ಅಸಾದಾರಣ ಮಿಂಚಿನ ಪ್ರದೇಶ

– .

ಅಸಾದಾರಣ ಮಿಂಚಿನ ಪ್ರದೇಶ, catatumbo lightning in venezuela

ಮಿಂಚಿನ ಹಿಂದಿರುವ ವೈಗ್ನಾನಿಕ ಸತ್ಯ ಎಲ್ಲರಿಗೂ ತಿಳಿದೇ ಇದೆ. ಸಾದಾರಣವಾಗಿ ಮಿಂಚು ಬಂದ ಕೂಡಲೇ ಮಳೆ ಬರುತ್ತದೋ ಇಲ್ಲವೋ ಬೇರೆ ವಿಚಾರ, ಗುಡುಗಂತೂ ಬಂದೇ ಬರುತ್ತದೆ. ಇವೆರೆಡೂ ಮಳೆ ಬರುವ ಮುನ್ಸೂಚನೆ. ವಿಶ್ವದ ಎಲ್ಲಾ ಕಡೆ ಕಂಡುಬರುವ ಅತಿ ಸಾಮಾನ್ಯ ಹಾಗೂ ಮಾನವನ ಬದುಕಿನಲ್ಲಿ ಹಾಸುಹೊಕ್ಕಾಗಿರುವ ವಿದ್ಯಮಾನ ಇದು. ಇದರಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ.

ಮಿಂಚು ಬೆಳಕಿಗೆ ಸಂಬಂದಿಸಿದ್ದರೆ, ಗುಡುಗಿಗೆ ಶಬ್ದದ ಜೊತೆ ನಂಟಿದೆ. ಶಬ್ದಕ್ಕಿಂತ ಬೆಳಕು ಚಲಿಸುವ ವೇಗ ಬಹಳವೇ ಹೆಚ್ಚಿರುವುದರಿಂದ, ಮಿಂಚು ಕಂಡ ಬಹಳ ಹೊತ್ತಿನ ನಂತರ ಗುಡುಗಿನ ಶಬ್ದ ಕೇಳಿಬರುತ್ತದೆ ಎಂಬ ವಿಶಯ ಪ್ರೌಡ ಶಾಲೆಯಲ್ಲೇ ಎಲ್ಲರೂ ಕಲಿತಿರುತ್ತಾರೆ. ಇಲ್ಲದಿದ್ದಲ್ಲಿ ಸಾಮಾನ್ಯ ಗ್ನಾನದಿಂದ ಅರಿತಿರುತ್ತಾರೆ.

ವೆನೆಜುವೆಲಾದಲ್ಲಿನ ಕ್ಯಾಟಟುಂಬಾ ನದಿ ಪ್ರದೇಶದಲ್ಲಿ, ಮಿಂಚು ಮತ್ತು ಗುಡುಗುಗಳು ಕೆಲವೊಂದು ವೈಗ್ನಾನಿಕ ಸತ್ಯಗಳನ್ನು, ಸುಳ್ಳು ಮಾಡುತ್ತದೆ. ಇದಕ್ಕೆ ಬೇರಾವುದೋ ಬಲವಾದ ಕಾರಣವಿರಬಹುದು ಎನಿಸುವುದು ಸತ್ಯ. ಇಲ್ಲಿ ಕ್ಯಾಟಟುಂಬಾ ನದಿಯು ಮರಕೈಬೊ ಸರೋವರವನ್ನು ಸೇರುವ ಪ್ರದೇಶದಲ್ಲಿ ಈ ವಿಚಿತ್ರವಾದ ಗಟನೆ ಸಂಬವಿಸುತ್ತದೆ. ಈ ಪ್ರದೇಶದಲ್ಲಿ ವರ‍್ಶದ ಸುಮಾರು 3೦೦ ರಾತ್ರಿಗಳಲ್ಲಿ (ಕೆಲವು ಮೂಲಗಳ ಪ್ರಕಾರ 140 ರಿಂದ 160 ರಾತ್ರಿಗಳು) ಹತ್ತು ಗಂಟೆಗಳ ಕಾಲ ಆಕಾಶದಲ್ಲಿ ನಿರಂತರವಾಗಿ ಮಿಂಚುವುದನ್ನು ಕಾಣಬಹುದಾಗಿದೆ. ಪ್ರತಿ ಗಂಟೆಗೆ ಅಂದಾಜು 280 ಬಾರಿ ಮಿಂಚು ಕಂಡು ಬರುತ್ತದೆ. ಸ್ಪಾನಿಶ್ ಬಾಶೆಯಲ್ಲಿ ಇದನ್ನು “ರೆಲೆಂಪಾಗೊ ಡೆಲ್ ಕ್ಯಾಟಟುಂಬಾ” ಎನ್ನುತ್ತಾರೆ. ‘ರೆಲೆಂಪಾಗೊ’ ಎಂದರೆ ‘ಮಿಂಚು’ ಎಂದರ‍್ತ. ಅದರ ಸುತ್ತಮುತ್ತಲಿನ ಮಂದಿ ಹಲವಾರು ವರುಶಗಳಿಂದ ಈ ವಿದ್ಯಮಾನವನ್ನು ನೋಡಿರುವುದಾಗಿ ಹೇಳುತ್ತಾರೆ. ಬೂಮಿಯ ಮೇಲಿನ ವಿದ್ಯುತ್ ಪ್ರದೇಶವೆಂದು ಇದನ್ನು ಗುರುತಿಸಲಾಗಿದೆ. ಇದು ಗಿನ್ನೆಸ್ ಬುಕ್ ಆಪ್ ವರ‍್ಲ್ಡ್ ರೆಕಾರ‍್ಡ್ಸ್ ಗೂ ಸೇರಿದೆ..

ಇಲ್ಲಿ ಉತ್ಪನ್ನವಾಗುವ ಮಿಂಚು ಎಶ್ಟು ಪ್ರಕರವಾಗಿರುತ್ತದೆ ಎಂದರೆ, ಸುಮಾರು ನಾಲ್ಕು ನೂರು ಕಿಲೋಮೀಟರ‍್‌ನಶ್ಟು ದೂರದಿಂದ ಈ ಚಮತ್ಕಾರವನ್ನು ಕಾಣಬಹುದು. ನೌಕಾಯಾನಿಗಳು ನಾವೆ ಚಲಿಸುತ್ತಿರುವ ದಿಕ್ಕನ್ನು ಗುರುತಿಸಲು ಈ ವಿದ್ಯಮಾನವನ್ನು ಬಳಸಿಕೊಳ್ಳುತ್ತಿದ್ದರಂತೆ. ‘ಮರಕೈಬೊ ಬೀಕನ್’ (ದಾರಿದೀಪ) ಎಂದು ಈ ಪ್ರದೇಶವನ್ನು ಕರೆಯತ್ತಿದ್ದುದು ಇದೇ ಕಾರಣಕ್ಕಾಗಿ. ಇಲ್ಲಿನ ಮಿಂಚಿನ ವಿಶೇಶತೆಯೆಂದರೆ, ಅದರ ಜೊತೆ ಜೊತೆಯಾಗಿ ಇರಬೇಕಾದ ಗುಡುಗಿನ ಶಬ್ದ, ಬಹಳ ಅಪರೂಪವಾಗಿ ಕೇಳಿಬರುತ್ತದಂತೆ. ಆಕಾಶದಲ್ಲಿ ಮೋಡದಿಂದ ಮೋಡಕ್ಕೆ ಮಿಂಚಿನ ಬೆಳಕು ಚಲಿಸುವಾಗ, ಈ ಅದ್ಬುತ ಬೆಳಕಿನ ಪ್ರದರ‍್ಶನ ಕಾಣಸಿಗುತ್ತದೆ.

ಈ ವಿದ್ಯಮಾನ ತಿಳಿಯಲು ಸಾಕಶ್ಟು ಸಂಶೋದನೆಗಳನ್ನು ನಡೆದಿದ್ದು, ಬಹಳ ವರ‍್ಶಗಳವರೆಗೂ ಮಿಂಚಿನ ಈ ಅತಿ ಸಾಂದ್ರತೆಯ ಬಗ್ಗೆ ನಿಕರವಾದ ವೈಗ್ನಾನಿಕ ಸತ್ಯ ಹೊರ ಬಿದ್ದಿರಲಿಲ್ಲ. ಒಂದು ಸಿದ್ದಾಂತದಂತೆ, ‘ಕ್ಯಾಟಟುಂಬಾ ನದಿಯ ಜವುಗು ಪ್ರದೇಶದಿಂದ ಮೇಲೇಳುವ ಅಯಾನೀಕರಿಸಿದ ಮೀತೇನ್ ಅನಿಲವು, ಮೇಲಿರುವ ಮೋಡಗಳ ಸಂಪರ‍್ಕಕ್ಕೆ ಬಂದಾಗ, ಮಿಂಚು ಉತ್ಪನ್ನವಾಗಲು ಸೂಕ್ತ ಪರಿಸ್ತಿತಿಯ ನಿರ‍್ಮಾಣವಾಗುತ್ತದೆ’ ಎಂದು ಹೇಳಲಾಗುತ್ತಿದೆ. ಈಗೀಗ, ವಿಗ್ನಾನಿಗಳು ಇಲ್ಲಿನ ನಿರಂತರ ಮಿಂಚಿಗೆ ಮೂಲಬೂತವಾಗಿ ಕೆರೆಬಿಯನ್ ದ್ವೀಪಗಳಿಂದ ಬರುವ ನಿಯಮಿತ ಅತಿ ಕಡಿಮೆ ವಾಯುಬಾರದ ಗಾಳಿಯ ಪ್ರವಾಹ ಕಾರಣವೆನ್ನುತ್ತಾರೆ. ಸರಿಯಾದ ಉತ್ತರ ಇನ್ನೂ ಸಿಕ್ಕಿಲ್ಲ.

ಅತಿ ಹೆಚ್ಚು ಮಿಂಚಿನ ಮಾರುತವನ್ನು ವರ‍್ಶದ ಅಕ್ಟೋಬರ‍್ ಮಾಹೆಯಲ್ಲೂ ಹಾಗೂ ಜನವರಿ-ಪೆಬ್ರವರಿಯಲ್ಲಿ ಇದು ಅತಿ ಕಡಿಮೆಯಾಗಿರುವುದನ್ನು ಕಾಣಬಹುದು. ವರ‍್ಶಕ್ಕೆ ಸುಮಾರು 1.2 ಮಿಲಿಯನ್ (12 ಲಕ್ಶ) ಮಿಂಚು ಇಲ್ಲಿ ಕಾಣಿಸುವ ಸಲುವಾಗಿ “ರೆಲೆಂಪಾಗೊ ಡೆಲ್ ಕ್ಯಾಟಟುಂಬಾ” ವಿಶ್ವದ ಅತಿ ಹೆಚ್ಚು ಓಜೋನ್ ಉತ್ಪಾದಕ ಎಂದು ಬಾವಿಸಲಾಗಿದೆ. ಮಿಂಚು ಗಾಳಿಯನ್ನು ಸೀಳಿಕೊಂಡು ಹೋಗುವಾಗ ಆಗುವ ರಾಸಾಯನಿಕ ಕ್ರಿಯೆಯಲ್ಲಿ ನೈಟ್ರೋಜನ್ ಆಕೈಡ್ ಉತ್ಪಾದನೆಯಾಗುತ್ತದೆ. ಇದು ಮತ್ತೆ ಸೂರ‍್ಯನ ಕಿರಣಗಳಿಂದ ವಿಬಜನೆಯಾಗಿ ‘ಓಜೋನ್’ ಆಗಿ ಪರಿವರ‍್ತನೆಗೊಳ್ಳುತ್ತದೆ. ಈ ರೀತಿ ಉತ್ಪನ್ನವಾದ ಓಜೋನ್, ಮೇಲೇರಿ, ಬೂಮಿಯ ಮೇಲಿರುವ ರಕ್ಶಣಾತ್ಮಕ ಓಜೋನ್ ಪದರದಲ್ಲಿ ಕೊನೆಗೊಳ್ಳುತ್ತದೆಯೇ? ಎಂಬ ವಿಶಯ ಸ್ಪಶ್ಟವಾಗಿಲ್ಲ. ಹಾಗೇನಾದರೂ ಆದಲ್ಲಿ ಇದು ಮಾನವ ಕುಲಕ್ಕೆ ಅತ್ಯಂತ ಉಪಕಾರಿ.

(ಮಾಹಿತಿ ಮತ್ತು ಚಿತ್ರ ಸೆಲೆ: volunteerlatinamerica.com, atlasobscura.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications