ಮರೆಯಾಗುತ್ತಿರುವ ಬೇಸಾಯದ ಬಳಕಗಳು – ಕಂತು 1
– ನಿತಿನ್ ಗೌಡ.
ಬಾರತದ ಆರ‍್ತಿಕತೆಗೆ ವ್ಯವಸಾಯವು 3ನೇ ಅತಿ ದೊಡ್ಡ ಕೊಡುಗೆ ನೀಡುವ ಕ್ಶೇತ್ರವಾಗಿದೆ. ಇಂದಿಗೂ ಕೂಡ ವ್ಯವಸಾಯವು ಬಾರತದ ಬೆನ್ನೆಲುಬಾಗಿದೆ ಮತ್ತು ಬಾರತದ ಹೆಚ್ಚಿನ ಮಂದಿ ಹಳ್ಳಿಯಲ್ಲಿ ಬದುಕುವುದರಿಂದ (2011ರ ಮಂದಿ ಎಣಿಕೆಯ ಪ್ರಕಾರ 83.3 ಕೋಟಿ), ಹೆಚ್ಚಿನ ಪಕ್ಶ ಕ್ರುಶಿಯೇ ಅವರ ಕಸುಬಾಗಿರುತ್ತದೆ. ಬಾರತ ಇನ್ನೂ ಏಳ್ಗೆ ಹೊಂದುತ್ತಿರುವ ದೇಶವಾದರೂ ಕೂಡ, ಹಲವಾರು ಕ್ರುಶಿ ಸರಕುಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಇದಕ್ಕೆ ಮುಕ್ಯ ಕಾರಣ ನಮ್ಮ ಹಿಂದಿನವರಿಂದ(ಪೂರ‍್ವಜರಿಂದ) ಸಿಕ್ಕ ಕ್ರುಶಿ ಸಂಬಂದಿತ ಸಾಂಪ್ರದಾಯಿಕ ಅರಿಮೆಯ ಬಳುವಳಿ. ನಾಗರೀಕತೆ ಬೆಳೆದಂತೆ ಹಲವಾರು ಕ್ರುಶಿ ಬಳಕಗಳು ಹುಟ್ಟಿದವು ಮತ್ತು ಕಾಲದ ಹಲವು ಮಜಲುಗಳಲ್ಲಿ ಮಾರ‍್ಪಾಡುಗಳನ್ನು ಕೂಡ ಕಂಡವು. ಇಂದು ಟ್ರಾಕ್ಟರ್, ಟಿಲ್ಲರ್, ಜೆಸಿಬಿಗಳು ನಮ್ಮ ಹಳೆಯ ಬೇಸಾಯ ಬಳಕಗಳ ಜಾಗವನ್ನು ಪಡೆದುಕೊಂಡಿರಬಹುದು, ಆದರೆ ನಮ್ಮ ಬಳಕಗಳ ಪರಿಚಯ ನಮಗೆ ನಾವು ನಡೆದು ಬಂದ ದಾರಿಯ ಮೇಲೆ ಬೆಳಕು ಚೆಲ್ಲಲು ಮೊದಲು ಮಾಡುವುದು.
ನೇಗಿಲು
ನೇಗಿಲನ್ನು ನೆಲ ಉಳಲು ಬಳಸಲಾಗುತ್ತದೆ. ನೊಗವನ್ನು ಜೋಡು ಎತ್ತುಗಳ ಹೆಗಲಿಗೆ ಹಾಕಿ ಆಮೇಲೆ ಅದಕ್ಕೆ ನೇಗಿಲ ಹಿಡಿಯನ್ನು ಜೋಡಿಸುತ್ತಾರೆ. ನೇಗಿಲಿನಲ್ಲಿ ಮರದ ನೇಗಿಲು, ಕಬ್ಬಿಣದ ನೇಗಿಲು ಹೀಗೆ ಬಗೆಗಳಿವೆ. ಕಬ್ಬಿಣದ ನೇಗಿಲು ಒಂದು ರೆಕ್ಕೆ ಇಲ್ಲವೆ ಎರಡು ರೆಕ್ಕೆಯನ್ನು ಹೊಂದಿರಬಹುದು. ಮರದ ನೇಗಿಲು ಹೆಚ್ಚಾಗಿ ಹದಮಣ್ಣಿನಲ್ಲಿ (ಮಳೆ ಬಿದ್ದು ಸ್ವಲ್ಪ ಆರಿರುವ ಒಣ ನೆಲ), ಕಳೆ ಕಡಿಮೆ ಇರುವಲ್ಲಿ ಹೂಟಿ(ಉಳುಮೆ) ಮಾಡಲು ಒಳ್ಳೆಯದು. ಕಬ್ಬಿಣದ ನೇಗಿಲು, ಸ್ವಲ್ಪ ಕಳೆ ಹೆಚ್ಚಿದ್ದು, ನೆಲದ ತೇವ ಹೆಚ್ಚು ಇರುವಾಗ ಲೇಸು. ಕಾರಣ ಇದರ ರೆಕ್ಕೆಗಳು ಮಣ್ಣನ್ನು ಮಗುಚಿ(ಎತ್ತಿ ಹಾಕುವುದು) ಹಾಕುವುದರಿಂದ ಕಳೆಯು ನೇಗಿಲಿಗೆ ಸಿಕ್ಕಿಕೊಳ್ಳುವುದಿಲ್ಲ. ಮಣ್ಣಿನ ಹಿತವನ್ನು ನೋಡಿದರೆ ಮರದ ನೇಗಿಲು ಲೇಸು ಯಾಕಂದರೆ ಇದು ನೆಲವನ್ನು 4-5 ಇಂಚು ಆಳ ಅಶ್ಟೇ ಉಳುವುದರಿಂದ, ಮಣ್ಣಿನಲ್ಲಿರುವ ಸಾವಯವ ಅಂಶ(ಎತ್ತುಗೆಗೆ ಸಾವಯವ ಇಂಗಾಲ/humus) ಹೆಚ್ಚು ಪೋಲಾಗುವುದಿಲ್ಲ. ಸಾವಯವ ಇಂಗಾಲವು ಮಣ್ಣಿನ ಗುಣಮಟ್ಟ ಕಾಪಾಡುವಲ್ಲಿ, ನೆಲ ನೀರು ಹಿಡಿದಿಟ್ಟುಕೊಳ್ಳುವಲ್ಲಿ ಮುಕ್ಯ ಪಾತ್ರವಹಿಸುತ್ತದೆ. ಹೆಚ್ಚಿನ ಆಳವಾದ ಉಳುಮೆಯು, ಸಾವಯವ ಇಂಗಾಲ ಪೋಲಾಗಲು/ಕನಿಜೀಕರಣಗೊಳ್ಳಲು ಇಂಬು ನೀಡುತ್ತದೆ.
ನೊಗ
ಇದನ್ನು ಎತ್ತುಗಳ ಹೆಗಲ ಮೇಲೆ ಇಟ್ಟು ಜೋತ್ಗದ(ಒಂದು ಬಗೆಯ ಹಗ್ಗದ ಕೊಂಡಿ) ಮೂಲಕ ಅವುಗಳ ಕತ್ತಿಗೆ ಕಟ್ಟಲಾಗುವುದು. ಇದನ್ನು ಕಟ್ಟಿದಮೇಲೆ ಇತರ ಬೇಸಾಯದ ಬಳಕಗಳನ್ನು ಜೋಡಿಸಿ ಬಳಸಲಾಗುತ್ತದೆ.
ಕೊರಡು
ಹೂಟಿ(ಉಳುಮೆ) ಮಾಡಿದ ನೆಲವನ್ನು ಮಟ್ಟ ಮಾಡಲು ಮತ್ತು ಹೆಂಟೆ(ಮಣ್ಣಿನ ಉಂಡೆ) ಒಡೆಯಲು ಕೊರಡನ್ನು ಬಳಸಲಾಗುತ್ತದೆ. ಕೊರಡುಗಳಲ್ಲಿ 2 ಬಗೆ ಕಾಣಬಹುದು. ಸಾದ ಕೊರಡು ಮತ್ತು ಬಯ್ನೆ ಕೊರಡು.
ಈ ತಿಟ್ಟದಲ್ಲಿ ಸಾದ ಕೊರಡನ್ನು ತೋರಿಸಲಾಗಿದೆ ಮತ್ತು ಇದನ್ನು ಹಂಕಲು(ಕುರುಚಲು ಗಿಡ ಇರುವ ಕಾಲಿ ಜಾಗ) ಮತ್ತು ಕೆಸರಿಲ್ಲದ ಹೂಟಿ ಮಾಡಿದ ಗದ್ದೆಗಳನ್ನು ಮಟ್ಟ ಮಾಡಲು ಬಳಸಲಾಗುವುದು. ಬಯ್ನೆ ಕೊರಡನ್ನು ಬಿತ್ತನೆ ಮಾಡಿದ ಗದ್ದೆಯಲ್ಲಿ ನೀರನ್ನು ಕಟ್ಟಿ, ಬಳಸಲಾಗುವುದು.
ನಳ್ಳಿ
ನಳ್ಳಿಯು ಹೂಟಿ ಮಾಡಿದ ಕೆಸರು ಗದ್ದೆಗಳಲ್ಲಿ, ನೆಲವನ್ನು ಮಟ್ಟ ಮಾಡಲು ಬಳಸುವ ಬಳಕ. ಇದು ಉದ್ದವಾದ ಹಲಗೆಯನ್ನು ಹೊಂದಿರುತ್ತದೆ. ನಟ್ಟಿ(ಕೆಸರಿನ ಗದ್ದೆಯಲ್ಲಿ ಸಸಿಯನ್ನು ನಡುವೆ ಕೆಲಸದ ಪರಿ) ಮಾಡುವ ಮುನ್ನ, ಮಳೆಗಾಲದಲ್ಲಿ ಗದ್ದೆಗಳನ್ನು ಹೂಟಿ ಮಾಡಲಾಗುವುದು. ಹೀಗೆ ಹೂಟಿ ಮಾಡಿದಮೇಲೆ ,ಆ ಕೆಸರ ಗದ್ದೆಯು ಉಬ್ಬು ತಗ್ಗಾಗುವುದು ,ಆದ್ದರಿಂದ ಆ ಗದ್ದೆಗಳನ್ನು ಮಟ್ಟ(ಸಮತಟ್ಟು) ಮಾಡಲು ನಳ್ಳಿ ಹೊಡೆಯಲಾಗುವುದು.
ಕೂರಿಗೆ
ಇದನ್ನು ನೆಲದಲ್ಲಿ ಬೀಜ ಉತ್ತಲು(ಬಿತ್ತಲು) ಬಳಸಲಾಗುತ್ತದೆ. ಒಂದು 2-3 ಅಡಿ ಅಗಲವಾದ ಮರದ ಕುಂಟಿಗೆ, ಅದರಲ್ಲಿ 3-4 ತೂತುಗಳು, ಅದರೊಳಗೆ ಬಿದಿರಿನ ಕೊಳವೆ ಒಂದು ಅರ‌್ದ ಅಡಿಯಶ್ಟು ಹಾದು ಹೋಗುವುದು(ನೆಲದೊಳಗೆ ಉತ್ತಲು). ಈ 3 ಕೊಳವೆಗಳು ಮೇಲೆ ಬಂದು, ಒಂದು ಕೊಳಗ(container) ಸೇರುವವು ಮತ್ತು ಅದರ ಮೂಲಕ ಬತ್ತ ಇತ್ಯಾದಿ ಬೀಜಗಳನ್ನು ಕಳುಹಿಸುವ ಎರ‌್ಪಾಡಿರುತ್ತದೆ. ಈ ಬಳಕವನ್ನು ಜೋಡೆತ್ತುಗಳ ನೊಗಕ್ಕೆ ಕಟ್ಟಿ, ಉತ್ತಲು(ಬಿತ್ತಲು) ಬಳಸಲಾಗುತಿತ್ತು.
ಕುಂಟೆ
ಕೂರಿಗೆಯ ಮೂಲಕ ಬಿತ್ತನೆ ಮಾಡಿದ ರಾಗಿ, ಜೋಳ ಮತ್ತು ಬತ್ತವನ್ನು ಹರಗಲು(ಬುಡ ಸಡಿಲಿಸಿ ಕಳೆ ಕೀಳುವ ಕೆಲಸ) ಇದನ್ನು ಬಳಸಲಾಗುವುದು. ನೇರವಾಗಿ ಉತ್ತಿದ ನೆಲ ಹರಗಿದ ಮೇಲೆ, ಸಡಿಲವಾಗಿ ಕಳೆಯು ಸಹ ಬುಡ ಬಿಡುವುದು.
ಕುಂಟೆಯಲ್ಲಿ 2 ಬಗೆ. ಹೆಗ್ಗುಂಟೆ ಮತ್ತು ಹರ‌್ತೆ ಕುಂಟೆ.
ಈ ಸಲಕರಣೆಗಳ ಬಳಕೆಯನ್ನು ಕೆಳಗಿನ ಎತ್ತುಗೆಯ ಮೂಲಕ ವಿವರಿಸಲಾಗಿದೆ.
ಬೇಸಿಗೆಯ ಕೊನೆಯ ಹಂತದಲ್ಲಿ ನೇಗಿಲಿನಿಂದ ಹೂಟಿ ಮಾಡಲಾಗುವುದು. ಹೂಟಿ ಮಾಡಿದ ಗದ್ದೆ/ಹಂಕಲಿನಲ್ಲಿರುವ ಕಳೆಯನ್ನು(ಬೇರು/ಕಡ್ಡಿ) ಹೆಗ್ಗುಂಟೆ ಮೂಲಕ ಹರಗಲಾಗುವುದು. ಹರಗಿದ ಮೇಲೆ ಕೂಳೆ ಸಡಿಲಗೊಂಡು ಮೇಲಕ್ಕೆ ಬರುವುದು. ಇದಾದಮೇಲೆ ಸಾದ ಕೊರಡನ್ನು ಹೊಡೆದು ಮಣ್ಣನ್ನು ಮಟ್ಟ ಮಾಡಿ ಕೂರಿಗೆಯ ಮೂಲಕ ಬಿತ್ತನೆ(ಎತ್ತುಗೆಗೆ ಬತ್ತದ ಬಿತ್ತನೆ) ಮಾಡಲಾಗುವುದು. ಹೀಗೆ ಬಿತ್ತನೆ ಮಾಡಿದ ಬತ್ತದ ಸಸಿ ಹುಟ್ಟಿದ ಮೇಲೆ, ಅದರ ಸುತ್ತ ಇರುವ ಕಳೆ ಹರಗಲು ಹರ‌್ತೆ ಕುಂಟೆ ಬಳಸಲಾಗುವುದು.
ಬತ್ತದ ಸಸಿಯ ಮೇಲೂ ಕೂಡ ಮಣ್ಣು ಬಿದ್ದಿರಬಹುದು ಮತ್ತು ಕೆಲವೊಂದು ಕಳೆಯು ಕೂಡ ಅರ‌್ದಂಬರ‌್ದ ಬುಡ ಬಿಡದೆ ಇರಬಹುದು. ಆದ ಕಾರಣ, ಉಳಿದ ಕಳೆ ತೆಗಯಲು ಮತ್ತು ಬತ್ತದ ಸಸಿಯ ಮೇಲೆ ಬಿದ್ದ ಮಣ್ಣು ಜರುಗಿಸಲು ಹಲ್ಕನ್ನು ಬಳಸಲಾಗುತ್ತದೆ. ಹಲ್ಕಿನ ಚೂಪಾದ ಗರಗಸದಂತಹ ಹಲ್ಲುಗಳಿಗೆ ಸಿಕ್ಕಿ ಉಳಿದ ಕಳೆ ಬುಡ ಬಿಡುವುದು. ಕಳೆ ಕಡಿಮೆ ಇದ್ದರೆ ಅದನ್ನು ಅಲ್ಲಿಯೇ ಬಿಸಿಲಿಗೆ ಒಣಗಲು ಬಿಡಲಾಗುವುದು ಇಲ್ಲದಿದ್ದರೆ ಬಿದಿರಿನ ಹಿಡಿಯ ಮೂಲಕ ಆ ಕಳೆ ಬಾಚಲಾಗುವುದು. ಈ ಕಳೆ ಬಾಚುವ ಕೆಲಸವನ್ನು “ಅಲ ಬಾಚುವುದು” ಎನ್ನುವರು.
ಬಿತ್ತನೆ ಮಾಡಿ ಮಳೆಗಾಲ ಶುರುವಾದಮೇಲೆ ಗದ್ದೆಯಲ್ಲಿ ಕಳೆಯು ಹೆಚ್ಚಾಗುವುದು. ಆಗ ಗದ್ದೆಯಲ್ಲಿ ನೀರನ್ನು ಕಟ್ಟಿ ನಿಲ್ಲಿಸಲಾಗುವುದು. ಆಮೇಲೆ ಮತ್ತೊಮ್ಮೆ ಹರ‌್ತೆ ಕುಂಟೆಯ ಮೂಲಕ ಹರಗಲಾಗುವುದು. ಹೀಗೆ ಹರಗಿದ ಮೇಲೆ ಬಯ್ನೆ ಕೊರಡು ಹೊಡೆಯಲಾಗುವುದು. ಈಗ ಸಸಿಯು 1-1. 5 ಗೇಣು ಬೆಳೆದಿರುವುದರಿಂದ, ಬಯ್ನೆ ಕೊರಡು ಹೊಡೆಯಲು ಸುಸೂತ್ರವಾಗುವುದು. ಬಯ್ನೆ ಕೊರಡು ಹೊಡೆದ ಮೇಲೆ ಕೆಸರಲ್ಲಿ ಹೂತಿರುವ ಕಳೆ ನೀರಿನಲ್ಲಿ ತೇಲುವುದು ಮತ್ತು ಸಿಳ್ಳು(ತೆಳು ಕೆಸರು) ಮೇಲೆ ಬರುವುದು. ಹೀಗೆ ಕೊರಡು ಹೊಡೆಯುವುದನ್ನು “ಅಲ ಹೊಡೆಯುವುದು” ಎನ್ನುವರು ಮತ್ತು ಈ ತೇಲುತ್ತಿರುವ ಕಳೆಯನ್ನು ಬಿದಿರಿನ ಹಿಡಿಯ ಮೂಲಕ ಬಾಚಲಾಗುವುದು. ಈ ಕಳೆ ಬಾಚುವ ಕೆಲಸವನ್ನು “ಅಲ ಬಾಚುವುದು” ಎನ್ನುವರು. ಜೋಳವನ್ನು ಹಂಕಲಿನಲ್ಲಿ ಬೆಳೆಯುವದರಿಂದ ಎರಡನೆ ಬಾರಿ ನೀರು ಕಟ್ಟಿ ಅಲ ಬಾಚಲಾಗುವುದಿಲ್ಲ.
(ಚಿತ್ರ ಸೆಲೆ: indiawaterportal.org)
ಇತ್ತೀಚಿನ ಅನಿಸಿಕೆಗಳು