ಪಲ್ವಂಕರ್ ಬಾಲು – ಬಾರತ ಕ್ರಿಕೆಟ್‌ನ ದಿಗ್ಗಜ

– ರಾಮಚಂದ್ರ ಮಹಾರುದ್ರಪ್ಪ.

ಬಾರತೀಯ ಕ್ರಿಕೆಟ್ ಪ್ರಿಯರಲ್ಲಿ ದೇಶದ ಮೊದಲ ಶ್ರೇಶ್ಟ ಸ್ಪಿನ್ನರ್ ಯಾರು ಎಂದು ಕೇಳಿದರೆ, ಹಲವರು ಎರಪಲ್ಲಿ ಪ್ರಸನ್ನ ಅನ್ನಬಹುದು, ಅದಕ್ಕೂ ಮುನ್ನ ಕ್ರಿಕೆಟ್ ನೋಡಿರುವವರು ಸುಬಾಶ್ ಗುಪ್ತೆ ಅನ್ನಬಹುದು. ಆದರೆ ಅಸಲಿಗೆ ಬಾರತ ಟೆಸ್ಟ್ ಮಾನ್ಯತೆ ಪಡೆಯುವುದಕ್ಕೂ ಮುನ್ನ, ಬಾರತದ ದೇಸೀ ಟೂರ‍್ನಿ ರಣಜಿ ಟ್ರೋಪಿ ಮೊದಲಾಗುವುದಕ್ಕೂ ಮುನ್ನ, ತಮ್ಮ ಎಡಗೈ ಸ್ಪಿನ್ ನಿಂದ ಇಂಗ್ಲಿಶ್ ಕ್ರಿಕೆಟಿಗರ ನಿದ್ದೆಗೆಡಿಸಿ, ಕ್ರಿಕೆಟ್ ರಂಗದಲ್ಲಿ ಸಂಚಲನ ಮೂಡಿಸಿ, ಬಾರತದ ಬವ್ಯ ಸ್ಪಿನ್ ಬೌಲಿಂಗ್ ಪರಂಪರೆಗೆ ಮುನ್ನುಡಿ ಬರೆದವರು ಪಲ್ವಂಕರ್ ಬಾಲು. ಕೇವಲ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಮಾತ್ರ ಟೆಸ್ಟ್ ಆಡುತ್ತಿದ್ದ ಕಾಲದಲ್ಲಿ ಬಾರತದ ಪ್ರಕ್ಯಾತ ಮೊದಲ ದರ‍್ಜೆ ಶ್ರೇಣಿಯ Quadrangular ಟೂರ‍್ನಿಯಲ್ಲಿ ಹಿಂದೂ ಕ್ರಿಕೆಟ್ ತಂಡದ ಪರ ಆಡಿ ಪ್ರಪಂಚದಾದ್ಯಂತ ಮೆಚ್ಚುಗೆ ಗಳಿಸಿದ್ದ ಬಾಲು ಅವರ ಸಾದನೆ ನಿಜಕ್ಕೂ ಅದ್ವಿತೀಯ.

ಹುಟ್ಟು- ಎಳವೆಯಿಂದಲೇ ಕ್ರಿಕೆಟ್ ಗೀಳು

ಮಾರ‍್ಚ್ 19, 1876 ರಂದು ದಾರವಾಡದಲ್ಲಿ ಒಂದು ದಲಿತ ಕುಟುಂಬದಲ್ಲಿ ಬಾಲು ಹುಟ್ಟಿದರು. ಅವರ ಬಾಲ್ಯದಲ್ಲಿರುವಾಗಲೇ ಅವರ ಕುಟುಂಬ ಪೂಣೆಗೆ ಹೋಗಿ ನೆಲೆಸಿತು. ಬಾಲು ಅವರ ತಮ್ಮ ಶಿವರಾಮ್ ರೊಟ್ಟಿಗೆ ಕ್ರಿಕೆಟ್ ಆಡುತ್ತಾ ಬೆಳೆದರು. ಬಳಿಕ ಪೂಣೆಯ ಪಾರ‍್ಸಿ ಕ್ಲಬ್ ನಲ್ಲಿ ತಿಂಗಳಿಗೆ 3 ರೂಪಾಯಿ ಸಂಬಳಕ್ಕೆ ಕ್ರಿಕೆಟ್ ಅಂಗಣ ನೋಡಿಕೊಳ್ಳುವ ಕೆಲಸಕ್ಕೆ ಸೇರಿದರು. ಅಲ್ಲಿನ ಮ್ಯಾಟಿಂಗ್ ಪಿಚ್ ಗಳನ್ನು ಅಣಿ ಮಾಡುವುದು, ಕಸ ಗುಡಿಸುವುದು ಅವರ ಕೆಲಸವಾಗಿತ್ತು. ನಂತರ ಯುರೋಪಿಯನ್ನರು ನಡೆಸುತ್ತಿದ್ದ ಪೂಣೆ ಕ್ಲಬ್ ಗೆ 4 ರೂಪಾಯಿ ಸಂಬಳಕ್ಕೆ ಸೇರಿದ ಬಾಲು ಕೆಲಸದ ಹೊರತಾಗಿ ನೆಟ್ಸ್‌ನಲ್ಲಿ ಬೌಲಿಂಗ್ ಕೂಡ ಮಾಡಲು ಮೊದಲು ಮಾಡಿದರು. ಪೂಣೆಯ ಆಗಿನ ಶ್ರೇಶ್ಟ ಇಂಗ್ಲಿಶ್ ಬ್ಯಾಟ್ಸ್ಮನ್ ಕ್ಯಾಪ್ಟನ್ ಜಾನ್ ಜಂಗ್ಲಿ ಗ್ರೇಗ್ ರಿಗೆ ನೆಟ್ಸ್ ನಲ್ಲಿ ಬೌಲ್ ಮಾಡುತ್ತಾ, ಬಾಲು ತಮ್ಮ ಬೌಲಿಂಗ್ ಚಳಕವನ್ನು ಬಲಪಡಿಸಿಕೊಂಡರು. ಜಂಗ್ಲಿ ರನ್ನು ಔಟ್ ಮಾಡಿದ ಪ್ರತೀ ಬಾರಿ 8 ಆಣೆ ಹೆಚ್ಚುವರಿ ದುಡ್ಡು ಬಾಲುರಿಗೆ ಬಹುಮಾನದ ರೂಪದಲ್ಲಿ ಸಿಗುತ್ತಿತ್ತು.

ಜಾತಿ ಪದ್ದತಿ ಮೀರಿ ಕ್ರಿಕೆಟ್‌ನಲ್ಲಿ ಮಿಂಚಿದ ಬಾಲು

ಬಾಲುರವರ ಎಡಗೈ ಸ್ಪಿನ್ ಅನ್ನು ನೆಟ್ಸ್ ನಲ್ಲಿ ಎದುರಿಸಿ ತಮ್ಮ ಬ್ಯಾಟಿಂಗ್ ಅನ್ನು ಸಾಕಶ್ಟು ಸುದಾರಿಸಿಕೊಂಡ ಕ್ಯಾಪ್ಟನ್ ಜಂಗ್ಲಿರವರು ತಮ್ಮ ಸಹೋದ್ಯೋಗಿಗಳೆದುರು ಬಾಲು ಅವರ ಬೌಲಿಂಗ್ ಗುಣಗಾನ ಮಾಡಿ, ಅವರ ಹೆಸರು ಕ್ರಿಕೆಟ್ ವಲಯದಲ್ಲಿ ಜನಪ್ರಿಯತೆ ಪಡೆಯುವಂತೆ ಮಾಡಿದರು. ಪೂಣೆಯ ಹಿಂದೂ ಕ್ಲಬ್ ಗೆ ಬಾಲುರವರನ್ನು ಆಟಗಾರನಾಗಿ ಸೇರಿಸಿಕೊಳ್ಳುವಂತೆ ಕ್ಯಾಪ್ಟನ್ ಜಂಗ್ಲಿ ಅವರು ಶಿಪಾರಸ್ಸು ಮಾಡಿದಾಗ ಮೊದಲು ಜಾತಿಯ ನೆಪವೊಡ್ಡಿ ಬಾಲುರನ್ನು ತಿರಸ್ಕರಿಸಲಾಗುತ್ತದೆ. ಆದರೆ ಜಂಗ್ಲಿರವರು ಬಾಲು ಅವರ ಸ್ಪಿನ್ ಚಳಕದ ಬಗ್ಗೆ ಕಡೆಗೂ ಅರಿವು ಮೂಡಿಸಿ ಅವರು ಹಿಂದೂ ಕ್ಲಬ್ ಸೇರುವಂತೆ ಮಾಡುತ್ತಾರೆ. ತಂಡ ಸೇರಿದೊಡನೆ ತಮ್ಮ ಸ್ಪಿನ್ ಚಳಕದಿಂದ ಹಿಂದೂ ಕ್ಲಬ್ ಗೆ ಒಂದರ ಮೇಲೊಂದು ಪಂದ್ಯಗಳನ್ನು ಬಾಲು ಗೆಲ್ಲಿಸುತ್ತಾ ಆಟಗಾರನಾಗಿ ತಮ್ಮ ವರ‍್ಚಸ್ಸನ್ನು ಹೆಚ್ಚಿಸಿಕೊಳ್ಳುತ್ತಾರೆ. ಮೈದಾನದಲ್ಲಿ ಒಟ್ಟಿಗೆ ಆಡಿದರೂ, ಅವರು ಬೌಲ್ ಮಾಡಿದ ಚೆಂಡಿನಿಂದ ಬಂದ ಕ್ಯಾಚ್ ಅನ್ನು ಸಹ-ಆಟಗಾರರು ಹಿಡಿದರೂ, ಬಾಲು ದಲಿತರೆಂಬ ಕಾರಣಕ್ಕೆ ಊಟ ಹಾಗೂ ಚಹಾ ಹೊತ್ತಿನಲ್ಲಿ ಅವರನ್ನು ತಂಡದಿಂದ ಪ್ರತ್ಯೇಕವಾಗಿಡುವುದು ಆಗ ರೂಡಿಯಾಗಿತ್ತು. ಊಟ ಮಾಡುವಾಗ ಮೇಲ್ಜಾತಿಯವರು ಒಂದು ಕಡೆ ತಂಡವಾಗಿದ್ದರೆ, ತಂಡದ ಪ್ರಮುಕ ಬೌಲಿಂಗ್ ಅಸ್ತ್ರ ಬಾಲು ಮಾತ್ರ ಒಂಟಿಯಾಗಿ ನೆಲದ ಮೇಲೆ ಕೂತು ಊಟ ಮಾಡುತ್ತಿದ್ದರು. ಅವರಿಗೆ ಪ್ರತ್ಯೇಕವಾಗಿ ಮಣ್ಣಿನ ಮಡಿಕೆಯಲ್ಲಿ ನೀರು, ಚಹಾ ಕುಡಿಯುವ ಮತ್ತು ಊಟ ಮಾಡುವ ವ್ಯವಸ್ತೆ ಮಾಡಲಾಗಿತ್ತು. ಆದರೂ ಈ ಜಾತಿ ಕಟ್ಟುಪಾಡುಗಳಿಂದ ಎದೆಗುಂದದ ಬಾಲು ಆಟಗಾರನಾಗಿ ಬೆಳೆಯುತ್ತಾ ಹೋದರು. ಹಾಗೆ ಸಮಾಜದ ಎಲ್ಲ ವರ‍್ಗದ ಜನರ ಜೊತೆಗೆ ಗೋವಿಂದ್ ರಾನಡೆ, ಬಾಲ ಗಂಗಾದರ್ ತಿಲಕ್ ರಂತಹ ಜನಪ್ರಿಯ ನಾಯಕರಿಂದಲೂ ಮೆಚ್ಚುಗೆ ಪಡೆದು ಕ್ರಿಕೆಟ್ ಮೈದಾನದಲ್ಲಿ ಜಾತಿಯ ಸಂಕೋಲೆಯನ್ನು ಒಂದು ಮಟ್ಟಕ್ಕೆ ಮುರಿಯುವಲ್ಲಿ ಬಾಲು ಯಶಸ್ವಿಯಾದರು.

ಬಾಂಬೆಯಲ್ಲಿ ಬಾಲು

1897 ರಲ್ಲಿ ಹೆಚ್ಚು ಸ್ಪರ‍್ದಾತ್ಮಕ ಕ್ರಿಕೆಟ್ ಆಡಲು ಬಾಂಬೆಗೆ ಹೋಗಿ ನೆಲೆಸಿದ ಬಾಲು ಅಲ್ಲಿನ ಪಿ.ಜೆ. ಹಿಂದೂ ಜಿಮ್ಕಾನ ಕ್ಲಬ್ ಸೇರುತ್ತಾರೆ. ಮತ್ತೊಮ್ಮೆ ಜಾತಿ ಆದಾರದ ಮೇಲೆ ಅವರ ಆಯ್ಕೆಗೆ ಮೇಲ್ವರ‍್ಗದವರಿಂದ ವಿರೋದ ವ್ಯಕ್ತವಾದರೂ ನಾಯಕ ಕೀರ‍್ತಿಕರ್ ಬಾಲು ಅವರನ್ನು ಬೆಂಬಲಿಸುತ್ತಾರೆ. ತಂಡದ ಬೌಲಿಂಗ್ ಬೆನ್ನೆಲುಬಾದ ಬಾಲು ಆಗಿನ ಬಾರತದ ಶ್ರೇಶ್ಟ ಬ್ಯಾಟ್ಸ್ಮನ್ ರಂಜಿತ್ ಸಿನ್ಹ್ ಜೀ (ರಣಜಿ ಟೂರ‍್ನಿ ಇವರ ಹೆಸರಲ್ಲಿದೆ) ಅವರನ್ನು ತಮ್ಮ ಪ್ಲೈಟ್ ಚಳಕದಿಂದ ಹಲವಾರು ಬಾರಿ ಔಟ್ ಮಾಡಿ ತಮ್ಮ ಶ್ರೇಶ್ಟತೆಯನ್ನು ಸಾರಿ ಹೇಳುತ್ತಾರೆ. ನಂತರ 1907 ರಿಂದ 1911 ರ ನಡುವೆ ಯುರೋಪಿಯನ್ನರು, ಹಿಂದೂಗಳು ಹಾಗೂ ಪಾರ‍್ಸಿಗಳ ನಡುವೆ ನಡೆದ ‘triangular’ ಸರಣಿಯಲ್ಲಿ ಹಿಂದೂಗಳ ಪರ ಆಡಿದ ಬಾಲು 5 ಪಂದ್ಯಗಳಿಂದ ಕೇವಲ 10 ರನ್ ಗಳ ಸರಾಸರಿಯಲ್ಲಿ 40 ವಿಕೆಟ್ ಪಡೆದು, 1911 ರಲ್ಲಿ ಇಂಗ್ಲೆಂಡ್ ಗೆ ಹೊರಟ ಆಲ್ ಇಂಡಿಯಾ ತಂಡಕ್ಕೆ ಆಯ್ಕೆಯಾಗುತ್ತಾರೆ.

1911 ರ ಇಂಗ್ಲೆಂಡ್ ಪ್ರವಾಸ – ಮೋಡಿ ಮಾಡಿದ ಬಾಲು

ಆಲ್ ಇಂಡಿಯಾ ತಂಡ ಇಂಗ್ಲೆಂಡ್ ನಲ್ಲಿ ಹಲವಾರು ಕೌಂಟಿ ತಂಡಗಳ ಎದುರು ಒಟ್ಟು 14 ಮೊದಲ ದರ‍್ಜೆ ಪಂದ್ಯಗಳನ್ನಾಡಿ 2 ಪಂದ್ಯ ಗೆದ್ದು, 2 ಡ್ರಾ ಮಾಡಿಕೊಂಡು 10 ಪಂದ್ಯಗಳನ್ನು ಸೋತಿತು. ಎರಡನೇ ದರ‍್ಜೆ ತಂಡಗಳ ಎದುರು 9 ಪಂದ್ಯಗಳಲ್ಲಿ 4 ಪಂದ್ಯ ಗೆದ್ದರೆ 5 ರಲ್ಲಿ ಸೋಲು ಕಂಡಿತು. ಆಲ್ ಇಂಡಿಯಾ ತಂಡದ ನೀರಸ ಪ್ರದರ‍್ಶನದ ನಡುವೆಯೂ ಬಾಲುರವರ ಎಡಗೈ ಸ್ಪಿನ್ ಬೌಲಿಂಗ್ ಮಾತ್ರ ಮಂದಿಯ ಮೆಚ್ಚುಗೆ ಗಳಿಸಿತು. 14 ಪಂದ್ಯಗಳಲ್ಲಿ 20 ರ ಸರಾಸರಿಯಲ್ಲಿ ಒಟ್ಟು 75 ಮೊದಲ ದರ‍್ಜೆ ವಿಕೆಟ್ ಪಡೆದ ಬಾಲು, ಹಲವಾರು ಕೌಂಟಿ ತಂಡಗಳಿಂದ ಆಮಂತ್ರಣ ಪಡೆದರು. ಇನ್ನೂ ಟೆಸ್ಟ್ ಮಾನ್ಯತೆ ಪಡೆಯದ ಬಾರತದಲ್ಲಿ ಇಂತಹ ಒಬ್ಬ ಅಳವುಳ್ಳ ವಿಶ್ವದರ‍್ಜೆಯ ಸ್ಪಿನ್ನರ್ ಇರುವುದನ್ನು ಕಂಡು ಕ್ರಿಕೆಟ್ ಜಗತ್ತು ಬೆರಗಾದದ್ದು ಸುಳ್ಳಲ್ಲ. ಕ್ಯಾತ ಇಂಗ್ಲಿಶ್ ವಿಮರ‍್ಶಕ E.H.D ಸೆವೆಲ್ ಇಂತಹ ಬೌಲರ್ ಅನ್ನು ಕೌಂಟಿ ತಂಡಗಳು ಪಡೆಯಲು ಪುಣ್ಯ ಮಾಡಿರಬೇಕು ಎಂದರು. ಸರೇ ತಂಡ ಬಾಲುರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಶತಾಯ ಗತಾಯ ಪ್ರಯತ್ನ ಮಾಡಿದರೂ ವಿದೇಶದಲ್ಲಿ ನೆಲೆಸಲು ಒಲ್ಲದ ಬಾಲು ನಯವಾಗಿ ಆಮಂತ್ರಣವನ್ನು ತಿರಸ್ಕರಿಸಿದರು. ಹೆಚ್ಚು ಟೆಸ್ಟ್ ಆಟಗಾರರಿದ್ದ ಕೌಂಟಿ ತಂಡಗಳ ಎದುರು ಬಾಲುರವರ ಪ್ರದರ‍್ಶನ ಹೀಗಿತ್ತು : ಲಾನ್ಕಶೇರ್ ಎದುರು 5/92 ಮತ್ತು 6/93; ಯಾರ‍್ಕ್‌ಶೇರ್ ಎದುರು 4/127; ವಾರವಿಕ್ಶೇರ್ ಎದುರು 4/74; ಸರೇ ಎದುರು 4/100. ಪ್ರವಾಸದಲ್ಲಿ ಆಲ್ ಇಂಡಿಯಾ ಗೆದ್ದ ಎಲ್ಲಾ ಪಂದ್ಯಗಳು ಕೂಡ ಬಾಲುರವರ ಬೌಲಿಂಗ್ ಬಲದ ಮೇಲೆಯೇ ಅನ್ನೋದು ಇಲ್ಲಿ ಗಮನಿಸಬೇಕಾದ ಅಂಶ. ಇಂಗ್ಲೆಂಡ್ ನ ಬೇರೆ ಬಗೆಯ ಪಿಚ್ ಗಳಿಗೆ ತಮ್ಮ ಬೌಲಿಂಗ್ ಹೊಂದಿಕೊಳ್ಳುವಂತೆ ವೇಗ, ಪ್ಲೈಟ್ ಅನ್ನು ಮಾರ‍್ಪಡಿಸಿ ಪ್ರವಾಸದಲ್ಲಿ 19 ರ ಸರಾಸರಿಯಲ್ಲಿ ಒಟ್ಟು 114 ವಿಕೆಟ್ ಪಡೆದದ್ದು ಇಂದಿಗೂ ದಾಕಲೆಯೇ!

ಬಾಲುರ ಕೈಗೆಟುಕದ ನಾಯಕತ್ವ

ಬಾರತದ ಪ್ರತಿಶ್ಟಿತ ದೇಸೀ triangular ಪಂದ್ಯಾವಳಿ 1913 ರಲ್ಲಿ ಮುಸ್ಲಿಮ್ ತಂಡದ ಸೇರ‍್ಪಡೆಯಿಂದ quadrangular ಆಗಿ ಮಾರ‍್ಪಟ್ಟಿತು. ಹಿಂದೂ ತಂಡದ ಅತ್ಯಂತ ಹಿರಿಯ ಹಾಗೂ ಅನುಬವಿ ಆಟಗಾರರಾಗಿದ್ದ ಬಾಲುರವರಿಗೆ ಮತ್ತೊಮ್ಮೆ ಜಾತಿ ಆದಾರದ ಮೇಲೆ ಅನ್ಯಾಯ ಮಾಡಲಾಗುತ್ತದೆ. ಒಬ್ಬ ದಲಿತ ಹಿಂದೂ ತಂಡವನ್ನು ಮುನ್ನಡೆಸುವುದನ್ನು ಒಪ್ಪದ ಮಂದಿ ಎಮ್.ಡಿ. ಪೈರನ್ನು ನಾಯಕರನ್ನಾಗಿ ಆಯ್ಕೆ ಮಾಡುತ್ತಾರೆ. ಬದುಕಿನಾದ್ಯಂತ ಇಂತಹ ಎಶ್ಟೋ ತಾರತಮ್ಯಗಳನ್ನು ನೋಡಿ ಗಟ್ಟಿಯಾಗಿದ್ದ ಬಾಲು ಎದೆಗುಂದುವುದಿಲ್ಲ. ಹಿಂದೂ ತಂಡದ ಉಪನಾಯಕನಾಗಿ, ಬೌಲರ್ ಆಗಿ ಹಲವಾರು ಪಂದ್ಯಗಳನ್ನು ಗೆಲ್ಲಿಸಿಕೊಡುತ್ತಾರೆ. 1919 ರ ಸರಣಿಯಲ್ಲಿ 44 ರ ಹರೆಯದ ಬಾಲುರವರ ಬೌಲಿಂಗ್ ನೋಡಲು 10,000 ಕ್ಕೂ ಹೆಚ್ಚು ಮಂದಿ ಸೇರಿದ್ದು ಅವರ ಜನಪ್ರಿಯತೆಗೆ ಎತ್ತುಗೆ. ನಂತರ 1920 ರಲ್ಲಿ ನಾಯಕ ಪೈ ಪಂದ್ಯದ ವೇಳೆ ಹೊರನಡೆದಾಗ ಉಪನಾಯಕ ಬಾಲು ಕಡೆಗೂ ನಾಯಕರಾಗಿ ಚಾಕಚಕ್ಯತೆಯಿಂದ ತಂಡವನ್ನು ಮುನ್ನಡೆಸಿ ಸಮಾಜದಲ್ಲಿ ಹೊಸ ಮೊದಲಿಗೆ ಸಾಕ್ಶಿ ಆಗುತ್ತಾರೆ. ಜನಪ್ರಿಯರಾಗಿದ್ದ ಬಾಲು ಆಗ ನಾಯಕರಾಗಿದ್ದನ್ನು ಯಾರೂ ವಿರೋದಿಸುವುದಿಲ್ಲ. ಇದರಿಂದ ಇಂಬು ಪಡೆದ ಆಯ್ಕೆಗಾರರು, ಆ ಬಳಿಕ 1923 ರಲ್ಲಿ ಬಾಲುರವರ ತಮ್ಮ ವಿಟಲ್ ಅದಿಕ್ರುತವಾಗಿ ಹಿಂದೂ ತಂಡದ ನಾಯಕರಾಗಿ ಜಾತಿ ಬೇದವನ್ನು ಹಿಮ್ಮೆಟ್ಟಿನಿಂತರು. ಅಲ್ಲಿಂದ ಹಿಂದೂ ತಂಡದ ನಾಯಕತ್ವ ಎಲ್ಲಾ ಜಾತಿಯ ಆಟಗಾರರ ಕೈಗೆಟುಕುವಂತಾಗುತ್ತದೆ. ಈ ಬದಲಾವಣೆಯಲ್ಲಿ ಬಾಲುರವರ ಕೊಡುಗೆ ಅಪಾರ.

ದಲಿತ ಚಳುವಳಿಯಲ್ಲಿ ಬಾಲು

ಎಳವೆಯಿಂದಲೂ ಶೋಶಣೆಗೆ ಒಳಗಾಗಿದ್ದ ಬಾಲು ಕ್ರಿಕೆಟ್ ಅಂಗಳದ ಹೊರಗೆ ಹಲವಾರು ದಲಿತ ಚಳುವಳಿಗಳಲ್ಲಿ ಸಕ್ರಿಯವಾಗಿದ್ದರು. ಅಂಬೇಡ್ಕರ್ ಅವರೊಟ್ಟಿಗೆ ಶೋಶಿತರ ದನಿಯಾಗಿ ದುಡಿದರು. ಆನಂತರ, ಚುನಾವಣೆಯಲ್ಲಿ ದಲಿತರ ಪ್ರಾತಿನಿದ್ಯದ ಬಗ್ಗೆ ಗಾಂದಿ ಮತ್ತು ಅಂಬೇಡ್ಕರ್ ರ ನಡುವೆ ಇದ್ದ ತಕರಾರುಗಳನ್ನು ಮಾತುಕತೆ ಮೂಲಕ ಬಗೆ ಹರಿಸಿ ಅಂಬೇಡ್ಕರ್ ರವರು ಐತಿಹಾಸಿಕ ‘ಪೂಣಾ ಪ್ಯಾಕ್ಟ್’ ಅನ್ನು ಸಹಿ ಮಾಡುವಂತೆ ಮನವೊಲಿಸುವಲ್ಲಿ ಬಾಲುರವರ ಪಾತ್ರ ದೊಡ್ಡದಿತ್ತು. ಆ ಬಳಿಕ ಹಲವಾರು ವಿಶಯಗಳ ಬಗ್ಗೆ ಬಾಲು ಮತ್ತು ಅಂಬೇಡ್ಕರ್ ರ ನಡುವೆ ಅಸಮಾದಾನಗಳು ಹೆಚ್ಚಾಗಿ 1937 ರಲ್ಲಿ ಇಬ್ಬರೂ ಎದುರಾಳಿಗಳಾಗಿ ಬಾಂಬೆ ಲೆಜಿಸ್ಲೇಟಿವ್ ಅಸ್ಸೆಂಬ್ಲಿಯ ಚುನಾವಣೆಯಲ್ಲಿ ಸ್ಪರ‍್ದಿಸಿ, ಬಾಲು ಸುಮಾರು 2,000 ಮತಗಳಿಂದ ಅಂಬೇಡ್ಕರ್ ಎದುರು ಸೋಲುಂಡಿದ್ದು ಈಗ ಇತಿಹಾಸ.

ಬಾರತದ ಇತಿಹಾಸದಲ್ಲಿ ಒಂದು ಮುಕ್ಯ ಅದ್ಯಾಯ 

ಪಲ್ವಂಕರ್ ಬಾಲು ತಮ್ಮ ಎಡಗೈ ಸ್ಪಿನ್ ನಿಂದ ಬಾರತದ ಬವ್ಯ ಸ್ಪಿನ್ ಇತಿಹಾಸಕ್ಕೆ ಮುನ್ನುಡಿ ಬರೆದವರು. ತಮ್ಮಎಸೆತಗಳಲ್ಲಿ ಸೊಗಸಾದ ಪ್ಲೈಟ್ ನೀಡಿ, ಗುರಿ ತಪ್ಪದೆ ಸ್ಟಂಪ್ಸ್ ಮೇಲೆ ಕರಾರುವಾಕ್ಕಾಗಿ, ದಣಿಯದೆ ಒಂದೆಡೆಯಿಂದ ಗಂಟೆಗಟ್ಟಲೆ ಬೌಲ್ ಮಾಡುತ್ತಿದ್ದ ಬಾಲುರವರ ಬೌಲಿಂಗ್ ಪರಿ ನಿಜಕ್ಕೂ ಕ್ರಿಕೆಟ್ ಪ್ರಿಯರಿಗೆ ರಸದೌತಣವಾಗಿತ್ತು. ಹಲವಾರು ಇತಿಹಾಸಗಾರರು ಬಿಶನ್ ಬೇಡಿರವರನ್ನು ಬಾಲುರವರ ಮುಂದುವರೆದ ಬಾಗ ಎಂದೇ ಬಣ್ಣಿಸಿದ್ದಾರೆ. ಸಾಂಪ್ರಾದಾಯಿಕ ಬೌಲಿಂಗ್ ಶೈಲಿಯಲ್ಲಿ ಎಡಗೈ ಸ್ಪಿನ್ ಮಾಡುತ್ತಿದ್ದ ಬಾಲು 1905 ರಿಂದ 1921 ರ ನಡುವೆ ಒಟ್ಟು 33 ಮೊದಲ ದರ‍್ಜೆ ಪಂದ್ಯಗಳನ್ನಾಡಿ ಕೇವಲ 15.21 ರ ಸರಾಸರಿಯಲ್ಲಿ 179 ವಿಕೆಟ್ ಪಡೆದಿದ್ದಾರೆ. ಮೊದಲ ದರ‍್ಜೆ ಕ್ರಿಕೆಟ್ ನಲ್ಲಿ ಅವರ ಬೌಲಿಂಗ್ ಸರಾಸರಿ ಇಂದಿಗೂ ಅಳಿಯದ ದಾಕಲೆ.

ಬಾಲು ಟೆಸ್ಟ್ ಕ್ರಿಕೆಟ್ ಆಡದ ಬೌಲಿಂಗ್ ದಿಗ್ಗಜ. ಆದರೆ ಇತಿಹಾಸದಲ್ಲಿ ಅವರ ಹಿರಿಮೆ ಕ್ರಿಕೆಟ್ ಅಂಗಳದಾಚೆಗೂ ಇದೆ ಅನ್ನುವುದು ದಿಟ. ಬಾಲು ಸ್ವಾತಂತ್ರಕ್ಕೂ ಮುನ್ನ ಜಾತಿ ವ್ಯವಸ್ತೆಯಿಂದ ನಲುಗಿ ಹೋಗಿದ್ದ ದಲಿತರ ಬದುಕಲ್ಲಿ ಬೆಳಕಾಗಿ, ಒಂದು ಬಗೆಯಲ್ಲಿ ತನ್ನಂಬಿಕೆ ತುಂಬಿದವರು ಅಂದರೆ ತಪ್ಪಾಗಲಾರದು. ಬಾಲು ಕ್ರಿಕೆಟ್ ಅಂಗಳದಲ್ಲಿ ತಮ್ಮ ಬೌಲಿಂಗ್ ಚಳಕದಿಂದ ತಮ್ಮ ತಂಡಕ್ಕೆ ಪಂದ್ಯಗಳನ್ನು ಗೆಲ್ಲಿಸಿದ್ದು ಅಶ್ಟೇ ಅಲ್ಲದೇ, ಜಾತಿ ವ್ಯವಸ್ತೆ ಎದುರು, ಸಮಾಜದ ಹಲವಾರು ಕಟ್ಟುಪಾಡುಗಳಿಗೆ ತಮ್ಮ ಬೌಲಿಂಗ್ ನಿಂದಲೇ ಉತ್ತರ ನೀಡಿದರು. ಜನರ ಮನ ಗೆದ್ದು ‘ನಾನು ಕೂಡ ನಿಮ್ಮಲ್ಲಿ ಒಬ್ಬ, ನನ್ನನ್ನು ನಮ್ಮವರನ್ನು ಸ್ವೀಕರಿಸಿ’ ಎಂದು ಸಾರಿ ಹೇಳಿದವರು ಬಾಲು. ಈ ನಿಟ್ಟಿನಲ್ಲಿ ಹಲವು ಮೊದಲುಗಳಿಗೆ ಮುನ್ನುಡಿ ಬರೆದರು. ಅಂಬೇಡ್ಕರ್ ಮತ್ತು ಗಾಂದಿಯವರು ಒಂದು ಬಗೆಯಲ್ಲಿ ಶೋಶಣೆಗೊಳಗಾಗಿದ್ದವರ ಪರ ನಿಂತಿದ್ದರೆ, ಬಾಲು ಕೂಡ ತಮ್ಮ ಆಟದ ಮೂಲಕ ಸಮಾಜದ ಎಲ್ಲಾ ವರ‍್ಗದ ಜನರನ್ನು ಒಂದುಗೂಡಿಸಿದರು. ಬದುಕಿನ ಎಲ್ಲಾ ತೊಡಕುಗಳನ್ನು ಹಿಮ್ಮೆಟ್ಟಿ ದಿಗ್ಗಜರಾಗಿ ಬೆಳೆದ ಬಾಲುರವರ ಸಾಹಸಗಾತೆ ಬಾರತೀಯರೆಲ್ಲರಿಗೂ ತಿಳಿದಿರಬೇಕಾದ ವಿಶಯ. ಮುಂದಿನ ಪೀಳಿಗೆಗೆ ಇವರು ಮೀರಿ ಬೆಳೆದ ಸವಾಲುಗಳು, ಸಾದನೆಯನ್ನು ತಪ್ಪದೇ ಪರಿಚಯಿಸೋ ಹೊಣೆ ನಮ್ಮೆಲ್ಲರದು.

(ಮಾಹಿತಿ ಮತ್ತು ಚಿತ್ರ ಸೆಲೆ : Wizards: The Story of Indian Spin Bowling, wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

 1. Raghuramu N.V. says:

  ತುಂಬ ಚೆನ್ನಾಗಿದೆ ಸರ್. ಇವರ ಬಗ್ಗೆ ನನಗೆ ಗೊತ್ತಿರಲಿಲ್ಲ. ಇವರ ಸಾಧನೆ ಮಹತ್ತರವಾದದ್ದು. ತಿಳಿಸಿರುವುದಕ್ಕೆ ವಂದನೆಗಳು.

 2. thippanna m.s. jamadagni says:

  ?This is one of the best and the finest article I have read. Still unknown wizard to cricket world who had proved his worth and started the legacy of Indian spin bowling with sheet artistry internationally inspite of many drawbacks is some thing to be astonishingly cherished.
  Thank you so much Ramachandra.
  I would like this article to be translated into all Indian languages.
  Post a copy to BCCI to know whether they know this sound artist by name.
  I am proud that BALU was from Karnataka.

ಅನಿಸಿಕೆ ಬರೆಯಿರಿ: