ದೂಳು, ಕೇಳುವವರಿಲ್ಲ ಗೋಳು

– ಸಂಜೀವ್ ಹೆಚ್. ಎಸ್.

 

dust, ದೂಳು

ಬಸವಣ್ಣನವರ ವಚನಗಳಲ್ಲಿ ಹೀಗೊಂದು ಸಾಲಿದೆ “ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ, ಆದರೆ ರಜ (ದೂಳು) ಇದ್ದೇ ಇದ್ದಾನೆ”.

ಸಿನಿಮಾಗಳಲ್ಲಿ ಹೀರೋ ಬರುವಾಗ ದೂಳು ಏಳುತ್ತದೆ. ಸಿನಿಮಾದ ಹೀರೋ ದೂಳನ್ನು ಸೀಳಿಕೊಂಡು ಬರುವಾಗ ಕಣ್ಣು ಮಿಟುಕಿಸದೆ ಕಣ್ಬಿಟ್ಟು ನೋಡುವ ನಾವು, ರಸ್ತೆ ಬದಿಯಲ್ಲಿ ದೂಳು ಬಂದರೆ ಕಣ್ಮುಚ್ಚಿ ಕಣ್ಣುಜ್ಜಿಕೊಂಡು ನಡೆದಾಡುತ್ತೇವೆ. ಎಲ್ಲಿ ಹೋದರೂ ಬರೀ ದೂಳು. ಉಸಿರಾಟದ ಬಾಗವಾಗಿ ಹೋಗಿರುವ ದೂಳಿನ ಕುರಿತು ಒಂದಶ್ಟು ವಿಶಯ ತಿಳಿಯೋಣ…

ಜನಸಾಮಾನ್ಯರು, ಪಾದಚಾರಿಗಳು, ದ್ವಿಚಕ್ರ, ತ್ರಿಚಕ್ರ ವಾಹನ ಸವಾರರು, ರಸ್ತೆ ಬದಿಯ ಅಂಗಡಿ-ಮುಂಗಟ್ಟಿನವರಿಗೆ ಪ್ರತಿದಿನ ದೂಳಿನ ಮಜ್ಜನ ಸರ‍್ವೇಸಾಮಾನ್ಯ.‌ ರಸ್ತೆ ಬದಿಯಲ್ಲಿ ನಿಮ್ಮ ವಾಹನವನ್ನು ಒಂದೆರಡು ಗಂಟೆ ನಿಲ್ಲಿಸಿ, ಮತ್ತೆ ಬಂದು ನೋಡುವಶ್ಟರಲ್ಲಿ, ಅದರ ಮೇಲೆ ಕೂತಿರುವ ದೂಳು, ದೂಳು ಎಶ್ಟಿರುತ್ತದೆ ಎಂಬುದಕ್ಕೆ ಸಾಕ್ಶಿ.

ಹಾಗಾದರೆ ಈ ದೂಳು ಎಂದರೆ ಏನು? ದೂಳು ಎಂದರೆ ಗನ ದ್ರವ್ಯದ ಬಹು ಸಣ್ಣ ಕಣಗಳು, ಅರ‍್ದಮರ‍್ದ ಒಣಗಿರುವ, ಚಿದ್ರಗೊಂಡು ಹೊರ ಹೊಮ್ಮುವ, ಚದುರುವುದಕ್ಕೆ ಆಗದಶ್ಟು ಹೆಚ್ಚು ಬಾರವಾದ, ಗಾಳಿಗೆ ಹಾರದ ಹುಡಿ ಹುಡಿಯಾಗಿರುವ ಕಣಗಳೇ ಆಗಿವೆ.

ದೂಳಿನಲ್ಲಿ ಏನೇನೆಲ್ಲ ಇದೆ?

ಕೂದಲು, ಬಟ್ಟೆ ನಾರು, ಮಣ್ಣಿನ ಕನಿಜಗಳು, ಮಾನವ ಚರ‍್ಮದ ಜೀವಕೋಶಗಳು ಮತ್ತು ಪರಿಸರದ ಇತರ ವಸ್ತುಗಳನ್ನು ದೂಳು ಹೊಂದಿದೆ. ವಾತಾವರಣದಲ್ಲಿನ ಕಾರ‍್ಬನ್ ಮೊನಾಕ್ಸೈಡ್ ಹಾಗೂ ಅರೆಬೆಂದ ಹೊಗೆ ಮಿಶ್ರಿತ ಕಣ ದೂಳಿನಲ್ಲಿದೆ ಎನ್ನುತ್ತಾರೆ ತಗ್ನರು. ಇದನ್ನು ನಾವು ನೀವು ಪ್ರತಿನಿತ್ಯ ನಮ್ಮ ಉಸಿರಾಟದ ಬಾಗವಾಗಿ ಸೇವಿಸುತ್ತಿದ್ದೇವೆ ಎಂದರೆ ನಂಬುವಿರಾ?

ಈ ದೂಳಿನ ಸಮಸ್ಯೆ ಹೊಸದೇ? ಹಿಂದೆ ಇರಲಿಲ್ಲವೇ?

ಪ್ರಕ್ರುತಿ ನಮಗೆ ಏನೆಲ್ಲಾ ಕೊಟ್ಟಿದೆ, ಪ್ರಕ್ರುತಿಯೊಂದಿಗೆ ಹೊಂದಿಕೊಂಡಿದ್ದರೆ ಇಂತಹ ಸ್ತಿತಿ ಬರುತ್ತಿರಲಿಲ್ಲ, ಪ್ರಕ್ರುತಿಯ ವಿರುದ್ದ ನಡೆಸಿದ ಕೆಲಸದಿಂದ ಸಮಸ್ಯೆಗಳು ಉದ್ಬವಿಸುತ್ತಿವೆ. ಅನುಚಿತ ಮತ್ತು ಅಸಮರ‍್ಪಕ ಜಾಗತೀಕರಣ ಇಂದಿನ ದೂಳೀಕರಣಕ್ಕೆ ಕಾರಣ. ಮರ-ಗಿಡಗಳ ಕಾಡನ್ನು ಕತ್ತರಿಸಿ ಕಾಂಕ್ರೀಟ್ ಕಾಡು ಮಾಡುವ ಆಸೆಯಿಂದ ಹೊರಟ ಮನುಶ್ಯ, ಕೂನೆ ಪಕ್ಶ ಅದನ್ನು ಕೂಡ ಸಮರ‍್ಪಕವಾಗಿ ಮಾಡುತ್ತಿಲ್ಲ. ಯಾವುದೇ ರೀತಿಯ ಪರಿಪೂರ‍್ಣ ಯೋಜನೆಗಳಿಲ್ಲದೆ, ತಯಾರಿಗಳಿಲ್ಲದೆ, ಕಳಪೆ ಮತ್ತು ಹದಗೆಟ್ಟ ರಸ್ತೆ, ಅರೆಬರೆ ಕಾಮಗಾರಿ, ಮರೆತು ಅತವಾ ನಿಂತು ಹೋದ ನಿರ‍್ವಹಣಾ ಕಾರ‍್ಯಗಳಿಂದಾಗಿ ದೂಳು ಉತ್ಪತ್ತಿಯಾಗಿ ಎಲ್ಲಾ ಕಡೆ ಆವರಿಸಿಕೊಳ್ಳುತ್ತಿದೆ.

ಒಂದು ಇಲಾಕೆಯವರು ರಸ್ತೆ ಕಾಮಗಾರಿ ಮಾಡಿದರೆ ಮತ್ತೊಂದು ಇಲಾಕೆಯವರು ಅದನ್ನು ಅಗೆದು ಇನ್ನೊಂದು ಕಾಮಗಾರಿ ಶುರು ಮಾಡುತ್ತಾರೆ. ವರ‍್ಶಪೂರ‍್ತಿ ರಸ್ತೆಗಳು‌ ದುರಸ್ತಿ ಕಾರ‍್ಯದಲ್ಲಿ ಬ್ಯುಸಿ,‌ ಪರಸ್ಪರ ಇಲಾಕೆಗಳಲ್ಲಿನ ಹೊಂದಾಣಿಕೆಯ ಕೊರತೆ ಇದಕ್ಕೆಲ್ಲ ಮೂಲ ಕಾರಣ. ಅತಿಯಾದ ವಾಹನ ಸಂಚಾರ, ಸಂಚಾರ ದಟ್ಟಣೆ, ಬಾರಿ ವಾಹನಗಳ ಹೊಗೆಯ ಕಣಗಳು ಚದುರಿ ಎಲ್ಲಾ ಪ್ರದೇಶಗಳಲ್ಲೂ ಶೇಕರಣೆಯಾಗುತ್ತದೆ. ರಾಜ್ಯ ರಾಜದಾನಿ ಬೆಂಗಳೂರು, ರಾಶ್ಟ್ರ ರಾಜದಾನಿ ದೆಹಲಿ ಮತ್ತು ಹಲವು ಪ್ರಮುಕ ನಗರಗಳಲ್ಲಿ ದೂಳಿನ ಹಾವಳಿ ಅತಿ ಹೆಚ್ಚು. ಅಸಮರ‍್ಪಕ ಕೈಗಾರಿಕಾ ಪದ್ದತಿ ಕೂಡ ದೂಳು ಉಂಟುಮಾಡಲು ದೊಡ್ಡ ಕೊಡುಗೆಯನ್ನೇ ನೀಡುತ್ತದೆ. ಇದರಿಂದಾಗಿ ದೂಳು ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎನ್ನಬಹುದು.

ದೂಳಿನಿಂದಾಗುವ ತೊಂದರೆಗಳು

ಜನರು ನಗರಗಳಲ್ಲಿ ದೂಳಿನಿಂದ ಗೋಳಾಡುವ ಪರಿಸ್ತಿತಿ ದಿನೇ ದಿನೇ ಹೆಚ್ಚುತ್ತಿದೆ. ದೂಳಿನಿಂದ ಆವ್ರುತವಾಗಿರುವ ರಸ್ತೆಗಳು ಜನ ಸಾಮಾನ್ಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ. ದೂಳಿನಿಂದ ಮನುಶ್ಯ ಸಾಕಶ್ಟು ತೊಂದರೆಗಳಿಗೆ ಸಿಲುಕಿಕೊಳ್ಳುತ್ತಾನೆ. ಮೊದಲಿಗೆ ಕೆಮ್ಮು-ದಮ್ಮು ಪ್ರಾರಂಬಗೊಂಡು ಉಸಿರಾಟ ತೊಂದರೆಯಾಗುತ್ತದೆ. ದಿನ ಕಳೆದಂತೆ ಅಲರ‍್ಜಿಕ್‌ ಬ್ರ್ಯಾಂಕೈಟೀಸ್‌ ಆಗುವ ಸಾದ್ಯತೆಯೂ ಇದೆ, ಅಲ್ಲದೇ ಡರ‍್ಮಾಟೈಟಿಸ್‌ನಂತಹ ಚರ‍್ಮ ವ್ಯಾದಿಯೂ ಆಗಬಹುದು ಎನ್ನುತ್ತಾರೆ ವೈದ್ಯರು. ಕೊರೊನಾದ ‘ಕೊಡುಗೆ’ಯಾದ ಮಾಸ್ಕ್ ಅನ್ನು ದರಿಸಿ ಓಡಾಡುವುದರಿಂದ ದೂಳಿನ ಸೇವನೆಯನ್ನು ಕೊಂಚಮಟ್ಟಿಗಾದರೂ ಕಡಿಮೆಗೊಳಿಸಬಹುದೇನೋ.

ಕಣ್ಣು, ಮೂಗು, ಕಿವಿಯೊಳಗೆ ಸೇರುವ ದೂಳು ವಿವಿದ ರೋಗಗಳಿಗೆ ಕಾರಣವಾಗುತ್ತದೆ. ದೂಳು ಗಂಟಲಿಗಿಳಿದರೆ ಶ್ವಾಸಕೋಶದಲ್ಲಿ ಸೇರಿಕೊಂಡು ಉಸಿರಾಟದ ಸಮಸ್ಯೆ, ಅಸ್ತಮಾ, ನ್ಯುಮೋನಿಯಾದಂತ ಕಾಯಿಲೆಗಳಿಗೆ ಮುನ್ನುಡಿ ಬರೆಯಬಹುದು. ಗಂಟಲ ಕೆರೆತದಂತಹ ಸಮಸ್ಯೆ ಹಲವರಲ್ಲಿ ಕಾಣಿಸಿಕೊಳ್ಳುತ್ತಿದೆ. ದೂಳು ಅನ್ನನಾಳಕ್ಕೂ ಇಳಿಯುತ್ತದೆ. ಅನೇಕರು “ಕಾಯಿಲೆಗಳೇನೂ ಇಲ್ಲದಿದ್ದರೂ ಯಾಕೋ ಉತ್ಸಾಹವೇ ಇಲ್ಲ” ಎಂದು ಹೇಳಿಕೊಳ್ಳುವಂತಾಗಲು ಸಹ ದೂಳು ಕಾರಣವಾಗಿರಬಹುದು ಎನ್ನುತ್ತಾರೆ ವೈದ್ಯರು. ಈ ಎಲ್ಲವುಗಳ ಕಾರಣದಿಂದಾಗಿಯೇ ಅಲ್ಪ ಆಯಸ್ಸು, ಅನಾರೋಗ್ಯ ಸಾಮಾನ್ಯವಾಗುತ್ತಿದೆ.

ರಾಸಾಯನಿಕಗಳಿಂದ (ಉದಾ: ಕೀಟನಾಶಕಗಳು) ಕೂಡ ದೂಳು ಬರಬಹುದು. ಶ್ವಾಸಕೋಶದಲ್ಲಿ ಪೈಬ್ರೋಸಿಸ್ ಅತವಾ ಅಲರ‍್ಜಿಯನ್ನು ಉಂಟುಮಾಡುವ ದೂಳಿನ ಕಣಗಳನ್ನು ಮಾತ್ರ ನಾವು ಪರಿಗಣಿಸುತ್ತಿದ್ದೇವೆ. ಇತರ ತೀವ್ರ ವಿಶಕಾರಿ ಪರಿಣಾಮಗಳನ್ನು ಉಂಟುಮಾಡುವ ಕ್ಯಾನ್ಸರ್ ನಂತಹ ದೀರ‍್ಗಕಾಲೀನ ಪರಿಣಾಮಗಳನ್ನು‌ ಇನ್ನೂ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ದೂಳು ಮನುಶ್ಯನನ್ನು ಕಾಡುವ ದೊಡ್ಡ ಸಮಸ್ಯೆ ಆಗಬಲ್ಲದು ಎಂದು ವಿಶ್ವ ಆರೋಗ್ಯ ಸಂಸ್ತೆ ಕೂಡ ವರದಿ ಮಾಡಿದೆ.

ಇಶ್ಟು ನಗರಗಳ ರಸ್ತೆ ವಿಚಾರಕ್ಕೆ ಸಂಬಂದಿಸಿದ್ದರೆ, ಇನ್ನು ಮನೆಯ ವಿಚಾರಕ್ಕೆ ಬಂದರೆ ಅಲ್ಲೂ ಕೂಡ ತಪ್ಪಿದ್ದಲ್ಲ ದೂಳಿನ ಕಾರುಬಾರು, ಆದರೆ ಕಡಿಮೆ ಪ್ರಮಾಣದ್ದು. ಸ್ವಚ್ಚತೆ ನಮ್ಮ ಸ್ವಾಸ್ತ್ಯಕ್ಕೆ ದಾರಿ ಮಾಡಿಕೊಡುತ್ತದೆ. ಇದಕ್ಕೆ ತಾನೇ ನಮ್ಮ ಹಿರಿಯರು ಪಾಲಿಸಿಕೊಂಡು ಬಂದ ಪದ್ದತಿ, ವರ‍್ಶಕ್ಕೊಮ್ಮೆಯಾದರೂ ಹಬ್ಬ-ಹರಿದಿನಗಳ ನೆಪದಲ್ಲಿ ಮನೆಯ ದುಂಬು-ದೂಳು ತೊಳೆದು ಮನೆಯ ಗಲೀಜು ಹೊರಹಾಕಿ ಸ್ವಚ್ಚತೆ ಕಾಪಾಡಿಕೊಳ್ಳುತ್ತಿದ್ದರು. ಇದು ನಮ್ಮ ಆಚರಣೆಯ ಹಿಂದಿರುವ ವೈಗ್ನಾನಿಕ ಕಾರಣ.

ಪ್ರತಿಯೊಬ್ಬರ ಸಣ್ಣ ಕೊಡುಗೆಯೂ ಕೂಡ ದೂಳಿನ ಮಾಲಿನ್ಯವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಪ್ರಕ್ರುತಿಯೊಂದಿಗೆ ಸೆಣಸಿ ಗೆಲ್ಲಲು ಸಾದ್ಯವಿರದ ನಾವು ಪ್ರಕ್ರುತಿಗೆ ಹೊಂದಿಕೊಂಡು ಹಾನಿ ಮಾಡದಂತೆ ಒಂದಶ್ಟು ಪುರಾತನ ಮತ್ತು ವೈಗ್ನಾನಿಕ ಪದ್ದತಿಗಳನ್ನು ಅಳವಡಿಸಿಕೊಂಡರೆ ಇಂತಹ ಸಮಸ್ಯೆಗಳಿಂದ ಗೆಲ್ಲಬಹುದು.

“ನಮ್ಮೊಳಗೇ ದೂಳೋ ಅತವಾ ದೂಳಿನೊಳಗೆ ನಾವೋ” ಎಂಬತೆ ಅಗದಿರಲಿ ಜೀವನ.

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: