ಕವಿತೆ : ದರೆಯ ಮೇಲಿನ ಆಕಾಶ
– ವೆಂಕಟೇಶ ಚಾಗಿ.
ಆಕಾಶ ತಾನು ಸ್ವಚ್ಚವಾಗಬೇಕು
ಎಂದುಕೊಂಡಿತು
ಅದಕ್ಕಾಗಿ ತನ್ನ ನೋವುಗಳನ್ನೆಲ್ಲಾ ನೆನೆದು
ಗಳಗಳನೇ ಅತ್ತುಬಿಟ್ಟಿತು
ದುಕ್ಕ ತುಂಬಿದ ಮೋಡಗಳೆಲ್ಲಾ
ಆಕಾಶದ ಉಸಿರನ್ನೆಲ್ಲಾ ತಂಪುಗೊಳಿಸಿ
ಒಂದನ್ನೊಂದು ಸೇರಿ
ಬಿಗಿದಪ್ಪಿಕೊಂಡವು
ಮತ್ತೆ ಅಗಲಲಾರದಂತೆ ಮತ್ತೆಂದು;
ಆಕಾಶ ಕೋಪದಿಂದ ಗುಡುಗಿ
ಮನದಲ್ಲಿದ್ದ ಬೆಂಕಿಯ ಸಿಡಿಲನ್ನು
ಹೀರಿ ತೆಗೆದು ಹೊರಹಾಕಿತು
ಕಾರ‍್ಮೋಡಗಳೆಲ್ಲಾ ಕರಗಿದವು
ಎಲ್ಲವೂ ಶಾಂತ
ಆಕಾಶವೂ ಸಹ;
ಆಕಾಶದ ನೋವುಗಳೀಗ
ನೆಲದ ಮೇಲೆ ಎಲ್ಲೆಂದರಲ್ಲಿ ಬಿದ್ದಿವೆ
ಕೆಲವು ಮಾಳಿಗೆಯ ಮೇಲೆ
ಕೆಲವು ಕೆಲವರ ಮೇಲೆ
ಕೆಲವಂತೂ ಚರಂಡಿಯಲ್ಲಿ
ಇನ್ನೂ ಕೆಲವನ್ನು ಕೆಲವರು
ಗುಡ್ಡೆ ಹಾಕಿದ್ದಾರೆ ಆಣೆಕಟ್ಟುಗಳಲ್ಲಿ;
ನಾ ಕಂಡಂತೆ ಆಕಾಶದ ನೋವುಗಳನ್ನು
ಹೆಚ್ಚು ಬಾಚಿಕೊಂಡವಳೆಂದರೆ
ಅವ್ವ ಒಬ್ಬಳೇ;
ಹಾಗಾಗಿ ಅವಳ ಕಣ್ಣುಗಳೂ ಸಹ
ಆಕಾಶಗಳಾಗಿವೆ
ಎಲ್ಲವನು ಕಂಡು ಎಲ್ಲವನು ಉಂಡು;
ಈಗ ಯಾರು ಮಿಗಿಲು
ಈ ಇಬ್ಬರಲಿ?
ಆಕಾಶವೋ ಅತವಾ ಅವ್ವ ?
ಆಕಾಶ, ಎಲ್ಲವನೂ ಉಂಡು
ಎಲ್ಲವನೂ ಮತ್ತೆ ಮರಳಿಸಿ
ಸ್ವಚ್ಚವಾಗಿಬಿಡುತ್ತದೆ
ಆದರೆ ದರೆಯ ಮೇಲಿನ ಆಕಾಶಗಳು
ಎಲ್ಲವನ್ನೂ ಉಂಡು ಉಂಡೂ
ತಾವು ಬೆಂಡಾಗುತ್ತವೆ ಮತ್ತಶ್ಟು ಬಾಗಿ;
ನೋವುಗಳು ಹೊರಬಂದದ್ದು
ಇನ್ನೊಂದು ನೋವನ್ನು ಕಂಡಾಗ ಮಾತ್ರ
ಆದರೂ ಅವುಗಳನ್ನು
ಕಟ್ಟಿಹಾಕಲಾಗಿತ್ತು ಸೆರಗಿನಲ್ಲಿ
ಮತ್ತೆಲ್ಲೂ ಸೋರಿ ಹೋಗದಂತೆ..!!
( ಚಿತ್ರಸೆಲೆ : zastavki.com )
ಅದ್ಭುತ