1971 – ಬಾರತದ ಇಂಗ್ಲೆಂಡ್ ಸರಣಿ ಗೆಲುವು

– ರಾಮಚಂದ್ರ ಮಹಾರುದ್ರಪ್ಪ.

1971 India Cricket team, 1971 ಬಾರತ ಕ್ರಿಕೆಟ್ ತಂಡ

ವೆಸ್ಟ್ ಇಂಡೀಸ್ ನಲ್ಲಿ ಮೊದಲ ಬಾರಿ ಟೆಸ್ಟ್ ಸರಣಿ ಗೆದ್ದು ಇತಿಹಾಸ ಬರೆದ ಬಾರತ ತಂಡ ಆ ಸವಿನೆನಪುಗಳನ್ನು ಇನ್ನೂ ಮೆಲುಕು ಹಾಕುತ್ತಿರುವಾಗಲೇ ತಂಡದ ಮುಂದೆ ಇನ್ನೊಂದು ದೊಡ್ಡ ಸವಾಲು ಎದುರಾಗುತ್ತದೆ. 1971 ರ ಜುಲೈನಲ್ಲಿ ಬಾರತ ತಂಡ ಬಲಾಡ್ಯ ಇಂಗ್ಲೆಂಡ್ ಎದುರು ಮೂರು ಟೆಸ್ಟ್ ಗಳ ಸರಣಿಯಲ್ಲಿ ಸೆಣಸಲು ಇಂಗ್ಲೆಂಡ್ ಗೆ ಪ್ರವಾಸ ಬೆಳೆಸುತ್ತದೆ. 1932 ರಿಂದ ಎಲ್ಲಾ ಇಂಗ್ಲೆಂಡ್ ಪ್ರವಾಸಗಳಲ್ಲಿಯೂ ಬಾರತ ಒಂದೇ ಒಂದು ಟೆಸ್ಟ್ ಗೆಲ್ಲುವುದಿರಲಿ, ಗೆಲುವಿನ ಸನಿಹ ಕೂಡ ಬಂದಿರುವುದಿಲ್ಲ. ಆಗಿನ್ನೂ, ಬಲಿಶ್ಟ ಆಸ್ಟ್ರೇಲಿಯಾವನ್ನು ಅವರ ತವರಲ್ಲೇ 2-0 ಇಂದ ಸೋಲಿಸಿ ಆಶೆಸ್ ಟ್ರೋಪಿಯನ್ನು ತನ್ನದಾಗಿಸಿಕೊಂಡಿದ್ದ ರೇ ಇಲ್ಲಿಂಗ್ವರ‍್ತ್ ಮುಂದಾಳ್ತನದ ಇಂಗ್ಲೆಂಡ್ ತಂಡ ವಿಶ್ವಾಸದಿಂದ ಬೀಗುತ್ತಿತ್ತು. ಈಗ ಅವರು ತವರಲ್ಲೇ ಆಡಲಿರುವುದರಿಂದ ಬಾರತ ಸೋಲು ತಪ್ಪಿಸಿಕೊಳ್ಳಬೇಕೆಂದರೆ ಪವಾಡವನ್ನೇ ಮಾಡಬೇಕು ಎಂದು ಸರಣಿಗೂ ಮುನ್ನ ಇಂಗ್ಲೆಂಡ್ ವಿಮರ‍್ಶಕರು ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸುತ್ತಾರೆ. ಆದರೆ 1971 ರಲ್ಲಿ ವೆಸ್ಟ್ ಇಂಡೀಸ್ ಎದುರಿನ ಗೆಲುವಿನ ಬಲದ ಮೇಲೆ ಬಾರತ ತಂಡ ತನ್ನಂಬಿಕೆಯಿಂದಲೇ ವಿಮಾನ ಏರುತ್ತದೆ. ಬಿಡುವಿನ ವೇಳೆ ಕೂಡ ತರಬೇತಿ ತಪ್ಪಿಸಿಕೊಳ್ಳದೆ ಎಲ್ಲಾ ಆಟಗಾರರು ಒಳ್ಳೆ ಲಯದಲ್ಲೇ ಇರುತ್ತಾರೆ.

ಬಾರತ ತಂಡದಲ್ಲಿ ಬದಲಾವಣೆಗಳು

ಅಜಿತ್ ವಾಡೇಕರ್ ನಾಯಕರಾಗಿ ಮುಂದುವರೆದರೆ ಅನುಬವಿ ವಿಕೆಟ್ ಕೀಪರ್ ಪಾರೂಕ್ ಇಂಜಿನೀಯರ್ ಹಾಗೂ ಆರಂಬಿಕ ಬ್ಯಾಟ್ಸ್ಮನ್ ಅಬ್ಬಾಸ್ ಅಲಿ ಬೇಗ್ ತಂಡಕ್ಕೆ ಮರಳುತ್ತಾರೆ. ಕಡೆಗೂ ಎಲ್ಲಾ ವಲಯಗಳ ಆಯ್ಕೆಗಾರರ ಒತ್ತಾಯಕ್ಕೆ ಮಣಿದು ಅದ್ಯಕ್ಶ ವಿಜಯ್ ಮರ‍್ಚೆಂಟ್ ಒಲ್ಲದ ಮನಸ್ಸಿನಿಂದಲೇ ಬಿ.ಎಸ್ ಚಂದ್ರಶೇಕರರನ್ನು ಪ್ರವಾಸಕ್ಕೆ ಆಯ್ಕೆ ಮಾಡುತ್ತಾರೆ. ಚಂದ್ರರ ಆಯ್ಕೆಯಿಂದ ತಂಡಕ್ಕೆ ಏನಾದರೂ ಕೆಡುಕಾದರೆ ಅದಕ್ಕೆ ನೀವೇ ಹೊಣೆಯಾಗುತ್ತೀರಿ ಎಂದು ಇತರೆ ಆಯ್ಕೆಗಾರರಿಗೆ ಮರ‍್ಚೆಂಟ್ ಎಚ್ಚರಿಕೆ ಕೂಡ ನೀಡುತ್ತಾರೆ. ಆದರೆ ಚಂದ್ರರ ಅಳವು ತಿಳಿದಿದ್ದ ಬೇರೆಲ್ಲಾ ಆಯ್ಕೆಗಾರರಿಗೆ ತಂಡಕ್ಕೆ ಅವರ ಅಗತ್ಯತೆ ತಿಳಿದಿರುತ್ತದೆ.

ಅಬ್ಯಾಸ ಪಂದ್ಯಗಳು – ಶುಬಾರಂಬ

ಮೊದಲ ದರ‍್ಜೆಯ ಒಟ್ಟು ಏಳು ಅಬ್ಯಾಸ ಪಂದ್ಯಗಳನ್ನು ಇಂಗ್ಲೆಂಡ್ ನ ಹಲವಾರು ಕೌಂಟಿಗಳೆದುರು ಆಡಿದ ಬಾರತ ತಂಡ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸುತ್ತದೆ. ಮಿಡೆಲ್ಸೆಕ್ಸ್ ಎದುರು ಗೆಲುವಿನ ಬಳಿಕ ಎಸೆಕ್ಸ್ ಎದುರು ಸೋತರೂ ಅದರ ಬೆನ್ನಲ್ಲೇ ಲೀಸ್ಟರ್, ವಾರ‍್ವಿಕ್ಶೈರ್, ಗ್ಲಮೋರ‍್ಗನ್ ಹಾಗೂ ಹ್ಯಾಂಪ್ಶೈರ್ ಎದುರು ಸತತ ನಾಲ್ಕು ಪಂದ್ಯಗಳನ್ನು ಗೆದ್ದು ಒಳ್ಳೆ ಲಯ ಕಂಡುಕೊಂಡು ಲಾರ‍್ಡ್ಸ್ ನಲ್ಲಿ ನಡೆಯಬೇಕಿದ್ದ ಮೊದಲ ಟೆಸ್ಟ್ ಗೆ ಅಣಿಯಾಗುತ್ತದೆ.

ಮೊದಲ ಟೆಸ್ಟ್ – ಲಾರ‍್ಡ್ಸ್ ನಲ್ಲಿ ಕೈ ತಪ್ಪಿದ ಗೆಲುವು

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ, ಬಿಶನ್‌ ಸಿಂಗ್‌ ಬೇಡಿ (4/70) ಹಾಗೂ ಚಂದ್ರರ (3/100) ಸ್ಪಿನ್ ದಾಳಿಗೆ ಮೊದಲು ಎಡವಿದರೂ ನಂತರ ಚೇತರಿಸಿಕೊಂಡು 304 ರನ್ ಗಳಿಸುತ್ತದೆ. ಇದಕ್ಕೆ ಉತ್ತರವಾಗಿ ವಾಡೇಕರ್ (85), ವಿಶ್ವನಾತ್ (68) ಹಾಗೂ ಏಕನಾತ್ ಸೋಲ್ಕರ್ (67) ಅವರ ಕೊಡುಗೆಗಳಿಂದ ಬಾರತ 313 ರನ್ ಗಳಿಸಿ 9 ರನ್ ಗಳ ಸಣ್ಣ ಮುನ್ನಡೆ ಪಡೆಯುತ್ತದೆ. ಎರಡನೇ ಇನ್ನಿಂಗ್ಸ್ ನಲ್ಲಿ ಸ್ಪಿನ್ ತ್ರಿವಳಿಗಳಾದ ವೆಂಕಟ್ (4/53), ಬೇಡಿ (2/50) ಹಾಗೂ ಚಂದ್ರ (2/60), ಇಂಗ್ಲೆಂಡ್ ತಂಡವನ್ನು 191 ರನ್ ಗಳಿಗೆ ಕಟ್ಟಿಹಾಕಿ ಬಾರತಕ್ಕೆ ಗೆಲ್ಲಲು 183 ರನ್ ಗಳ ಸಾದಾರಣ ಗುರಿ ಸಿಗುವಂತೆ ಮಾಡುತ್ತಾರೆ. ಆದರೆ ಈ ಗುರಿ ಬೆನ್ನತ್ತಿ ಹೊರಟ ಬಾರತ ತಂಡ ಕಡೇ ದಿನ ಬೇಗ ರನ್ ಗಳಿಸಲು ಹೋಗಿ ವಿಕೆಟ್ ಕಳೆದುಕೊಳ್ಳುತ್ತಾ ಹೋದರೂ ಗುರಿಯೆಡೆಗೆ ಮುನ್ನುಗ್ಗುತ್ತದೆ. ಗವಾಸ್ಕರ್ 53 ಗಳಿಸಿದರೆ, ಪಾರುಕ್ ಇಂಜಿನಿಯರ್ 35 ಗಳಿಸಿ ಅವರಿಗೆ ಬೆಂಬಲ ನೀಡುತ್ತಾರೆ. ಆದರೆ ಬಾರತ 145/8 ತಲುಪಿ ಗುರಿಯಿಂದ ಇನ್ನೂ 38 ರನ್ ದೂರ ಇರುವಾಗ ಮಳೆ ಅಡ್ಡಿ ಮಾಡಿ ಪಂದ್ಯ ಡ್ರಾನಲ್ಲಿ ಕೊನೆಗೊಳ್ಳುತ್ತದೆ. ಎರಡೂ ತಂಡಗಳಿಗೂ ಈ ಪಂದ್ಯ ಗೆಲ್ಲುವ ಅವಕಾಶವಿದ್ದದ್ದು ಸುಳ್ಳಲ್ಲ. ಪಂದ್ಯದ ಬಳಿಕ, ‘ಬ್ಯಾಟ್ಸ್ಮನ್ ಸೋಲ್ಕರ್ ರವರ ಜೊತೆ ಬ್ಯಾಟಿಂಗ್ ಅಳವುಳ್ಳ ಬೇಡಿ ಇನ್ನೂ ಕ್ರೀಸ್ ನಲ್ಲಿ ಇದ್ದುದ್ದರಿಂದ ನಮಗೆ ಗೆಲ್ಲುವ ಅವಕಾಶವಿತ್ತು’ ಎಂದು ವಾಡೇಕರ್ ಸುದ್ದಿಗಾರರಿಗೆ ಹೇಳುತ್ತಾ ಗೆಲುವು ಕೈತಪ್ಪಿತೆಂದು ಬೇಸರ ವ್ಯಕ್ತಪಡಿಸುತ್ತಾರೆ. ಬಾರತ ತಂಡ ಅಲ್ಲಿನ ಸ್ತಳೀಯರು ಹಾಗೂ ಕ್ರಿಕೆಟ್ ಪಂಡಿತರ ನಿರೀಕ್ಶೆಗೆ ವಿರುದ್ದವಾಗಿ ಒಳ್ಳೆಯ ಆಟ ಆಡಿ ತಮ್ಮನ್ನು ಹಗುರವಾಗಿ ಪರಿಗಣಿಸದಿರಿ ಎಂದು ಎಚ್ಚರಿಕೆ ಸಂದೇಶ ನೀಡುತ್ತದೆ.

ಎರಡನೇ ಟೆಸ್ಟ್ – ಕಾಪಾಡಿದ ಮಳೆರಾಯ

ಮ್ಯಾಂಚೆಸ್ಟರ್ ನಲ್ಲಿ ನಡೆದ ಎರಡನೇ ಟೆಸ್ಟ್ ನಲ್ಲಿ ಮತ್ತೊಮ್ಮೆ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್, ನಾಯಕ ಇಲ್ಲಿಂಗ್ವರ‍್ತ್ ರವರ ಶತಕದ ಬಲದಿಂದ 386 ರನ್ ಗಳ ದೊಡ್ಡ ಮೊತ್ತ ಕಲೆಹಾಕುತ್ತದೆ. ಆದರೆ ಬಾರತ ತಂಡ ಮೊದಲನೇ ಇನ್ನಿಂಗ್ಸ್ ನಲ್ಲಿ 212 ಗಳಿಗೆ ಕುಸಿದು 174 ರನ್ ಗಳ ದೊಡ್ಡ ಹಿನ್ನಡೆ ಅನುಬವಿಸುತ್ತದೆ. ಎರಡನೇ ಇನ್ನಿಂಗ್ಸ್ ನಲ್ಲಿ 245/3 ಗಳಿಸಿದ ಆತಿತೇಯರು ಇನ್ನಿಂಗ್ಸ್ ಡಿಕ್ಲೇರ್ ಗೋಶಿಸಿ, ಬಾರತದ ಮುಂದೆ ಅಸಾದ್ಯವೆಂಬಂತಿದ್ದ 420 ರನ್ ಗಳ ಗುರಿ ಇಡುತ್ತದೆ. ಇದನ್ನು ಬೆನ್ನತ್ತಿ ಹೊರಟ ಪ್ರವಾಸಿಗರು ಆರಂಬಿಕ ಆಗಾತದಿಂದ ನಾಲ್ಕನೇ ದಿನದ ಆಟದ ಕೊನೆಗೆ 65/3 ಗೆ ಕುಸಿದು ಸೋಲು ಎದುರು ನೋಡುತ್ತಿರುತ್ತದೆ. ಸರ‍್ದೇಸಾಯಿ 13* ಹಾಗೂ ವಿಶ್ವನಾತ್ 8* ರನ್ ಗಳಿಸಿ ಕ್ರೀಸ್ ನಲ್ಲಿದ್ದರೂ ಕಡೇ ದಿನ ಅಶ್ಟು ರನ್ ಗಳಿಸುವುದು ಅಸಾದ್ಯವೇ ಆಗಿತ್ತು. ಐದನೇ ದಿನದ ಊಟದ ವಿರಾಮದ ವೇಳೆಯೊಳಗೆ ಬಾರತ ಸೋಲಲಿದೆ ಎಂದು ಅಲ್ಲಿನ ಪತ್ರಿಕೆಗಳು ವರದಿ ಮಾಡುತ್ತವೆ. ಹಾಗೂ ಇಂಗ್ಲೆಂಡ್ ಬೆಂಬಲಿಗರೆಲ್ಲಾ (ಬಾರ‍್ಮಿ ಆರ‍್ಮಿ), ಅವರ ತಂಡದ ಗೆಲುವಿಗಾಗಿ ಕಾತುರದಿಂದ ಕಾಯುತ್ತಿರುತ್ತಾರೆ. ಆದರೆ ಕಡೇ ದಿನ ಬಿಡುವಿಲ್ಲದೆ ಸುರಿದ ದಾರಾಕಾರ ಮಳೆಯಿಂದ ಆಟ ನಡೆಯದೆ ಪಂದ್ಯ ಡ್ರಾನಲ್ಲಿ ಕೊನೆಗೊಳ್ಳುತ್ತದೆ. ಬಾರತ ಅದ್ರುಶ್ಟದಿಂದ ಸೋಲು ತಪ್ಪಿಸಿಕೊಂಡು 0-0 ಯ ಸರಣಿ ಸಮಬಲ ಉಳಿಸಿಕೊಂಡು ನಿರ‍್ಣಾಯಕ ಓವಲ್ ಟೆಸ್ಟ್ ಗೆ  ಸಜ್ಜಾಗುತ್ತದೆ.

ಓವಲ್ ಟೆಸ್ಟ್ – ಐತಿಹಾಸಿಕ ಸರಣಿ ಗೆಲುವು

ಇಂಗ್ಲೆಂಡ್ ನ ಇತರೆ ಪಿಚ್ ಗಳಿಗಿಂತ ಕೊಂಚ ಬೇರೆಯಾಗಿದ್ದು ಆಟ ಮುಂದುವರೆಯುತ್ತಾ ಹೋದಂತೆ ಮೂರನೇ ದಿನದಿಂದ ಸ್ಪಿನ್ನರ್ ಗಳಿಗೆ ನೆರವಾಗುತ್ತಾ ಹೋಗುವ ಓವಲ್ ನಲ್ಲಿ ಮಗದೊಮ್ಮೆ ಇಂಗ್ಲೆಂಡ್ ಟಾಸ್ ಗೆದ್ದು ಬ್ಯಾಟಿಂಗ್ ಮಾಡುತ್ತದೆ. ಸೋಲ್ಕರ್ 3 ವಿಕೆಟ್ ಪಡೆದರೆ, ಸ್ಪಿನ್ ತ್ರಿವಳಿಗಳಾದ ಚಂದ್ರ, ವೆಂಕಟ್ ಹಾಗೂ ಬೇಡಿ ತಲಾ 2 ವಿಕೆಟ್ ಪಡೆಯುತ್ತಾರೆ. ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 355 ರನ್ ಗಳಿಸುತ್ತದೆ. ಆದರೆ ಮೊದಲ ಇನ್ನಿಂಗ್ಸ್ ನಲ್ಲಿ ಬಾರತದ ಪರವಾಗಿ ಇಂಜಿನಿಯರ್ ಹಾಗೂ ಸರ‍್ದೇಸಾಯಿಯವರಿಂದ ಅರ‍್ದ ಶತಕಗಳು ಬಂದರೂ ತಂಡ 284 ರನ್ ಗಳಿಗೆ ಸರ‍್ವಪತನ ಕಂಡು 71 ರನ್ ಗಳ ಮುನ್ನಡೆ ಬಿಟ್ಟುಕೊಡುತ್ತದೆ. ಆಗಾಗಲೇ ತಿರುಗಲು ಮೊದಲು ಮಾಡಿದ್ದ ಆ ಪಿಚ್ ಮೇಲೆ ಆ ಮುನ್ನಡೆ ತುಂಬಾ ದೊಡ್ಡದೇ ಆಗಿತ್ತು. ಬಾರತದ ಮೊದಲ ಇನ್ನಿಂಗ್ಸ್ ಬಳಿಕ ಬ್ರಿಟಿಶ್ ಪತ್ರಿಕೆಗಳು, “ಇಲ್ಲಿಂದ ಕೇವಲ ಒಂದು ತಂಡ ಗೆಲ್ಲಲು ಸಾದ್ಯ. ಆ ತಂಡ ಕಂಡಿತ ಬಾರತವಲ್ಲ” ಎಂದು ವರದಿ ಮಾಡುತ್ತವೆ. ದೊಡ್ಡ ಮುನ್ನಡೆ ಬಿಟ್ಟು ಕೊಟ್ಟು ನಾಲ್ಕನೇ ಇನ್ನಿಂಗ್ಸ್ ನಲ್ಲಿ ಗುರಿ ಬೆನ್ನತ್ತಿ ಗೆಲ್ಲುವುದು ಕಶ್ಟವೇ ಆಗಿತ್ತು, ಹಾಗಾಗಿ ಬ್ರಿಟಿಶ್ ಪತ್ರಿಕೆಗಳ ವರದಿಯಲ್ಲಿ ಹುರುಳಿಲ್ಲದೆ ಇರಲಿಲ್ಲ. ಆದರೆ ಬಾರತದ ಪರ ಪವಾಡ ಮಾಡಬಲ್ಲ ಚಂದ್ರರ ಗೆಲುವಿನ ಕೈ ಇದೆ ಎನ್ನುವುದನ್ನು ಅವರು ಮರೆತಿರುತ್ತಾರೆ.

ಎರಡನೇ ಟೆಸ್ಟ್ ನ ನೀರಸ ಪ್ರದರ‍್ಶನದ ಬಳಿಕ ಚಂದ್ರ ಇನ್ನೇನು ಓವಲ್ ಪಂದ್ಯಕ್ಕೆ ಆಡುವ ಹನ್ನೊಂದರಿಂದ ಹೊರಗುಳಿಯುವ ಹೊಸ್ತಿಲಲ್ಲಿರುತ್ತಾರೆ. ಆಗ ತಂಡದ ಮ್ಯಾನೇಜರ್ ಹೇಮು ಅದಿಕಾರಿ ನಾಯಕ ವಾಡೇಕರ್ ರಿಗೆ, “ಚಂದ್ರ ಯಾವ ಕ್ಶಣದಲ್ಲಾದರೂ ಪಂದ್ಯವನ್ನು ಬದಲಿಸುವ ಅಳವಿರುವ ಬೌಲರ್, ಹಾಗಾಗಿ ಈ ಪಂದ್ಯ ಆಡಲಿ” ಎಂದು ಮನವೊಲಿಸಿರುತ್ತಾರೆ. ಚಂದ್ರ ಎರಡನೇ ಇನ್ನಿಂಗ್ಸ್ ನಲ್ಲಿ ತಮ್ಮ ಗೂಗ್ಲಿ, ಪ್ಲಿಪ್ಪರ್ ಹಾಗೂ ವೇಗದ ಲೆಗ್ ಸ್ಪಿನ್ ಎಸೆತಗಳಿಂದ ಇಂಗ್ಲೆಂಡ್ ತಂಡವನ್ನು ಕಾಡುತ್ತಾರೆ. ಚಂದ್ರರ ವೇಗದ ಎಸೆತಕ್ಕೆ ಸರ‍್ದೇಸಾಯಿ ತಮ್ಮ ನೆಚ್ಚಿನ ವೇಗದ ಕುದುರೆ ‘ಮಿಲ್ ರೀಪ್‘ ನ ಹೆಸರಿಟ್ಟುತ್ತಾರೆ. ಸ್ಲಿಪ್ಸ್ ನಲ್ಲಿ ನಿಂತು ಅವರು, “ಚಂದ್ರ, ಮಿಲ್ ರೀಪ್ ಹಾಕು” ಎಂದು ಹುರಿದುಂಬಿಸುತ್ತಾರೆ. ಒಂದೊಂದು ‘ಮಿಲ್ ರೀಪ್’ ಎಸೆತಗಳಿಗೆ ಇಂಗ್ಲೆಂಡ್ ಆಟಗಾರರು ಪೆವಿಲಿಯನ್ ಹಾದಿ ಹಿಡಿಯಲು ಮೊದಲು ಮಾಡುತ್ತಾರೆ. ನೋಡನೋಡುತ್ತಿದ್ದಂತೆಯೇ ಇಂಗ್ಲೆಂಡ್ 45 ಓವರ್ ಗಳಲ್ಲಿ ಕೇವಲ 101 ರನ್ ಗಳಿಗೆ ನೆಲಕಚ್ಚುತ್ತದೆ. ಓವಲ್ ನಲ್ಲಿ ನೆರೆದಿದ್ದ ತವರಿನ ತಂಡದ ಬೆಂಬಲಿಗರಿಗೆ ತಮ್ಮ ಕಣ್ಮುಂದೆ ನಡೆದಿದ್ದನ್ನು ನಂಬಲು ಕೊಂಚ ಹೊತ್ತು ಹಿಡಿಯುತ್ತದೆ. ಚಂದ್ರ (6/38) ಪವಾಡ ಮಾಡಿ ಬಾರತ ಪಂದ್ಯದಲ್ಲಿ ಮರಳುವಂತೆ ಮಾಡುತ್ತಾರೆ. ಈಗ ಬಾರತದ ಮುಂದೆ ಗಳಿಸಬಲ್ಲ 173 ರನ್ ಗಳ ಗುರಿ ಇರುತ್ತದೆ.

ಆಗಲೇ ತಿರುಗುತ್ತಿದ್ದ ಆ ಪಿಚ್ ಮೇಲೆ 173 ದೊಡ್ಡ ಗುರಿಯೇ ಆಗಿರುತ್ತದೆ. ಮೊದಲಿಗೆ ಗವಾಸ್ಕರ್ ಸೊನ್ನೆಗೆ ಔಟ್ ಆಗಿ ಬಾರತದ ಪಾಳಯದಲ್ಲಿ ದಿಗಿಲು ಉಂಟು ಮಾಡುತ್ತಾರೆ. ಅಶೋಕ್ ಮಂಕಡ್ ಕೂಡ 11 ರನ್ ಗಳಿಗೆ ಔಟ್ ಆದಾಗ ಬಾರತ 37/2 ಕ್ಕೆ ಕುಸಿದು ಸಂಕಶ್ಟದಲ್ಲಿರುತ್ತದೆ. ಆಗ ಜೊತೆಯಾದ ನಾಯಕ ವಾಡೇಕರ್ 45 ಹಾಗೂ ಸರ‍್ದೇಸಾಯಿ 40 ರನ್‌ಗಳ ಜೊತೆಯಾಟ ಆಡುತ್ತಾರೆ. ನಾಲ್ಕನೇ ದಿನದ ಕೊನೆಗೆ ಬಾರತ 76/2 ತಲುಪುತ್ತದೆ. ಐದನೇ ದಿನ ಗಣೇಶ ಚತುರ‍್ತಿ ಹಬ್ಬವಿರುತ್ತದೆ. ಅದರ ಸಲುವಾಗಿ ನೋಡುಗರನ್ನು ರಂಜಿಸಲು ಲಂಡನ್ ಮ್ರುಗಾಲಯದಿಂದ ಆನೆಯೊಂದನ್ನು ಓವಲ್ ಮೈದಾನಕ್ಕೆ ತಂದಿರುತ್ತಾರೆ. ಐದನೇ ದಿನದ ಆಟಕ್ಕೂ ಮುನ್ನ ಇದನ್ನು ಕಂಡ ನಾಯಕ ವಾಡೇಕರ್, ಇದು ನಮಗೆ ಶುಬ ಶಕುನ ಎಂದು ತಂಡದ ಸದಸ್ಯರಿಗೆ ಹೇಳುತ್ತಾರೆ. ಕಡೇ ದಿನ ಆಟ ಮೊದಲಾಗಿ ಇವರಿಬ್ಬರೂ (ವಾಡೇಕರ್ ಮತ್ತು ಸರ‍್ದೇಸಾಯಿ) ಔಟ್ ಆಗಿ ಹೊರನಡೆದಾಗ ಬಾರತದ ಸ್ಕೋರ್ 124/4 ಆಗಿರುತ್ತದೆ. ಆಗಾಗಲೇ ಪಿಚ್ ಸಾಕಶ್ಟು ತಿರುಗಲು ಮೊದಲು ಮಾಡಿರುತ್ತದೆ. ಆತಿತೇಯರು ವಿಕೆಟ್ ಗಾಗಿ ಆಕ್ರಮಣಕಾರಿ ಪೀಲ್ಡ್ ರಚಿಸಿ ಬೌಲ್ ಮಾಡುತ್ತಿರುತ್ತಾರೆ. ಆಗ ಇನ್ನೊಂದು ವಿಕೆಟ್ ಬಿದ್ದಿದ್ದರೆ ಪಂದ್ಯದ ದಿಕ್ಕೇ ಬದಲಾಗುವ ಅಪಾಯವಿದ್ದೇ ಇತ್ತು. ಆದರೆ ಆಗ ಚಲದಂಕಮಲ್ಲನಂತೆ 171 ಎಸೆತ ಎದುರಿಸಿ ತಾಳ್ಮೆಯ 33 ರನ್ ಗಳಿಸಿ ವಿಶ್ವನಾತ್ ತಂಡಕ್ಕೆಆಸರೆಯಾಗುತ್ತಾರೆ. ಡ್ರೆಸ್ಸಿಂಗ್ ಕೊಟಡಿಯಲ್ಲಿ ಒಂದು ಮಟ್ಟಕ್ಕೆ ಆವರಿಸಿಕೊಂಡಿದ್ದ ದಿಗಿಲು ದೂರ ಮಾಡುತ್ತಾರೆ. ಗೆಲ್ಲಲು 3 ರನ್ ಗಳು ಬೇಕಿರುವಾಗ ವಿಶ್ವನಾತ್ ಔಟ್ ಆಗುತ್ತಾರೆ. ಆದರೆ ಏನೂ ತೊಡಕಿಲ್ಲದೆ ಪಾರೂಕ್ ಇಂಜಿನಿಯರ‍್(28) ಹಾಗೂ ಅಬಿದ್ ಅಲಿ (4) ತಂಡವನ್ನು ಗೆಲುವಿನ ದಡ ಸೇರಿಸಿ ಇತಿಹಾಸ ಸ್ರುಶ್ಟಿಸುತ್ತಾರೆ. ಅಬಿದ್ ಅಲಿ ಸ್ಕ್ವೇರ‍್ಕಟ್ ಮಾಡಿ ಪಾಯಿಂಟ್ ದಿಕ್ಕಿನಲ್ಲಿ ಚೆಂಡನ್ನು ಬೌಂಡರಿಗೆ ಅಟ್ಟಿ, ಇಂಗ್ಲೆಂಡ್ ನಲ್ಲಿ ಸರಣಿ ಗೆಲುವು ಸಾದಿಸಿದ ಆ ಐತಿಹಾಸಿಕ ಕ್ಶಣ ಬಾರತದ ಕ್ರಿಕೆಟ್ ಪರಂಪರೆಯಲ್ಲಿ ಅಚ್ಚಳಿಯದೆ ಇನ್ನೂ ಉಳಿದಿದೆ. ನಾಲ್ಕು ತಿಂಗಳಲ್ಲಿ ವಿಂಡೀಸ್ ಹಾಗೂ ಇಂಗ್ಲೆಂಡ್ ನಲ್ಲಿ ಸರಣಿ ಗೆದ್ದು ಬಾರತ ವಿಶ್ವ ಕ್ರಿಕೆಟ್ ನಲ್ಲಿ ತನ್ನದೇ ಆದ ಒಂದು ವಿಶಿಶ್ಟ ಸ್ತಾನ ಪಡೆಯುತ್ತದೆ.

ಬಾರತದ ಅಳವನ್ನು ಕಾತ್ರಿ ಪಡಿಸಿದ ಗೆಲುವು

ವಿಂಡೀಸ್ ಗೆಲುವಿನ ಬಳಿಕವೂ ವಿಮರ‍್ಶಕರು ‘ಒಂದು ಸರಣಿ ಹೇಗೋ ಅದ್ರುಶ್ಟದ ಬಲದ ಮೇಲೂ ಗೆಲ್ಲಬಹುದು. ಬಾರತ ಇತರಿರೊಂದಿಗೆ ಸರಿಸಮಾನವಾದ ತಂಡ ಎಂದೆನಿಸಿಕೊಳ್ಳಲು ನಿರಂತರತೆಯನ್ನು ಕಾಪಾಡಿಕೊಳ್ಳಬೇಕು’ ಎಂದು ಅನಿಸಿಕೆ ವ್ಯಕ್ತ ಪಡಿಸಿರುತ್ತಾರೆ. ಆದರೆ ವಿಂಡೀಸ್ ಬೆನ್ನಲ್ಲೇ ಇಂಗ್ಲೆಂಡ್ ನಲ್ಲೂ ಸರಣಿ ಗೆದ್ದು ಬಾರತ ತಂಡ ಯಾರೂ ಚಕಾರ ಎತ್ತದಂತೆ ಮಾಡುತ್ತದೆ. ವಿದೇಶದಲ್ಲಿ ಎರಡೂ ಸರಣಿಗಳನ್ನು ಗೆದ್ದದ್ದು ಸ್ಪಿನ್ ಬಲದ ಮೇಲೆ ಅನ್ನುವುದು ಇಲ್ಲಿ ಗಮನಿಸಬೇಕಾದ ಅಂಶ. ನಮ್ಮಲ್ಲಿ ವೇಗದ ಬೌಲರ್ ಗಳಿಲ್ಲ, ಅದು ನಮ್ಮ ಶಕ್ತಿಯಲ್ಲ ಎಂಬುದನ್ನು ಬೇಗನೆ ಅರಿತು ಸೊಗಸಾದ ಸ್ಪಿನ್ ಪಡೆ ಕಟ್ಟಿ, ಪ್ರಸನ್ನ, ಚಂದ್ರ, ಬೇಡಿ ಹಾಗೂ ವೆಂಕಟ್ ರನ್ನು ಬೆಳೆಸಿದ ನಾಯಕ ಪಟೌಡಿಯವರನ್ನು ನಾವು ಇಲ್ಲಿ ನೆನೆಯಬೇಕು. ಕ್ರಿಕೆಟ್ ಇತಿಹಾಸಗಾರರು, ಪಟೌಡಿ ನಾಯಕರಾಗಿ ಬೀಜ ಹಾಕಿ ಬೆಳೆಸಿದ ಮರದ ಹಣ್ಣುಗಳನ್ನು ವಾಡೇಕರ್ ಸವಿದರು ಎಂದು ನೆನೆಯುತ್ತಾರೆ. ಇತಿಹಾಸ ಒಮ್ಮೆ ನೋಡಿದಾಗ ಅವರ ಮಾತಿನಲ್ಲಿ ಹುರುಳಿರುವುದು ತಿಳಿಯುತ್ತದೆ. ಹೀಗೆ ಒಂದು ತಂಡವಾಗಿ ಆಡಿ ಬಾರತ 1971 ರಲ್ಲಿ ಅವಳಿ ಸರಣಿಗಳನ್ನು ಗೆದ್ದು ದೇಶದಲ್ಲಿ ಕ್ರಿಕೆಟ್ ಇನ್ನೂ ಹೆಚ್ಚು ಮಂದಿಮೆಚ್ಚುಗೆ ಪಡೆಯುವಂತೆ ಮಾಡಿತು. ಈ ನಿಟ್ಟಿನಲ್ಲಿ 1971, ಬಾರತ ಕ್ರಿಕೆಟ್ ತಂಡಕ್ಕೆ ಅವಿಸ್ಮರಣೀಯ ವರುಶ.

(ಚಿತ್ರ ಸೆಲೆ: indiatoday.in)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. thippanna m.s. jamadagni says:

    ಅತ್ಯಂತ ಉತ್ತಮ ಲೇಖನ. ಕ್ರಿಕೆಟ್ ಕಣ್ಣ ಮುಂದೆಯೇ ನಡೆಯುವ ರೀತಿ ಕಟ್ಟಿ ಕೊಟ್ಟಿದ್ದೀರಾ. ಧನ್ಯವಾದಗಳು.

ಅನಿಸಿಕೆ ಬರೆಯಿರಿ:

%d bloggers like this: