ಕವಿತೆ: ನೀನೆಲ್ಲಿ ಮರೆಯಾದೆ
– ವಿನು ರವಿ.
ಸಾಗರದ ಅಲೆಗಳ ಮೇಲೆ
ತೇಲುವ ದೋಣಿಯಲಿ
ವಿಹರಿಸಲು ನಾ ಬಯಸಿದೆ
ಆದರೆ ನೀ ಬರಲೆ ಇಲ್ಲ ಜೊತೆಯಾಗಲು
ಹೂ ಮೊಗ್ಗೆಯ ಆರಿಸಿ
ಮಾಲೆಯ ಕಟ್ಟಿ
ಮುಡಿಯ ಸಿಂಗರಿಸಿ ಕಾದಿದ್ದೆ
ಆದರೆ ನೀ ಮೆಚ್ಚಿ ಕೊಂಡಾಡಲೆ ಇಲ್ಲ
ಸಿಹಿ ಹೂರಣವ ತುಂಬಿದ
ಹೋಳಿಗೆಯ ಮೇಲೆ ತುಪ್ಪವ ಸವರಿ
ಬಡಿಸಲು ಬಯಸಿದ್ದೆ
ಆದರೆ ನಿನಗೆ ಸಿಹಿ ರುಚಿಸಲೆ ಇಲ್ಲ
ವನದಲ್ಲೊಂದು ಉಯ್ಯಾಲೆಯ ಕಟ್ಟಿ
ಬಣ್ಣದ ನವಿಲುಗರಿಯ ಸಿಂಗರಿಸಿ
ತೂಗಿ ಹಾಡಲು ಬಯಸಿದ್ದೆ
ಆದರೆ ಉಯ್ಯಾಲೆಯ ಸೊಗಸು
ನಿನಗೆ ಕಾಣಲೆ ಇಲ್ಲ
ನಾ ಹೊತ್ತ ಕನಸುಗಳ ಬುಟ್ಟಿ
ನೀ ಕಾಣಲೆಂದೆ ಸುಳಿದಾಡಿದ್ದೆ
ನೀನಿತ್ತ ನೋಡದೆ ಹೋದೆ
ಹಾಗೆ ಹೇಳದೆ ಕೇಳದೆ , ಎಲ್ಲಿ ಮರೆಯಾದೆ
ಹೇಳು ನನ್ನ ಕಾಣದೆ
( ಚಿತ್ರ ಸೆಲೆ: theguardian.com )
ಇತ್ತೀಚಿನ ಅನಿಸಿಕೆಗಳು