ಮಕ್ಕಳ ಕವಿತೆ : ನನ್ನ ತೋಟದಿ…

ವೆಂಕಟೇಶ ಚಾಗಿ.

ತೋಟ, garden

ನನ್ನ ತೋಟದಿ ಚೆಂದವಾಗಿ
ನಲಿಯುತ ಅರಳಿದೆ ಹೂವುಗಳು
ಹೂವನು ನೋಡಿ ಹಾಡನು ಹಾಡಿ
ಬಂದವು ಚಿಟ್ಟೆ ದುಂಬಿಗಳು

ಸಿಹಿಯನು ಹುಡುಕುತ ಇರುವೆಸಾಲು
ಬಂದೇ ಬಿಟ್ಟಿತು ಶಿಸ್ತಿನಲಿ
ತೆವಳುತ ಬಸವನಹುಳುವು
ಮೆಲ್ಲನೆ ಬಂತು ಬಳುಕುತಲಿ

ಕಲ್ಲಿನ ಬುಡದ ಮೂಲೆಯಲ್ಲಿ
ಇಲಿಯು ಒಂದು ಇಣುಕುತಿದೆ
ದೂರದಿ ನಿಂತಿಹ ಬೆಕ್ಕನು ಕಂಡು
ಬಿಲಕೆ ಮತ್ತೆ ಮರಳುತಿದೆ

ಕಾಗೆಯು ಒಂದು ರೊಟ್ಟಿ ಹಿಡಿದು
ಕಾಕಾ ಎಂದು ಕರೆಯುತಿದೆ
ಕೋಗಿಲೆಯೊಂದು ಪೊದೆಯೊಳಗೆ
ಕುಹೂ ಕುಹೂ ಎಂದು ಕೂಗುತಿದೆ

ಮಿಡತೆಯೊಂದು ಚಂಗನೆ ನೆಗೆದು
ಹುಲ್ಲಿನ ಮೇಲೆ ಜಿಗಿಯುತಿದೆ
ಗುಬ್ಬಿಯೊಂದು ಬೀಜಗಳೆಕ್ಕಿ
ಅತ್ತಿಂದಿತ್ತಲಿ ಹಾರುತಿದೆ

ನನ್ನ ತೋಟದ ಅತಿತಿಗಳು
ಬಂದೇ ಬರುವರು ಪ್ರತಿದಿನವೂ
ಹಾಡುತ ಆಡುತ ನಲಿಯುವರು
ತೋಟದಿ ಸಂತಸ ಅನುದಿನವೂ

( ಚಿತ್ರಸೆಲೆ : britannica.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: