ದೊಡ್ಡ ಗಣೇಶ್ – ಕರ್‍ನಾಟಕದ ಹೆಮ್ಮೆಯ ಕ್ರಿಕೆಟರ್

– ರಾಮಚಂದ್ರ ಮಹಾರುದ್ರಪ್ಪ.

ಅದು ಬೆಂಗಳೂರಿನಲ್ಲಿ ನಡೆಯುತ್ತಿದ್ದ ಕರ‍್ನಾಟಕ ಹಾಗೂ ಮದ್ಯ ಪ್ರದೇಶ ನಡುವಣ 1998/99 ರ ರಣಜಿ ಪೈನಲ್ ನ ಕಡೇ ದಿನ. ಆಟ ಕೊನೆಗೊಳ್ಳಲು ಇನ್ನು ಎರಡೇ ತಾಸು ಉಳಿದಿರುತ್ತದೆ. ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದಿದ್ದ ಮದ್ಯ ಪ್ರದೇಶ ತಂಡ ಕೊನೆ ಇನ್ನಿಂಗ್ಸ್ ನಲ್ಲಿ 66 ಓವರ್ ಗಳಲ್ಲಿ ನಿರಾಯಾಸವಾಗಿ (132/4) ತಲುಪಿ, ಪಂದ್ಯ ಡ್ರಾ ಮಾಡಿಕೊಂಡು ಟೂರ‍್ನಿ ಗೆಲ್ಲಲು ಅಣಿಯಾಗಿರುತ್ತದೆ. ಆಗ ನಾಯಕ ಸುನಿಲ್ ಜೋಶಿ, ಮೊದಲ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಗಳೊಂದಿಗೆ ಆ ರಣಜಿ ರುತುವಿನಲ್ಲಿ ಸೊಗಾಸಾದ ಬೌಲಿಂಗ್ ನಿಂದ ಬರೋಬ್ಬರಿ 62 ವಿಕೆಟ್ ಪಡೆದು, ದಿಗ್ಗಜ ಬಿಶನ್ ಸಿಂಗ್ ಬೇಡಿರ 64 ವಿಕೆಟ್‌ಗ ದಾಕಲೆಯನ್ನು ಮುರಿಯುವ ಹೊಸ್ತಿಲಲ್ಲಿದ್ದ ತಂಡದ ಪ್ರಮುಕ ವೇಗಿಗೆ ಬೌಲ್ ಮಾಡಲು ಹೇಳುತ್ತಾರೆ. ಆದರೆ ಪರಿಸ್ತಿತಿ ಅರಿತ ಆ ವೇಗಿ, “ನಾನು ಬೌಲ್ ಮಾಡಿದರೆ ಮಂದ ಬೆಳಕಿನ ನೆಪವೊಡ್ಡಿ ಎದುರಾಳಿಗಳು ಹೊರನಡೆಯುವ ಅಪಾಯವಿದೆ. ಹಾಗಾಗಿ ಎರಡೂ ಬದಿಯಿಂದ ಸ್ಪಿನ್ನರ್ ಗಳೇ ಬೌಲ್ ಮಾಡುವುದು ಸೂಕ್ತ” ಎಂದು ಜೋಶಿ ಅವರಿಗೆ ಕಿವಿಮಾತು ಹೇಳಿ ಚೆಂಡು ಬಾರದ್ವಾಜ್ ರ ಕೈಸೇರುವಂತೆ ಮಾಡಿ, ತಾವು ಸ್ಲಿಪ್ಸ್ ನಲ್ಲಿ ನಿಂತು ಆಟಗಾರರನ್ನು ಹುರಿದುಂಬಿಸುತ್ತಾರೆ. ಆ ಬಳಿಕ ಬಾರದ್ವಾಜ್ ಒಂದೇ ಗಂಟೆಯಲ್ಲಿ 6 ವಿಕೆಟ್ ಕೆಡವಿ, ರಾಜ್ಯ ತಂಡಕ್ಕೆ ರಣಜಿ ಗೆಲುವು ದಕ್ಕಿಸಿಕೊಟ್ಟಿದ್ದು ಈಗ ಇತಿಹಾಸ. ಹೀಗೆ ತನ್ನ ವೈಯಕ್ತಿಕ ದಾಕಲೆಯನ್ನು ಕಡೆಗಣಿಸಿ ತಂಡದ ಹಿತದ ಬಗ್ಗೆ ಯೋಚಿಸಿ ದೊಡ್ಡತನ ಮೆರೆದ ಆ ವೇಗಿಯೇ ಕರ‍್ನಾಟಕದ ಹೆಮ್ಮೆಯ ಆಟಗಾರ ‘ಪೀಣ್ಯ ಎಕ್ಸ್‌ಪ್ರೆಸ್’ ದೊಡ್ಡ ನರಸಯ್ಯ ಗಣೇಶ್.

ಎಳವೆಯಿಂದಲೇ ಕ್ರಿಕೆಟ್ ಒಲವು

ಜೂನ್ 30, 1973 ರಂದು ಬೆಂಗಳೂರಿನಲ್ಲಿ ದೊಡ್ಡ ಗಣೇಶ್ ಹುಟ್ಟಿದರು. ಅವರ ತಂದೆ ಪುಟ್ಬಾಲ್ ಆಟವನ್ನು ಬಿಡುವಿನ ವೇಳೆ ಆಡುತ್ತಿದ್ದುದ್ದನ್ನು ಪುಟ್ಟ ಗಣೇಶ್ ಹತ್ತಿರದಿಂದ ನೋಡಿ ಬೆಳೆದರೂ ಅವರಿಗೆ ಹೆಚ್ಚು ಹಿಡಿಸಿದ್ದು ಮಾತ್ರ ಕ್ರಿಕೆಟ್. ಅದಕ್ಕೆ ಕಾರಣ 1983 ರ ಬಾರತದ ವಿಶ್ವಕಪ್ ಗೆಲುವು. ಶಾಲೆಯ ದಿನಗಳಿಂದಲೇ ಟೆನ್ನಿಸ್ ಬಾಲ್ ಕ್ರಿಕೆಟ್ ಆಡತೊಡಗಿದ ಗಣೇಶ್, ವಿಕೆಟ್ ಕೀಪರ್ ಹಾಗೂ ಆರಂಬಿಕ ಬ್ಯಾಟ್ಸ್ಮನ್ ಆಗಿದ್ದರು. ಜೊತೆಗೆ ತಮ್ಮ ಎತ್ತರ ಹಾಗೂ ಒಳ್ಳೆ ಮೈಕಟ್ಟನ್ನು ಬಳಸಿಕೊಂಡು ಟೆನ್ನಿಸ್ ಬಾಲ್ ನಲ್ಲೂ ಬಿರುಸಾಗಿ ಬೌಲಿಂಗ್ ಮಾಡುವುದನ್ನೂ ಅವರು ರೂಡಿಸಿಕೊಂಡಿದ್ದರು. ಒಮ್ಮೆ ಬಿ.ಇ.ಎಲ್. ಗ್ರೌಂಡಿನಲ್ಲಿ ಸಿಂಡಿಕೇಟ್ ಬ್ಯಾಂಕ್ ತಂಡದ ಪರ ಆಡುತ್ತಿದ್ದ ಬಾರತದ ಕೀಪರ್ ಸದಾನಂದ್ ವಿಶ್ವನಾತ್ ರನ್ನು ಗಣೇಶ್ ಬೇಟಿಯಾಗುತ್ತಾರೆ. ಆಗ ವಿಶ್ವನಾತ್, ಗಣೇಶ್ ರ ಚಳಕವನ್ನು ಕಂಡು ವೇಗದ ಬೌಲಿಂಗನ್ನೇ ಆಯ್ಕೆ ಮಾಡಿಕೊಳ್ಳುವಂತೆ ಉತ್ತೇಜಿಸುತ್ತಾರೆ. ಆ ಬಳಿಕ ಎ.ವಿ. ಜಯಪ್ರಾಕಾಶ್ ರ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡ ಗಣೇಶ್, ಅವರನ್ನು ತಮ್ಮ ಬೌಲಿಂಗ್ ನಿಂದ ಮೆಚ್ಚಿಸುತ್ತಾರೆ. ತರಬೇತಿಗೆ ತಗಲುವ ಕರ‍್ಚನ್ನು ಬರಿಸಲು ಗಣೇಶ್ ರಿಗೆ ಇರುವ ತೊಡಕನ್ನು ಅರಿತ ಜಯಪ್ರಾಕಾಶ್ ಸಂಪೂರ‍್ಣ ವಿನಾಯಿತಿ ನೀಡುವುದರ ಜೊತೆಗೆ ಮದ್ರಾಸ್ ನ ಎಮ್.ಆರ್.ಎಪ್. ಪೇಸ್ ಅಕ್ಯಾಡೆಮಿಗೆ ಹೆಚ್ಚಿನ ತರಬೇತಿಗಾಗಿ ಕಳಿಸುತ್ತಾರೆ. ಅಲ್ಲಿ ಆಸ್ಟ್ರೇಲಿಯಾದ ದಿಗ್ಗಜ ವೇಗಿ ಡೆನ್ನಿಸ್ ಲಿಲ್ಲೀರ ಗರಡಿಯಲ್ಲಿ ಬೌಲಿಂಗ್ ಪಟ್ಟುಗಳನ್ನು ಕಲಿತು ವ್ರುತ್ತಿಪರ ಆಟಗರಾರಂತೆ ಗಣೇಶ್ ಪಕ್ವಗೊಳ್ಳುತ್ತಾರೆ.

ಹಂತಹಂತವಾಗಿ ಬೆಳೆದ ಗಣೇಶ್

ಎಮ್.ಆರ್.ಎಪ್. ಅಕ್ಯಾಡೆಮಿಯಲ್ಲಿ ಪಳಗಿ ಬಂದ ಗಣೇಶ್ ಮೊದಲಿಗೆ ಕರ‍್ನಾಟಕದ ಹಲವು ಕಿರಿಯರ ತಂಡದ ಸದಸ್ಯರಾದರು(ಅಂಡರ್ 19, 21 ಹಾಗೂ 23). ರಾಹುಲ್ ದ್ರಾವಿಡ್, ಸುಜಿತ್ ಸೋಮಸುಂದರ್ ಅವರನ್ನೊಳಗೊಂಡಿದ್ದ ಆ ತಂಡದಲ್ಲಿ ಸಾಕಶ್ಟು ಅಳವುಳ್ಳ ಆಟಗಾರರಿದ್ದರೂ ಬೌಲಿಂಗ್ ನಲ್ಲಿ ಮಾತ್ರ ಗಣೇಶ್ ರಂತೆ ಬೇರ‍್ಯಾರೂ ಗಮನ ಸೆಳೆಯುವುದಿಲ್ಲ. ಬಳಿಕ ಸ್ವಸ್ತಿಕ್ ಯೂನಿಯನ್ ಕ್ಲಬ್ ತಂಡದ ಪರ ಅವರು ಆಡತೊಡಗಿದರು. ಕೆ.ಎಸ್.ಸಿ.ಎ. ನ ಪಂದ್ಯಾವಳಿಗಳಾದ ಶಪಿ ದರಾಶಾ, ಕೆ.ತಿಮ್ಮಪ್ಪಯ್ಯ ಟ್ರೋಪಿಯೊಂದಿಗೆ ಅಂತರರಾಜ್ಯ ಪಂದ್ಯಾವಳಿಗಳಾದ ಬುಚ್ಚಿ ಬಾಬು ಹಾಗೂ ಮೊಯಿನುದುಲ್ಲಾಹ್ ಟೂರ‍್ನಿಗಳಲ್ಲೂ ಗಣೇಶ್ ತಮ್ಮ ವೇಗದ ಬೌಲಿಂಗ್ ನಿಂದ ಸಾಕಶ್ಟು ವಿಕೆಟ್ ಪಡೆದು ಸದ್ದು ಮಾಡತೊಡಗಿದರು. ಸಿಂಡಿಕೇಟ್ ಬ್ಯಾಂಕ್ ತಂಡದ ಪರ ಕೂಡ ಅವರ ಪ್ರದರ‍್ಶನ ಗಮನಾರ‍್ಹವಾಗಿತ್ತು. ನಾಲ್ಕು ವರ‍್ಶಗಳಲ್ಲಿ ಹಂತಹಂತವಾಗಿ ಬೌಲರ್ ಆಗಿ ಬೆಳೆದು ಗಣೇಶ್ ಕಡೆಗೆ ಕರ‍್ನಾಟಕ ರಣಜಿ ತಂಡದ ಕದ ತಟ್ಟಲಾರಂಬಿಸಿದರು.

ರಣಜಿ ಪಾದಾರ‍್ಪಣೆ

ಗಣೇಶ್ 1994/95 ರ ಸಾಲಿನಲ್ಲಿ ಅನಿಲ್ ಕುಂಬ್ಳೆರ ನಾಯಕತ್ವದಲ್ಲಿ ತಮಿಳು ನಾಡು ಎದುರು ಚೆಪಾಕ್ ಅಂಗಳದಲ್ಲಿ ಕರ‍್ನಾಟಕದ ಪರ ತಮ್ಮ ಚೊಚ್ಚಲ ರಣಜಿ ಪಂದ್ಯ ಆಡಿದರು. ಎಸ್. ಶರತ್ ರ ವಿಕೆಟ್ ಪಡೆದು ತಮ್ಮ ಮೊದಲ ದರ‍್ಜೆ ವ್ರುತ್ತಿ ಬದುಕು ಆರಂಬಿಸಿದ ಅವರಿಗೆ ಆ ಸಾಲಿನಲ್ಲಿ ಮತ್ತೆ ಆಡುವ ಅವಕಾಶ ಸಿಗುವುದಿಲ್ಲ. ಆದರೆ 1995/96 ರ ಸಾಲಿನ ಮೊದಲ ಪಂದ್ಯದಲ್ಲೇ ಆಂದ್ರ ಎದುರು (4/12; 2/21) ಬರ‍್ಜರಿ ಪ್ರದರ‍್ಶನದಿಂದ ಮಿಂಚಿದ ಗಣೇಶ್ ಹಿರಿಯ ಬೌಲರ‍್‌ಗಳಾದ ಶ್ರೀನಾತ್ ಹಾಗೂ ಪ್ರಸಾದ್ ರ ಅನುಪಸ್ತಿತಿಯಲ್ಲಿ, ಡೇವಿಡ್ ಜಾನ್ಸನ್ ರೊಂದಿಗೆ ಬೌಲಿಂಗ್ ಹೊಣೆ ಹೊತ್ತು ತಂಡವನ್ನು ಪೈನಲ್ ವರೆಗೂ ಕೊಂಡೊಯ್ಯುವಲ್ಲಿ ದೊಡ್ಡ ಪಾತ್ರ ವಹಿಸುತ್ತಾರೆ. ಪೈನಲ್ ಗೆ ರಾಜ್ಯದ ಅಂತರಾಶ್ಟ್ರೀಯ ಆಟಗಾರರು ಮರಳಿ ಅವರಿಗೆ ಆಡುವ ಹನ್ನೊಂದರಲ್ಲಿ ಅವಕಾಶ ಸಿಗದಿದ್ದರೂ ಟೂರ‍್ನಿ ಗೆಲ್ಲುವಲ್ಲಿ ಗಣೇಶ್ ರವರ ಕೊಡುಗೆ ಮರೆಯುವಂತಿಲ್ಲ. ಆ ಬಳಿಕ ರಣಜಿ ವಿಜೇತರಾದ ಕರ‍್ನಾಟಕ ತಂಡಕ್ಕೆ, ಸಿದು, ಲಕ್ಶ್ಮಣ್, ಹಿರ‍್ವಾನಿ ಹಾಗೂ ರಾಜುರಂತಹ ಆಟಗಾರರ ಬಲವಿದ್ದ ಬಾರತ ಇತರೆ ತಂಡ ಇರಾನಿ ಕಪ್ ನಲ್ಲಿ ಎದುರಾಯಿತು. ಆದರೆ ರಾಜ್ಯ ತಂಡದ ಎಲ್ಲಾ ಪ್ರಮುಕ ಆಟಗಾರರು ಬಾರತ ತಂಡದೊಂದಿಗೆ ಇದ್ದುದ್ದರಿಂದ ಸುಜಿತ್ ಸೋಮ್‌ಸುಂದರ್ ತಂಡದ ಮುಂದಾಳ್ತನ ವಹಿಸುತ್ತಾರೆ. ಆ ವೇಳೆ ಜೆ.ಅರುಣ್ ಕುಮಾರ್ ಗೆಳೆಯ ಗಣೇಶ್ ರಿಗೆ “ಈ ಪಂದ್ಯದಲ್ಲಿ ಹೆಚ್ಚು ವಿಕೆಟ್ ಪಡೆದು ನೀನು ಪಂದ್ಯ ಗೆಲ್ಲಿಸಿದರೆ ಬಾರತ ತಂಡಕ್ಕೆ ಆಯ್ಕೆ ಆಗುತ್ತೀಯ” ಎಂದು ಹುರಿದುಂಬಿಸುತ್ತಾರೆ. ಆ ಹೊತ್ತಿನಲ್ಲಿ ಒಳ್ಳೆ ಲಯದಲ್ಲಿದ್ದ ಗಣೇಶ್ ಬೆಂಗಳೂರಿನಲ್ಲಿ ಕರಾರುವಾಕ್ ವೇಗದ ದಾಳಿಯಿಂದ (6/84; 5/89) ಪಂದ್ಯದಲ್ಲಿ ಒಟ್ಟು 11 ವಿಕೆಟ್ ಗಳನ್ನು ಪಡೆದು ಕನ್ನಡಿಗರಿಗೆ ಗೆಲುವಿನ ಕಾಣಿಕೆ ನೀಡಿ ಸಂಚಲನ ಮೂಡಿಸುತ್ತಾರೆ. ಇದರಿಂದ ಪ್ರಬಾವಗೊಂಡ ಆಯ್ಕೆಗಾರರು ಅವರನ್ನು ಪ್ರವಾಸಿ ಆಸ್ಟ್ರೇಲಿಯಾ ಎದುರು ಆಡಲಿದ್ದ ಬೋರ‍್ಡ್ ಪ್ರೆಸಿಡೆಂಟ್ಸ್ ತಂಡಕ್ಕೆ ಆರಿಸುತ್ತಾರೆ. ಪಟಿಯಾಲದಲ್ಲಿ ನಡೆದ ಈ ಪಂದ್ಯದಲ್ಲೂ ಗಣೇಶ್, ಸ್ಲೇಟರ್, ಮಾರ‍್ಕ್ ವಾ ಹಾಗೂ ಮಾರ‍್ಕ್ ಟೇಲರ್ ರನ್ನೊಳಗೊಂಡು, ಒಟ್ಟು 5 ವಿಕೆಟ್ ಪಡೆದು ಅಂತರಾಶ್ಟ್ರೀಯ ಕ್ರಿಕೆಟ್ ಗೆ ತಾವು ಸಜ್ಜಾಗಿರುವುದಾಗಿ ಮತ್ತೊಮ್ಮೆ ನೆನಪಿಸುತ್ತಾರೆ. ಕಡೆಗೆ ಆಯ್ಕೆಗಾರರು 1996/97 ರ ಸಾಲಿನ ದಕ್ಶಿಣ ಆಪ್ರಿಕಾ ಹಾಗೂ ವೆಸ್ಟ್ ಇಂಡೀಸ್ ಜಂಟಿ ಪ್ರವಾಸದ ಟೆಸ್ಟ್ ಹಾಗೂ ಒಂದು ದಿನದ ತಂಡಗಳಿಗೆ ದೊಡ್ಡ ಗಣೇಶ್ ರಿಗೆ ಎಡೆ ನೀಡುತ್ತಾರೆ. ಆ ತಂಡದಲ್ಲಿ ಒಟ್ಟು ಆರು ಮಂದಿ ಕನ್ನಡಿಗರಿದ್ದದ್ದು ಹೆಮ್ಮೆಯ ವಿಶಯ.

ಅಂತರಾಶ್ಟ್ರೀಯ ಕ್ರಿಕೆಟ್

ಕೇಪ್‌ಟೌನ್ ನಲ್ಲಿ ಜನವರಿ 1997 ರಲ್ಲಿ ಗಣೇಶ್ ತಮ್ಮ ಮೊದಲ ಟೆಸ್ಟ್ ಆಡಿದರು. ಮೊದಲ ಇನ್ನಿಂಗ್ಸ್ ನಲ್ಲಿ ವಿಕೆಟ್ ಪಡೆಯದೆ ಹೋದರೂ ಎರಡನೇ ಇನ್ನಿಂಗ್ಸ್ ನಲ್ಲಿ ಗ್ಯಾರಿ ಕರ‍್ಸ್ಟನ್ ರನ್ನು LBW ಬಲೆಗೆ ಕೆಡವಿ ಚೊಚ್ಚಲ ಅಂತರಾಶ್ಟ್ರೀಯ ವಿಕೆಟ್ ಪಡೆಯುತ್ತಾರೆ. ಜೋಹಾನ್ಸ್ಬರ‍್ಗ್ ನ ಎರಡನೇ ಟೆಸ್ಟ್ ನಲ್ಲಿ ಗಣೇಶ್ ರಿಗೆ ಮೊದಲ ಇನ್ನಿಂಗ್ಸ್ ನಲ್ಲಿ 7 ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ ಕೇವಲ 2 ಓವರ್ ಹಾಕಲು ಮಾತ್ರ ಅವಕಾಶ ದೊರೆತು ತಮ್ಮ ಅಳವು ಪ್ರದರ‍್ಶಿಸುವ ಅವಕಾಶ ಸಿಗದೆ ಯುವ ವೇಗಿಗೆ ನಿರಾಸೆಯಾಗುತ್ತದೆ. ಆ ಬಳಿಕ ಒಂದು ದಿನದ ಸರಣಿಯಲ್ಲಿ ಮುಂಬೈನ ಸಲಿಲ್ ಅಂಕೋಲಾಗೆ ಮಣೆ ಹಾಕಿದ್ದರಿಂದ, ಗಣೇಶ್ ರನ್ನು ಜಿಂಬಾಬ್ವೆ ಎದುರು ಒಂದೇ ಒಂದು ಪಂದ್ಯದಲ್ಲಿ ಮಾತ್ರ ಆಡಿಸಲಾಗುತ್ತದೆ.. ಆ ಪಂದ್ಯದಲ್ಲಿ ಅವರು 5 ಓವರ್ ಗಳಲ್ಲಿ 20 ರನ್ ನೀಡಿ ಒಂದು ವಿಕೆಟ್ ಪಡೆಯುತ್ತಾರೆ. ವೆಸ್ಟ್ಇಂಡೀಸ್ ಪ್ರವಾಸದ ಬಾರ‍್ಬಡಾಸ್ ಟೆಸ್ಟ್ ನಲ್ಲಿ ಅವರು ಒಟ್ಟು 4 ವಿಕೆಟ್ ಪಡೆದರೂ ಬಾರತ ಗೆಲ್ಲಲು 120 ರನ್ ಗಳಿಸಲಾಗದೆ 81 ಕ್ಕೆ ಸರ‍್ವಪತನ ಕಂಡು ಅತ್ಯಂತ ನೋವಿನ ಸೋಲಿಗೆ ತುತ್ತಾಗುತ್ತದೆ. ಬ್ಯಾಟಿಂಗ್ ಮಾಡುವುದು ಸಾದ್ಯವೇ ಇಲ್ಲ ಎನ್ನುವಂತಿದ್ದ ಆ ಪಿಚ್ ಮೇಲೆ ನಾಲ್ಕನೇ ಇನ್ನಿಂಗ್ಸ್ ನಲ್ಲಿ ಲಕ್ಶಣ್ ರ ನಂತರ ಅತ್ಯಂತ ಹೆಚ್ಚು ಚೆಂಡು (30) ಎದುರಿಸಿ 6 ರನ್ ಗಳಿಸಿ ಗಣೇಶ್ ಔಟಾಗದೇ ಉಳಿಯುತ್ತಾರೆ. ಬಳಿಕ ಮಳೆಗೆ ತುತ್ತಾದ ಐದನೇ ಗಯಾನ ಟೆಸ್ಟ್ ನಲ್ಲೂ ಸಹ ಗಣೇಶ್ ರಿಗೆ 7 ಓವರ್ ಗಳಶ್ಟೇ ನೀಡಲಾಗುತ್ತದೆ. ಇದರ ಬೆನ್ನಲ್ಲೇ ನಡೆದ ವಿಂಡೀಸ್ ಎದುರಿನ ಒಂದು ದಿನದ ಪಂದ್ಯಗಳ ಸರಣಿ ಹಾಗೂ ಬಾರತದಲ್ಲಿ ನಡೆದ, ನಾಲ್ಕು ದೇಶಗಳು ಪಾಲ್ಗೊಂಡಿದ್ದ ಇಂಡಿಪೆಂಡೆನ್ಸ್ ಕಪ್ ನಲ್ಲೂ ಕರ‍್ನಾಟಕದ ವೇಗಿಗೆ ಒಂದು ಪಂದ್ಯದಲ್ಲೂ ಅವಕಾಶ ಸಿಗುವುದಿಲ್ಲ. ಹೀಗೆ ಆರು ತಿಂಗಳ ಕಾಲ ಬಾರತ ತಂಡದೊಂದಿಗಿದ್ದರೂ ಕೇವಲ ನಾಲ್ಕು ಟೆಸ್ಟ್ (ಅದರಲ್ಲಿಯೂ ಕಡಿಮೆ ಬೌಲಿಂಗ್ ಅವಕಾಶ) ಹಾಗೂ ಒಂದೇ ಒಂದು-ದಿನದ ಪಂದ್ಯದಲ್ಲಿ ಮಾತ್ರ ಅವಕಾಶ ನೀಡಿ, ಕಡೆಗೆ 1997 ರ ಶ್ರೀಲಂಕಾ ಪ್ರವಾಸಕ್ಕೆ ಗಣೇಶ್ ರನ್ನು ತಂಡದಿಂದ ಕೈಬಿಡಲಾಗುತ್ತದೆ.

ಬಾರತ ತಂಡಕ್ಕೆ ಮರಳುವ ತವಕ – ಹೋರಾಟ

ಯಾವುದೇ ತಪ್ಪು ಮಾಡದಿದ್ದರೂ ಆಯ್ಕೆಗಾರರ ಕೆಂಗಣ್ಣಿಗೆ ಗುರಿಯಾಗಿ, ಹಿಂದಿರುಗಿ ಕರ‍್ನಾಟಕ ತಂಡ ಸೇರಿಕೊಂಡ ಗಣೇಶ್, ತಮ್ಮ ಬೌಲಿಂಗ್ ಅನ್ನು ಇನ್ನೂ ಸುದಾರಿಸಿಕೊಳ್ಳುವತ್ತ ಗಮನ ಹರಿಸಿದರು. ಬೆಳಗ್ಗೆ 4 ಕ್ಕೆ ಎದ್ದು ಪೀಣ್ಯದಿಂದ 15 ಕಿಮೀ ದೂರ ಚಿನ್ನಸ್ವಾಮಿ ಅಂಗಳಕ್ಕೆ ಸೈಕಲ್ ಮಾಡುತ್ತಾ ತೆರಳಿ, ದಿನವಿಡೀ ಬೆವರು ಹರಿಸಿ ತಮ್ಮ ಇನ್ಸ್ವಿಂಗ್ ಎಸೆತದ ಜೊತೆಗೆ ಹೊರಹೋಗುವ ಚೆಂಡು, ರಿವರ‍್ಸ್ ಸ್ವಿಂಗ್, ನಿದಾನಗತಿಯ ಎಸೆತ ಹಾಗೂ ಕರಾರುವಾಕ್ ಯಾರ‍್ಕರ್ ಗಳನ್ನು ಇನ್ನಶ್ಟು ಮೊನಚು ಮಾಡಿಕೊಂಡರು. 1997/98 ರ ರಣಜಿ ಟೂರ‍್ನಿ ಗೆಲುವಿನಲ್ಲಿ ಅವರು ಹೈದರಾಬಾದ್ ಎದುರಿನ ಸೆಮೀಸ್ ಪಂದ್ಯದಲ್ಲಿ ಬೌಲಿಂಗ್ ನಲ್ಲಿ 9 ವಿಕೆಟ್ ಪಡೆದರು. ಬಳಿಕ ಬ್ಯಾಟಿಂಗ್ ನಲ್ಲಿ ಮನ್ಸೂರ್ ಅವರೊಟ್ಟಿಗೆ, ಬುಗುರಿಯಂತೆ ತಿರುಗುತ್ತಿದ್ದ ಪಿಚ್ ಮೇಲೆ ಕಡೇ ವಿಕೆಟ್ ಗೆ ತಾಳ್ಮೆಯ 18 ರನ್ ಜೊತೆಯಾಟವಾಡಿ ದಕ್ಕಿಸಿ ಕೊಟ್ಟ ಗೆಲುವು ಕರ‍್ನಾಟಕ ಕ್ರಿಕೆಟ್ ಇತಿಹಾಸದ ಅತ್ಯಂತ ರೋಚಕ ಗೆಲುವು ಎಂದರೆ ತಪ್ಪಾಗಲಾರದು. 1998/99 ರ ಸಾಲಿನ ರಣಜಿ ಟೂರ‍್ನಿಯಲ್ಲಿ ತಮ್ಮ ಬೌಲಿಂಗ್ ನ ಉತ್ತುಂಗ ತಲುಪಿದ್ದ ಗಣೇಶ್ ದಾಕಲೆಯ 62 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು. ಈ ರುತುವಿನಲ್ಲಿ ಪಂಜಾಬ್ ಎದುರು ಸೆಮೀಸ್ ನಲ್ಲಿ ಸಿದುರೊಟ್ಟಿಗೆ ಮಾತಿನ ಚಕಮಕಿ ಬಳಿಕ ಆ ನಿರ‍್ಜೀವ ಪಿಚ್ ಮೇಲೆ ರಿವರ‍್ಸ್ ಸ್ವಿಂಗ್ ನಿಂದ 6 ವಿಕೆಟ್(6/37) ಪಡೆದು, 90 ರನ್‌ಗಳಿಗೆ ಎದುರಾಳಿಯನ್ನು ಕಟ್ಟಿಹಾಕಿದ ಅವರ ಸಾಹಸಗಾತೆ ಮೈನವಿರೇಳಿಸುವಂತದ್ದು. 1999ರ ವಿಶ್ವಕಪ್ ಗೆ ಗಣೇಶ್ ಮರಳಲಿದ್ದಾರೆ ಎನ್ನುವ ನಂಬಿಕೆಯನ್ನು ಆಯ್ಕೆಗಾರರು ಹುಸಿ ಮಾಡುತ್ತಾರೆ. ಆದರೂ ದ್ರುತಿಗೆಡದ ಗಣೇಶ್ ಬಾರತ-ಎ ಪ್ರವಾಸಗಳಲ್ಲಿಯೂ ಮಿಂಚುತ್ತಾರೆ. 1999ರಲ್ಲಿ ಅಮೇರಿಕಾದಲ್ಲಿ ನಡೆದ ಆಸ್ಟ್ರೇಲಿಯಾ-ಎ ಎದುರಿನ ಸರಣಿಯಲ್ಲಿ ಗಿಲ್ಕ್ರಿಸ್ಟ್, ಸೈಮಂಡ್ಸ್ ಹಾಗೂ ಬ್ರಾಡ್ ಹಾಡ್ಜ್ ರಂತಹ ಬ್ಯಾಟ್ಸ್ಮನ್ ಗಳ ವಿಕೆಟ್ ನೊಂದಿಗೆ ಅತ್ಯದಿಕ ವಿಕೆಟ್(8) ಪಡೆಯುತ್ತಾರೆ. ಕರ‍್ನಾಟಕ ತಂಡದ ಕೀನ್ಯಾ ಪ್ರವಾಸದಲ್ಲೂ ಅವರು ಗಮನ ಸೆಳೆಯುತ್ತಾರೆ. ಬಳಿಕ 1999/2000 ದ ರಣಜಿ ಟೂರ‍್ನಿಯಲ್ಲಿ ರಾಜ್ಯ ತಂಡದ ಹೋರಾಟ ಸೆಮೀಸ್ ನಲ್ಲಿ ಕೊನೆಗೊಂಡರೂ ಗಣೇಶ್ ಆ ಸಾಲಿನಲ್ಲಿ ಮತ್ತೊಮ್ಮೆ ಅತ್ಯದಿಕ 38 ವಿಕೆಟ್ ಪಡೆಯುತ್ತಾರೆ. ಆದರೂ ಆಯ್ಕೆಗಾರರ ಮನವೊಲಿಯುವುದಿಲ್ಲ. ಕೇವಲ ಬಾರತ- ಎ ಪ್ರವಾಸಗಳು, ಇರಾನಿ ಕಪ್, ಚಾಲೆಂಜರ್ ಸರಣಿ ಹಾಗೂ ಪ್ರವಾಸಿ ತಂಡಗಳ ಎದುರು ಅಬ್ಯಾಸ ಪಂದ್ಯಗಳಿಗೆ ಮಾತ್ರ ಅವರಿಗೆ ಅವಕಾಶ ನೀಡಲಾಗುತ್ತದೆ. ಕಡೆಗೆ 2001 ರಲ್ಲಿ ಪ್ರವಾಸಿ ಇಂಗ್ಲೆಂಡ್ ಎದುರು ಬಾರತ-ಎ ಪರ ಆಡಿದ ಪಂದ್ಯವೇ 28 ರ ಹರೆಯದ ಗಣೇಶ್ ರ ಬಾರತ ತಂಡಕ್ಕೆ ಮರಳುವ ಹೋರಾಟದ ಕೊನೆ ಪಂದ್ಯವಾಗುತ್ತದೆ.

ಕರ‍್ನಾಟಕದ ‘ದೊಡ್ಡ’ ಬೌಲರ್ ಗಣೇಶ್

ರಾಜ್ಯ ತಂಡಕ್ಕೆ 1990 ಹಾಗೂ 2000 ದ ಆರಂಬದ ದಶಕದಲ್ಲಿ ಯಾರಾದರೂ ಅತ್ಯಂತ ಹೆಚ್ಚು ಕೊಡುಗೆ ನೀಡಿದ್ದಾರೆ ಅಂದರೆ ಅದು ದೊಡ್ಡ ಗಣೇಶ್ ಎಂದು ಯಾರಾದರೂ ಹೇಳುತ್ತಾರೆ. ಅವರು ಕರ‍್ನಾಟಕ ತಂಡದೊಂದಿಗೆ ಒಟ್ಟು ಮೂರು ರಣಜಿ ಟೂರ‍್ನಿ ಹಾಗೂ ಎರಡು ಇರಾನಿ ಕಪ್ ಗೆದ್ದಿದ್ದಾರೆ. ವಿನಯ್ ರಿಗೂ ಮುನ್ನ ಅವರು ಕರ‍್ನಾಟಕದ ಪರ ರಣಜಿಯಲ್ಲಿ ಪಡೆದಿದ್ದ ಅತ್ಯದಿಕ 278 ವಿಕೆಟ್ ಗಳು ವೇಗದ ಬೌಲರ್ ಒಬ್ಬನ ದಾಕಲೆಯಾಗಿತ್ತು. ಮೊದಲ ದರ‍್ಜೆ ಕ್ರಿಕೆಟ್ ನಲ್ಲಿ104 ಪಂದ್ಯಗಳಲ್ಲಿ 5 ಬಾರಿ ಪಂದ್ಯದಲ್ಲಿ ಹತ್ತು ವಿಕೆಟ್ ಗಳು ಹಾಗೂ 17 ಬಾರಿ ಇನ್ನಿಂಗ್ಸ್ ನಲ್ಲಿ ಐದು ವಿಕೆಟ್ ಗಳಿಂದ ಒಟ್ಟು 365 ವಿಕೆಟ್ ಪಡೆದಿರುವ ಬಲಗೈ ವೇಗಿ ಗಣೇಶ್ 89 ಲಿಸ್ಟ್-ಎ ಪಂದ್ಯಗಳಲ್ಲಿ 128 ವಿಕೆಟ್ ಪಡೆದ್ದಿದ್ದಾರೆ. ಸಮಯ ಬಂದಾಗ ತಂಡಕ್ಕೆ ಬ್ಯಾಟಿಂಗ್ ನಿಂದಲೂ ನೆರವಾಗುತ್ತಿದ್ದ ಅವರು ಒಂದು ಶತಕ ಹಾಗೂ 7 ಅರ‍್ದ ಶತಕಗಳಿಂದ 2,023 ರನ್ ಗಳಿಸಿದ್ದಾರೆ. 2002/03 ರಲ್ಲಿ ರಣಜಿಯ ಪ್ಲೇಟ್ ಗುಂಪು ತಲುಪಿ ಮುಜುಗರಕ್ಕೆ ಒಳಗಾಗಿದ್ದ ಕರ‍್ನಾಟಕ ಗಣೇಶ್ ರ ಆಲ್ ರೌಂಡ್ ಆಟದ ಬಲದಿಂದಲೇ ಮತ್ತೂಮ್ಮೆ ಎಲೈಟ್ ಗುಂಪಿಗೆ ತಲುಪಿದ್ದು ಅವರ ಅಳವಿಗೆ ಸರಿಯಾದ ಎತ್ತುಗೆ. ರಣಜಿ ರುತುವಿನಲ್ಲಿ ಒಮ್ಮೆ ಮೇಲ್ಪಂಕ್ತಿಯ ಬ್ಯಾಟ್ಸ್ಮನ್ ಗಳಂತೆ ಆಡಿ 42 ರ ಸರಾಸರಿಯಲ್ಲಿ ಬರೋಬ್ಬರಿ 536 ರನ್ ಗಳಿಸಿದ್ದ ಗಣೇಶ್, 2004/05 ರಲ್ಲಿ ಗುಜರಾತ್ ಎದುರು 110/7 ಕ್ಕೆ ಸಿಲುಕಿ ಸೋಲಿನ ಸುಳಿಯಲ್ಲಿದ್ದಾಗ, ಎಂಟನೇ ವಿಕೆಟ್ ಗೆ ತಿಲಕ್ ನಾಯ್ಡುರೊಂದಿಗೆ 46 ರನ್ ಕಲೆಹಾಕಿ ಪಂದ್ಯ ಡ್ರಾ ಮಾಡಿಸಿ ತಂಡವನ್ನು ಕಾಪಾಡಿದ್ದರು. ಅವರು ತಮ್ಮ ಆಟದ ಕಡೇ ದಿನಗಳಲ್ಲಿ ಒಳ್ಳೆ ಆಲ್ರೌಂಡರ್ ಆಗಿದ್ದರು ಎಂದರೆ ತಪ್ಪಾಗಲಾರದು. ಇಂಗ್ಲೆಂಡ್ ನಲ್ಲಿ ಸ್ಕನ್ತೋರ‍್ಪ್ ತಂಡದ ಪರ ವರುಶಗಳ ಕಾಲ ಲೀಗ್ ಕ್ರಿಕೆಟ್ ಕೂಡ ಆಡಿ ಅವರು ಯಶಸ್ಸು ಕಂಡರು. ಗಣೇಶ್ ತಮ್ಮ ಕಿಟ್ ಬ್ಯಾಗ್ ನಲ್ಲಿ ‘ಸದಾ ಕರ‍್ನಾಟಕದ ನಾಡದ್ವಜ ಇಟ್ಟುಕೊಳ್ಳುತ್ತಿದ್ದೆ’ ಎಂದು ಹೆಮ್ಮೆಯಿಂದ ಹೇಳಿಕೊಂಡಿರುವುದು ತಾಯ್ನಾಡಿನ ಬಗ್ಗೆ ಅವರಿಗಿರುವ ಪ್ರೀತಿಯನ್ನು ತೋರಿಸುತ್ತದೆ. ರಾಜ್ಯ ಸರ‍್ಕಾರ ಅವರ ಸಾದನೆಯನ್ನು ಪರಿಗಣಿಸಿ ಪ್ರತಿಶ್ಟಿತ ಏಕಲವ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ನಾಯಕತ್ವದ ಗುಣ ಹೊಂದಿದ್ದ ಗಣೇಶ್ ಎಂದೂ ರಾಜ್ಯ ತಂಡದ ಪೂರ‍್ಣಪ್ರಮಾಣದ ನಾಯಕರಾಗದೆ ಹೋದದ್ದು ದುರಂತವೇ ಸರಿ. ಕರ‍್ನಾಟಕ ತಂಡದ ಆಸ್ತಿಯಾಗಿದ್ದ ಗಣೇಶ್ 2005/06 ರಲ್ಲಿ ಬಂಗಾಳದ ಎದುರು ತಮ್ಮ ಕಡೇ ಪಂದ್ಯ ಆಡಿ, “ನಾನಿನ್ನು ಬಾರತ ತಂಡಕ್ಕೆ ಆಯ್ಕೆಯಾಗುವುದಿಲ್ಲ. ಹೀಗಿರುವಾಗ ವಿನಯ್, ಅಯ್ಯಪ್ಪ ರಂತಹ ಯುವಕರ ಅವಕಾಶ ನಾನು ಕಸಿದುಕೊಳ್ಳುವುದು ತರವಲ್ಲ” ಎಂದು 2007 ರಲ್ಲಿ ಅದಿಕ್ರುತವಾಗಿ ನಿವ್ರುತ್ತಿ ಗೋಶಿಸಿದರು. ಸುದ್ದಿಗೋಶ್ಟಿಯ ವೇಳೆ ದಿಗ್ಗಜರಾದ ಗುಂಡಪ್ಪ ವಿಶ್ವನಾತ್, ಕುಂಬ್ಳೆ ಹಾಗೂ ಶ್ರೀನಾತ್ ನೆರೆದಿದ್ದರು. ಆ ವೇಳೆ ಗಣೇಶ್ ರ ಕೊಡುಗೆಯನ್ನು ನೆನೆದ ಕುಂಬ್ಳೆ ಅವರು ‘ನಾವೆಲ್ಲಾ ಬಾರತ ತಂಡದೊಂದಿಗೆ ಇದ್ದಾಗ ಗಣೇಶ್ ರಾಜ್ಯ ತಂಡದ ಬೌಲಿಂಗ್ ನೊಗ ಹೊತ್ತು ಸದಾ ತಂಡಕ್ಕೆ ನೆರವಾಗಿದ್ದರು. ಹುಟ್ಟು ಹೋರಾಟಗಾರರಾದ ಅವರ ಕೊಡುಗೆ ಅದ್ವಿತೀಯ’ ಎಂದು ಬಣ್ಣಿಸಿದರು. ಬಾರತದ ಶ್ರೇಶ್ಟ ಬೌಲರ್ ಒಬ್ಬರು ಹೀಗೆನ್ನುತ್ತಾರೆ ಎಂದರೆ ಗಣೇಶ್ ಎಂತಹ ಆಟಗಾರ ಎಂದು ಯಾರಿಗಾದರೂ ಅರಿವಾಗುತ್ತದೆ ಅಲ್ಲವೇ !

ನಿವ್ರುತ್ತಿ ನಂತರದ ಬದುಕು

ತಮ್ಮ ಆಟದ ದಿನಗಳ ಬಳಿಕ ಗಣೇಶ್ ಗೋವಾ ತಂಡದ ಪೂರ‍್ಣಪ್ರಮಾಣದ ಕೋಚ್ ಆಗಿ ಎರಡು ಪ್ರತ್ಯೇಕ ಅವದಿಗಳಲ್ಲಿ ದುಡಿದರು. 2019/20 ರಲ್ಲಿ ಪ್ಲೇಟ್ ಗುಂಪಿನಲ್ಲಿದ್ದ ಗೋವಾವನ್ನು ಎಲೈಟ್ ಗುಂಪಿಗೆ ಕೊಂಡೊಯ್ದರು. ನಡುವಿನಲ್ಲಿ ಕೆಲ ವರುಶಗಳ ಕಾಲ ಕರ‍್ನಾಟಕ ತಂಡದ ಮುಕ್ಯ ಆಯ್ಕೆಗಾರರಾಗಿದ್ದ ಅವರು ಮಾಯಾಂಕ್, ಸಮರ‍್ತ್, ಶ್ರೇಯಸ್ ಗೋಪಾಲ್, ಕರುಣ್, ಪ್ರಸಿದ್, ದೇವದತ್ ಪಡಿಕ್ಕಲ್, ಪ್ರದೀಪ್, ಪವನ್ ದೇಶಪಾಂಡೆ ರಂತಹ ಅಳವುಳ್ಳ ಆಟಗಾರರನ್ನು ಗುರುತಿಸಿ ಅವಕಾಶ ನೀಡಿದರು. ಅವರ ಅವದಿಯಲ್ಲಿ ರಾಜ್ಯ ತಂಡ ಒಟ್ಟು 8 ದೇಸೀ ಟೂರ‍್ನಿಗಳನ್ನು ಗೆದ್ದದ್ದು ಅವರ ಹೆಗ್ಗಳಿಕೆ. ಕೆಪಿಎಲ್ ನ ದಾವಣಗೆರೆ ತಂಡಕ್ಕೂ ಅವರು ಕೋಚ್ ಆಗಿದ್ದರು. ಟೀವಿ 9 ನ ಬೌಂಡರಿ ಲೈನ್ ಕಾರ‍್ಯಕ್ರಮದಲ್ಲಿ ಕ್ರಿಕೆಟ್ ವಿಶ್ಲೇಶಕರಾಗಿ ಸಹ ಅವರು ಕಾಣಿಸಿಕೊಂಡಿದ್ದರು. ಜಾತ್ಯಾತೀತ ಜನತಾದಳ ಪಕ್ಶದ ಪ್ರಾತಮಿಕ ಸದಸ್ಯತ್ವವನ್ನು ಕೂಡ ಗಣೇಶ್ ಪಡೆದುಕೊಂಡಿದ್ದಾರೆ .

ಇನ್ನೊಂದು ಅವಕಾಶ ಸಿಕ್ಕಿದ್ದರೆ?

1998 ರಿಂದ -2001/02 ರ ಅವದಿಯ ವೇಳೆ ದೇಸೀ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್ ಎಂಬ ಹಿರಿಮೆ ಗಣೇಶ್ ರ ಪಾಲಾದರೂ ಬಾರತ ತಂಡದಲ್ಲಿ ಅವರಿಗೆ ಇನ್ನೊಂದೇ ಒಂದು ಅವಕಾಶ ಸಿಗದೇ ಹೋದದ್ದು ದೊಡ್ಡ ಅನ್ಯಾಯ ಎಂದೇ ಹೇಳಬೇಕು. ಇದಕ್ಕೆ ಆಯ್ಕೆಗಾರರ ಬದಿಯೊಲವೊಂದೇ ಕಾರಣ. ಅಂತರಾಶ್ಟ್ರೀಯ ಬ್ಯಾಟ್ಸ್ಮನ್ ಗಳನ್ನು ಹಾಗೂ ಬಾರತದ ಶ್ರೇಶ್ಟ ಬ್ಯಾಟ್ಸ್ಮನ್ ಗಳನ್ನು, ಅವರು ಎ ಸರಣಿಗಳು ಹಾಗೂ ದೇಸೀ ಟೂರ‍್ನಿಗಳಲ್ಲಿ ಕಾಡಿದ ರೀತಿಯನ್ನು ನೋಡಿಯಾದರೂ ಆಯ್ಕೆಗಾರರು ಅವಕಾಶ ನೀಡಬೇಕಿತ್ತು. ಆಗಾಗಲೇ ಬೌಲಿಂಗ್ ನಲ್ಲಿ ಅನುಬವದಿಂದ ಪಕ್ವಗೊಂಡಿದ್ದ ಅವರಿಗೆ ಒಮ್ಮೆ ಅವಕಾಶ ಸಿಕ್ಕಿದ್ದರೆ ಅಂತರಾಶ್ಟ್ರೀಯ ಮಟ್ಟದಲ್ಲೂ ಸಾದನೆ ಮಾಡುತ್ತಿದ್ದರು ಎಂದೆನಿಸದೆ ಇರದು. ಆದರೆ ಆಯ್ಕೆ ಮಂಡಳಿಯ ನಿರ‍್ಲಕ್ಶ್ಯಕ್ಕೆ ಗುರಿಯಾಗಿ ಗಣೇಶ್ ನೇಪತ್ಯಕ್ಕೆ ಸರಿದರು. ಅವರಿಗಿಂತ ಪ್ರದರ‍್ಶನದಲ್ಲಿ ಮತ್ತು ಅಳವಿನಲ್ಲಿ ಹಿಂದಿದ್ದ ಎಶ್ಟೋ ಬೌಲರ್ ಗಳಿಗೆ ಕನ್ನಡಿಗ ಗಣೇಶ್ ರಿಗಿಂತ ಹೆಚ್ಚು ಅವಕಾಶ ನೀಡಿದ್ದನ್ನು ಈಗ ನೆನೆದರೂ ಬೇಸರವಾಗುತ್ತದೆ. ಅದ್ರುಶ್ಟ ಹಾಗೂ ಪ್ರಬಾವದ ಮಹತ್ವ ಏನೆಂದು ಗಣೇಶ್ ರ ವ್ರುತ್ತಿಬದುಕಿನಲ್ಲಿ ಆದ ಮೋಸ ನೋಡಿದರೆ ಅರಿವಾಗುತ್ತದೆ. ಈ ಎಲ್ಲಾ ನೋವುಗಳನ್ನು ಮರೆತು ಇನ್ನೂ ಆಟದೊಂದಿಗೆ ತಮ್ಮ ನಂಟನ್ನು ಉಳಿಸಿಕೊಂಡಿರುವ ಸ್ನೇಹಜೀವಿ ಅವರು. ಕರ‍್ನಾಟಕದ ಪಾಲಿಗೆ ದೊಡ್ಡ ಗಣೇಶ್ ನಿಜಕ್ಕೂ ಒಬ್ಬ ದಿಗ್ಗಜ ಆಟಗಾರ. ಇವರನ್ನು, ಮತ್ತಿವರ ದೊಡ್ಡ ಕೊಡುಗೆಯನ್ನು ತಪ್ಪದೇ ಮುಂದಿನ ಪೀಳಿಗೆಯ ಕನ್ನಡಿಗರಿಗೆ ಪರಿಚಯಿಸೋಣ!

(ಚಿತ್ರ ಸೆಲೆ: facebook/DoddaNGanesha)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: