ಕವಿತೆ : ನೀ ಬರುವ ದಾರಿ ಹಗಲೆಲ್ಲ ಕಾದು…
– ವೆಂಕಟೇಶ ಚಾಗಿ.
ನನ್ನೆದಿಯ ಮ್ಯಾಲ ನೀನೇನ ಬರದಿ
ನನಗರಿವು ಇಲ್ಲದ್ಹಾಂಗ
ಎದಿಯೊಳಗ ಕುಂತ ನನ್ನೆಸರ ಕೂಗ್ತಿ
ಎದಿಬಡಿತ ನಿಲ್ಲುವಾಂಗ
ಹಗಲಿರುಳು ನಿನ್ನ ನೆನಪಾಗ ಕೊರಗಿ
ಬಸವಳಿದು ಬೆಂದೆ ನಾನ
ನೀ ಬರುವ ದಾರಿ ಹಗಲೆಲ್ಲ ಕಾದು
ನಿನಗಾಗಿ ಸೋತೆ ನಾನ
ತಲಿಯೊಳಗ ನೂರು ಕನಸೆಲ್ಲಾ ಹುಟ್ಟಿ
ತಲೆ ಚಿಟ್ಟ ಹಿಡಿಸ್ಯಾವ
ಗೊತ್ತೆಲ್ಲ ನಿನಗ ಮತ್ತೇನ ಹೇಳ್ಲಿ
ಮನಚುಕ್ಕಿ ಹೊಳೀತಾವ
ಆಗಸದ ಚಂದ್ರ ಬರದಾನ ಪದ್ಯ
ನಮ್ಮ ಪ್ರೀತಿ ಸೊಗಸ ನೋಡಿ
ಕೊನಿಗೊಂದ ಸಾಲ ಹೇಳ್ಯಾನ ಕೇಳ
ನೂರ‍್ಕಾಲ ಇರಲಿ ಜೋಡಿ
ಈ ಬೂಮಿ ಮ್ಯಾಲ ನಮಗಿಲ್ಲ ಬೇಲಿ
ಮಿನುಗೋಣ ಚುಕ್ಕಿಯಾಂಗ
ಮುಗಿಲಾನ ಹಕ್ಕಿ ಕೊಟ್ಟಾವ ರೆಕ್ಕಿ
ಹಾರೋಣ ಕನಸಿನಾಂಗ
( ಚಿತ್ರ ಸೆಲೆ: pxhere.com )