ಕರ‍್ನಾಟಕ ಕ್ರಿಕೆಟ್ ತಂಡದ ಎರಡನೇ ರಣಜಿ ಗೆಲುವು
1973/74 ರ ಮೊದಲ ರಣಜಿ ಗೆಲುವಿನ ಬಳಿಕ ಕರ‍್ನಾಟಕ 1974/75 ರ ಸಾಲಿನಲ್ಲಿ ಮತ್ತೊಮ್ಮೆ ಪೈನಲ್ ತಲುಪಿದರೂ ಅಶೋಕ್ ಮಂಕಡ್ ನಾಯಕತ್ವದ ಬಾಂಬೆ ಎದುರು 7 ವಿಕೆಟ್‌ಗಳ ಸೋಲು ಅನುಬವಿಸುತ್ತಾರೆ. ಆ ಬಳಿಕ 1975/76 ರಲ್ಲಿ ಕರ‍್ನಾಟಕದ ಎಲ್ಲಾ ಪ್ರಮುಕ ಆಟಗಾರರು ಬಾರತ ತಂಡದೊಂದಿಗೆ ನ್ಯೂಜಿಲ್ಯಾಂಡ್ ಪ್ರವಾಸಕ್ಕೆ ಹೋಗಿರುವಾಗ ಸೆಮಿಪೈನಲ್ ನಲ್ಲಿ ಬಿಹಾರ್ ಎದುರು 10 ವಿಕೆಟ್ ಗಳ ಸೋಲುಂಡು ನಿರಾಸೆ ಮೂಡಿಸುತ್ತಾರೆ. 1976/77 ರ ಸಾಲಿನಲ್ಲಿ ತವರಲ್ಲೇ ಎಲ್ಲಾ ಮುಕ್ಯ ಆಟಗಾರರ ಬಲವಿದ್ದರೂ ಬಿಶನ್ ಬೇಡಿ ಮುಂದಾಳ್ತನದ ದೆಹಲಿ ಎದುರು ಬ್ರಿಜೇಶ್ ರ ಸೊಗಸಾದ 183 ರ ಹೊರತಾಗಿಯೂ 47 ರನ್ ಗಳ ಇನ್ನಿಂಗ್ಸ್ ಮುನ್ನಡೆ ಬಿಟ್ಟು ಕೊಟ್ಟು ಟೂರ‍್ನಿಯಿಂದ ಹೊರನಡೆಯುತ್ತಾರೆ.
“1973/74 ರಲ್ಲಿ ಗೆದ್ದದ್ದು ಅದ್ರುಶ್ಟದಿಂದ ಅಶ್ಟೇ”
ಒಮ್ಮೆ ಟೂರ‍್ನಿ ಗೆದ್ದು ನಂತರ ಸತತ ಮೂರು ಬಾರಿ ಕರ‍್ನಾಟಕ ಎಡವಿದ್ದರಿಂದ ತಂಡದ ಬಗ್ಗೆ ನಾನಾ ಬಗೆಯ ಟೀಕೆ-ಟಿಪ್ಪಣಿಗಳು ಕೇಳಿ ಬರುತ್ತವೆ. ಏನೋ ಒಮ್ಮೆಅದ್ರುಶ್ಟದ ಬಲವಿತ್ತು ಗೆದ್ದರು, ಅಶ್ಟೇ. ಮತ್ತೊಮ್ಮೆ ಗೆದ್ದು ತೋರಿಸಲಿ ನೋಡೋಣ ಎಂದೆಲ್ಲಾ ಪತ್ರಕರ‍್ತರು, ಕ್ರಿಕೆಟ್ ಪಂಡಿತರು ಟೀಕೆ ಮಾಡುತ್ತಾರೆ. ಇವನ್ನೆಲ್ಲಾ ಕಂಡು ಸಹಜವಾಗಿಯೇ ನಾಯಕ ಪ್ರಸನ್ನ ಸೇರಿ ಎಲ್ಲಾ ಆಟಗಾರರಿಗೆ ವಿಮರ‍್ಶಕರ ಬಾಯಿ ಮುಚ್ಚಿಸಬೇಕೆಂಬ ತುಡಿತ ಮೊದಲಾಗುತ್ತದೆ. ಆದರೆ 1977/78 ರ ನವೆಂಬರ್ ನಲ್ಲಿ ರಣಜಿ ಟೂರ‍್ನಿ ಆರಂಬಗೊಳ್ಳುವ ಹೊತ್ತಿನಲ್ಲಿ ಬಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುತ್ತದೆ. ಪ್ರಸನ್ನ, ಚಂದ್ರ, ವಿಶ್ವನಾತ್, ಕಿರ‍್ಮಾನಿ ಹಾಗೂ ಬ್ರಿಜೇಶ್ ಪಟೇಲ್ ಬಾರತ ತಂಡದಲ್ಲಿರುತ್ತಾರೆ. ಅರ‍್ದ ಕರ‍್ನಾಟಕ ತಂಡವೇ ಇಲ್ಲದಂತಾಗುತ್ತದೆ. ಈ ದಿಗ್ಗಜರ ಅನುಪಸ್ತಿತಿಯಲ್ಲಿ ಕರ‍್ನಾಟಕ ತಂಡವನ್ನುಮುನ್ನಡೆಸುವ ಹೊಣೆ ಸುದಾಕರ್ ರಾವ್ ಅವರ ಪಾಲಾಗುತ್ತದೆ. ನಾಕೌಟ್ ತಲುಪಿದರೆ ಸಾಕು ಎಲ್ಲಾ ಪ್ರಮುಕರು ಆಸ್ಟ್ರೇಲಿಯಾದಿಂದ ಹಿಂದಿರುಗಿ ತಂಡ ಸೇರುತ್ತಾರೆ ಎಂಬುದು ಎಲ್ಲರಿಗೂ ಚೆನ್ನಾಗಿಯೇ ಗೊತ್ತಿರುತ್ತದೆ. ಅಲ್ಲಿಯವರೆಗೂ ತಂಡವನ್ನು ಕೊಂಡೊಯ್ಯುವ ಹೊಣೆ ಹೊತ್ತು ನಾಯಕ ಸುದಾಕರ್ ರಾವ್, ಬಿನ್ನಿ, ಸಂಜಯ್ ದೇಸಾಯಿ, ಟಂಡನ್ ರಂತಹ ಯುವಕರ ಪಡೆಯೊಂದಿಗೆ ಕಣಕ್ಕಿಳಿಯುತ್ತಾರೆ.
1977/78 ಲೀಗ್ ಹಂತ
ಕೇರಳ ಎದುರು ಚಿಕ್ಕಮಗಳೂರಿನಲ್ಲಿ ಟೂರ‍್ನಿಯ ಮೊದಲ ಪಂದ್ಯ ಆಡಿದ ಕರ‍್ನಾಟಕ ಇನ್ನಿಂಗ್ಸ್ ಹಾಗೂ 186 ರನ್ ಗಳ ಬರ‍್ಜರಿ ಗೆಲುವು ದಾಕಲಿಸುತ್ತದೆ. ಬ್ಯಾಟಿಂಗ್ ಮಾಡಿದ ಒಂದು ಇನ್ನಿಂಗ್ಸ್ ನಲ್ಲಿ ಒಂದೂ ವಿಕೆಟ್ ಕಳೆದುಕೊಳ್ಳದೆ ಸಂಜಯ್ ದೇಸಾಯಿ (218*) ಹಾಗೂ ರೋಜರ್ ಬಿನ್ನಿ (211*) ರವರ ಮುರಿಯದ ಜೊತೆಯಾಟದಿಂದ ಕೇವಲ 73 ಓವರ್ ಗಳಲ್ಲಿ ಓವರ್ ಗೆ 6.17 ರ ಸರಾಸರಿಯಲ್ಲಿ 451 ರನ್ ಗಳಿಸಿ ಡಿಕ್ಲೇರ್ ಮಾಡಿದ್ದು ಇಂದಿಗೂ ಒಂದು ಮುರಿಯದ ದಾಕಲೆ. 70 ರ ದಶಕದಲ್ಲಿ ಅದೂ ನಾಲ್ಕು ದಿನದ ಪಂದ್ಯಗಳಲ್ಲಿ ಈ ಬಗೆಯ ಬಿರುಸಿನ ಬ್ಯಾಟಿಂಗ್ ಪ್ರದರ‍್ಶನ ಕಂಡು ಎಲ್ಲರೂ ಬೆರಗಾಗುತ್ತಾರೆ. ಆ ಬಳಿಕ ಹೈದರಾಬಾದ್ಎದುರು ಇನ್ನಿಂಗ್ಸ್ ಹಿನ್ನಡೆ ಅನುಬವಿಸಿದರೂ ನಂತರ ಸಾಂಪ್ರಾದಾಯಿಕ ಎದುರಾಳಿ ತಮಿಳುನಾಡು ಎದುರು ಸಂಜಯ್ ದೇಸಾಯಿರ ಶತಕ (122) ಹಾಗೂ ವಿಜಯ್ ಕುಮಾರ್ ಅವರ 13 ವಿಕೆಟ್ ಗಳ (7/53 & 6/54) ನೆರವಿನಿಂದ ಕರ‍್ನಾಟಕ 200 ರನ್ ಗಳ ದೊಡ್ಡ ಗೆಲುವು ಪಡೆಯುತ್ತದೆ. ಆಂದ್ರ ತಂಡದ ಎದುರು ಕಡೆಯ ಲೀಗ್ ಪಂದ್ಯದಲ್ಲಿ 10 ವಿಕೆಟ್ ಗಳ ಗೆಲುವು ಪಡೆಯುವುದರಲ್ಲಿ ಬಿನ್ನಿ ಅವರ 174 ರನ್ ಗಳು ಹಾಗೂ ವೋರಾ ಅವರ 8 ವಿಕೆಟ್ ಗಳು (5/25 & 3/22) ಮುಕ್ಯ ಪಾತ್ರವಹಿಸುತ್ತದೆ. ಒಟ್ಟು ನಾಲ್ಕು ಲೀಗ್ ಪಂದ್ಯಗಳಲ್ಲಿ ಒಂದೂ ಪಂದ್ಯ ಸೋಲದೆ ಮೂರರಲ್ಲಿ ಗೆದ್ದು ಕರ‍್ನಾಟಕ ದಕ್ಶಿಣ ವಲಯದ ಅಂಕಪಟ್ಟಿಯಲ್ಲಿ ಮೊದಲ ಎಡೆಪಡೆದು ನಾಕೌಟ್ ಹಂತಕ್ಕೆ ಲಗ್ಗೆ ಇಡುತ್ತದೆ.
ನಾಕೌಟ್ ಹಂತ – ಮರಳಿದ ಅಂತರಾಶ್ಟ್ರೀಯ ಆಟಗಾರರು
ಆಸ್ಟ್ರೇಲಿಯಾ ಪ್ರವಾಸದಿಂದ ಮರಳಿದ ಪ್ರಸನ್ನ ಮತ್ತೊಮ್ಮೆ ನಾಯಕನ ಹೊಣೆ ಹೊರುತ್ತಾರೆ. ಇವರೊಟ್ಟಿಗೆ ವಿಶ್ವನಾತ್, ಬ್ರಿಜೇಶ್ ಪಟೇಲ್, ಚಂದ್ರ ಹಾಗೂ ಕಿರ‍್ಮಾನಿ ಕೂಡ ಕರ‍್ನಾಟಕ ತಂಡವನ್ನು ಸೇರಿ ತಂಡವನ್ನು ಬಲಗೊಳ್ಳಿಸುತ್ತಾರೆ. ಬಿಹಾರ್ ಎದುರು ಕ್ವಾರ‍್ಟರ್ ಪೈನಲ್ ನಲ್ಲಿ ಸಂಜಯ್ ದೇಸಾಯಿ (105), ವಿಜಯಕ್ರಿಶ್ಣ (104), ಹಾಗೂ ವಿಶ್ವನಾತ್ (82) ಅವರ ಅದ್ಬುತ ಬ್ಯಾಟಿಂಗ್ ಪ್ರದರ‍್ಶನದಿಂದ ಕರ‍್ನಾಟಕ ತಂಡ 486 ರನ್ ಕಲೆಹಾಕುತ್ತದೆ. ಪ್ರಸನ್ನರ ಸ್ಪಿನ್ ದಾಳಿಗೆ (5/88 & 3/21) ನಲುಗಿದ ಬಿಹಾರ್ ಇನ್ನಿಂಗ್ಸ್ ಹಾಗೂ 69 ರನ್ ಗಳಿಂದ ಸೋಲುಣ್ಣುತ್ತದೆ.
ಸೆಮಿಪೈನಲ್ ಎದುರಾಳಿ – ಬಲಾಡ್ಯ ದೆಹಲಿ
ಕರ‍್ನಾಟಕದಂತೆ ದೆಹಲಿ ಕೂಡ ಅಂತರಾಶ್ಟ್ರೀಯ ಆಟಗಾರರಿಂದ ತುಂಬಿರುತ್ತದೆ. ನಾಯಕ ಬಿಶನ್ ಬೇಡಿ ಅವರೊಟ್ಟಿಗೆ ಚೇತನ್ ಚೌಹಾಣ್, ಅರುಣ್ ಲಾಲ್, ಮೊಹಿಂದರ್ ಅಮರ‍್ನಾತ್, ಸುರೇಂದರ್ ಅಮರ‍್ನಾತ್ ಹಾಗೂ ಮದನ್ ಲಾಲ್ ರ ಬಲ ದೆಹಲಿಗೆ ಇರುತ್ತದೆ. ಈ ಹಣಾಹಣಿಯನ್ನು ಅಂತರಾಶ್ಟ್ರೀಯ ಮಟ್ಟದ ಟೆಸ್ಟ್ ಪಂದ್ಯವೆಂದೇ ಪತ್ರಿಕೆಗಳು ವರದಿ ಮಾಡುತ್ತವೆ. ಹಾಗೂ ಈ ಸೆಮೀಸ್ ಪಂದ್ಯ ಗೆದ್ದವರೇ ರಣಜಿ ಗೆಲ್ಲಲಿದ್ದಾರೆ ಎಂದು ಕ್ರಿಕೆಟ್ ಪಂಡಿತರು ಅನಿಸಿಕೆ ವ್ಯಕ್ತ ಪಡಿಸುತ್ತಾರೆ. ದೆಹಲಿಯಲ್ಲಿ ನಡೆದ ಈ ಬಹು ನಿರೀಕ್ಶಿತ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ದೆಹಲಿ ತಂಡ ಚಂದ್ರ ಅವರ ಬಿರುಸಿನ ಬೌಲಿಂಗ್ (5/117) ಹೊರತಾಗಿಯೂ ಮದನ್ ಲಾಲ್ಅವರ ಶತಕದ (108) ನೆರವಿನಿಂದ 332 ರನ್ ಗಳಿಸುತ್ತಾರೆ. ಎರಡನೇ ದಿನದಿಂದಲೇ ತಿರುಗುತ್ತಿದ್ದ ಈ ಪಿಚ್ ಮೇಲೆ ದಿಗ್ಗಜ ಬೇಡಿ ಅವರನ್ನು ಎದುರಿಸಿ ಅಶ್ಟು ರನ್ ಗಳಿಸುವುದು ದೊಡ್ಡ ಸವಾಲಾಗಿರುತ್ತದೆ. ಆದರೆ ತಮ್ಮ ಬ್ಯಾಟಿಂಗ್ ಉತ್ತುಂಗದಲ್ಲಿದ್ದ ವಿಶ್ವನಾತ್ ಅವರು ಬೇಡಿ ಅವರ ಸವಾಲನ್ನು ಎದುರಿಸಿ ಆಕರ‍್ಶಕ 118 ರನ್ ಬಾರಿಸುತ್ತಾರೆ. ಬಿನ್ನಿ 54 ಹಾಗೂ ಸುದಾಕರ್ ರಾವ್ 58 ರನ್ ಗಳಿಸಿ ತಂಡದ ಮೊತ್ತವನ್ನು ನಾನೂರರ ಗಡಿಯ ಸನಿಹ ತಂದು (391), ಒಟ್ಟು 59 ರನ್ ಗಳಮೊದಲ ಇನ್ನಿಂಗ್ಸ್ ಮುನ್ನಡೆ ದಕ್ಕಿಸಿ ಕೊಡುತ್ತಾರೆ. ಎರಡನೇ ಇನ್ನಿಂಗ್ಸ್ ನಲ್ಲಿ ಬೇಗನೆ ರನ್ ಗಳಿಸಿ (195/7) ದೆಹಲಿ ಡಿಕ್ಲೇರ್ ಮಾಡಿ 135 ರನ್ ಗಳ ಗುರಿ ನೀಡಿ ಪಂದ್ಯ ಗೆಲ್ಲಲು ಪ್ರಯತ್ನ ಪಟ್ಟರೂ ಕರ‍್ನಾಟಕ 5 ವಿಕೆಟ್ ಕಳೆದುಕೊಂಡು 94 ರನ್ ಗಳಿಸಿ ಗೆಲುವಿನ ಗುರಿಯಿಂದ 40 ರನ್ ದೂರ ಇರುವಾಗ ಪಂದ್ಯ ರೋಚಕ ಡ್ರಾನಲ್ಲಿ ಕೊನೆಗೊಳ್ಳುತ್ತದೆ. ಕಿರ‍್ಮಾನಿ ಹಾಗೂ ವಿಜಯಕ್ರಿಶ್ಣ ಆಗ ಕ್ರೀಸ್ ನಲ್ಲಿರುತ್ತಾರೆ. ಕರ‍್ನಾಟಕ ಮೊದಲ ಇನ್ನಿಂಗ್ಸ್ ಮುನ್ನಡೆಯ ಬಲದಿಂದ ಮತ್ತೊಂದು ರಣಜಿ ಪೈನಲ್ ಗೆ ದಾಪುಗಾಲಿಡುತ್ತದೆ.
ಪೈನಲ್ – ಕರ‍್ನಾಟಕಕ್ಕೆ ಮತ್ತೊಂದು ರಣಜಿ ಕಿರೀಟ
ಹೇಳಿಕೊಳ್ಳುವಂತಹ ತಂಡವಲ್ಲದ್ದಿದ್ದರೂ ಉತ್ತರ ಪ್ರದೇಶ ಒಳ್ಳೆಯ ಪ್ರದರ‍್ಶನ ನೀಡಿ ಪೈನಲ್ ತಲುಪಿರುತ್ತಾರೆ. ಅದರಲ್ಲೂ ಸೆಮಿಪೈನಲ್ ನಲ್ಲಿ ಬಲಿಶ್ಟ ಹೈದರಾಬಾದ್ ತಂಡವನ್ನು ಮಣಿಸಿ ತಮ್ಮನ್ನು ಹಗುರವಾಗಿ ಪರಿಗಣಿಸದಂತೆ ಎಚ್ಚರಿಕೆಯ ಕರೆಗಂಟೆ ಬಾರಿಸಿರುತ್ತಾರೆ. ತಮ್ಮ ಬೌಲಿಂಗ್ ಶಕ್ತಿಯಾಗಿದ್ದ ಎಡಗೈ ಸ್ಪಿನ್ನರ್ ರಾಜಿಂದರ್ ಸಿಂಗ್ ಹಂಸ್ ರಿಗೆ ನೆರವಾಗುವಂತೆ ಮೋಹನ್ ನಗರ್ ನ ತಮ್ಮ ತವರು ಅಂಗಳದಲ್ಲಿ ಮೊದಲ ದಿನದಂದೇ ತಿರುಗುವಂತಹ ಪಿಚ್ ಮಾಡಿ ಪೈನಲ್ ಗೆಲ್ಲುವ ಕನಸು ಕಾಣುತ್ತಿರುತ್ತಾರೆ.
ಉತ್ತರಪ್ರದೇಶ ತಂಡದ ತಂತ್ರ
ಯೂಪಿ ತಂಡ ತಮ್ಮ ಸೆಮೀಸ್ ಪಂದ್ಯದ ಹಿಂದಿನ ರಾತ್ರಿ ಹೈದರಾಬಾದ್ ತಂಡಕ್ಕೆ ಬಿಯರ್ ಕೂಟ ಏರ‍್ಪಡಿಸಿ ಎದುರಾಳಿ ಆಟಗಾರರ ಪ್ರದರ‍್ಶನ ಕುಂದುವಂತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ. ಇದೇ ತಂತ್ರವನ್ನು ಕರ‍್ನಾಟಕದ ಆಟಗಾರರ ಮೇಲೂ ಪ್ರಯೋಗ ಮಾಡುತ್ತಾರೆ. ಮೋಹನ್ ನಗರ್ ನಲ್ಲಿ ರಣಜಿ ಪೈನಲ್ ನಹಿಂದಿನ ರಾತ್ರಿ ದೊಡ್ಡದೊಂದು ಬಿಯರ್ ಪಾರ‍್ಟಿ ನೀಡುತ್ತಾರೆ. ಬಿಯರ್ ಪ್ರಿಯರಾಗಿದ್ದ ಕರ‍್ನಾಟಕದ ಆಟಗಾರರೆಲ್ಲಾ ಈ ಕೂಟದಲ್ಲಿ ಪಾಲ್ಗೊಳ್ಳುತ್ತಾರೆ.
ಪಂದ್ಯದ ದಿನ ಅಂಗಳದಲ್ಲಿ ನಡೆದದ್ದೇ ಬೇರೆ!
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಯೂಪಿ ಚಂದ್ರರ ದಾಳಿಗೆ ತತ್ತರಿಸಿ ಮೊದಲ ಇನ್ನಿಂಗ್ಸ್ ಲಿ ಕೇವಲ 129 ರನ್ ಮಾತ್ರ ಗಳಿಸುತ್ತಾರೆ. ಸ್ಪಿನ್ನರ್ ಗಳಿಗೆ ಹೇಳಿಮಾಡಿಸಿದಂತ ಪಿಚ್ ಮೇಲೆ ಚಂದ್ರರ (6/57) ಹಾಗೂ ಪ್ರಸನ್ನರ (3/43) ಪ್ರದರ‍್ಶನ ಕರ‍್ನಾಟಕಕ್ಕೆ ಪಂದ್ಯ ಗೆಲ್ಲಲು ಒಳ್ಳೆ ಅಡಿಪಾಯ ಹಾಕಿ ಕೊಡುತ್ತದೆ. “ಪಾಪ, ಯೂಪಿ ಅವರು ಬಿಯರ್ ಕುಡಿಸಿ ನಮ್ಮ ತಂಡವನ್ನು ಹಳಿ ತಪ್ಪಿಸಲು ನೋಡಿದರು, ಆದರೆ ಕರ‍್ನಾಟಕ ಕ್ರಿಕೆಟ್ ಗೂ ಬಿಯರ್ ಗೂ ಇರುವ ಅವಿನಾಬಾವ ನಂಟು ಅವರಿಗೆ ತಿಳಿಯದೇ ಹೋಯಿತು” ಎಂದು ವಿಶ್ವನಾತ್ ಅವರು ಮೊದಲ ದಿನದ ಆಟದ ಬಳಿಕ ಸುದ್ದಿಗಾರರೊಂದಿಗೆ ತಮಾಶೆ ಮಾಡುತ್ತಾರೆ. 129 ರನ್ ಗಳ ಬೆನ್ನತ್ತಿದ ಕರ‍್ನಾಟಕ ವಿಶ್ವನಾತ್ ಅವರ 247 ಹಾಗೂ ಬ್ರಿಜೇಶ್ ಅವರ 100 ರನ್ ಗಳ ಬಲದಿಂದ ಒಟ್ಟು 434 ರನ್ ಗಳನ್ನು ಕಲೆ ಹಾಕಿ 305 ರನ್ ಗಳ ದೊಡ್ಡ ಇನ್ನಿಂಗ್ಸ್ ಮುನ್ನಡೆ ಪಡೆಯುತ್ತಾರೆ. ಪಂದ್ಯದ ವೇಳೆ ಎರಡನೇ ದಿನದ ಆಟದ ನಂತರ ಕರ‍್ನಾಟಕದ ಆಟಗಾರರಿಗೆ ಬಿಯರ್ ಸಿಗದಂತೆ ಸ್ತಳೀಯ ಸಂಸ್ತೆ ಎಚ್ಚರ ವಹಿಸುತ್ತದೆ. ಕಡೆಗೆ “ದುಡ್ಡು ಕೊಡುತ್ತೇವೆ, ಬಿಯರ್ ಕೊಡಿ ಎಂದು ಮನವಿ ಮಾಡಿದರೂ ಸಾದ್ಯವಿಲ್ಲ” ಎಂದರು ಎಂದು ಸುದಾಕರ್ ರಾವ್ ಈಗಲೂ ನಗುತ್ತಲೇ ಆ ದಿನವನ್ನು ನೆನೆಯುತ್ತಾರೆ.
ನಂತರ ಎರಡನೇ ಇನ್ನಿಂಗ್ಸ್ ನಲ್ಲೂ ಚಂದ್ರ (6/24) ಹಾಗೂ ಪ್ರಸನ್ನ (3/27) ರ ಸ್ಪಿನ್ ಜುಗಲ್ಬಂದಿಗೆ ಯೂಪಿ ತಂಡ ಕೇವಲ 112 ರನ್ ಗಳಿಗೆಕುಸಿಯುತ್ತದೆ. ಮೂರೇ ದಿನಗಳಲ್ಲಿ ಕರ‍್ನಾಟಕ ತಂಡ ಇನ್ನಿಂಗ್ಸ್ ಹಾಗೂ 193 ರನ್ ಗಳ ನಿರಾಯಾಸ ಗೆಲುವು ಪಡೆದು ಎರಡನೇ ರಣಜಿ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡು ತಾವು ದೇಸೀ ಕ್ರಿಕೆಟ್ ನ ದೊರೆ ಎಂದು ಸಾಬೀತು ಮಾಡುತ್ತದೆ. ಈ ಗೆಲುವು ಕೂಡ ಮೊದಲ ಗೆಲುವಿನಂತೆ ಕರ‍್ನಾಟಕದ ಕ್ರಿಕೆಟ್ ಇತಿಹಾಸದಲ್ಲಿ ಒಂದು ಅವಿಸ್ಮರಣೀಯ ಕ್ಶಣ. ಟೀಕಾಗಾರರ, ವಿಮರ‍್ಶಕರ ಬಾಯಿ ಮುಚ್ಚಿಸಿ “ನಾವು 74 ರಲ್ಲಿ ಗೆದ್ದದ್ದು ಅದ್ರುಶ್ಟದಿಂದಲ್ಲ, ನಮ್ಮಲ್ಲಿ ರಣಜಿ ಗೆಲ್ಲುವ ಅಳವಿದೆ” ಎಂದು ಸಾಬೀತು ಮಾಡಿದ ದಿನ.
(ಚಿತ್ರ ಸೆಲೆ: ವಿಜಯ್ ಲೋಕಪಲ್ಲಿ)
ಇತ್ತೀಚಿನ ಅನಿಸಿಕೆಗಳು