹಾಡಲಾಗುತ್ತದೆ. ದೇಶ, ಆಚಾರ – ವಿಚಾರ, ದರ‍್ಮ – ಸಂಸ್ಕ್ರುತಿಗಳೆಲ್ಲವನ್ನು ಮೀರಿ ಕೇಳಿದವರಿಗೆ ಬರವಸೆಯನ್ನು, ಸುಪ್ತ ಸಾಂತ್ವನವನ್ನು ನೀಡುತ್ತಿರುವ ಈ ಸುಮದುರ ಗೀತೆಗೆ ಕಳೆದ ವರ‍್ಶವಶ್ಟೇ 200 ವರ‍್ಶ ತುಂಬಿತು.

ಈ ಹಾಡು ಕನ್ನಡದಲ್ಲಿಲ್ಲವೇ ಎಂಬ ಕುತೂಹಲ ನಿಮಗೆ ಇರಬಹುದು. ಹೌದು, ಈ ಹಾಡು ಕನ್ನಡಕ್ಕೂ ಸಹ ಅನುವಾದಗೊಂಡಿದೆ. ಸುಮಾರು 40 ವರ‍್ಶಗಳ ಹಿಂದೆ ಶ್ರೀಮತಿ ಸರಳ ಬ್ಲೇರ್ ಅವರು ಅನುವಾದಿಸಿದ ಈ ಸುಮದುರ ಗೀತೆ ಇಗೋ ನಿಮಗಾಗಿ! ಬನ್ನಿ, ನಾವೂ ಸೇರಿ ಹಾಡೋಣ…!

ಮಂಗಳಶ್ರೀ ರಾತ್ರಿಯಲಿ ಬೆತ್ಲೆಹೇಮ್ ಚತ್ರದಿ

ವರಕನ್ಯೆಯಲಿ ಜನಿಸಿದ

ದೇವಪುತ್ರನಂ ವಂದಿಸುವ

ವಂದನೆ ರಕ್ಶಕನೇ ವಂದನೆ ರಕ್ಶಕನೇ

ಮಂಗಳಶ್ರೀ ರಾತ್ರಿಯಲಿ ದೂತರು ಹೊಲದಿ

ಹಿಂಡುಕಾಯುವ ಕುರುಬರ‍್ಗೆ

ತಂದ ವಾರ‍್ತೆಯು ಶ್ರೇಶ್ಟವೇ

ಸ್ವಾಗತ ರಕ್ಶಕನೇ ಸ್ವಾಗತ ರಕ್ಶಕನೇ

(ಚಿತ್ರ ಸೆಲೆ: pixabay)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.