ಅನಿರೀಕ್ಶಿತ ಹಂಚಿಕೆ
ಇತ್ತೀಚೆಗೆ ಕೆಲಸದ ನಿಮಿತ್ತ ಸರ‍್ಕಾರಿ ಕಚೇರಿಗೆ ನಾನು ಮತ್ತು ನನ್ನ ಸ್ನೇಹಿತ ಬೇಟಿಕೊಟ್ಟಿದ್ದೆವು, ಲಾಕ್ ಡೌನ್ ಸಮಯವಾದದ್ದರಿಂದ ಕಚೇರಿಗೆ ಯಾವ ಜನಸಂದಣಿಯ ಗೋಜಲು ಇರಲಿಲ್ಲ. ಹಿರಿಯ ಅನುಬವಿ ಅದಿಕಾರಿಗಳಿಂದ ಒಂದಶ್ಟು ಮಾಹಿತಿ ಮತ್ತು ಮಾರ‍್ಗದರ‍್ಶನ ಪಡೆಯಲು ಬಹಳ ಹೊತ್ತು ಅವರ ಜೊತೆ ಮಾತಿಗೆ ಇಳಿದಿದ್ದೆವು.
ಕಚೇರಿ ಇದ್ದಿದ್ದು ಮೊದಲನೇ ಅಂತಸ್ತಿನಲ್ಲಿ. ಹಿರಿಯ ಅದಿಕಾರಿಗಳು ಮೊದಲೇ ಬಹಳ ಶಿಸ್ತಿನ ಸಿಪಾಯಿಗಳು ಕಚೇರಿಯನ್ನು ಬಹಳ ಸ್ವಚ್ಚವಾಗಿ ಅಚ್ಚುಕಟ್ಟಾಗಿ ಇಟ್ಟುಕೊಂಡಿದ್ದರು. ಬಿಳಿ ಮೊಸಾಯಿಕ್ ನೆಲವಾದ್ದರಿಂದ ನೆಲ ಪಳಪಳನೆ ಹೊಳೆಯುತ್ತಿತ್ತು, ಒಂದು ಚೂರು ಗಲೀಜು ಆದರೂ ಬಿಳಿ ನೆಲದಲ್ಲಿ ಎದ್ದುಕಾಣುತ್ತಿತ್ತು. ಅವರ ಜೊತೆ ಮಾತನಾಡುತ್ತಾ ಮದ್ಯಾಹ್ನದ ಊಟದ ಸಮಯವಾಗಿದ್ದು ಗೊತ್ತಾಗಲಿಲ್ಲ, ಮಾವಿನ ಕಾಲವಾದ್ದರಿಂದ ಕಚೇರಿಯಲ್ಲಿದ್ದ ಮಾವಿನಹಣ್ಣನ್ನು ತೊಳೆದು ಎರಡು ತುಂಡು ಮಾಡಿ ನನಗೂ ಮತ್ತು ನನ್ನ ಸ್ನೇಹಿತನಿಗೂ ತಂದುಕೊಟ್ಟರು. ಮಾವಿನ ಹಣ್ಣು ಮಾಗಿ ರಸಬರಿತವಾಗಿತ್ತು. ಸ್ವಲ್ಪ ಮುಜುಗರದಿಂದಲೇ ಹಣ್ಣನ್ನು ಸ್ವೀಕರಿಸಿದ ನಾನು ತಿನ್ನಲು ಆರಂಬಿಸಿದೆ. ಬಹಳ ಅಚ್ಚುಕಟ್ಟಾಗಿ ಶಿಸ್ತಾಗಿ ಮಾವಿನ ಹಣ್ಣನ್ನು ತಿನ್ನುವ ಹಂಬಲ ನನ್ನದು. ಆದರೆ ಮಾವಿನಹಣ್ಣು ರಸಬರಿತವಾಗಿದ್ದರಿಂದ ಎಶ್ಟೇ ಪ್ರಯತ್ನಪಟ್ಟರೂ ಮಾವಿನ ರಸ ಸೋರುವುದನ್ನು ತಡೆಯಲಾಗಲಿಲ್ಲ. ಬಾಯಿಯ ಕೆಳಗೆ ಇನ್ನೊಂದು ಕೈ ಅಡ್ಡ ಇಟ್ಟು ಎಶ್ಟೇ ಪ್ರಯತ್ನಿಸಿದರೂ ಎರಡು ಹನಿ ಮಾವಿನ ರಸ ನೆಲದ ಮೇಲೆ ತೊಟ್ಟಿಕ್ಕಿಬಿಟ್ಟಿತು.
‘ಚೆ! ಇದೆಂತ ಅಪರಾದ ಮಾಡಿಬಿಟ್ಟೆ, ಇಂತಹ ಬಿಳಿಯ ಸ್ವಚ್ಚ ನೆಲದ ಮೇಲೆ ಅನ್ಯಾಯವಾಗಿ ಗಲೀಜು ಮಾಡಿ ಬಿಟ್ಟನಲ್ಲ’ ಎಂಬ ಅಪರಾದಿ ಮನೋಬಾವ. ನಮ್ಮ ಬಗ್ಗೆ ಏನೆಂದುಕೊಂಡಾರು ಎಂಬ ಚಿಂತೆ. ನಮ್ಮ ಮನೆಯಾಗಿದ್ದರೆ ಬೇರೆ ವಿಚಾರ, ತಕ್ಶಣ ನಾವೇ ಸ್ವಚ್ಚಗೊಳಿಸಿ ಬಿಡಬಹುದು. ಸರಿ ಕಾಲಿನಲ್ಲೇ ಯಾರಿಗೂ ಗೊತ್ತಾಗದ ಹಾಗೆ ಸ್ವಚ್ಚ ಮಾಡಿಬಿಡೋಣ ಎಂದು ಮನಸ್ಸಿನಲ್ಲೇ ಅಂದುಕೊಂಡು ಮತ್ತೆ ಅವರ ಜೊತೆ ಮಾತಿಗೆ ಇಳಿದಿದ್ದೆವು. ಹತ್ತು ನಿಮಿಶ ಬಿಟ್ಟು ನೋಡುವಶ್ಟರಲ್ಲಿ ಅಲ್ಲಿ ನೂರಾರು ಕಪ್ಪು ಇರುವೆಗಳು ಬಂದು ಜಮಾಯಿಸಿದ್ದವು. ಎರಡು ಹನಿ ಮಾವಿನ ರಸದ ಸುತ್ತ ನೂರಾರು ಕಪ್ಪು ಇರುವೆಗಳು ಆಗಲೇ ತಮ್ಮ ಕೆಲಸ ಶುರು ಹಚ್ಚಿಕೊಂಡಿದ್ದವು. ಮಾವಿನ ರಸದ ಸುತ್ತ ಸ್ವಲ್ಪವೂ ಎಡೆಬಿಡದ ಹಾಗೆ ಗೊಂಚಲು ಗೊಂಚಲಾಗಿ ಇರುವೆಗಳು ಮಾವಿನಹಣ್ಣಿನ ರಸವನ್ನು ಹೀರುತ್ತಿದ್ದವು. ಅಶ್ಟು ಬೇಗನೆ ಇರುವೆಗಳು ಎಲ್ಲಿಂದ ಬಂದವು ಎಂಬುದೇ ನನಗೆ ಆಶ್ಚರ‍್ಯದ ಸಂಗತಿ!
ಸರಿ ಇನ್ನೇನು ಇರುವೆಗಳು ಬಂದಾಗಿದೆ ಅವುಗಳಿಗೆ ತೊಂದರೆ ಕೊಡುವುದು ಬೇಡವೆಂದು ಸುಮ್ಮನಾದೆ. ಮತ್ತೊಂದಶ್ಟು ನಿಮಿಶ ಬಿಟ್ಟು ನೋಡುವಶ್ಟರಲ್ಲಿ ಆಶ್ಚರ‍್ಯ ಕಾದಿತ್ತು ನನಗೆ. ಮಾವಿನ ರಸದ ಕುರುಹು ಇಲ್ಲದ ಹಾಗೆ ಇರುವೆಗಳು ರಸವನ್ನು ಹೀರಿಕೊಂಡು ಜಾಗ ಕಾಲಿ ಮಾಡಿಯಾಗಿತ್ತು. ಕೆಲವೇ ನಿಮಿಶಗಳಲ್ಲಿ ಯಾವ ಇರುವೆಗಳ ಸುಳಿವು ಅಲ್ಲಿ ಇರಲೇ ಇಲ್ಲ. ನೆಲ ಮೊದಲು ಇದ್ದ ಹಾಗೆ ಇದೆ ಎನ್ನುವಂತೆ ಆಗಿತ್ತು, ಒಂದು ಚೂರು ಮಾವಿನ ಹಣ್ಣಿನ ರಸದ ಕುರುಹು ಕೂಡ ಉಳಿದಿರದ ಹಾಗೆ ಆಗಿತ್ತು. ಅ ಜಾಗದಲ್ಲಿ ಏನೂ ನಡೆದಿಲ್ಲವೇನೋ ಎಂಬಂತೆ ಇತ್ತು, ಅದನ್ನು ನೋಡಿ ನನಗೂ ಸ್ವಲ್ಪ ಸಮಾದಾನವಾಯಿತು, ತಪ್ಪು ಮಾಡಿ ಅದಕ್ಕೊಂದು ದಾರಿ ಹುಡುಕಿ ಅದರಿಂದ ಬಚಾವಾದ ಹಾಗೆ ಆಗಿತ್ತು ನನ್ನ ಬಾವನೆ.
ಬೂಮಿ ಮೇಲೆ ಪ್ರಕ್ರುತಿಯ ವೈಶಿಶ್ಟ್ಯವೆಂದರೆ ಇದೆ ತಾನೇ, ಸಕಲ ಜೀವರಾಶಿಗಳಿಗೂ ಬದುಕುವ ಹಕ್ಕು, ಅವುಗಳಿಗೆ ಬೇಕಾಗಿರುವ ಆಹಾರ ಪಡೆದುಕೊಳ್ಳುವ ಹಕ್ಕು ಹೊಂದಿರುವುದು. ಯಾವುದೇ ಆಹಾರ ಪದಾರ‍್ತ ತ್ಯಾಜ್ಯವಾದಲ್ಲಿ ಅ ತ್ಯಾಜ್ಯ ನಿರ‍್ವಹಣೆಯಲ್ಲಿ ಹಲವು ಜೀವರಾಶಿಗಳ ಪಾತ್ರ ಬಹಳ ಮಹತ್ವವಾದದ್ದು. ಒಂದುವೇಳೆ ತ್ಯಾಜ್ಯ ನಿರ‍್ವಹಣೆಯಲ್ಲಿ ಜೀವರಾಶಿಗಳು ಪಾಲ್ಗೊಳ್ಳದಿದ್ದಿದ್ದರೆ ಇಶ್ಟರಲ್ಲಾಗಲೇ ಪ್ರಪಂಚವೇ ತ್ಯಾಜ್ಯದ ದೈತ್ಯ ಕೂಪವಾಗಿ ಬಿಡುತ್ತಿತ್ತು. ಕಸದಿಂದ ರಸವಾಗಿಸಲು ಇಂತಹ ಜೀವರಾಶಿಗಳು ದುಡಿಯುತ್ತಿವೆ. ಒಂದು ವೇಳೆ ಮಾವಿನ ರಸವನ್ನು ಸ್ವಚ್ಚಗೊಳಿಸಿ ಬಿಟ್ಟಿದ್ದರೇ ಅಲ್ಲಿಗೆ ಬಂದು ಸೇರಿದ ಇರುವೆಗಳಿಗೆ ಮಾವಿನ ಹಣ್ಣಿನ ರಸದೌತಣ ಸಿಗುತ್ತಿರಲಿಲ್ಲವೇನೋ. ಕೆಲವೊಂದು ಬಾರಿ ಅನಿರೀಕ್ಶಿತವಾಗಿ ಆದ ಎಡವಟ್ಟುಗಳು, ತಪ್ಪುಗಳು ಮತ್ತೊಬ್ಬರಿಗೆ ದಾರಿಯಾಗುವುದಕ್ಕೆ ಇದೊಂದು ಸಣ್ಣ ಉದಾಹರಣೆಯಶ್ಟೆ. ಅನಿರೀಕ್ಶಿತವಾಗಿ ಇರುವೆಗಳಿಗೆ ನಾವು ತಿನ್ನುವ ಆಹಾರದಲ್ಲಿ ಒಂದು ಪಾಲು ಕೊಟ್ಟ ಅನುಬವಾಯಿತು ನನಗೆ.
ಮಾನವರಾದ ನಾವು ಬೇರೆ ಜೀವರಾಶಿಗಳ ಬಗ್ಗೆಯೂ ಅಶ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ, ಹಂಚಿ ತಿನ್ನುವ ಮನೋಬಾವ ಅಶ್ಟಕಶ್ಟೇ. ಬೂಮಿಯ ಮೇಲೆ ಎಲ್ಲಾ ಜಾಗವನ್ನು ನಾವೇ ಆಕ್ರಮಿಸಿಕೊಂಡು ಜೀವಿಗಳ ಜಾಗವನ್ನು ನಾವು ಕಿತ್ತುಕೊಂಡಿದ್ದೇವೆ. ಮಾನವ ಅಂದುಕೊಂಡಿರುವ ಹಾಗೆ ಪ್ರಪಂಚ ಕೇವಲ ಮಾನವರಿಗೆ ಬರೆದು ಕೊಟ್ಟಿರುವುದಲ್ಲ, ಸಕಲ ಜೀವರಾಶಿಗಳಿಗೂ ಎಲ್ಲ ರೀತಿಯಲ್ಲೂ ಸಮಾನ ಪ್ರಮಾಣದ ಹಕ್ಕಿದೆ ಇಲ್ಲಿ. ಸ್ರುಶ್ಟಿಯಲ್ಲಿ ಎಲ್ಲಾ ಜೀವರಾಶಿಗಳ ಹಾಗೆ ನಮ್ಮದು ಒಂದು ಪಾಲು ಅಶ್ಟೇ. ಆದರೆ ನಾವು ನಮ್ಮ ಕೆಲಸ ಬಿಟ್ಟು ಬೇರೆ ಎಲ್ಲದಕ್ಕೂ ಕೈಹಾಕಿ ಜೀವಿಗಳ ಜೀವನ ಶೈಲಿಯನ್ನು ಕೂಡ ಹಾಳು ಮಾಡಿದ್ದೀವಿ. ಮಾನವರು ಪ್ರಕ್ರುತಿಯ ಜೀವ ವೈವಿದ್ಯತೆಗೆ ಬೆಲೆ ಕೊಟ್ಟು ಪ್ರಕ್ರುತಿಯೊಡನೆ ಒಂದಾಗಿ ಬದುಕಿದರೆ ಪ್ರಪಂಚ ಇನ್ನಶ್ಟು ಸುಂದರವಾಗಿ ಚಂದವಾಗಿ ಇರುತ್ತದೆ.
( ಚಿತ್ರಸೆಲೆ : copelandexterminating.com )
Beautiful write-up.