ಕಿರುಬರಹ : ರೂಡಿಯಂತೆ…

ತೇಜಶ್ರೀ. ಎನ್. ಮೂರ‍್ತಿ.

ಕನಸು Dream

ಮೊನ್ನೆದಿನ ಜೋರು ಮಳೆ, ಒಂದೇ ಸಮನೆ ಗುಡುಗು ಸಿಡಿಲಿನ ಅಬ್ಬರ. ಕರೆಂಟ್ ಕೂಡ ಇರಲಿಲ್ಲ ರಾತ್ರಿ. ಮಲಗುವಾಗ ಪುಸ್ತಕ ಓದುವುದು ನಂಗೊಂದು ಅಬ್ಯಾಸ. ಅಂದು ನಮ್ಮ “ವಿದ್ಯುತ್ ಸರಬರಾಜು ನಿಗಮ”ದವರಿಗೆ ನನ್ನ ಪುಸ್ತಕಕ್ಕೆ ಸ್ವಲ್ಪ ವಿರಾಮ ಕೊಡಿಸುವ ಮನಸ್ಸಾದಂತಿತ್ತು. ಒಮ್ಮೆಲೇ ಹಾಸಿಗೆ ಏರಿದವಳಿಗೆ ಎಂದಿನಂತೆ ತಕ್ಶಣ ನಿದ್ರೆಗೆ ಜಾರಲಾರದೆ, ಚಾದರ ಹೊದ್ದು ಕಣ್ಣು ಪಿಳಿಪಿಳಿಸುತ್ತಾ ಚಾವಣಿಯನ್ನೇ ರಂಗೇರಿದ ದಿಗಂತವನ್ನು ದಿಟ್ಟಿಸುವಂತೆ, ಕತ್ತಲಲ್ಲಿ ನನ್ನದೇ ಒಂದು ದಿಗಂತವನ್ನು ಸ್ರುಶ್ಟಿಸಿದೆ. ಇಶ್ಟಕ್ಕೆ ನಿಲ್ಲಲಿಲ್ಲ ಮನಸ್ಸು, ಅತ್ತಿತ್ತ ಹಾರುತ್ತಾ, ಜಿಗಿಯುತ್ತಾ, ಹುಡುಕುತ್ತಾ, ಕಡೆಗೆ ಬಾಲ್ಯದ ಬೇಸಿಗೆ ರಜೆಯೆಂಬ ಹಳ್ಳಕ್ಕೆ ದುಮುಕಿತು. ಹಾಗೆ ಕಣ್ಣಮುಂದೆ ಸಿನಿಮಾ ಬರತೊಡಗಿತು.

ಪುಟ್ಟ ಹುಡುಗಿಯಾದ ನಾನು ರಜೆಯೆಂದರೆ ಸಾಕು ಓಡುತ್ತಿದ್ದದ್ದು ಮಲೆನಾಡಿನ ಅಜ್ಜಿಯ ಮನೆಗೆ. ಅಲ್ಲಿನ ಹೆಂಚಿನ ಮನೆ, ಅಜ್ಜ-ಅಜ್ಜಿಯ ಮುದ್ದು, ಸುತ್ತಣದ ಹಸಿರು, ಮನೆಯ ಹಿತ್ತಲಿನಲ್ಲಿ ಹರಿವ ಕಾಲುವೆ, ಮುಕ್ಯವಾಗಿ ನಮ್ಮ ಅಣ್ಣ-ತಮ್ಮ-ತಂಗಿಯರ ಸೈನ್ಯ. ನಮ್ಮದು ದೊಡ್ಡ ಕುಟುಂಬ, ರಜೆಯಂದರೆ ಅಜ್ಜಿ ಮನೆಯಲ್ಲಿ ನಮ್ಮಂತಹ ಮಕ್ಕಳದ್ದೇ ಗದ್ದಲ, ಲೂಟಿ. ಇದಿಶ್ಟರಲ್ಲೂ ನಾವೊಂದು ಮೂರು ಜನ ಸ್ವಲ್ಪ ಆತ್ಮೀಯರು – ನಾನು, ರಂಜು (ಅತ್ತೆ ಮಗ ರಂಜನ್ ), ಹರ‍್ಶಿತ್ (ದೊಡ್ಡಮ್ಮನ ಮಗ ). ನಮಗೆ ವಯಸ್ಸಿನ ಅಂತರ ಕಡಿಮೆ ಇದ್ದಿದ್ದರಿಂದಲೋ ಏನೋ ನಾವು ಒಟ್ಟಿಗೆ ಇರ‍್ತಿದ್ವಿ. ನಮ್ದೇ ತೋಟದ ಕೆಲಸ ಮತ್ತು ಕೆಲಸದೊಂದಿಗೆ ಮೋಜು.

ನಾವು ಆಡದ ಆಟವೇ ಇರುತ್ತಿರಲಿಲ್ಲ, ಗೋಲಿ, ತೂರಚೆಂಡು, ಆಲಿಕಲ್, ಚೌಕಾಬಾರಾ, ಕಳ್ಳಪೊಲೀಸ್, ಕಣ್ಣಾಮುಚ್ಚಾಲೆ, ಅಡಿಕೆ ಹಾಳೆಯನ್ನು ಕಾರ‍್ ಮಾಡಿಕೊಂಡು ತೋಟವಿಡೀ ತಿರುಗುತಿದ್ದದ್ದು, ಅಡಿಗೆ ಆಟ – ಒಂದೇ, ಎರಡೇ!? ಅಬ್ಬಾ, ಆ ದಿನಗಳು ಅದೆಶ್ಟು ಬೇಗ ಉರುಳುತಿದ್ದವು. ನಾವು ಅಜ್ಜಿಯ ಸೀರೆಗಳನ್ನು ಜೋಕಾಲಿಯನ್ನಾಗಿಸಿ ತೋಟದಲ್ಲಿ ಮನೆಮಾಡಿದ್ದೆವು. ಊಟ, ತಿಂಡಿ, ಆಟ ಎಲ್ಲದ್ದಕ್ಕೂ ಸಾಕ್ಶಿಯಾಗಿದ್ದು ಆ ಎತ್ತರದ ಅಡಿಕೆ ಮರಗಳು.

ಪ್ರತಿ ಬೇಸಿಗೆಯು ಹೀಗೆ ಇದ್ದಾಗ ಅದೊಂದು ಬೇಸಿಗೆಯ ದಿನ ‘ರಂಜು ‘ಓಡಿ ಬಂದು, ‘ಯಾವುದೊ ಕುಟುಂಬದ ಕಾರ‍್ಯಕ್ರಮಕ್ಕೆ ಬೆಂಗಳೂರಿಗೆ ಹೊರಟಿದ್ದೇವೆ, 2 ದಿನ ನೀವಿಬ್ಬರು ಇರಿ, ಜಾಸ್ತಿ ಮಜಾ ಮಾಡ್ಬೇಡಿ, ಬಂದ ಮೇಲೆ ‘ಕೇಕ್ ಸಾಗರ‍್ ಅಲ್ಲಿ ದಿಲ್ಪಸಂದ್ ತಿಂದು ಹೊಸ ಕಲರ‍್-ಕಲರ‍್ ಗೋಲಿಗಳನ್ನು ಕೊಳ್ಳೋಣ’ ಎಂದ. ನಾವಿಬ್ಬರು ಹಟ ಮಾಡಿದೆವು ಬೇಡ ಹೋಗೋದು ಅಂತ, ಅತ್ತೆಗೂ ಹೇಳಿದ್ವಿ ಇವ್ನು ನಮೊಟ್ಟಿಗ್ಗೆ ಇರ‍್ಲಿ ಅಂತ. ಆದರೂ ಒತ್ತಾಯ ಮಾಡುವಂತಿರಲಿಲ್ಲ. ಸರಿ ಬೇಗ ಬಂದುಬಿಡು ಎಂದು ಹೇಳಿ ವಿದಾಯ ನೀಡಿದೆವು. ಅವನಿಲ್ಲದೆ ಅದೇನೋ ಅಂದು ನಮಗೂ ಉತ್ಸಾಹ ಸ್ವಲ್ಪ ಕುಗ್ಗಿತ್ತು, ಇಬ್ಬರು ನಮ್ಮ ತೋಟದ ಜೋಕಾಲಿಯಲ್ಲಿ ಹಾಗೆ ಕಾಲಕಳೆದೆವು. ಸಂಜೆಗೊಂದು ಕರೆ, ರಸ್ತೆ ಅಪಗಾತದಲ್ಲಿ ರಂಜು ತೀರಿದ್ದ ಎಂದು!

“ತೀರಿದ್ದು”, ಹಾಗೆಂದರೆ ಏನು? ನನಗೆ ಅದೆಲ್ಲವೂ ಹೊಸತು, ಅರ‍್ತವಾಗದ್ದು. ಮತ್ತು ಮಕ್ಕಳಿಗೆ ಹೇಳಲುಬಯಸದ ವಿಶಯವದು. ನನಗಾಗ 9 ವರ‍್ಶ, ಸಾವೆಂದರೇನು ಅರಿಯೆ. ಅಪ್ಪನ ತಂದೆಯ ಸಾವೊಂದನ್ನೇ ನೋಡಿದ್ದೆ. ತಾತ ದೇವರ ಹತ್ರ ಹೋಗಿದ್ರು ಅಂತ ಅಮ್ಮ ಹೇಳಿದ್ದಶ್ಟೇ ಗೊತ್ತು. ಏನೂ ಅರಿಯದ ಸಮಯದಲ್ಲಿ ನನ್ನ ಜೀವನದ ಅವಿಬಾಜ್ಯವಾಗಿದ್ದ ರಂಜು, ನನ್ನನ್ನು ಬಿಟ್ಟು ಹೇಗೆ ದೇವ್ರಲ್ಲಿ ಹೋಗುವನು? ಹೀಗೇಕೆ ಮಾಡಿದ, ಏನೇನೋ ಜಿಗ್ನಾಸೆಗಳು ನನ್ನಲ್ಲೇ ಅದೇನೋ ಅಂದು ಹೇಳತೀರದ ಹಿಂಸೆ. ಇಶ್ಟಾದರೂ ಸಾವೆಂದರೇನು ಸುಳಿವು ಕೂಡ ಇರ‍್ಲಿಲ್ಲ.

ಹೀಗೆಲ್ಲ ಇರುವಾಗ ನನಗೆ ಮತ್ತೂ ಆಶ್ಚರ‍್ಯ. ಅವನು ಒಂದೇ ದಿನದಲ್ಲಿ ಹಿಂದಿರುಗಿದ್ದ. ಆದರೆ ಹಿಂದಿರುಗಿದ್ದು ಬಿಳಿಯ ಬಟ್ಟೆಯಲ್ಲಿ, ಜೋರಾದ ಆಂಬುಲೆನ್ಸ್ ನಲ್ಲಿ. ಓಡಾಡಲು ಶಕ್ತನಾಗಿರಲಿಲ್ಲ, ಕಣ್ಣನ್ನು ತೆರೆದು ನಮ್ಮನ್ನು ನೋಡಲೂ ಇಲ್ಲ, ಗೋಲಿ, ಕವಡೆ ತರಬೇಕೆಂದೂ ಹೇಳಲಿಲ್ಲ. ಹೇಗೆ ಹೇಳಿಯಾನು? ಪಾಪ ಅವನಾಗಲೇ ನಿದ್ರೆಯಲ್ಲಿದ್ದ, ಎಂದೂ ಎಚ್ಚರಗೊಳ್ಳದ ಚಿರನಿದ್ರೆಯಲ್ಲಿದ್ದ.

ಅಬ್ಬಾ !!! ಇಶ್ಟೆಲ್ಲಾ ನನ್ನ ಕತ್ತಲ ಚಾವಣಿಯ ಪರದೆ ಮೇಲೆ ಓಡುವಾಗ, ಮಳೆ ನಿಂತಿತ್ತು, ಕರೆಂಟು ಹಾಜರಿ ಹಾಕಿತ್ತು, ಹಾಗೆಯೇ ನನಗೆ ಕನಸಿನಿಂದ ಎಚ್ಚರವೂ ಆಗಿತ್ತು. ನನಗದು ಇಂದಿಗೂ ಕನಸೇ, ನಿಜವೆಂದರೆ ಬಹುಶಹ ತಡೆಯಲಾರೆನೇನೋ. ಹೀಗಾಗಿ ಬೆಳಿಗ್ಗೆ ಎದ್ದ ಕೂಡಲೇ ಇದು ಕನಸೋ ನನಸೋ ಎಂಬ ವಿಮರ‍್ಶಗೆ ಕೂಡದೆ, ಅರಿವಾಗದ ನಿರ‍್ಲಿಪ್ತತೆಯ ಮಂದಹಾಸ ಮೂಡಿತ್ತು. ರೂಡಿಯಂತೆ ಹೊಸ ದಿನದೊಂದಿಗೆ ಓಡಲು ಒಡಲೂ ಅನುವಾಗಿತ್ತು 🙂

( ಚಿತ್ರಸೆಲೆ : wiki )

 

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Kiran G says:

    ತುಂಬಾ ಚೆನ್ನಾಗಿದೆ

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *