ಮಕ್ಕಳ ಕತೆ : ರಾಯರ ಕುದುರೆ ಕತ್ತೆ ಆಯ್ತು!

– ವೆಂಕಟೇಶ ಚಾಗಿ.

ಅನಂತಪುರ ಎಂಬ ಊರಿನಲ್ಲಿ ಅಬ್ಯುದರಾಯ ಎಂಬ ಶ್ರೀಮಂತ ವ್ಯಕ್ತಿ ವಾಸವಾಗಿದ್ದನು. ಅವನು ತನ್ನ ಸುಂದರವಾದ ಸಂಸಾರದೊಂದಿಗೆ ಉತ್ತಮ ಜೀವನ ನಡೆಸುತ್ತಾ ಸಂತೋಶದಿಂದ ಬದುಕುತ್ತಿದ್ದನು. ತನ್ನ ಸ್ನೇಹಿತರಿಗೆ ಹಾಗೂ ನಂಬಿಕಸ್ತರಿಗೆ ಕಾಳು-ಕಡ್ಡಿ ಅತವಾ ಹಣವನ್ನು ನೀಡಿ ಅವರ ದುಡಿಮೆಗೆ ನೆರವಾಗುತ್ತಿದ್ದನು. ಸಾಲ ಪಡೆದವರು ಕಾಲಕ್ಕೆ ಸರಿಯಾಗಿ ತಾವು ಪಡೆದ ವಸ್ತುಗಳನ್ನು ಅತವಾ ಹಣವನ್ನು ತಿರುಗಿಸುತ್ತಿದ್ದರು. ಅಲ್ಪ ಪ್ರಮಾಣದ ಬಡ್ಡಿಯನ್ನು ಪಡೆಯುತ್ತಾ ಯಾರಿಗೂ ನೋಯಿಸದೆ ವ್ಯವಹಾರವನ್ನು ನಡೆಸುತ್ತಿದ್ದನು.

ಅಬ್ಯುದರಾಯನಿಗೆ ಸಾಲವನ್ನು ಮರಳಿ ಕೇಳಲು ಊರಿಂದ ಊರಿಗೆ ಹೋಗಿ ಬರಲು ಒಂದು ಕುದುರೆಯ ಅವಶ್ಯಕತೆ ಉಂಟಾಯಿತು. ‘ಒಂದು ಉತ್ತಮವಾದ ಕುದುರೆಯನ್ನು ಕೊಂಡುಕೊಳ್ಳಿ ರಾಯರೇ, ನಿಮಗೆ ಸಹಾಯವಾಗುತ್ತದೆ ‘ ಎಂದು ಮಂದಿ ಅವನಿಗೆ ಸಲಹೆಯಿತ್ತರು. ಅದರಂತೆ ಶ್ರೀಮಂತನು ಪಕ್ಕದ ಊರಿಗೆ ಹೋಗಿ ಒಂದು ದಶ್ಟಪುಶ್ಟವಾದ, ಸುಂದರವಾದ ಕುದುರೆಯನ್ನು ಕೊಂಡು ತಂದನು. ಕುದುರೆಯನ್ನು ತಂದ ಮೊದಲಲ್ಲಿ ಅದನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದನು. ಹೊತ್ತಿಗೆ ಸರಿಯಾಗಿ ಊಟ, ನಿದ್ದೆ, ಸ್ನಾನ – ಹೀಗೆ ಕುದುರೆಗೆ ಯಾವುದೇ ಕೊರತೆ ಉಂಟಾಗದಂತೆ ನೋಡಿಕೊಂಡನು. ಪಕ್ಕದ ಊರುಗಳಿಗೆ ಹೋಗುವಾಗ ಶ್ರೀಮಂತನೂ ಕುದುರೆಯ ಮೇಲೆ ಹತ್ತಿ ದೂರದ ಊರುಗಳಿಗೆ ಪ್ರಯಾಣ ಮಾಡಿ ಕೆಲಸ ಕಾರ‍್ಯಗಳನ್ನು ಮುಗಿಸಿದ ನಂತರ ಮನೆಗೆ ಹಿಂದಿರುಗುತ್ತಿದ್ದ.

ಕುದುರೆಯು ಎಲ್ಲಾ ಕಾರ‍್ಯಗಳಿಗೆ ಸಹಾಯವನ್ನು ನೀಡುತ್ತಾ ಇರುವುದರಿಂದ ಅಬ್ಯುದರಾಯನ ಕೆಲಸಕಾರ‍್ಯಗಳು ಸುಗಮವಾಗತೊಡಗಿದವು. ಇದರಿಂದಾಗಿ ಇನ್ನೂ ಹೆಚ್ಚು ಹೆಚ್ಚು ಕೆಲಸಗಳನ್ನು ವಹಿಸಿಕೊಂಡನು. ವ್ಯವಹಾರವು ಹೆಚ್ಚಿದಂತೆ ಅಬ್ಯುದರಾಯನ ಬಳಿ ಹಣವೂ ಹೆಚ್ಚತೊಡಗಿತು. ಹಣದ ಮೋಹ ಹೆಚ್ಚಿತು. ಇದರಿಂದಾಗಿ ಕುದುರೆಗೆ ಕೆಲಸಗಳು ಹೆಚ್ಚಿದವು. ವಿಶ್ರಾಂತಿ ಇಲ್ಲದೇ ಕುದುರೆಯು ಪ್ರತಿದಿನ ಪ್ರಯಾಣ ಕೈಗೊಳ್ಳಬೇಕಾಯಿತು. ಅಬ್ಯುದರಾಯನು ಕುದುರೆಯನ್ನು ಮೊದಲಿನಂತೆ ನೋಡಿಕೊಳ್ಳದೇ ಅಪೂರ‍್ಣ ಆಹಾರ, ಅವಿಶ್ರಾಂತ ಕೆಲಸ, ಅನಾರೋಗ್ಯದಲ್ಲೂ ಕೆಲಸಕ್ಕೆ ತೊಡಗಿಸುವುದು ಹಾಗೂ ಸರಿಯಾದ ಉಪಚಾರ ಮಾಡದಿದ್ದದ್ದರಿಂದ ಕುದುರೆಯು ಮೊದಲಿನ ಹಾಗೆ ಕೆಲಸದಲ್ಲಿ ಶ್ರದ್ದೆ ಆಸಕ್ತಿಯನ್ನು ತೋರಿಸಲಿಲ್ಲ. ಅಬ್ಯುದರಾಯನು ಕುದುರೆಯು ಮೊದಲಿನ ಹಾಗೆ ಕೆಲಸದಲ್ಲಿ ಆಸಕ್ತಿಯನ್ನು ತೋರಿಸುತ್ತಿಲ್ಲವೆಂದು ಸಿಡಿಮಿಡಿಗೊಳ್ಳುತ್ತಾ ಕುದುರೆಗೆ ಸರಿಯಾಗಿ ಆಹಾರ ನೀಡದೇ ತಳಿಸುತ್ತಿದ್ದನು. ಎಲ್ಲರೂ ‘ರಾಯರ ಕುದುರೆ ಕತ್ತೆ ತರ ಆಗಿದೆ’ ಎಂದು ಮಾತನಾಡತೊಡಗಿದರು. ಅಬ್ಯುದ ಕುದುರೆಯ ಬಗ್ಗೆ ಚಿಂತೆಮಾಡತೊಡಗಿದನು.

ಒಂದು ದಿನ ಅಬ್ಯುದರಾಯನ ಮನೆಗೆ ಸನ್ಯಾಸಿಯೊಬ್ಬರು ಆಗಮಿಸಿದರು. ಅಬ್ಯುದರಾಯನ ಕ್ಶೇಮ ಸಮಾಚಾರ ವಿಚಾರಿಸುತ್ತಾ ಇರುವಾಗ ಅಬ್ಯುದನು ತನ್ನ ಕುದುರೆಯ ಬಗ್ಗೆ ಹೇಳಿಕೊಂಡನು. ಸನ್ಯಾಸಿಯು ಕುದುರೆ ಹಾಗೂ ಅದರ ಕೆಲಸಗಳ ಬಗ್ಗೆ ತಿಳಿದು ಒಂದು ಸಲಹೆ ನೀಡಿದರು. ಪ್ರತಿ ದಿನವೂ ಕುದುರೆಗೆ ಮೊದಲಿನ ಹಾಗೆ ಆಹಾರ, ವಿಶ್ರಾಂತಿ, ಉಪಚಾರ ಹಾಗೂ ಕೆಲಸವನ್ನು ನೀಡಲು ತಿಳಿಸಿದರು. ಅಬ್ಯುದರಾಯನು ಸನ್ಯಾಸಿಗಳ ಮಾತಿನಂತೆ ಕುದುರೆಯನ್ನು ನೋಡಿಕೊಳ್ಳತೊಡಗಿದನು. ಕುದುರೆಯು ದಿನಗಳು ಉರುಳಿದಂತೆ ಮೊದಲಿನ ಹಾಗೆ ಕೆಲಸದಲ್ಲಿ ಆಸಕ್ತಿ ತೋರಿಸತೊಡಗಿತು. “ರಾಯರ ಕುದುರೆ ಕತ್ತೆಯಾಯ್ತು ” ಎನ್ನುತ್ತಿದ್ದ ಜನ ಬದಲಾದ ಕುದುರೆಯ ಕೆಲಸ ಕಾರ‍್ಯಗಳನ್ನು ಕಂಡು ಅಚ್ಚರಿಗೊಂಡರು.

(ಚಿತ್ರ ಸೆಲೆ: pixabay.com)

1 ಅನಿಸಿಕೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.