ಮಕ್ಕಳ ಕತೆ: ತಾತನ ಕಪ್ಪು ಕೊಡೆ

– ಶ್ವೇತ ಹಿರೇನಲ್ಲೂರು.

ಗೋಡೆಯ ಮೇಲಿನ ಹೊತ್ತಳಕ ಎರಡು ಗಂಟೆ ತೋರಿಸುತ್ತಿತ್ತು. ರೇವಣಸಿದ್ದಪ್ಪ ಪಾಟೀಲರು ಎಂದಿನಂತೆ ದಿನದ ಸುದ್ದಿಹಾಳೆಯನ್ನು ಒಂದು ಲಿಪಿಯೂ ಬಿಡದಂತೆ ಓದಿ ಮುಗಿಸುವ ಕೆಲಸದಲ್ಲಿ ಮುಳುಗಿದ್ದರು. ಮೊಮ್ಮಗಳು ಅಮ್ಮು, ಅಜ್ಜಿ ಗಂಗಮ್ಮನನ್ನು ಚೌಕಾಬಾರ ಆಟದಲ್ಲಿ ಈ ಬಾರಿ ಹೇಗಾದರೂ ಮಾಡಿ ಸೋಲಿಸಬೇಕೆಂದು ಹಟದಿಂದ ಆಡುತ್ತಿದ್ದಳು.

ಐದನೇ ತರಗತಿಯಲ್ಲಿ ಓದುತ್ತಿದ್ದ ಅಮ್ಮು, ಅಜ್ಜಿ ತಾತನ ಜೊತೆಯಲ್ಲಿಯೇ ಇರುತ್ತಿದ್ದುದು. ಅವಳ ಅಪ್ಪ ಅಮ್ಮನಿಗೆ ದೂರದ ಊರಿನಲ್ಲಿ ಕೆಲಸಕ್ಕಾಗಿ ಹೋಗಲೇಬೇಕಾಗಿದ್ದರಿಂದ ಮಗಳನ್ನು ಅಜ್ಜಿ ತಾತನ ಜೊತೆ ಬಿಟ್ಟು ಹೋಗಿದ್ದರು. ಅಮ್ಮು ಬೆಳಗಿನ ಹೊತ್ತು ಶಾಲೆಗೆ ಹೋದರೆ, ಶಾಲೆಯಿಂದ ಬಂದ ಮೇಲೆ ಅಜ್ಜಿಗೆ ಮನೆ ಕೆಲಸಗಳಲ್ಲಿ ಒತ್ತಾಸೆಯಾಗಿ ಇರುತ್ತಿದ್ದಳು. ರವಿವಾರಗಳಂದು ತಾತನ ಜೊತೆಯಲ್ಲಿ ಹೊತ್ತಗೆಮನೆಗೆ ಹೋಗಿ ಬರುವುದು ವಾಡಿಕೆ. ಅಲ್ಲಿಂದ ಬಹಳಷ್ಟು ಹೊತ್ತಗೆಗಳನ್ನು ಎರವಲು ಪಡೆದು ಬಿಡುವಾದಾಗಲೆಲ್ಲ ಓದುತ್ತಿದ್ದಳು.

ಅಜ್ಜಿ ಮೊಮ್ಮಗಳ ಚೌಕಾಬಾರ ಆಟ ಕೊನೆಯ ಮಟ್ಟ ತಲುಪಿತ್ತು. ಅಜ್ಜಿಯ ಕೊನೆಯ ಕಾಯಿ ಮೂರು ಬಿದ್ದರೆ ಹಣ್ಣಾಗುವುದರಲ್ಲಿತ್ತು. ಮೂಗಿನ ಮೇಲಿಳಿದ ಕನ್ನಡಕದ ತುದಿಯಿಂದ ಅಮ್ಮುವಿನ ಕಡೆ ನೋಡಿ ಹುಸಿನಗುತ್ತಾ, ಕವಡೆಗಳನ್ನು ಒಟ್ಟಾಗಿ ಕೂಡಿಸಿ ನೆಲದ ಮೇಲೆ ಬೀಳಿಸುವುದರಲ್ಲಿದ್ದರು ಅಜ್ಜಿ. ಅಮ್ಮು ಎರಡು ಕೈಗಳನ್ನು ಜೋಡಿಸಿ ಕಣ್ಣುಗಳನ್ನು ಮುಚ್ಚಿ ದೇವರಿಗೆ ಬೇಡಿಕೊಳ್ಳತೊಡಗಿದಳು. “ಚಳ್” ಎಂದು ಕವಡೆಗಳು ರೆಡ್ ಆಕ್ಸೈಡ್ ನೆಲದ ಮೇಲೆ ಬಿದ್ದವು. ಮೆಲ್ಲನೆ ಕಿರುಗಣ್ಣಿನಿಂದ ಬಿದ್ದ ಕವಡೆಗಳ ಕಡೆ ನೋಡಿದಳು ಅಮ್ಮು. “ಮೂರು” ಕವಡೆಗಳು ಮೇಲ್ಮುಕವಾಗಿ ಬಿದ್ದಿದ್ದವು. ಅಜ್ಜಿ ಜೋರಾಗಿ ನಗುತ್ತಿದ್ದರು. “ಅದು ಹೇಗಜ್ಜಿ ನಿನಗೆ ಏನು ಬೇಕೋ ಅದೇ ಬೀಳುತ್ತೆ” ಎಂದಳು ಅಮ್ಮು ಮುನಿಸಿನಿಂದ. ಅಜ್ಜಿ ಮಾತು ಕಡಿಮೆ, ಸುಮ್ಮನೆ ನಕ್ಕರು. ಬೆಳಗಿನ ಕೆಲಸದಿಂದ ದಣಿವಾಗಿತ್ತೇನೋ, ಒಂದು ಚಾವ ಮಲಗುತ್ತೀನಿ ಎಂದು ಹೋಗಿ ನಡುಮನೆಯಲ್ಲಿದ್ದ ಸಣ್ಣ ಮಂಚದ ಮೇಲೆ ಅಡ್ಡಾದರು.

“ಏನಮ್ಮ ಅಮ್ಮು, ಲೈಬ್ರರಿ ಕಡೆ ಹೋಗೋಣವೆ? ಹೋದ ವಾರದ ಹೊತ್ತಗೆಗಳನ್ನು ಕೊಟ್ಟು ಹೊಸದೇನಾದರೂ ಬಂದಿದೆಯೇನೋ ನೋಡಿ ಬರೋಣ?” ಎಂದರು ತಾತ. “ಸರಿ ತಾತ, ನಡೀರಿ” ಎನ್ನುತ್ತಾ ಮೇಲೆದ್ದಳು. ಮುಂಗಾರಿನ ಕಾಲ, ಕಳೆದ ಒಂದು ವಾರದಿಂದ ಸಂಜೆಯಾಗುತ್ತಲೇ ಮಳೆ ಹಿಡಿದು ಬಿಡುತ್ತಿತ್ತು. ಹಿಂತಿರುಗಿ ಬರುವಾಗ ಮಳೆ ಏನಾದರೂ ಬಂದರೆ ಎಂದು, ಬಾಗಿಲಿನ ಹೊರಗೆ ಪಕ್ಕದಲ್ಲೇ ಇಟ್ಟಿದ್ದ ಉದ್ದನೆಯ ಕಪ್ಪು ಕೊಡೆಯನ್ನು ಕಂಕುಳಿನ ನಡುವೆ ಹಿಡಿದಿಟ್ಟುಕೊಂಡರು ತಾತ. ಇಬ್ಬರೂ ಮನೆಯಿಂದ ಹೊರಗಿಳಿದರು. ಬೀದಿಯಲ್ಲಿ ಬಹಳಷ್ಟು ಮಕ್ಕಳು ಆಟವಾಡುತ್ತಿದ್ದರು. ಅಮ್ಮು ಅವರ ಆಟವನ್ನು ನೋಡಿಕೊಂಡು, ತಾತನ ಕಯ್ ಹಿಡಿದುಕೊಂಡು ಕುಣಿಯುವ ನಡಿಗೆಯಲ್ಲಿ ನಡೆಯುತ್ತಿದ್ದಳು.

“ನಮಸ್ಕಾರ ಪಾಟೀಲರೇ, ಮೊಮ್ಮಗಳ ಜೊತೆ ವಾಕಿಂಗ್ ಹೊರಟಿರೋ?” ಪರಿಚಿತ ದನಿಯೊಂದು ಕೇಳಿಸಿತು.

ಮೆಲ್ಲನೆ ಹಿಂದೆ ತಿರುಗಿ ನೋಡಿದರು. ಎಲೆಕ್ಟ್ರಿಶಿಯನ್ ವಸಂತ ತನ್ನ ಇಗ್ಗಾಲಿ ಬಂಡಿಗೆ ದೊಡ್ಡದೊಂದು ಏಣಿಯನ್ನು ತಗುಲು ಹಾಕಿಕೊಂಡು ಎಲ್ಲಿಗೋ ಹೊರಟಿದ್ದ. ಮೊನ್ನೆ ಮನೆಯ ನೀರಿನ ಮೋಟಾರಿನಲ್ಲಿ ಏನೋ ತೊಂದರೆ ಕಾಣಿಸಿಕೊಂಡಾಗ ಅವನೇ ಬಂದು ಸರಿಪಡಿಸಿ ಹೋಗಿದ್ದು. “ಓಹ್ ವಸಂತನೇ. ಹೂ.. ಕಣಪ್ಪ ಹೀಗೆ ಪೇಟೆ ಕಡೆ ಹೊರಟಿದ್ದೆವು” ಎಂದರು. “ಹಹ… ಒಳ್ಳೇದು ಸಾರ್” ಎಂದು ನಗುತ್ತ ತನ್ನ ಗಾಡಿಯನ್ನು ಹತ್ತಿ ಹೊರಟು ಹೋದ.

ಊರಿನ ತುಂಬಾ ಪಾಟೀಲರನ್ನು ಎಲ್ಲರೂ ಬಲ್ಲವರಾಗಿದ್ದರು. ಅದೇ ಊರಿನ ಸರಕಾರಿ ಶಾಲೆಯಲ್ಲಿ ಗುರುಗಳಾಗಿ ಈಗ ಬಿಡುವು ಪಡೆದಿದ್ದ ಪಾಟೀಲರೆಂದರೆ ಎಲ್ಲರಿಗೂ ಬಹಳ ಗೌರವ. ದಾರಿಯಲ್ಲಿ ಸಿಕ್ಕವರ ಬಳಿಯೆಲ್ಲ ಕಶ್ಟ-ಸುಕ ಮಾತನಾಡಿಕೊಳ್ಳುತ್ತ ಪೇಟೆ ತಲುಪುವಶ್ಟರಲ್ಲಿ ಮಾದೇವನ ಮೆಣಸಿನಕಾಯಿ ಬಜ್ಜಿ ಅಂಗಡಿ ಬಳಿ ಬಹಳಶ್ಟು ಮಂದಿ ಸೇರಿದ್ದರು. ಊರಿನ ನಡುವೆ ಇದ್ದ ದೊಡ್ಡಾಲದ ಮರದ ಕೆಳಗೆ, ಸಣ್ಣನೆಯ ತಳ್ಳೋ ಗಾಡಿ ನಿಲ್ಲಿಸಿಕೊಂಡಿರುತ್ತಿದ್ದ ಮಾದೇವ. ಗ್ಯಾಸ್ ಒಲೆಯ ಮೇಲಿದ್ದ ದೊಡ್ಡ ಬಾಣಲಿಯಲ್ಲಿ ಮೆಣಸಿನಕಾಯಿ, ಆಲೂಗಡ್ಡೆ, ಈರುಳ್ಳಿ ಬಜ್ಜಿಗಳನ್ನು ಕರಿದು ಪೇಪರಿನಲ್ಲಿ ಸುತ್ತಿ ಕೊಡುತ್ತಿದ್ದ. ಮಾದೇವನ ದೊಡ್ಡ ಮಗ ಎಂಟನೇ ಇಯತ್ತೆಯಲ್ಲಿ ಓದುತ್ತಿದ್ದವನು ಕೂಡ ಅಪ್ಪನ ಕೆಲಸದಲ್ಲಿ ಒತ್ತಾಸೆಯಾಗಿ ನಿಲ್ಲುತ್ತಿದ್ದ. ಮಾದೇವನಿಗೆ ಊರಿನಲ್ಲಿ ನಡೆಯುವ ಆಗುಹೋಗುಗಳೆಲ್ಲ ತಿಳಿದಿರುತ್ತಿದ್ದವು. ಕಂಡಿದ್ದನ್ನು, ಕಾಣದೆ ಇದ್ದದ್ದನ್ನು ಮತ್ತಶ್ಟು ಬಣ್ಣ ಕಟ್ಟಿ ಸುತ್ತಲೂ ಸೇರಿದ್ದವರಿಗೆ ವಿವರಿಸುತ್ತಿದ್ದ. ಊರಿನವರಿಗೆಲ್ಲ ಅದೊಂದು ಹೊತ್ತು ಕಳೆಯುವ ತಾಣ.

ದೂರದಿಂದಲೇ ಕರಿದ ಎಣ್ಣೆಯ ಕಂಪು ಮೂಗಿಗೆ ಬಡಿಯಿತು.

“ಏನಮ್ಮ ಅಮ್ಮು, ಒಂದೆರಡು ಬಜ್ಜಿ ತಿಂದು ಆಮೇಲೆ ಹೋಗೋಣವೆ?” ಎಂದರು ತಾತ.

“ಅಜ್ಜಿ ಬಯ್ಯುತ್ತಾರೆ ಅಲ್ವಾ ತಾತ?” ಎಂದಳು ಅಮ್ಮು.

ಕಳೆದ ಬಾರಿ ತಾತ ಮೊಮ್ಮಗಳು ಹೀಗೆಯೇ ಹೋಟೆಲಿನಲ್ಲಿ ಕೇಸರಿ ಬಾತ್ ತಿಂದು ಬಂದು ಅಜ್ಜಿಯ ಕಯ್ಯಲ್ಲಿ ಬಯ್ಯಿಸಿಕೊಂಡಿದ್ದರು. ಅಜ್ಜಿಗೆ ಈಗೀಗ ಕೊಲೆಸ್ಟರಾಲ್ ಜಾಸ್ತಿ ಆಗಿ ಯಾವುದೇ ಎಣ್ಣೆಯ ತಿಂಡಿಯನ್ನು ಮನೆಯಲ್ಲಿ ಮಾಡುತ್ತಲೂ ಇರಲಿಲ್ಲ ಹೊರಗೂ ತಿನ್ನುತ್ತಿರಲಿಲ್ಲ. ತಾತನಿಗೂ ಊಟದಲ್ಲಿ ಕಟ್ಟುನಿಟ್ಟು ಮಾಡಿದ್ದರು. ನೀವು ಹಾಳು ಮೂಳು ತಿನ್ನುವುದಲ್ಲದೆ ಅವಳಿಗೂ ತಿನ್ನಿಸಿ ಕೆಡಿಸುತ್ತೀರಾ ಎಂದು ಅಜ್ಜಿ ಸಿಟ್ಟು ಮಾಡಿದ್ದರು. ಅದನ್ನು ನೆನೆಸಿಕೊಂಡ ಅಮ್ಮು, ಅಜ್ಜನಿಗೆ ಎಚ್ಚರಿಸಿದಳು.

“ನಿಮ್ಮಜ್ಜಿಗೇನು ಗೊತ್ತಾಗೊಲ್ಲ ಬಿಡಮ್ಮ” ಎಂದು ಮೊಮ್ಮಗಳಿಗೆ ಒಪ್ಪಿಸಿ ಸುಮ್ಮನಾಗಿಸಿದರು. ಮಾದೇವನಂತು ಬಹಳ ಆದರದಿಂದ ಪಾಟೀಲರನ್ನು ಬರಮಾಡಿಕೊಂಡು ಹತ್ತಿರದಲ್ಲಿ ಸಣ್ಣ ಸ್ಟೂಲೊಂದನ್ನು ಹಾಕಿ ಕೂರಿಸಿದ. ಮತ್ತು ಎರಡೆರಡು ಬಜ್ಜಿಗಳನ್ನು ಪೇಪರಿನಲ್ಲಿ ಸುತ್ತುಕೊಟ್ಟು, ದಿನವಿಡೀ ಊರಿನಲ್ಲಿ ನಡೆಯುವ ಸುದ್ದಿಗಳನ್ನು ಹೇಳತೊಡಗಿದ. ಅವನ ಮಾತುಗಳನ್ನು ಕೇಳುತ್ತ ಕೇಳುತ್ತ ನಾಲ್ಕಾರು ಬಜ್ಜಿಗಳು ಹೊಟ್ಟೆಯ ಒಳಗೆ ಇಳಿದದ್ದೇ ತಿಳಿಯಲಿಲ್ಲ ಇಬ್ಬರಿಗೂ. ಎಶ್ಟೋ ಹೊತ್ತಾದ ಹಾಗೆ ಅನಿಸಿ ಕೈಗಡಿಯಾರವನ್ನು ನೋಡಿದರೆ ಆಗಲೇ ನಾಲ್ಕೂವರೆಯಾಗುತ್ತಿತ್ತು. ಇನ್ನು ಅರೆ ಗಂಟೆಯಲ್ಲಿ ಹೊತ್ತಗೆ ಮನೆ ಮುಚ್ಚುತ್ತಾರೆ ಬೇಗನೆ ಹೋಗಬೇಕು ಎಂದು ಇಬ್ಬರೂ ಓಡುವ ನಡಿಗೆಯಲ್ಲಿ ಲೈಬ್ರರಿಯ ಕಡೆ ಸಾಗಿದರು.

ಲೈಬ್ರರಿಯಲ್ಲಿ ಕೆಲವು ಹೊಸ ಹೊತ್ತಗೆಗಳನ್ನು ತರಿಸಿದ್ದರು. ಅಮ್ಮುವಿಗಾಗಿ ದಿನಕ್ಕೊಂದು ಕತೆ ಮತ್ತು ಮನರಂಜನೆಗಾಗಿ ಬೌತಶಾಸ್ತ್ರ ಹೊತ್ತಗೆಗಳನ್ನು ಎರವಲು ಪಡೆದು ಅಲ್ಲಿಂದ ಹೊರಟರು.

“ತಾತ, ಅಜ್ಜಿಗೆ ಗೊತ್ತಾಗೊಲ್ಲ ತಾನೇ?” ಕೇಳಿದಳು ಅಮ್ಮು.

“ಇಲ್ಲ ಬಿಡೋ ಪುಟ್ಟ. ತಿಂದು ಬಹಳ ಹೊತ್ತಾಯ್ತಲ್ವಾ. ವಾಸನೆ ಏನು ಬರೋದಿಲ್ಲ” ಎಂದರು.

ತಾತ ಮೊಮ್ಮಗಳು ಕಯ್ ಹಿಡಿದುಕೊಂಡು ಸರಸರನೆ ನಡೆಯುತ್ತಾ ಮನೆಯ ಗೇಟಿನ ಬಳಿ ಬಂದರು. ದೂರದಲ್ಲೆಲ್ಲೋ ಮಳೆಯಾಗುತ್ತಿತ್ತೇನೋ, ಆಗಸದಲ್ಲಿ ಕಾಮನಬಿಲ್ಲು ಮೂಡಿತ್ತು. ಅಮ್ಮು ಕಾಮನಬಿಲ್ಲನ್ನು ನೋಡಿ ಸಂತಸದಿಂದ ಕಣ್ಣರಳಿಸಿದಳು. ಅಜ್ಜಿ ಬಾಗಿಲಲ್ಲೇ ನಿಂತು ಇಬ್ಬರಿಗಾಗಿ ಕಾಯುತ್ತಿದ್ದರು.

“ಎಶ್ಟು ಹೊತ್ತು ಹೋಗಿ ಬಿಟ್ಟಿರಿ ಇಬ್ಬರೂ. ಮೋಡ ಜೋರಾಗಿದೆ, ಮಳೆಗಿಳೆಲಿ ಸಿಕ್ಕಿಹಾಕಿಕೊಂಡರೆ ಅಂತ ನಾನು ನೋಡ್ತಾ ಇದ್ದೆ” ಎಂದರು ಅಜ್ಜಿ.

“ಅಯ್ಯೋ, ಮಳೇಲಿ ಯಾಕೆ ಸಿಕ್ಕಿ ಹಾಕೊತೀವಿ, ಕೊಡೆ ತಗೊಂಡು ಹೋಗಿದ್ದೀವಲ್ಲ” ಎಂದು ತಮ್ಮ ಕಂಕುಳಿನಲ್ಲಿ ತೆಗೆದಿಟ್ಟುಕೊಂಡ ಕೊಡೆಯನ್ನು ತೋರಿಸಲು ಕಯ್ ಹಾಕಿದರು. ಆದರೆ ಅಲ್ಲಿ ಕೊಡೆಯೇ ಇರಲಿಲ್ಲ. ಅರೆ! ಕೊಡೆ ಎಲ್ಲಿ? ಹೋಗುವಾಗ ತಗೊಂಡೇ ಹೋಗಿದ್ದೆವಲ್ಲ? ಮೊಮ್ಮಗಳ ಕಡೆ ನೋಡಿದರು. ಅಜ್ಜಿ ಸೊಂಟದ ಮೇಲೆ ಕಯ್ ಇಟ್ಟು ಎಲ್ಲಿ ಎಂಬಂತೆ ಇವರೆಡೆಗೆ ನೋಡಿದರು.

“ಅಯ್ಯೋ, ಅಲ್ಲೇ ಲೈಬ್ರರಿಯಲ್ಲಿ ಕೊಡೆ ಮರೆತು ಬಂದೆವು ಅಂತ ಕಾಣುತ್ತೆ. ಅಲ್ವೇನೋ ಪುಟ್ಟ” ಎಂದು ಮೊಮ್ಮಗಳ ಕಡೆ ನೋಡಿದರು. “ಹಾ ಹಾ … ಹೌದು ಅಜ್ಜಿ” ಎಂದು ತಲೆಯಾಡಿಸಿದಳು ಅಮ್ಮು ಕೂಡ.

ಅಶ್ಟರಲ್ಲಿ ಗೇಟಿನ ಬಳಿ ಸದ್ದಾಯಿತು. ಯಾರೆಂದು ಎಲ್ಲರೂ ಅತ್ತ ಕಣ್ಣಾಡಿಸಿದರು. ಬಜ್ಜಿ ಅಂಗಡಿ ಮಾದೇವನ ದೊಡ್ಡ ಮಗ, ಪಾಟೀಲರ ಕರಿ ಕೊಡೆ ಹಿಡಿದುಕೊಂಡು ನಿಂತಿದ್ದ.

“ಸಾರ್ ಬಜ್ಜಿ ತಿಂದು ಅಲ್ಲೇ ಕೊಡೆ ಮರೆತು ಬಂದಿದ್ರಿ. ನಿಮ್ಮದೇ ಅಂತ ಅಪ್ಪ ಹೇಳಿದರು, ಕೊಟ್ಟು ಬಾ ಅಂತ ಕಳಿಸಿದರು ಸಾರ್, ತಗೊಳ್ಳಿ” ಎಂದ.

ಅಜ್ಜಿಯ ಕಯ್ಯಲ್ಲಿ ಸಿಕ್ಕು ಬಿದ್ದ ತಾತ ಹಾಗು ಮೊಮ್ಮಗಳು ಪೆಚ್ಚು ಮೋರೆ ಹಾಕಿಕೊಂಡು ಕೊಡೆ ಇಸಕೊಳ್ಳಲು ಹೋದರು.

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. Raghuramu N.V. says:

    ತುಂಬ ಚೆನ್ನಾಗಿದೆ

  2. Kokila says:

    ಕನ್ನಡ ಪದ ಬಳಕೆ ಅಮೋಘವಾಗಿದೆ. ಕಥೆ ಹೆಣೆದ ರೀತಿ ಚೆನ್ನಾಗಿದೆ.

  3. Kokila says:

    ಕನ್ನಡ ಪದ ಬಳಕೆ ಸೊಗಸಾಗಿದೆ.

ಅನಿಸಿಕೆ ಬರೆಯಿರಿ:

Enable Notifications