ಅಲ್ಲಮನ ವಚನಗಳಿಂದ ಆಯ್ದ ಸಾಲುಗಳ ಓದು – 15ನೆಯ ಕಂತು

ಸಿ.ಪಿ.ನಾಗರಾಜ.

ಅಲ್ಲಮಪ್ರಬು, allamaprabhu

ಸತ್ತು ಮುಂದೆ ನೀನೇನ ಕಾಬೆಯೊ
ಇಂದೆ ಇಂದೆಯೊ ಇಂದೆ ಮಾನವ. (500/177)

( ಸತ್ತು=ಸಾವನ್ನಪ್ಪಿ/ಸಾವನ್ನು ತಂದುಕೊಂಡು; ಮುಂದೆ=ಸತ್ತ ನಂತರದಲ್ಲಿ; ನೀನ್+ಏನ; ಏನ=ಯಾವುದನ್ನ; ಕಾಣ್=ನೋಡು/ತಿಳಿ; ಕಾಣ್ಬೆ>ಕಾಬೆ; ಕಾಬೆ=ಕಾಣುವೆ/ನೋಡುವೆ; ಕಾಬೆಯೋ=ನೋಡುವೆಯೋ/ಕಾಣುವೆಯೋ;

ಸತ್ತು ಮುಂದೆ ನೀನೇನ ಕಾಬೆಯೊ=” ಸತ್ತ ನಂತರ ಮತ್ತೇನನ್ನೂ ನೀನು ಕಾಣುವೆಯೋ ಅಂದರೆ ಏನನ್ನೂ ಕಾಣಲಾರೆ ” ಎನ್ನುವ ನುಡಿಗಳ ಮೂಲಕ ಜನಸಮುದಾಯದ ಮನದಲ್ಲಿರುವ ಕೆಲವು ಕಲ್ಪನೆಗಳನ್ನು ಕುರಿತು ಚಿಂತಿಸಲಾಗಿದೆ.

ವ್ಯಕ್ತಿಯು ಸತ್ತ ನಂತರ ತಾನು ಮಾಡಿದ ಒಳ್ಳೆಯ ಇಲ್ಲವೇ ಕೆಟ್ಟ ನಡೆನುಡಿಗಳಿಗೆ ತಕ್ಕಂತೆ ಸ್ವರ‍್ಗ ಇಲ್ಲವೇ ನರಕಕ್ಕೆ ಹೋಗುತ್ತಾನೆ ಎನ್ನುವ ಪರಲೋಕದ ಕಲ್ಪನೆ ಮತ್ತು ವ್ಯಕ್ತಿಯ ದೇಹದಿಂದ ಹೊರಬಂದ ಆತ್ಮ (ಉಸಿರು/ಪ್ರಾಣ) ಮತ್ತೊಂದು ಜೀವಿಯಾಗಿ ಈ ಜಗತ್ತಿನಲ್ಲಿ ಹುಟ್ಟಿಬರುತ್ತದೆ ಎನ್ನುವ ಪುನರ್ ಜನ್ಮದ ಕಲ್ಪನೆಯನ್ನು ಶಿವಶರಣಶರಣೆಯರು ನಿರಾಕರಿಸಿದ್ದರು.

ವ್ಯಕ್ತಿಯು ಹುಟ್ಟಿನಿಂದ ಸಾವಿನ ತನಕ ಈ ಜಗತ್ತಿನಲ್ಲಿ ತನ್ನ ಒಳಿತಿಗಾಗಿ ಹಂಬಲಿಸುವಂತೆಯೇ ಸಹಮಾನವರ ಮತ್ತು ಸಮಾಜದ ಒಳಿತಿಗಾಗಿ ಬಾಳುವುದು ಅವರ ಪಾಲಿಗೆ ದೊಡ್ಡ ಸಂಗತಿಯಾಗಿತ್ತು. ವ್ಯಕ್ತಿಯ ಒಳ್ಳೆಯ ನಡೆನುಡಿಯಿಂದ ಜೀವನದಲ್ಲಿ ಉಂಟಾಗುವ ಒಲವು ನಲಿವು ನೆಮ್ಮದಿಯ ಜೀವನವೇ ಸ್ವರ‍್ಗ; ಕೆಟ್ಟ ನಡೆನುಡಿಯಿಂದ ಜೀವನದಲ್ಲಿ ಉಂಟಾಗುವ ಸಾವು ನೋವು ದುರಂತವೇ ನರಕ ಎನ್ನುವ ನಿಲುವನ್ನು ತಳೆದಿದ್ದರು.

ಮಾನವ ಸಮುದಾಯದಲ್ಲಿ ಹಸಿವು, ಬಡತನ, ಅಂಗ ವಿಕಲತೆ ಮತ್ತು ರೋಗರುಜಿನಗಳಿಂದ ಬಳಲುತ್ತಿರುವವರೆಲ್ಲರೂ ತಾವು ಹಿಂದಿನ ಜನ್ಮದಲ್ಲಿ ಮಾಡಿದ ಪಾಪಕ್ಕೆ ತಕ್ಕ ದಂಡನೆಯನ್ನು ಪಡೆಯುತ್ತಿದ್ದಾರೆ ಎಂಬ ಸಂಗತಿಯನ್ನು ಪುನರ್ ಜನ್ಮದ ನಂಬಿಕೆಯು ಜನಮನದಲ್ಲಿ ಬೇರೂರಿಸಿತ್ತು. ಇದನ್ನು ಶಿವಶರಣಶರಣೆಯರು ಅಲ್ಲಗಳೆದು ಜನರ ಸಂಕಟಕ್ಕೆ ನಿಸರ‍್ಗದಲ್ಲಿ ಉಂಟಾಗುವ ಆಗುಹೋಗುಗಳು ಮತ್ತು ಮಾನವರೇ ಕಟ್ಟಿಕೊಂಡಿರುವ ಸಮಾಜದಲ್ಲಿ ಆಡಳಿತದ ಗದ್ದುಗೆಯಲ್ಲಿರುವ ವ್ಯಕ್ತಿಗಳು ಹಾಗೂ ಸಿರಿವಂತರು ಜಾತಿ, ಮತ, ದೇವರ ಹೆಸರಿನಲ್ಲಿ ಮಾಡುತ್ತಿರುವ ವಂಚನೆಯೇ ಕಾರಣವೆಂಬುದನ್ನು ಜನರಿಗೆ ತಿಳಿಯಹೇಳಿದರು.

ವ್ಯಕ್ತಿಯು ಸತ್ತ ನಂತರ ಹೆಣವು ಮಣ್ಣು ಇಲ್ಲವೇ ಬೂದಿಯಾಗಿ ”ನೆಲ-ಬೆಂಕಿ-ನೀರು-ಗಾಳಿ”ಯಲ್ಲಿ ಬೆರತುಹೋಗುತ್ತದೆ ಎನ್ನುವ ವಾಸ್ತವವನ್ನು ”ಸತ್ತು ಮುಂದೆ ನೀನೇನು ಕಾಬೆಯೊ” ಎಂಬ ನುಡಿಗಳು ಸೂಚಿಸುತ್ತಿವೆ;

ಇಂದು=ಈ ದಿನ/ಗಳಿಗೆ/ಸಮಯ; ಇಂದೆ=ಈ ಗಳಿಗೆಯಲ್ಲಿಯೇ/ಈ ಸಮಯದಲ್ಲಿಯೇ ; ಇಂದೆಯೊ=ಜೀವಂತವಾಗಿರುವಾಗ/ಬದುಕಿರುವಾಗ; ಮಾನವ=ವ್ಯಕ್ತಿ;

ಇಂದೆ ಇಂದೆಯೊ ಇಂದೆ ಮಾನವ=ವ್ಯಕ್ತಿಯು ತಾನು ಜೀವಂತವಾಗಿರುವ ಕೊನೆ ಗಳಿಗೆಯ ತನಕ ಅಂದರೆ ಸಾವು ತಾನಾಗಿಯೇ ಬರುವ ತನಕ ಒಳ್ಳೆಯದನ್ನು ಮಾಡುತ್ತ , ತನ್ನನ್ನು ಒಳಗೊಂಡು ಸಹಮಾನವರ ಮತ್ತು ಸಮಾಜದ ಒಳಿತಿಗಾಗಿ ಬಾಳುತ್ತಿರಬೇಕೆ ಹೊರತು, ಬದುಕಿಗೆ ಬೆನ್ನು ತೋರಿಸಿ ತನ್ನ ಸಾವನ್ನು ತಾನೇ ತಂದುಕೊಳ್ಳಬಾರದು.)

ಸಾವನ್ನಕ್ಕರ ಶ್ರವವ ಮಾಡಿದಡೆ
ಇನ್ನು ಕಾದುವ ದಿನವಾವುದು
ಬಾಳುವನ್ನಕ್ಕರ ಭಜಿಸುತ್ತಿದ್ದಡೆ
ತಾನಹ ದಿನವಾವುದು. (1559/284)

ಸಾವು+ಅನ್ನಕ್ಕರ; ಸಾವು=ಮರಣ; ಅನ್ನಕ್ಕರ=ವರೆಗೆ/ತನಕ; ಸಾವನ್ನಕ್ಕರ=ಸಾಯುವತನಕ/ಜೀವನದ ಕೊನೆಗಾಲದವರೆಗೆ; ಶ್ರವ=ಕತ್ತಿ, ಗದೆ, ಗುರಾಣಿ, ಬಿಲ್ಲು ಬಾಣ ಮುಂತಾದ ಹತಾರಗಳನ್ನು ಬಳಸಿಕೊಂಡು ರಣರಂಗದಲ್ಲಿ ಶತ್ರುವಿನ ಎದುರು ಹೋರಾಟ ಮಾಡುವುದಕ್ಕಾಗಿ ಪಡೆಯುವ ತರಬೇತಿ; ಮಾಡಿದಡೆ=ಮಾಡಿದರೆ; ಕಾದು=ಹೋರಾಡು/ಕದನ ಮಾಡು; ದಿನ+ಆವುದು; ಆವುದು=ಯಾವುದು;

ಸಾವನ್ನಕ್ಕರ ಶ್ರವವ ಮಾಡಿದಡೆ=ವ್ಯಕ್ತಿಯು ತಾನು ಸಾಯುವ ದಿನದವರೆಗೂ ಹೋರಾಟಕ್ಕೆ ತಯಾರಿಯನ್ನು ಮಾಡಿಕೊಳ್ಳುವ ತರಬೇತಿಯಲ್ಲೇ ಮಗ್ನನಾಗಿದ್ದರೆ; ಇನ್ನು ಕಾದುವ ದಿನವಾವುದು=ರಣರಂಗದಲ್ಲಿ ಹೋರಾಟ ಮಾಡುವುದು ಯಾವಾಗ;

ಬಾಳುವ+ಅನ್ನಕ್ಕರ; ಬಾಳು=ಜೀವನ/ಬದುಕು; ಬಾಳುವನ್ನಕ್ಕರ=ಬದುಕಿರುವತನಕ; ಭಜಿಸುತ್ತ+ಇದ್ದಡೆ; ಭಜಿಸು=ದೇವರ ನಾಮ ಸ್ಮರಣೆಯನ್ನು ಮಾಡುವುದು; ಇದ್ದಡೆ=ಇದ್ದರೆ; ತಾನ್+ಅಹ; ತಾನ್=ವ್ಯಕ್ತಿಯು; ಅಹ=ಆಗುವ;

ತಾನಹ ದಿನ=ವ್ಯಕ್ತಿಯು ಒಳ್ಳೆಯ ನಡೆನುಡಿಗಳಿಂದ ಬಾಳಿ, ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವಂತಹ ವ್ಯಕ್ತಿತ್ವವನ್ನು ಗಳಿಸಿಕೊಳ್ಳುವ ಕಾಲ;

”ಹೋರಾಡಲೆಂದು ತರಬೇತಿಯನ್ನು ಪಡೆಯುವ ಮತ್ತು ದೇವರ ಒಲವನ್ನು ಪಡೆಯಲೆಂದು ನಾಮ ಸ್ಮರಣೆಯನ್ನು ಮಾಡುವ” ಈ ಎರಡು ಸಂಗತಿಗಳು ರೂಪಕಗಳಾಗಿ ಬಳಕೆಯಾಗಿವೆ.

ಜೀವನದ ಉದ್ದಕ್ಕೂ ಸತ್ಯ ನೀತಿ ನ್ಯಾಯದ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಾ, ಅವನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ಬಾಳದೆ ಮತ್ತು ಏನೊಂದು ಕೆಲಸವನ್ನೂ ಮಾಡದೆ ಕಾಲವನ್ನು ನೂಕುತ್ತ, ಇತರರ ದುಡಿಮೆಯಿಂದ ತನ್ನ ಬದುಕನ್ನು ನಡೆಸುತ್ತಿರುವ ಪರಾವಲಂಬಿಯಾದ ವ್ಯಕ್ತಿಯ ನಡೆನುಡಿಯನ್ನು ರೂಪಕಗಳ ಮೂಲಕ ವಿಡಂಬನೆ ಮಾಡಲಾಗಿದೆ.

ಸೂಜಿಯ ಪೋಣಿಸಿ ದಾರವ ಮರೆದಡೆ
ಹೊಲಿಗೆ ಬಿಚ್ಚದೆ ಗುಹೇಶ್ವರ. (408/170)

ಸೂಜಿ=ಬಟ್ಟೆಯನ್ನು ಹೊಲಿಯುವಾಗ ಬಳಸುವ ಲೋಹದಿಂದ ಮಾಡಿದ ಒಂದು ಚಿಕ್ಕ ಉಪಕರಣ; ಪೋಣಿಸು=ಸೂಜಿಯ ಚಿಕ್ಕ ರಂದ್ರಕ್ಕೆ ದಾರವನ್ನು ಸೇರಿಸುವುದು; ದಾರ=ನೂಲು/ಎಳೆ; ಮರೆದಡೆ=ಮರೆತು ಬಿಟ್ಟರೆ;

ಹೊಲಿಗೆ=ಸೂಜಿಗೆ ದಾರವನ್ನು ಪೋಣಿಸಿ ಅಗತ್ಯಕ್ಕೆ ತಕ್ಕಂತೆ ಬಟ್ಟೆಯ ತುಂಡುಗಳನ್ನು ಹೊಲಿಯುವುದು ಇಲ್ಲವೇ ಜತೆಗೂಡಿಸುವುದು;

ಬಿಚ್ಚು=ಬೇರೆಯಾಗುವುದು/ಕಳಚಿಕೊಳ್ಳುವುದು; ಬಿಚ್ಚದೆ=ಬೇರೆ ಬೇರೆಯಾಗದಿರುವುದೆ/ಬಿಟ್ಟುಕೊಳ್ಳದಿರುವುದೆ/ಜತೆಗೂಡುವುದಿಲ್ಲ; ಹೊಲಿಗೆ ಬಿಚ್ಚದೆ=ದಾರವಿಲ್ಲದೆ ಬರಿ ಸೂಜಿಯಿಂದ ಬಟ್ಟೆಯ ತುಂಡುಗಳನ್ನು ಹೊಲಿಯುವುದಕ್ಕೆ ಆಗುವುದಿಲ್ಲ; ಗುಹೇಶ್ವರ=ಶಿವ/ಅಲ್ಲಮನ ಮೆಚ್ಚಿನ ದೇವರು/ಅಲ್ಲಮನ ವಚನಗಳಲ್ಲಿ ಬಳಕೆಯಾಗಿರುವ ಅಂಕಿತನಾಮ;

ವ್ಯಕ್ತಿಯು ಯಾವುದೇ ಒಂದು ಕೆಲಸವನ್ನು ಕಯ್ಗೊಂಡಾಗ, ಅದನ್ನು ಮೊದಲಿನಿಂದ ಕೊನೆಯ ತನಕ ಒಲವು ನಲಿವು ಮತ್ತು ಆಸಕ್ತಿಯಿಂದ ಮಾಡದಿದ್ದರೆ, ಆ ಕೆಲಸವು ಜರುಗುವುದಿಲ್ಲವೆಂಬ ವಾಸ್ತವವನ್ನು ಸೂಜಿ-ದಾರ-ಹೊಲಿಗೆಯ ರೂಪಕದ ಮೂಲಕ ಹೇಳಲಾಗಿದೆ.

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: