ಬೇಸಿಗೆ ಎದುರಿಸಲು ಅಣಿಯಾಗಿ
ಬ್ಯಾಸಗೀ ದಿವಸಕ ಬೇವಿನ ಮರ ತಂಪ
ಬೀಮಾರತಿಯೆಂಬ ಹೊಳಿ ತಂಪ
ನನ್ನವ್ವ ನೀ ತಂಪ ನನ್ನ ತವರೀಗೆ
ಇದು ಒಂದು ಜಾನಪದ ಗೀತೆಯ ಸಾಲು. ಮದುವೆಯಾಗಿ ಗಂಡನ ಮನೆಗೆ ಬಂದ ಹೆಣ್ಣೊಬ್ಬಳು ತನ್ನ ತವರನ್ನೂ, ಅಲ್ಲಿರುವ ತನ್ನ ತಾಯಿಯನ್ನು ನೆನೆದು ಹಾಡುತ್ತಾಳೆ. ಬೇಸಿಗೆ ದಿನಗಳಲ್ಲಿ ಬೇವಿನ ಮರದ ದಟ್ಟವಾದ ನೆರಳು ಬಿಸಿಲಿನಿಂದ ಕಂಗೆಟ್ಟ ಚಿಕ್ಕ ಪುಟ್ಟ ಹಕ್ಕಿಗಳಿಗೆ, ಉಸಿರಿಗಳಿಗೆ ತಂಪು ಕೊಟ್ಟು ಕಾಪಾಡುತ್ತದೆ. ತನ್ನ ತವರಿನಲ್ಲಿನ ತಾಯಿ ಕೂಡ ಹಾಗೆಯೇ ನನಗೆ ನೆರಳು ಕೊಡುತ್ತಾಳೆ ಅಂತ ಹಾಡಿದ್ದಾಳೆ.
ಬೇಸಿಗೆಯ ದಿನಗಳಲ್ಲಿ ಮೈಯೊಳಿತನ್ನು ಕಾಪಾಡುವದು ತುಂಬಾ ಮುಕ್ಯ. ಬೇಸಿಗೆಯಲ್ಲಿ ಬಿಸಿಲು ಹೆಚ್ಚಾಗಿ ನಮ್ಮ ಮೈಯ ತೊಗಲಿನಲ್ಲಿರುವ ಕಣ್ಣಿಗೆ ಕಾಣದ ತೂತುಗಳಿಂದ ನೀರನ್ನು ಆವಿಯಾಗಿಸುತ್ತಾ ತಂಪು ಮಾಡುತ್ತಾ ಇರುತ್ತದೆ. ಆಗ ನಮ್ಮ ಮೈಯಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಇದನ್ನು ಸರಿದೂಗಿಸಲು ನಾವು ನೀರನ್ನು ಮತ್ತು ನೀರಿನಂಶ ಹೆಚ್ಚಿರುವ ಹಣ್ಣು ಮತ್ತು ರಸಗಳನ್ನು ತೆಗೆದುಕೊಳ್ಳಬೇಕು. ಈ ಕುಡಿಗೆಗಳಲ್ಲಿನ(beverage) ಸಕ್ಕರೆ ಅಂಶ ನಮಗೆ ಕ್ಯಾಲೋರಿಗಳನ್ನು ಒದಗಿಸುತ್ತದೆ. ನೀರಿನಂಶ ಹೆಚ್ಚಿರುವ ಮತ್ತು ಬೇಸಿಗೆಗೆ ಹೇಳಿ ಮಾಡಿಸಿರುವ ಹಣ್ಣು ಮತ್ತು ಕುಡಿಗೆಗಳ ಬಗ್ಗೆ ತಿಳಿಯೋಣ.
ಕಬ್ಬಿನ ಹಾಲು
ಕಬ್ಬಿನ ಹೊಲಗಳಿಂದ ಕತ್ತರಿಸಿಕೊಂಡು ಬಂದ ಕಬ್ಬನ್ನು ಗಾಣಗಳಲ್ಲಿ ಹಿಂಡಿ ತೆಗೆಯುವ ಕಬ್ಬಿನ ಹಾಲು ಬೇಸಿಗೆಯಲ್ಲಿ ಮೈಸೆಕೆ ಓಡಿಸಲು ತುಂಬಾ ನೆರವಿಗೆ ಬರುತ್ತದೆ. ಪ್ಯಾಕ್ಟರಿಗಳಲ್ಲಿ ತಯಾರಾದ ಕ್ರುತಕ ತಂಪು ಕುಡಿತಗಳ ಬದಲಿಗೆ ಕಬ್ಬಿನಹಾಲು ಕುಡಿಯಬೇಕು. ನಿಂಬೆಹಣ್ಣು, ಶುಂಟಿ ಮಂಜುಗಡ್ಡೆ ಸೇರಿಸಿದ ಕಬ್ಬಿನಹಾಲು ಕುಡಿಯುವಾಗ ಬೇಸಿಗೆಯನ್ನು ಮರೆತು ಹೋಗುವಿರಿ. ಕಬ್ಬಿನಹಾಲು ಹಿಂಡಿದ ಮೇಲೆ ಒಂದು ಗಂಟೆಯೊಳಗೆ ಅದನ್ನು ಕುಡಿಯಬೇಕು. ಒಂದು ಗಂಟೆ ಆದ ಮೇಲೆ ಅದರಲ್ಲಿ ಹುಳಿ ಬರುತ್ತದೆ. ಊಟ ಮಾಡುವದಕ್ಕಿಂತ ಒಂದು ಗಂಟೆ ಮೊದಲು ಕಬ್ಬಿನಹಾಲು ಕುಡಿಯಬೇಕು. ಊಟವಾದ ಮೇಲೆ ಇದನ್ನು ಕುಡಿಯಬಾರದು. ಆಲೆಮನೆಯಲ್ಲಿ ಬೆಲ್ಲ ತಯಾರು ಆಗುವಾಗ ಹಾಲು ಆವಿಯಾಗುತ್ತಾ ಕಂದು ಬಣ್ಣದ ತಿಳಿಯಾದ ಪಾಕ ಆಗುತ್ತದೆ ಇದನ್ನು ‘ಚೀಕು’ ಎನ್ನುತ್ತಾರೆ. ಇದು ಬೆಲ್ಲವಲ್ಲ ಆದರೆ ಬೆಲ್ಲವಾಗುವ ಮೊದಲ ಹಂತ. ಈ ಚೀಕನ್ನು ಇನ್ನಶ್ಟು ಕುದಿಸಿ ತಣಿಸಿದಾಗ ಅದು ಬೆಲ್ಲವಾಗುತ್ತದೆ. ಕಬ್ಬಿನ ಹಾಲು ಸಿಗದಿದ್ದಾಗ, ಒಂದು ಗ್ಲಾಸು ನೀರಿಗೆ ಬೆಲ್ಲ, ನಿಂಬೆಹಣ್ಣು ರಸ ಸ್ವಲ್ಪ ಸೇರಿಸಿ ಬೆಲ್ಲದ ರಸ್ನಾ ಮಾಡಿಕೊಂಡು ಕುಡಿಯಬಹುದು. ಬೆಲ್ಲದಲ್ಲಿ ನಮಗೆ ಬೇಕಾದ ಕಬ್ಬಿಣಾಂಶ ಇದೆ. ಕಬ್ಬಿನಹಾಲು ಕಾಮಾಲೆ ರೋಗಕ್ಕೆ ಮದ್ದು ಎನ್ನುತ್ತಾರೆ. ಕಬ್ಬಿನ ಹಾಲಿನ ಹುಗ್ಗಿಯೂ ರುಚಿಕಟ್ಟಾಗಿ ಗಮ ಗಮವಾಗಿ ಇರುತ್ತದೆ. ಕಬ್ಬಿನ ಹಾಲಿನಲ್ಲಿ ಸಕ್ಕರೆ ಅಂಶ ಮತ್ತು ಕ್ಯಾಲೋರಿ ಹೇರಳವಾಗಿ ಇರುವದರಿಂದ ಡಯಾಬಿಟಿಸ್ ಇರುವವರು ಎಚ್ಚರಿಕೆಯಿಂದ ಬಳಸುವದು ಒಳ್ಳೇದು.
ಮಜ್ಜಿಗೆ
ಮಜ್ಜಿಗೆಯು ಮಳೆ-ಚಳಿ-ಬೇಸಿಗೆ ಎನ್ನದೆ ತೆಂಕಣ ಇಂಡಿಯಾದ ಊಟದಲ್ಲಿ ಸೇರಿಕೊಂಡು ಬಿಟ್ಟಿದೆ. ಬೇಸಿಗೆಯಲ್ಲಿ ಇದು ಇನ್ನಶ್ಟು ಒಲವುಳ್ಳದ್ದಾಗುತ್ತದೆ. ಬಿಸಿಲೆಂದು ಮನೆಯೊಳಗೆ ಬಂದಾಗ ಒಂದು ಗ್ಲಾಸು ಮಜ್ಜಿಗೆ ಸಿಕ್ಕಿತೆಂದರೆ ಆಯಾಸ ಕಡಿಮೆ ಆಗುತ್ತದೆ. ಸ್ವಲ್ಪ ಹುಳಿ ಇರುವ ಮಜ್ಜಿಗೆಗೆ ಹೆಚ್ಚಿದ ಕೊತ್ತಂಬರಿ ತಪ್ಪಲು, ಉಪ್ಪು , ಶುಂಟಿ-ಬೆಳ್ಳುಳ್ಳಿ ಪೇಸ್ಟ್ ಹಾಕಿದರೆ ರುಚಿಕಟ್ಟಾದ ಬೇಸಿಗೆ ಕುಡಿಗೆ ತಯಾರು ಆಗುತ್ತದೆ. ಇದನ್ನು ಕುಡಿದ ಮೇಲೆ ಮತ್ತೇನೂ ಕುಡಿಯಬೇಕಾಗಿಲ್ಲ! ಹಳ್ಳಿಯ ಕಡೆ ಕೆಲವರು ಮೂರು ದಿನ ಹುಳಿಯಾದ ಮಜ್ಜಿಗೆಗೆ ಉಪ್ಪು ಹಾಕದೆ ಕುಡಿಯುತ್ತಾರೆ. ಮಜ್ಜಿಗೆ ಆಯಸ್ಸು ಹೆಚ್ಚು ಮಾಡುತ್ತದೆ ಎನ್ನೋ ಕ್ಯಾತಿ ಗಳಿಸಿದೆ. ಬೇಸಿಗೆ ನಮ್ಮನ್ನು ಉರಿಸ ಬಂದರೆ ಮಜ್ಜಿಗೆ ನಮ್ಮನ್ನು ತಣಿಸ ಬರುತ್ತಾನೆ! ಮಜ್ಜಿಗೆ ಬಗ್ಗೆ ಹೇಳುತ್ತಾ ಹೋದರೆ ಒಂದು ದಿನ ಸಾಕಾಗದು. ಮಜ್ಜಿಗೆಗೆ ಕರಿಬೇವು, ಸಾಸಿವೆ, ಜೀರಿಗೆ ಒಗ್ಗರಣೆ ಕೊಟ್ಟಾಗ ಮಜ್ಜಿಗೆ ಹುಳಿ ಆಗುತ್ತದೆ. ಇದೇ ಮಜ್ಜಿಗೆಗೆ ಹಿಟ್ಟು ಹಾಕಿ ಕುದಿಸಿದಾಗ ಡಯಟ್ ಮಾಡುವವರ ಅಂಬಲಿ ಅಗುತ್ತದೆ. ಬೆಣ್ಣೆ ತೆಗೆಯದೇ ಸಕ್ಕರೆ ಸೇರಿಸಿದರೆ ಲಸ್ಸೀ ಆಗುತ್ತದೆ. 100 ಗ್ರಾಂ ಮಜ್ಜಿಗೆಯಲ್ಲಿ 40 ಕ್ಯಾಲೋರಿ ಶಕ್ತಿ ಇದೆ. ತೆಂಕಣ ಇಂಡಿಯಾದ ಊಟದ ಕೊನೆಗೆ ಮಜ್ಜಿಗೆ ಇದ್ದೇ ಇರುತ್ತದೆ. ಊಟವಾದ ಮೇಲೆ ಮಜ್ಜಿಗೆ ಕುಡಿಯದಿದ್ದರೆ ಕೆಲವರಿಗೆ ಏನೋ ಕಳೆದುಕೊಂಡ ಅನುಬವ ಆಗುತ್ತದೆ!
ನಿಂಬೆ ಹಣ್ಣು
ಚಿಕ್ಕವರಿದ್ದಾಗ ಬೇಸಿಗೆ ರಜದಲ್ಲಿ ಕ್ರಿಕೆಟ್ ಗ್ರೌಂಡಿನಿಂದ ಆಡಿ ಮನೆಗೆ ಬಂದಾಗ ನಿಂಬೆ ಹಣ್ಣಿನ ರಸ್ನಾ ಸಿಗುತ್ತಿತ್ತು. ಇದನ್ನು ಕುಡಿದ ಮೇಲೆ ಮೈ ಆಯಾಸವೆಲ್ಲಾ ಕಳೆದು ಬಿಡುತ್ತಿತ್ತು. ಚಿಕ್ಕಂದಿನ ಬೇಸಿಗೆ ರಜದ ಸಿಹಿ ನೆನಪುಗಳಲ್ಲಿ ಈ ನಿಂಬೆಹಣ್ಣಿನ ರಸ್ನಾ ಕೂಡ ಒಂದು. ಮಾಡುವುದು ತುಂಬಾ ಸುಲಬ. ನೀರಿಗೆ ನಿಂಬೆ ಹಣ್ಣಿನ ರಸ, ಸಕ್ಕರೆ ಮತ್ತು ಮಂಜುಗಡ್ಡೆ ಸೇರಿಸಿದರೆ ಆಯ್ತು. ತಾಜಾತನಕ್ಕೆ ಮತ್ತೊಂದು ಹೆಸರು ನಿಂಬೆಹಣ್ಣು. ಸಿಹಿ ಅಡುಗೆಗಳನ್ನು ಬಿಟ್ಟರೆ ಇದು ಎಲ್ಲಾ ತರಹದ ಊಟಗಳಲ್ಲಿ ಬಳಕೆಯಾಗುತ್ತದೆ. ಬೇಸಿಗೆಯಲ್ಲಿ ತಾಜಾತನದ ಅನುಬವ ಕೊಡುವ ಹಣ್ಣುಗಳಲ್ಲಿ ನಿಂಬೆಗೆ ಮೊದಲ ಜಾಗ. ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಮೈತೊಗಲಿನ ಆರೋಗ್ಯಕ್ಕೆ ವಿಟಮಿನ್ ಸಿ ಬೇಕು. ನಮ್ಮಲ್ಲಿ ನಿಂಬೆ ಹಣ್ಣಿನ ರಸ್ನಾ ಮಾಡಿದರೆ ಅಮೆರಿಕದಲ್ಲಿ ಲೆಮನೇಡ್ ಅಂತ ಮಾಡುತ್ತಾರೆ. ಆನೆನಿಂಬೆಗೆ ಲೆಮನ್ ಅಂತ ಮತ್ತು ನಿಂಬೆಹಣ್ಣಿಗೆ ಲೈಮ್ ಅಂತ ಕರೆಯುತ್ತಾರೆ. ಇಟಲಿಯಲ್ಲಿ ದಪ್ಪ ಸಿಪ್ಪೆಯ ಲೆಮನ್ ಅನ್ನು ಬಳಸಿ ಲೆಮನಚೆಲ್ಲೋ ಅನ್ನೋ ಸಿಹಿ ಡ್ರಿಂಕ್ ಮಾಡುತ್ತಾರೆ. ನಿಂಬೆಯ ಪ್ರೆಶ್ ಗಮವು ಮನಸ್ಸನ್ನು ಅರಳಿಸಿ ತಾಜಾತನದ ಅನುಬವ ಕೊಟ್ಟು ಆಯಾಸವನ್ನು ನೀಗಿಸುತ್ತದೆ. ಮುಂಜಾನೆ ಒಂದು ಗ್ಲಾಸು ನೀರಿಗೆ ಅರ‍್ದ ನಿಂಬೆಹಣ್ಣು ಹಾಕಿ ಕುಡಿದರೆ ತೂಕ ಕಡಿಮೆಯಾಗುತ್ತದೆ ಅನ್ನುತ್ತಾರೆ. ನಿಂಬೆಯಲ್ಲಿ ಆ್ಯಂಟಾಸಿಡ್ ಗುಣವಿದೆ.
ಸೌತೆಕಾಯಿ
ಅಂಗೈಯಲ್ಲಿ ಹರಳುಪ್ಪು ಹಾಕಿಕೊಂಡು, ಅದರಲ್ಲಿ ಸೌತೆಕಾಯಿ ಅದ್ದುತ್ತಾ ಕರಕರನೇ ಆಡುಗಳ ಹಾಗೆ ಎಳೆ ಸೌತೆಕಾಯಿ ತಿನ್ನುತ್ತಿದ್ದ ಚಿಕ್ಕಂದಿನ ನೆನಪು ನನ್ನಲ್ಲಿ ಈಗಲೂ ನಗೆ ಉಕ್ಕಿಸುತ್ತದೆ. ಸೌತೆಕಾಯಿ ಜಗತ್ತಿನ ತುಂಬಾ ಹಳೆಯ ಬಳ್ಳಿ ತರಕಾರಿಗಳಲ್ಲಿ ಒಂದು. ಮೆಸೊಪೊಟೆಮಿಯಾದ ಹಳೆಯ ಪಟ್ಟಣವಾದ ಊರ್ ಎಂಬಲ್ಲಿ ಇದನ್ನು ಬೆಳೆಯುತ್ತಿದ್ದರು ಎಂದು ಅರಕೆಗಾರರು ಕಂಡು ಹಿಡಿದಿದ್ದಾರೆ. ಕನ್ನಡನಾಡಿನಲ್ಲಿ ಕೆಲವು ಕಡೆ ಇದನ್ನು ಮುಳ್ಳು ಸೌತೆಕಾಯಿ ಎಂದೂ ಕರೆಯುತ್ತಾರೆ. ಸೌತೆಕಾಯಿಯಲ್ಲಿ ನೀರಿನಂಶ ಹೇರಳವಾಗಿದೆ. ಬಂಡಿಯ ಮೇಲೆ ಮಾರುವವನು ಸೌತೆಕಾಯಿ ಮೇಲಿನ ಕಹಿ ಸಿಪ್ಪೆಯನ್ನು ಗೀರುಕದಿಂದ ತೆಗೆದು, ಅದನ್ನು ಕೊಯ್ದು ಉಪ್ಪು ಸವರಿ ಕೊಡುತ್ತಾನೆ. ಬಿರುಬಿಸಿಲಿನಲ್ಲಿ ಈ ಸೌತೆಕಾಯಿ ತಿನ್ನುವವರಿಗೆ ತಂಪು ಕೊಡುತ್ತದೆ. 100 ಗ್ರಾಂ ಸೌತೆಕಾಯಿ ಯಲ್ಲಿ 16 ಕ್ಯಾಲೋರಿ ಶಕ್ತಿ ಇದೆ ಮತ್ತು 95% ನೀರಿನಂಶ ಇದೆ. ಸೌತೆಕಾಯಿ ಕುಂಬಳಕಾಯಿ ಗುಂಪಿನ ತರಕಾರಿಗಳಲ್ಲಿ ಬರುತ್ತದೆ. ಸೌತೆಕಾಯಿ ಅಲ್ಕಲೈನ್ ತರಕಾರಿ ಆಗಿರುವದರಿಂದ ತುಂಬಾ ಹಸಿದಿರುವಾಗ ತಿನ್ನಬಾರದು. ಸೌತೆಕಾಯಿಯಲ್ಲಿ ಬಿಳಿ ಮತ್ತು ಗಾಡ ಹಚ್ಚನೆಯ ಬಣ್ಣದ್ದು ಅಂತ ಎರಡು ಬಗೆಗಳು ಇವೆ. ಎರಡರ ರುಚಿಯೂ ಹೆಚ್ಚೂ ಕಡಿಮೆ ಒಂದೇ ತರಹ ಇರುತ್ತದೆ. ಬಿಳಿ ಬಣ್ಣದ ಸೌತೆಕಾಯಿ ಮೆತ್ತಗಿದ್ದು ಗಾಡ ಹಸಿರು ಬಣ್ಣದ ಸೌತೆಗೆ ಹೋಲಿಸಿದರೆ ಸಿಹಿ ರುಚಿಯನ್ನು ಹೊಂದಿದೆ. ರೋಮಿನ ಎಂಪರರ್ ಟಿಬೆರಿಯಸ್ ನ ಊಟದ ಮೇಜಿನ ಮೇಲಿನ ದಿನಾಲೂ ಸೌತೆಕಾಯಿ ಇರಲೇ ಬೇಕಿತ್ತಂತೆ! ಬಿಸಿಲು ಕಡಿಮೆ ಬೀಳುವ ದೇಶ ಅದಾಗಿದ್ದರಿಂದ ಸೌತೆಕಾಯಿಯನ್ನು ಬಂಡಿಗಳ ಮೇಲೆ ಬೆಳೆಸುತ್ತಿದ್ದರಂತೆ. ಬಿಸಿಲು ಹೆಚ್ಚಾಗಿರುವ ಜಾಗಗಳ ಕಡೆ ಆ ಬಂಡಿಯನ್ನು ಎಳೆದುಕೊಂಡು ಹೋಗಿ ಅಲ್ಲಿ ನಿಲ್ಲಿಸುತ್ತಿದ್ದರು. ಸೌತೆಕಾಯಿ ಉಪ್ಪಿನಕಾಯಿಯು ಅಮೆರಿಕ ಬ್ರಿಟನ್ ಯುರೋಪುಗಳಲ್ಲಿ ತುಂಬಾ ಹೆಸರುವಾಸಿ.
ಕಲ್ಲಂಗಡಿ ಹಣ್ಣು
ತಿಂದಾಗ ಕಲ್ಲಂಗಡಿ ಹಣ್ಣಿನಶ್ಟು ಬೇಸಿಗೆಯಲ್ಲಿ ತ್ರುಪ್ತಿ ಕೊಡುವ ಹಣ್ಣು ಮತ್ತೊಂದಿಲ್ಲ. ಕಲ್ಲಂಗಡಿ ಹಣ್ಣನ್ನು ಸಿಹಿನೀರಿನ ಹಣ್ಣು ಅಂತ ಕರೆದರೂ ತಪ್ಪಾಗದು. ಬಾಯಾರಿದವರ ನೀರಡಿಕೆಯನ್ನು ಸೆಕೆಂಡುಗಳಲ್ಲಿ ನೀಗಿಸುತ್ತದೆ. ಬೇಸಿಗೆಯಲ್ಲಿನ ಅಪಾಯವೆಂದರೆ ನೀರ ಕೊರತೆ (dehydration) ಆಗುವುದು. ಇದನ್ನು ಕಲ್ಲಂಗಡಿ ಹಣ್ಣು ದೂರ ಮಾಡುತ್ತದೆ. ಕಲ್ಲಂಗಡಿ ಹಣ್ಣನ್ನು ಕೊಯ್ದು ಒಳಗಿನ ನೀರಿನ ತಿರುಳನ್ನು ತಿನ್ನಬಹುದು. ಇದರ ಜ್ಯೂಸ್ ಮಾಡಿ ಕುಡಿಯಬಹದು. ಹಣ್ಣಿನ ತಿರುಳು ಸಂಪೂರ‍್ಣ ನೀರೇ ಆಗಿರುವದರಿಂದ ಜ್ಯೂಸ್ ಮಾಡುವ ಅವಶ್ಯಕತೆ ಇರುವದಿಲ್ಲ. ಕಲ್ಲಂಗಡಿ ಹಣ್ಣಿನ ದಪ್ಪ ಸಿಪ್ಪೆಯಿಂದ ಪಲ್ಯ ಕೂಡ ಮಾಡುತ್ತಾರೆ. ತಿನ್ನಲು ಕುಂಬಳಕಾಯಿ ಪಲ್ಯದ ಹಾಗೇ ಇರುತ್ತದೆ. 100 ಗ್ರಾಂ ಕಲ್ಲಂಗಡಿ ಹಣ್ಣಿನಲ್ಲಿ 30 ಕ್ಯಾಲೋರಿ ಶಕ್ತಿ, 91% ನೀರಿನಂಶ, ವಿಟಮಿನ್ ಮತ್ತು ಮ್ಯಗ್ನೀಶಿಯಂ ಇದೆ. ಜಗತ್ತಿನ ಎಲ್ಲಾ ನಾಡುಗಳಲ್ಲಿ ಕಲ್ಲಂಗಡಿ ಬೆಳೆಸುತ್ತಾರೆ. ಇದರಲ್ಲಿ ಒಟ್ಟು 1000 ಹೆಚ್ಚು ತಳಿಗಳಿವೆ. ಪಡುವಣ ಆಪ್ರಿಕಾ ಕಲ್ಲಂಗಡಿಯತವರು. ಈಜಿಪ್ಟ್ ನಾಡಿನ ಪರೋಹನ ಗೋರಿಗಳಲ್ಲಿ ಕಲ್ಲಂಗಡಿ ಬೀಜಗಳು ಸಿಕ್ಕಿವೆ. ಅಂದರೆ ಪೇರೋಗಳ ಕಾಲದಲ್ಲಿ ಕಲ್ಲಂಗಡಿಯನ್ನು ಅಮೂಲ್ಯ ಎಂದು ಎಣಿಸಿದ್ದರು. 7ನೇ ನೂರೇಡಿನಲ್ಲಿ(century) ಕಲ್ಲಂಗಡಿ ಇಂಡಿಯಾಕ್ಕೆ ಬಂತು.
ಕಿತ್ತಳೆ/ಆರೆಂಜ್ ಹಣ್ಣು
ಸ್ಕೂಲಿನಲ್ಲಿ ಇಂಗ್ಲಿಶ್ ಕಲಿಯುವಾಗ ಓ ಪಾರ್ ಆರೆಂಜ್ ಅಂತ ಎಲ್ಲರೂ ಹೇಳಿದ್ದಾರೆ. ಜಿಮ್ ಮತ್ತು ಜಾಗಿಂಗ್ ಹೋಗುವವರ ಅಚ್ಚುಮೆಚ್ಚಿನ ಜ್ಯೂಸ್, ಅದೇ ಕಿತ್ತಳೆ ಜ್ಯೂಸ್. ಬೇಸಿಗೆಯಲ್ಲಿ ಪ್ರೆಶನೆಸ್ ಅಂದರೆ ಕಿತ್ತಳೆ ಹಣ್ಣು. ಬೇಸಿಗೆಯಲ್ಲಿ ಆರೆಂಜ್ ಹಣ್ಣು ಹೊಟ್ಟೆಗೆ ತಂಪೆರೆದರೆ ಆರೆಂಜ್ ಬಣ್ಣ ಕಣ್ಣುಗಳಿಗೆ ತಂಪು ಎರೆಯುತ್ತದೆ. ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಕಿತ್ತಳೆ ಹಣ್ಣನ್ನು ಇಶ್ಟಪಡದವರು ಇಲ್ಲ. ಇಟಲಿ, ಗ್ರೀಸ್, ಟರ‍್ಕಿಗಳಂತಹ ಮೆಡಿಟರೇನಿಯನ್ ನಾಡುಗಳು ಕಿತ್ತಳೆ, ನಿಂಬೆ, ಮ್ಯಾಂಡರಿನ್ ಮುಂತಾದ ಸಿಟ್ರಸ್ ಹಣ್ಣುಗಳನ್ನು ಬೆಳೆಸುವುದರಲ್ಲಿ ಮುಂದಿವೆ. ದಿನಾಲೂ ಒಂದು ಸಿಟ್ರಸ್ ಹಣ್ಣು ತಿಂದರೆ ಆರೋಗ್ಯಕ್ಕೆ ಒಳ್ಳೆಯದು. 100 ಗ್ರಾಂ ಕಿತ್ತಳೆ ಜ್ಯೂಸಿನಲ್ಲಿ 47 ಕ್ಯಾಲೋರಿ ಶಕ್ತಿ ಇದ್ದು, 86% ನೀರು, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಇದೆ. ಕಿತ್ತಳೆ ಹಣ್ಣಿನಲ್ಲಿ ಕಡು ಕೆಂಪು ಬಣ್ಣದ ತಿರುಳು ಹೊಂದಿದ ತಳಿಯೂ ಇದೆ. ಇದನ್ನು ಬ್ಲಡ್ ಆರೆಂಜ್ ಅಂತ ಕರೆಯುತ್ತಾರೆ. ಕೆಂಪು ಬಾಳೆ ರುಚಿಗೂ ಅರಿಸಿಣ ಬಾಳೆ ರುಚಿಗೂ ಹೇಗೆ ಬೇರ‍್ಮೆ ಇಲ್ಲವೋ ಹಾಗೆ ಕೆಂಪು ಕಿತ್ತಳೆಗೂ ಕಾಮನ್ ಕಿತ್ತಳೆಗೂ ರುಚಿಯಲ್ಲಿ ಬೇರ‍್ಮೆಯಿಲ್ಲ. ಕಿತ್ತಳೆ ಜ್ಯೂಸ್ ಮತ್ತು ಅದರ ಮೇಲಿನ ಸಿಪ್ಪೆ ಬಳಸಿ ಆರೆಂಜ್ ಮಾರ‍್ಮಲೇಡ್ ಎಂಬ ಗಮಗಮಿಸುವ ಕಿತ್ತಳೆ ಜ್ಯಾಮ್ ತಯಾರಿಸುತ್ತಾರೆ. ಕಿತ್ತಳೆ ಹಣ್ಣಿನ ಸಿಪ್ಪೆ (ಜೆಸ್ಟ್) ತುರಿದು ಕೇಕ್, ಪಾಯ್, ಟಾರ‍್ಟ ಮಾಡುವಾಗ ಹಾಕುತ್ತಾರೆ ಇದರಿಂದ ಅವಕ್ಕೆ ಆರೆಂಜ್ ಪರಿಮಳ ಬರುತ್ತದೆ. ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿ ಇರುವದ ರಿಂದ ಬೇಸಿಗೆಯಲ್ಲಿ ಬರುವ ಜ್ವರಕ್ಕೆ ಮತ್ತು ನೀರಿನ ಕೊರೆತೆಗೆ ಇದು ಪರಿಣಾಮಕಾರಿ ಮದ್ದು ಆಗಿದೆ.
(ಚಿತ್ರ ಸೆಲೆ: pxhere.com)
ಇತ್ತೀಚಿನ ಅನಿಸಿಕೆಗಳು