ದಾಡಿ ಮತ್ತು ಮೀಸೆಯ ಚಾಂಪಿಯನ್‍ಶಿಪ್!
ವಿಶ್ವದಲ್ಲಿ ಹಲವು ಸ್ಪರ‍್ದೆಗಳಿವೆ. ಓಡುವ ಚಾತುರ‍್ಯ, ಗುರಿಯಿಟ್ಟು ಹೊಡೆಯುವುದು, ಬೀಸಿ ಎಸೆಯುವುದು, ನೀರಲ್ಲಿ ಈಜುವುದು ಹೀಗೆ ಮುಂತಾದ ಕ್ರೀಡಾ ಪಾಂಡಿತ್ಯಗಳನ್ನು ಒರೆಗೆ ಹಚ್ಚಿ ಅದರಲ್ಲಿ ಅತ್ಯುತ್ತಮರನ್ನು ಗುರುತಿಸಿ ಅವರಿಗೆ ಚಾಂಪಿಯನ್‍ಶಿಪ್ ನೀಡಿ ಗೌರವಿಸುವುದು ವಾಡಿಕೆ. ಇಲ್ಲಿ ಗೆದ್ದವರಿಗೆ ಹಣದ ಮಹಾಪೂರವೇ ಹರಿದು ಬರುವುದರಲ್ಲಿ ಸಂಶಯವಿಲ್ಲ. ಅದಕ್ಕಾಗಿ ರಾಜ್ಯ, ರಾಶ್ಟ್ರ ಅಲ್ಲದೇ ಅಂತರರಾಶ್ಟ್ರೀಯ ಮಟ್ಟದ ಕ್ರೀಡಾ ಉತ್ಸವಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಈ ಕೆಲಸಕ್ಕಾಗಿ ಹಲವಾರು ಸಂಸ್ತೆಗಳು ಜನ್ಮ ತಾಳಿವೆ.
ದೈಹಿಕ ಹಾಗೂ ಮಾನಸಿಕ ಕ್ಶಮತೆಯ ಕ್ರೀಡೆಗಳು ಒಂದೆಡೆಯಾದರೆ, ಬಿನ್ನವಾದ ಚಾಂಪಿಯನ್‍ಶಿಪ್‍ಗಳನ್ನೂ ಕೂಡ ಬೇರೆ ಬೇರೆ ಕಡೆ ಆಯೋಜಿಸಲಾಗುತ್ತದೆ. ಅದರಲ್ಲಿ ಪ್ರಮುಕ ಸ್ತಾನದಲ್ಲಿರುವುದು ದಾಡಿ, ಮೀಸೆಯ ಚಾಂಪಿಯನ್‍ಶಿಪ್. ಗಡ್ಡ, ಮೀಸೆ ಇದ್ದವರು ಮಾತ್ರ ಇದರಲ್ಲಿ ಬಾಗವಹಿಸಲು ಸಾದ್ಯ! ಗಡ್ಡ ಮತ್ತು ಮೀಸೆಯ ಚಾಂಪಿಯನ್‍ಶಿಪ್ ಅನ್ನು ಆಯೋಜಿಸುವುದು ವರ‍್ಲ್ಡ್ ಬಿಯರ‍್ಡ್ ಅಂಡ್ ಮೊಸ್ಟಾಚ್ ಅಸೋಸಿಯೇಶನ್.
ಗಡ್ಡ ಮತ್ತು ಮೀಸೆಯ ಚಾಂಪಿಯನ್‍ಶಿಪ್‍ನ ಇತಿಹಾಸ ಗಮನಿಸಿದರೆ ಅದನ್ನು ಯಾವಾಗ ಮೊದಲು ಆಯೋಜಿಸಲಾಯಿತು ಎಂಬ ಬಗ್ಗೆ ಸಾಕಶ್ಟು ವಿವಾದಗಳಿವೆ. ಉತ್ತರ ಇಟಲಿಯಲ್ಲಿ ತಾನು ಮೊದಲು 1970ರಲ್ಲಿ ಅಯೋಜಿಸಿದ್ದು ಎಂದು ಇಟಾಲಿಯನ್ ಗುಂಪೊಂದು ಹೇಳಿಕೊಂಡಿದೆ. 1990ರಲ್ಲಿ ಜರ‍್ಮನಿಯ ಹಾಪ್ನೆರ್ ಬಾರ‍್ಟ್ ಕ್ಲಬ್ (Hofener Bart club) ಆದುನಿಕ ಗಡ್ಡದ ಚಾಂಪಿಯನ್‍ಶಿಪ್ ಅನ್ನು ಆಯೋಜಿಸಿತ್ತು. ಇದು ನಡೆದಿದ್ದು ಹೊಪೆನ್/ಎನ್ಜ್ ಎಂಬ ಜರ‍್ಮನಿಯ ಪುಟ್ಟ ಹಳ್ಳಿಯಲ್ಲಿ. ಮತ್ತೆ 1995ರಲ್ಲಿ ಇದೇ ಕ್ಲಬ್ ಜರ‍್ಮನಿಯ ಪೋಪೊಜೈಮ್ ಪಟ್ಟಣದ ಹತ್ತಿರದಲ್ಲಿ ಎರಡನೇ ಬಾರಿ ವಿಶ್ವ ಬಿಯರ‍್ಡ್ ಮತ್ತು ಮೊಸ್ಟಾಚ್ ಚಾಂಪಿಯನ್‍ಶಿಪ್ ಅನ್ನು ಆಯೋಜಿಸಿತ್ತು.
1995ರ ನಂತರ ಸ್ತಳೀಯ ಉತ್ತರ ಯೂರೋಪಿಯನ್ ಬಿಯರ‍್ಡ್ ಕ್ಲಬ್ಬುಗಳು ಪ್ರತಿ ಎರಡು ವರ‍್ಶಕ್ಕೊಮ್ಮೆ ಅಂತರರಾಶ್ಟ್ರೀಯ ಸ್ಪರ‍್ದೆಗಳನ್ನು ಅಯೋಜಿಸಲು ಪ್ರಾರಂಬಿಸಿದವು. 1997ರಲ್ಲಿ, ನಾರ‍್ವೆಯ ಟ್ರೋನ್ಡಹೈಮ್‍ನಲ್ಲಿ ಪ್ರದಾನ ಕಚೇರಿ ಹೊಂದಿದ್ದ ನಾರ‍್ವೆಜಿಯನ್ ಮೊಸ್ಟಾಕ್ ಕ್ಲಬ್ (Den Norske Mustaschklubben) ಅಲ್ಲೇ ಸ್ಪರ‍್ದೆಯನ್ನು ನಡೆಸಿತು. ಮತ್ತೆ ಎರಡು ವರ‍್ಶಗಳ ನಂತರ ಸ್ವೀಡನ್ನಿನ ಮೊಸ್ಟಾಕ್ ಕ್ಲಬ್ (Svenska Mustaschklubben) ದಕ್ಶಿಣದ ತುತ್ತ ತುದಿಯಲ್ಲಿರುವ ಯಸ್ತಾದಲ್ಲಿ ಚಾಂಪಿಯನ್‍ಶಿಪ್ ಆಯೋಜಿಸಿತು. 2001ರಲ್ಲಿ ಸ್ವಾಬಿಯನ್ ಬಿಯರ‍್ಡ್ ಅಂಡ್ ಮೊಸ್ಟಾಚ್ ಕ್ಲಬ್ (Schwäbische Bart- und Schnauzerclub), ತನ್ನ ಹತ್ತನೆಯ ವಾರ‍್ಶಿಕೋತ್ಸವವನ್ನು ತನ್ನ ತವರು ನೆಲ ಸ್ಚೋಂಬರ‍್ಗ್‍ನಲ್ಲಿ ಚಾಂಪಿಯನ್‍ಶಿಪ್ ಆಯೋಜಿಸುವ ಮೂಲಕ ಆಚರಿಸಿತು.
ಎರಡು ವರುಶಕ್ಕೊಮ್ಮೆ ನಡೆಯುವ ವಿಶ್ವ ಗಡ್ಡ ಮತ್ತು ಮೀಸೆ ಚಾಂಪಿಯನ್‍ಶಿಪ್ 2003ರಿಂದ ವರ‍್ಲ್ಡ್ ಬಿಯರ‍್ಡ್ ಅಂಡ್ ಮೊಸ್ಟಾಚ್ ಅಸೋಸಿಯೇಶನ್ ಅಡಿಯಲ್ಲಿ ನಡೆಯುತ್ತಿದೆ. ಬೆಸ ಸಂಕ್ಯೆಯ ವರ‍್ಶಗಳಲ್ಲಿ ನಡೆಯುವ ಈ ಚಾಂಪಿಯನ್‍ಶಿಪ್ ಹೋದ ವರ‍್ಶ, ಅಂದರೆ 2019ರ, ಮೇ ತಿಂಗಳ 17, 18 ಮತ್ತು 19ರಂದು ಬೆಲ್ಜಿಯಮ್‍ನ ಆಂಟ್ವೆರ‍್ಪ್‍ನಲ್ಲಿ ನಡೆಸಲಾಯಿತು.
ಈ ಚಾಂಪಿಯನ್‍ಶಿಪ್, ಸ್ಪರ‍್ದೆಗಳನ್ನು ಮೀಸೆಗಳು, ಬಾಗಶಹ ಗಡ್ಡ ಮತ್ತು ಪೂರ‍್ಣ ಗಡ್ಡ ಎಂದು ಮೂರು ಪ್ರಮುಕ ವಿಬಾಗಗಳಾಗಿ ವಿಂಗಡಿಸಿದೆ. ಈ ಮೂರು ಗುಂಪುಗಳಲ್ಲಿ ಮತ್ತೆ ಹಲವು ವಿಬಾಗಗಳನ್ನು ಮಾಡಿದ್ದು ಒಟ್ಟಾರೆ ಹದಿನಾರು ಸಾಂಪ್ರದಾಯಿಕ ವಿಬಾಗಗಳಿದ್ದವು. 2009ರಲ್ಲಿ ಅಲಸ್ಕಾನ್ ವೇಲರ್ ಎಂಬ ಹೊಸ ವಿಬಾಗವನ್ನು ಸೇರಿಸಲಾಯಿತು.
ಮೀಸೆಯ ವಿಬಾಗದಲ್ಲಿ ನೈಸರ‍್ಗಿಕ ಮೀಸೆ, ಡಾಲಿ ಮೀಸೆ, ಇಂಗ್ಲೀಶ್ ಮೀಸೆ, ಇಂಪೀರಿಯಲ್ ಮೀಸೆ, ಹಂಗೇರಿಯನ್ ಮೀಸೆ ಮತ್ತು ಪ್ರೀ ಸ್ಟೈಲ್ ಮೀಸೆ ಸೇರಿ ಒಟ್ಟು ಆರು ವಿಬಾಗಗಳಿವೆ. ನೈಸರ‍್ಗಿಕವಾಗಿ ಬೆಳೆದ ಮೀಸೆ ಆದಶ್ಟೂ ಪ್ರಕ್ರುತಿದತ್ತವಾಗಿರಬೇಕು. ಯಾವುದೇ ಕ್ರುತಕ ಸಾದನದಿಂದ ಆಕಾರಕ್ಕೆ ತರಲು ಅವಕಾಶವಿಲ್ಲ. ಮೇಲ್ಮುಕವಾಗಿ ಸುರುಳಿಯಾದ ಡಾಲಿ ಮೀಸೆ ಕಣ್ಣಿನ ಹುಬ್ಬುಗಳಿಗಿಂತ ಮೇಲಿರಬಾರದು. ಇಲ್ಲೂ ಸಹ ಯಾವುದೇ ಕ್ರುತಕ ಆಕಾರ ಸಾದನ ನಿಶೇದ. ಮೇಲ್ದುಟಿಯ ಮದ್ಯೆಯಿಂದ ಎರಡೂ ಬದಿಗೆ ಹಬ್ಬಿದ ಮೀಸೆ ಇಂಗ್ಲೀಶ್ ಮೀಸೆ. ತುಟಿಯ ತುದಿಯಿಂದ ಕೊಂಚ ಮೇಲೇರಬಹುದು. ಉದ್ದ ಹೆಚ್ಚಾದ ಕಾರಣ ಕ್ರುತಕ ಸಾದನಗಳ ನೆರವು ಪಡೆಯಬಹುದು. ಸಣ್ಣ ಮತ್ತು ದಟ್ಟವಾದ ಪೊದೆಯ ಮೀಸೆ ಇಂಪೀರಿಯಲ್ ಮೀಸೆ. ದಪ್ಪ ಹಾಗೂ ಪೊದೆಯಂತ ಮೀಸೆ ಹಂಗೇರಿಯನ್ ಮೀಸೆ. ಇವಕ್ಕೆ ಯಾವುದೇ ಕ್ರುತಕ ಸಾದನಗಳನ್ನು ಉಪಯೋಗಿಸುವಂತಿಲ್ಲ. ಮೇಲಿನ ಯಾವುದೇ ವಿಬಾಗದಲ್ಲೂ ಸ್ಪರ‍್ದಿಸಲು ಅದರ ಮಾನದಂಡ ತಲುಪಲು ಸಾದ್ಯವಿಲ್ಲದ ಮೀಸೆ ಪ್ರೀ ಸ್ಟೈಲ್ ಮೀಸೆ ವಿಬಾಗದಲ್ಲಿ ಸ್ಪರ‍್ದಿಸಬಹುದು.
ಬಾಗಶಹ ಗಡ್ಡ ವಿಬಾಗದಲ್ಲಿ ಗೋಟಿ ನ್ಯಾಚುರಲ್, ಮಸ್ಕಿಟೀರ್, ಪು ಮಂಚೂ, ಗೋಟಿ ಪ್ರೀ ಸ್ಟೈಲ್, ಇಂಪೀರಿಯಲ್ ಪಾರ‍್ಶಿಯಲ್ ಬಿಯರ‍್ಡ್ ಅತವಾ ಕೈಸರ್ ಬಿಯರ‍್ಡ್, ಪಾರ‍್ಶಿಯಲ್ ಬಿಯರ‍್ಡ್, ಪ್ರೀ ಸ್ಟೈಲ್ ವಿತ್ ಸೈಡ್ ಬರ‍್ನ್ಸ್ ಎಂಬ ಆರು ವಿಬಾಗಗಳಿವೆ. ಯಾವುದೇ ಕ್ರುತಕ ಸಾದನದ ನೆರವಿಲ್ಲದೆ ಬೆಳಸಿರುವ ಗಡ್ಡ ಮತ್ತು ಮೀಸೆ ಹೊಂದಿರುವವರು ಗೋಟಿ ನ್ಯಾಚುರಲ್ ವಿಬಾಗದಲ್ಲಿ ಸ್ಪರ‍್ದಿಸಬಹುದು. ಕಣ್ಣಿನ ಬಾಗದಿಂದ ನಾಲ್ಕು ಸೆಂಟಿಮೀಟರ್ ಉದ್ದದ ಸ್ತಳ ಶುಬ್ರವಾಗಿ ಶೇವ್ ಮಾಡಿರಬೇಕು. ಮಸ್ಕೆಟೀರ್ ವಿಬಾಗದಲ್ಲಿ ಸ್ಪರ‍್ದಿಸುವವರ ಗಡ್ಡ ಕಿರಿದಾಗಿ ಚೂಪಾಗಿರಬೇಕು. ಮೀಸೆ ಸ್ವಲ್ಪ ತೆಳ್ಳಗೆ, ಉದ್ದವಾಗಿ ಬಿಲ್ಲಿನಂತೆ ಬಾಗಿರಬೇಕು. ಬಾಯಿಯ ಮೂಲೆಯಲ್ಲಿ ಮೀಸೆಯ ಕೂದಲು 1.5 ಸೆಂಟಿಮೀಟರ‍್ಗಿಂತಲೂ ಉದ್ದವಾಗಿರಬಾರದು. ಪು ಮಂಚೂನಲ್ಲಿ ಚೆಂಗೇಶ್ ಕಾನ್ ತರದ ಮೀಸೆಗೆ ಅವಕಾಶವಿದೆ. ಬಾಯಿಯ ಮೂಲೆಯ ಸುತ್ತಾ ಎರಡು ಸೆಂಟಿಮೀಟರ್ ಶುಬ್ರವಾಗಿ ಶೇವ್ ಮಾಡಿರಬೇಕು. ಮೀಸೆಯ ತುದಿ ಕೆಳಮುಕವಾಗಿರಬೇಕು.
ಗೋಟಿ ಪ್ರೀ ಸ್ಟೈಲ್‍ನಲ್ಲಿ ಇತರೆ ವರ‍್ಗಗಳ ಮಾನದಂಡ ಪೂರೈಸದೇ ಇರುವ ಎಲ್ಲಾ ಗೋಟಿಗಳು ಇದರಲ್ಲಿ ಸ್ಪರ‍್ದಿಸಬಹುದು. ಕಣ್ಣಿನ ಬಾಗದಿಂದ ನಾಲ್ಕು ಸೆಂಟಿಮೀಟರ್ ಉದ್ದದ ಸ್ತಳ ಶುಬ್ರವಾಗಿ ಶೇವ್ ಮಾಡಿರಬೇಕೆಂಬುದು ಇದರ ನಿಯಮ. ಇಂಪೀರಿಯಲ್ ಪಾರ‍್ಶಿಯಲ್ ಬಿಯರ‍್ಡ್ ಅತವಾ ಕೈಸರ್ ಬಿಯರ‍್ಡ್‍ನಲ್ಲಿ ಕೆನ್ನೆಯ ಮತ್ತು ತುಟಿಯ ಮೇಲಿನ ಮೀಸೆ ಇರಬೇಕು. ತಲೆಯಿಂದ ಇಳಿದ ಕೂದಲಿಗೂ ಇದಕ್ಕೂ ನಡುವೆ ನಾಲ್ಕು ಸೆಂಟಿಮೀಟರ್ ಕಾಲಿಯಿರಬೇಕು. ಮೀಸೆಯ ತುದಿಗಳನ್ನು ಮೇಲ್ಮುಕವಾಗಿ ತೀಡಿರಬೇಕು. ಕಣ್ಣಿಗಿಂತ ಮೇಲಕ್ಕೆ ಹೋಗುವಂತಿಲ್ಲ. ಪಾರ‍್ಶಿಯಲ್ ಬಿಯರ‍್ಡ್ ಪ್ರೀ ಸ್ಟೈಲ್ ವಿತ್ ಸೈಡ್ ಬರ‍್ನ್ಸ್ ನಲ್ಲಿ ಗೋಟಿ ಅಲ್ಲದ ಮುಕ್ತ ವಿನ್ಯಾಸದ ಗಡ್ಡ, ಮೀಸೆಯವರು ಇದರಲ್ಲಿ ಬಾಗವಹಿಸಬಹುದು. ಗೋಟಿಯ ಹಾಗೂ ಇತರೆ ವಿಬಾಗದ ಹಲವು ಮಾನದಂಡ ಇದರಲ್ಲಿ ಅನುಸರಿಸಲಾಗುತ್ತದೆ. ಸೈಡ್ ಬರ‍್ನ್ಸ್ ವಿಬಾಗವನ್ನು 2003ರ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಕಿಂಗ್ ಎಲ್ವಿಸ್ ಪ್ರೆಸ್ಲೀಯ ಗೌರವಾರ‍್ತ ಪರಿಚಯಿಸಲಾಯಿತು.
ಮೂರನೆಯ ಹಾಗೂ ಕೊನೆಯ ವಿಬಾಗ ಪೂರ‍್ಣ ಬಿಯರ‍್ಡ್ ನ್ಯಾಚುರಲ್. ಇದರಲ್ಲಿ ಪುಲ್ ಬಿಯರ‍್ಡ್ ನ್ಯಾಚುರಲ್, ಪೂರ‍್ಣ ಬಿಯರ‍್ಡ್ ಶೈಲಿಯ ಮೀಸೆ, ವರ‍್ದಿ, ಗ್ಯಾರಿಬಾಲ್ಡಿ, ಪುಲ್ ಬಿಯರ‍್ಡ್ ಪ್ರೀ ಸ್ಟೈಲ್ ಎಂಬ ವರ‍್ಗಗಳಿವೆ. ಸಹಜವಾಗಿ ( natural) ಬೆಳೆಯುವ ಗಡ್ಡ ಮೀಸೆಗೆ ಪುಲ್ ಬಿಯರ‍್ಡ್ ನ್ಯಾಚುರಲ್ ವರ‍್ಗದಲ್ಲಿ ಪ್ರಾಶಸ್ತ್ಯ. ಮೀಸೆಯನ್ನು ಇಲ್ಲಿ ಪ್ರಮುಕವಾಗಿಸಬಾರದು. ಗಡ್ಡದ ಕೆಳಬಾಗವನ್ನು ಸುರಳಿ ಸುತ್ತಬಾರದು. ಪೂರ‍್ಣ ಗಡ್ಡದ ಶೈಲಿಯ ಮೀಸೆಯ ವಿಬಾಗದಲ್ಲಿ ಮೀಸೆ ಬಾಯಿಯ ಕೊನೆಯಿಂದ 1.5 ಸೆಂಟಿಮೀಟರ್ ಗಿಂತ ಹೆಚ್ಚು ಕೂದಲು ಬೆಳೆಸುವಂತಿಲ್ಲ. ಈ ವಿಬಾಗದಲ್ಲಿ ಮೀಸೆಯನ್ನು ಡ್ಯಾಲಿ, ಹಂಗೇರಿಯನ್ ಮತ್ತು ಇಂಪೀರಿಯಲ್ ಮೀಸೆ ವಿಬಾಗದಲ್ಲಿನ ಮೀಸೆಯಂತೆ ವಿನ್ಯಾಸಗೊಳಿಸಲು ಆಸ್ಪದವಿದೆ. ಗಡ್ಡ ಅದು ತನ್ನಿಶ್ಟದಂತೆ ಬೆಳೆದ ಹಾಗೆ ಕಾಣುತ್ತದೆ.
ವರ‍್ದಿ ಎಂಬ ವಿಬಾಗದಲ್ಲಿ ಪೂರ‍್ಣ ಗಡ್ಡ, ಸಣ್ಣ ಮತ್ತು ಕೆಳಬಾಗದಲ್ಲಿ ದುಂಡಾದ, ಕೆಳ ತುಟಿಯ ಕೆಳಗಿನಿಂದ ಅಳತೆ ಮಾಡಿದಂತೆ 10 ಸೆಂಟಿಮೀಟರ‍್‌ಗಿಂತ ಹೆಚ್ಚು ಉದ್ದವಿರಬಾರದು. ಮೀಸೆ ಗಡ್ಡ ಬಿನ್ನವಾಗಿರಬೇಕು. ಸೇರಿರಬಾರದು. ಗರಿಬಾಲ್ಡಿ ವಿಬಾಗದಲ್ಲಿ ಗಡ್ಡವು ಕೆಳಬಾಗದಲ್ಲಿ ವಿಶಾಲವಾಗಿ ದುಂಡಗೆ ಇರಬೇಕು. ಕೆಳತುಟಿಯ ಕೆಳಬಾಗದಿಂದ ಅಳತೆ ಮಾಡಿದರೆ 20 ಸೆಂಟಿಮೀಟರ‍್‌ಗಿಂತ ಹೆಚ್ಚು ಉದ್ದವಿರಬಾರದು. ಗಡ್ಡವು ಪ್ರಾಕ್ರುತಿಕವಾಗಿ ಬೆಳೆದಂತೆ ಕಾಣಬೇಕು. ಹೆಚ್ಚು ನೈಸರ‍್ಗಿಕವಾದಶ್ಟೂ ಸ್ಪರ‍್ದೆಗೆ ಉತ್ತಮ, ಇದರಲ್ಲಿ ಮೀಸೆ ಮತ್ತು ಗಡ್ಡ ಬೇರೆ ಬೇರೆಯಿದ್ದಂತೆ ಕಾಣುವ ಅವಶ್ಯಕತೆ ಇಲ್ಲ. ಗಡ್ಡದ ಕೆಳಬಾಗದ ಕೂದಲುಗಳನ್ನು ಸುರುಳಿಯಾಗಿ ಸುತ್ತಿರಬಾರದು.
ಇತರೆ ಯಾವುದೇ ವಿಬಾಗಗಳ ಮಾನದಂಡವನ್ನು ಪೂರೈಸದೆ ಇರುವ ಗಡ್ಡದವರು ಪೂರ‍್ಣ ಗಡ್ಡದ ಪ್ರೀಸ್ಟೈಲ್‍ನ ಈ ವಿಬಾಗದಲ್ಲಿ ಸ್ಪರ‍್ದಿಸಬಹುದು. ಇಲ್ಲಿ ಗಡ್ಡಕ್ಕೆ ಯಾವುದೇ ವಿನ್ಯಾಸ ಮತ್ತು ಶೈಲಿಯ ಅವಶ್ಯಕತೆ ಇಲ್ಲ.
(ಮಾಹಿತಿ ಮತ್ತು ಚಿತ್ರ ಸೆಲೆ: worldbeardchampionships.com, wikipedia)
ಇತ್ತೀಚಿನ ಅನಿಸಿಕೆಗಳು