ನಾರು – ಆರೋಗ್ಯದ ಬೇರು
– ಸಂಜೀವ್ ಹೆಚ್. ಎಸ್.
ನಾವು ಆದುನಿಕ ಜೀವನಶೈಲಿಯ ಬದುಕಿನ ಅಲೆದಾಟದಲ್ಲಿ ವಾಸ್ತವವಾಗಿ ಅವಶ್ಯಕತೆ ಇರುವ ಎಲ್ಲಾ ಗುಣಮಟ್ಟದ ವಸ್ತುಗಳನ್ನು ಕ್ರಮೇಣ ದೂರ ಮಾಡಿಕೊಳ್ಳುತ್ತಿದ್ದೇವೆ. ಆಹಾರ ಸಂಸ್ಕರಣೆ ಬೇಕು ಹೌದು, ಆದರೆ ಸಂಸ್ಕರಣೆ ಮಾಡುವ ಬರದಲ್ಲಿ ಅತ್ಯಂತ ಅವಶ್ಯಕವಾಗಿ ಬೇಕಾಗಿರುವ ಸತ್ವಗಳು ಇಲ್ಲದಿರುವ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ. ಆಯ್ಕೆ ಮಾಡಿಕೊಳ್ಳುವ ಬರದಲ್ಲಿ “ನಾರು – ಬೇರನ್ನು” ಮರೆಯುತ್ತಿದ್ದೇವೆ.
ಜನಸಾಮಾನ್ಯರು ಇಂದಿಗೆ ಅನುಬವಿಸುತ್ತಿರುವ ಸಾಮಾನ್ಯ ಅಸ್ವಸ್ತತೆಗಳು ಎಂದರೆ ಮಲಬದ್ದತೆ, ಅಸಿಡಿಟಿ, ಅಜೀರ‍್ಣ, ಮೂಲವ್ಯಾದಿ. ಇವುಗಳೇನು ದೊಡ್ಡ ರೋಗಗಳೇನು ಅಲ್ಲ, ಆದರೂ ಒಬ್ಬರಲ್ಲ ಒಬ್ಬರಿಗೆ ಆಗಾಗ ಇಂತಹ ಅಸ್ವಸ್ತತೆಗಳು ಕಾಡುವುದು ಸಹಜ. ಇಂತಹ ಅಸ್ವಸ್ತತೆಗಳಿಗೆ ನಾರಿನಂಶದ ಕೊರತೆಯೂ ಕೂಡ ಪ್ರಮುಕ ಕಾರಣ. ನಾವು ಸೇವಿಸುತ್ತಿರುವ ಆಹಾರದಲ್ಲಿ ಸರಿಯಾದ ಪ್ರಮಾಣದಲ್ಲಿ ನಾರಿನಂಶ (Dietary Fibre) ಇಲ್ಲದಿದ್ದರೆ, ಅದರ ದೀರ‍್ಗಕಾಲದ ಪರಿಣಾಮಗಳನ್ನು ಕಂಡಿತ ಅನುಬವಿಸಬೇಕಾಗುತ್ತದೆ.
ನಾರು – ರಚನೆ, ಕಾರ‍್ಯಕ್ಶಮತೆ
ಆಹಾರದ ನಾರು ಎನ್ನುವುದು ಸಸ್ಯಗಳ ಬಾಗ ಅತವಾ ಸಾದ್ರುಶ್ಯದ ಕಾರ‍್ಬೋಹೈಡ್ರೇಟ್‌ಗಳು . ನಾರುಗಳುಳ್ಳ ಆಹಾರ ಸೆಲ್ಯುಲೋಸ್, ಹೆಮಿಸೆಲ್ಯುಲೋಸ್, ಪೆಕ್ಟಿನ್ಸ್, ಅಂಟು ಮತ್ತು ಲಿಗಿನ್ಸ್ ಒಳಗೊಂಡಿರುತ್ತದೆ. ಇದನ್ನು ಸಾಮಾನ್ಯವಾಗಿ ಒರಟು ಪದಾರ‍್ತ ಎನ್ನುತ್ತಾರೆ. ಇದು ಮಾನವನ ಸಣ್ಣ ಮತ್ತು ದೊಡ್ಡ ಕರುಳಿನಲ್ಲಿ ಜೀರ‍್ಣಕ್ರಿಯೆಗೆ ಅತ್ಯಂತ ಅವಶ್ಯಕ ಮತ್ತು ಸಹಾಯಕಾರಿ. ನೈಸರ‍್ಗಿಕ ನಾರು ಶರೀರಕ್ಕೆ ವರ, ಪ್ರತಿದಿನ ಒಬ್ಬ ಮನುಶ್ಯನಿಗೆ ಸರಾಸರಿ 25 ಗ್ರಾಂ ನಶ್ಟು ನಾರಿನ ಅಂಶವು ಪೂರೈಕೆ ಆಗಬೇಕು ಆದರೆ ಇದರ ಅರ‍್ದದಶ್ಟು ಕೂಡ ನಾವು ಸೇವಿಸುತ್ತಿಲ್ಲ.
ನಾರಿನ ಬಗೆಗಳು
ಆಹಾರದಲ್ಲಿ ಎರಡು ರೀತಿಯ ನಾರಿನ ಅಂಶಗಳು ಕಂಡುಬರುತ್ತದೆ; ಕರಗುವಂತಹ ನಾರಿನಂಶ ಮತ್ತು ಕರಗದೇ ಇರುವಂತಹ ನಾರಿನಂಶ. ಕರಗುವ ನಾರು ದೇಹದಲ್ಲಿನ ಕೊಬ್ಬಿನಂಶವನ್ನು ಇಳಿಸಲು ಸಹಾಯ ಮಾಡಿದರೆ ಕರಗದ ನಾರು ಮಲಬದ್ದತೆ ಆಗದಂತೆ ಕಾಪಾಡುತ್ತದೆ. ಆಹಾರದಲ್ಲಿನ ಕರಗದೆ ಇರುವ ನಾರು ಸ್ಪಂಜಿನಂತೆ ನೀರನ್ನು ಹೀರಿಕೊಂಡು ಮಲಬದ್ದತೆ ತಡೆಯುತ್ತದೆ. ಕೆನಡಾದಲ್ಲಿ ನಡೆದ ಅದ್ಯಯನದ ಪ್ರಕಾರ ಕರಗದೆ ಇರುವ ನಾರಿನ ಅಂಶ ಸೇವನೆಯಿಂದ ಕರುಳಿನ ಕ್ಯಾನ್ಸರ‍್ ನಿಂದು ಸಾಯುವ ಸಾದ್ಯತೆ ಶೇಕಡಾ 26ರಶ್ಟು ಇಳಿಮುಕವಾಗುತ್ತದೆ.
ನಾರಿನ ಸುತ್ತ ನಡೆದ ಸಂಶೋದನೆ ಮತ್ತು ಅದರ ಉಪಯೋಗ
ಅಮೆರಿಕ ಇಂಗ್ಲೆಂಡ್ ಮುಂತಾದ ದೇಶಗಳಲ್ಲಿ 1960 ರ ದಶಕದಲ್ಲಿ ಸಕ್ಕರೆ ಕಾಯಿಲೆ, ಹ್ರುದಯ ಸಂಬಂದಿ ಕಾಯಿಲೆ ಹಾಗೂ ಕ್ಯಾನ್ಸರ‍್ ನಂತಹ ರೋಗಗಳು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಾಗ ಆಹಾರದ ನಾರಿನಂಶಕ್ಕೂ ಈ ರೋಗಳಿಗೂ ಸಂಬಂದವಿದೆ ಎಂಬುದು ಕಂಡುಬಂದಿತು. ಯಾವುದೇ ಪೋಶಕಾಂಶ ಇಲ್ಲದ, ಪಚನ ಕ್ರಿಯೆಯಲ್ಲಿ ಕರಗದ ನಾರಿನಂಶದಲ್ಲಿ ಏನಿದೆ ಎಂದು, ಜನರು ಈಗಲೂ ಕೂಡ ನಾರಿನೆಡೆಗೆ ಅಸಡ್ಡೆ ಮನೋಬಾವ ತೋರುತ್ತಾರೆ. ಅದರೆ ವಾಸ್ತವಾಂಶವೇ ಬೇರೆ, ಪಚನ ಕ್ರಿಯೆಯ ನಂತರ ನಾರಿನಂಶ ರಕ್ತಕ್ಕೆ ಸೇರದೆ ಇದ್ದರೂ ಕೂಡ, ಅತ್ಯುತ್ತಮ ಕಾರ‍್ಯಕ್ಶಮತೆಯಿಂದ ಇತರ ಅಂಗಾಂಶಗಳು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗಲು ನಾರು ಬೇಕು. ದೊಡ್ಡಕರುಳಿನ ಕೊನೆಯ ಬಾಗ ಹೆಗ್ಗರುಳು “ಕೋಲನ್” ಅನ್ನು ಸ್ವಚ್ಚವಾಗಿಡುವುದೇ ನಾರಿನ ಕೆಲಸ. ತಿಂದ ಆಹಾರ ಪದಾರ‍್ತಗಳ ಹೀರಿಕೊಳ್ಳುವಿಕೆ, ಹುದುಗುವಿಕೆ ಮತ್ತು ಹಲವು ಕಿಣ್ವಗಳ ರಾಸಾಯನಿಕ ಕ್ರಿಯೆಗಳ ಬಾಗವಹಿಸುವಿಕೆಯಲ್ಲಿ ನಾರಿನ ಪಾತ್ರ ಕೂಡಾ ಅತ್ಯಂತ ಹೆಚ್ಚಿನದು.
ತಿನ್ನುವ ಆಹಾರದಲ್ಲಿ ಕೊಬ್ಬು(ಕೊಲೆಸ್ಟ್ರಾಲ್) ಮತ್ತು ಅಪಾಯಕರ ರಾಸಾಯನಿಕಗಳು ನಮ್ಮ ಕರುಳಿನ ಮೂಲಕ ರಕ್ತವನ್ನು ಸೇರುತ್ತದೆ, ಒಂದು ವೇಳೆ ನಾವು ನಾರಿನಂಶವಿರುವ ಆಹಾರ ಪದಾರ‍್ತಗಳನ್ನು ಸೇವಿಸಿದರೆ ನಾರಿನಂಶ ಕರುಳಿನ ಗೋಡೆಗಳ ಮೇಲೆ ಒಂದು ಪದರವನ್ನು ನಿರ‍್ಮಿಸಿ ಅದಕ್ಕೆ ಅಂಟಿಕೊಂಡ ಕೊಲೆಸ್ಟ್ರಾಲ್ ಮತ್ತು ರಾಸಾಯನಿಕಗಳನ್ನು ನಾರಿನ ಜೊತೆ ಹೊರಹಾಕುತ್ತದೆ. ಪ್ರತಿದಿನ ಸಾರಸರಿ 7 ಗ್ರಾಂ ಕರಗೋ ನಾರಿನಂಶ ಸೇವಿಸಿದರೆ ಹ್ರುದಯರೋಗದಿಂದ ಸಾಯುವ ಸಂಕ್ಯೆ ಶೇಕಡಾ 40ರಶ್ಟು ಇಳಿಮುಕವಾಗುತ್ತದೆ ಎಂದು ಹಾವರ‍್ಡ್ ವಿಶ್ವವಿದ್ಯಾನಿಲಯದ ಅದ್ಯಯನ ತಿಳಿಸಿದೆ.
ದೇಹದ ತೂಕದ ಬಗ್ಗೆ ಕಾಳಜಿ ಇರುವವರು ಕಂಡಿತವಾಗಿ ಆಹಾರದಲ್ಲಿ ನಾರಿನಂಶದ ಕಡೆಗೆ ಗಮನ ಕೊಡುವುದು ಅತ್ಯವಶ್ಯಕ. ನಾರಿನಂಶದಿಂದ ಜೀರ‍್ಣಕ್ರಿಯೆ ಮಂದಗೊಳ್ಳುವ ಕಾರಣ ದೇಹದ ತೂಕ ಇಳಿಸಲು ನಾರು ಪಲಕಾರಿ. ನಾರಿನ ಸೇವನೆಯಿಂದ ರಕ್ತಕ್ಕೆ ಸಕ್ಕರೆ ಸೇರುವ ವೇಗ ಕಡಿಮೆಯಾಗುತ್ತದೆ, ಅಲ್ಲದೆ ಕೆಲವು ನಾರುಗಳಿಂದ ಆಹಾರದ ಜಿಗುಟುತನ ಹೆಚ್ಚುತ್ತದೆ, ಇದರಿಂದ ರಕ್ತದಲ್ಲಿನ ಗ್ಲುಕೋಸ್ ಕಡಿಮೆಯಾಗಿ ಸಕ್ಕರೆ ಕಾಯಿಲೆ ಅತವಾ ರಕ್ತದೊತ್ತಡದಂತಹ ಸಮಸ್ಯೆ ಪರಿಹಾರವಾಗುತ್ತದೆ. ದೇಹ ಲವಲವಿಕೆಯಿಂದ ಹಗುರವಾಗಿರುತ್ತದೆ.
ನಾವು ಅಕ್ಕಿಯನ್ನು ಮಿಲ್ ಮಾಡಿಸಿ ಹೊರಗಿನ ತವಡನ್ನು ತೆಗೆದು ಕೇವಲ ಕಾರ‍್ಬೋಹೈಡ್ರೇಟ್ಸ್ ಮಾತ್ರ ಸೇವಿಸುತ್ತಿದ್ದೇವೆ. ಹೊರಗಿನ ನಾರಿನ ಅಂಶವನ್ನು ತೆಗೆದು, ಹಸು ಎಮ್ಮೆಗಳಿಗೆ ಉತ್ತಮ ಪೌಶ್ಟಿಕಾಂಶವನ್ನು ನೀಡುತ್ತಿದ್ದೇವೆ. ನಾರು ರಹಿತ ಅತಿಯಾದ ಸಂಸ್ಕರಿಸಿದ ಆಹಾರ ಸೇವನೆಯಿಂದ ಅನಾರೋಗ್ಯ ಕಟ್ಟಿಟ್ಟ ಬುತ್ತಿ, ನಾರಿನ ಕೊರತೆಯಿಂದಾಗಿ ಅನುಬವಿಸುವ ಅಸ್ವಸ್ತತೆ ಅತವಾ ರೋಗಗಳಿಂದ ನರಳಿದವರಿಗೆ ಮಾತ್ರ ಅದರ ಅನುಬವವಾಗುತ್ತದೆ. ಆಹಾರ ಪದಾರ‍್ತಗಳನ್ನು ಬೇಯಿಸುವುದರಿಂದ ನಾರಿನಂಶ ನಾಶವಾಗುವುದಿಲ್ಲ, ಆದರೆ ನಾರು ಮೆದುವಾಗುತ್ತದೆ. ಹಣ್ಣು, ಕಾಳು ದಾನ್ಯ ಮತ್ತು ಹಸಿ ತರಕಾರಿ ಸೇವನೆಯಿಂದ ಕಿಣ್ವಗಳು ಉತ್ಪತ್ತಿಯಾಗಿ ಶರೀರದಿಂದ ಕೊಳೆಯನ್ನು ಹೊರಹಾಕಲು ನಾರು ಸಹಾಯ ಮಾಡುತ್ತದೆ. ದೇಹದಲ್ಲಿ ಉತ್ಪತ್ತಿಯಾಗುವ ಮಲ ಎಂಬ ತ್ಯಾಜ್ಯವನ್ನು ಸರಳವಾಗಿ ದೇಹದಿಂದ ಹೊರಹಾಕಲು ಅತಿಮುಕ್ಯವಾಗಿ ಬೇಕಾಗಿರುವುದು ನಾರು. ಮಲಬದ್ದತೆಗೆ ನಾರು ರಾಮಬಾಣವಾಗಿದೆ.
ನಾರಿನಂಶ ಹೊಂದಿರುವ ಆಹಾರದ ಮೂಲಗಳು
ಸೀಬೆ ಹಣ್ಣು, ಸೇಬಿನ ಹಣ್ಣು, ಕಿತ್ತಲೆ ಹಣ್ಣು, ಮಾವಿನ ಹಣ್ಣು, ಅತ್ತಿ ಹೆಣ್ಣು, ಪಾಲಿಶ್ ಮಾಡದ ಅಕ್ಕಿ, ಇಡಿ ಗೋದಿ, ಅವರೇಕಾಯಿ, ಕ್ಯಾರೆಟ್, ಬೀಟ್ ರೂಟ್, ಕೆಂಪು ಗೆಣಸು, ಹೆಸರುಕಾಳು, ಬಟಾಣಿ, ಎಲ್ಲಾ ರೀತಿಯ ಸೊಪ್ಪುಗಳು, ಹಸಿರು ತರಕಾರಿಗಳು, ಕಡಲೆ, ಮೆಂತೆ, ಮೊಳಕೆ ಕಟ್ಟಿದ ಕಾಳುಗಳು, ನಾನಾ ರೀತಿಯ ಹಣ್ಣುಗಳು, ಜೀರಿಗೆ, ಕೊತ್ತಂಬರಿ, ಏಲಕ್ಕಿ, ಬಾರ‍್ಲಿ, ಗೋದಿ, ರಾಗಿ, ಉದ್ದು, ಕಂದುಬಣ್ಣದ ಅಕ್ಕಿ, ಇನ್ನಿತರ ಸಿರಿ ದಾನ್ಯಗಳು ಹಾಗೂ ನೈಸರ‍್ಗಿಕ ಆಹಾರಗಳಲ್ಲಿ ನಾರಿನಂಶವು ಹೆಚ್ಚಾಗಿರುತ್ತದೆ. ಕೆಲವು ತರಕಾರಿ, ಹಣ್ಣುಗಳ ಸಿಪ್ಪೆಯನ್ನು ಸೇವಿಸುವುದರಿಂದಲೂ ದೇಹಕ್ಕೆ ಗರಿಶ್ಟ ಪ್ರಮಾಣದಲ್ಲಿ ನಾರಿನಂಶವನ್ನು ಪಡೆಯಬಹುದು. ಇದರ ಜೊತೆಗೆ ದ್ರವಾಂಶದ ಸೇವನೆ ಅಚ್ಚುಕಟ್ಟಾಗಿ ಇದ್ದರೆ ನಾರಿನ ಸುಗಮ ಚಟುವಟಿಕೆ ಮತ್ತು ಜೈವಿಕ ಲಬ್ಯತೆ ದೇಹಕ್ಕೆ ಸಿಗುತ್ತದೆ.
ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡಾಗ ನಮಗೆ ತಿಳಿಯುವ ವಿಶಯವೇನೆಂದರೆ,ಮನುಶ್ಯರಿಗೆ ಸಮತೋಲನದ ಆಹಾರ (Balanced diet) ಅತಿ ಮುಕ್ಯ ಮತ್ತು ಅಂತಹ ಆಹಾರವು ಸಮಾನ ಪ್ರಮಾಣದ ನಾರಿನಿಂದ ಕೂಡ ಕೂಡಿರಬೇಕು.
( ಚಿತ್ರಸೆಲೆ : wikipedia )
ಇತ್ತೀಚಿನ ಅನಿಸಿಕೆಗಳು