ವಿ. ಸುಬ್ರಮಣ್ಯ – ಗೆಲ್ಲುವ ಚಲ ತುಂಬಿದ ಶ್ರೇಶ್ಟ ನಾಯಕ

– ರಾಮಚಂದ್ರ ಮಹಾರುದ್ರಪ್ಪ.

ಕರ‍್ನಾಟಕ ಕ್ರಿಕೆಟ್ ತಂಡ ಇಂದು ಬಾರತದ ದೇಸೀ ಕ್ರಿಕೆಟ್ ವಲಯದಲ್ಲಿ ಒಂದು ಬಲಾಡ್ಯ ತಂಡವಾಗಿ ಗುರುತಿಸಿಕೊಂಡು ರಣಜಿ ಟೂರ‍್ನಿಯೊಂದಿಗೆ ಹಲವಾರು ಪಂದ್ಯಾವಳಿಗಳನ್ನೂ ಗೆದ್ದು ಬಾರತ ತಂಡಕ್ಕೆ ಒಬ್ಬರ ಹಿಂದೊಬ್ಬರು ಅತ್ಯುತ್ತಮ ಆಟಗಾರರನ್ನು ಬಳುವಳಿಯಾಗಿ ನೀಡುತ್ತಿರುವುದರ ಹಿಂದೆ ಹಲವಾರು ಮಂದಿಯ ದಶಕಗಳ ಶ್ರಮ ಇದೆ. ಆದರೆ ಆಟದಲ್ಲಿ ವ್ರುತ್ತಿಪರತೆಯನ್ನು ಮೈಗೂಡಿಸಿಕೊಂಡು ಇತರರಿಗೂ ಮಾದರಿಯಾಗಿ ಹೊಸ ಪ್ರತಿಬೆಗಳನ್ನು ಹುಡುಕಿ, ತಾಳ್ಮೆಯಿಂದ ಕನ್ನಡಿಗರ ಕ್ರಿಕೆಟ್ ಪಡೆಯನ್ನು ತಮ್ಮ ಅನುಬವವನ್ನು ದಾರೆ ಎರೆದು ಕಟ್ಟಿದವರೇ 60ರ ದಶಕದ ಶ್ರೇಶ್ಟ ನಾಯಕ ವೆಂಕಟರಾಮನ್ ಸುಬ್ರಮಣ್ಯ ಅವರು.

ಹುಟ್ಟು-ಎಳವೆಯ ಕ್ರಿಕೆಟ್

ಬೆಂಗಳೂರಿನಲ್ಲಿ ಜುಲೈ 16, 1936 ರಂದು ಸುಬ್ರಮಣ್ಯ ಹುಟ್ಟಿದರು. ಪುಟ್ಟ ಹುಡುಗನಾಗಿದ್ದಾಗಿನಿಂದ ಬಾರತದ ಟೆಸ್ಟ್ ಪಂದ್ಯಗಳ ಕಾಮೆಂಟರಿಯನ್ನು ರೇಡಿಯೋನಲ್ಲಿ ಕೇಳುತ್ತಾ ಕ್ರಿಕೆಟ್ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಅವರು ನೆರೆಹೊರೆಯವರೊಂದಿಗೆ ತಮ್ಮ ಮನೆ ಅಂಗಳದಲ್ಲೇ ಕ್ರಿಕೆಟ್ ಆಡಲು ಮೊದಲು ಮಾಡಿದರು. ಮಲ್ಲೇಶ್ವರಮ್ ಹೈಸ್ಕೂಲ್ ನಲ್ಲಿ ಕಲಿತು ಆ ಬಳಿಕ ಬಸಪ್ಪ ಕಾಲೇಜ್ ನಲ್ಲಿ ಇಂಟರ್ ಮೀಡಿಯಟ್ ಶಿಕ್ಶಣ ಪಡೆದರು. ವ್ರುತ್ತಿಪರ ಕ್ಲಬ್ ಮಲ್ಲೇಶ್ವರಮ್ ಜಿಮ್ಕಾನಾ ತಂಡದ ಪರ ಆಡತೊಡಗಿದ ಅವರಿಗೆ ಆಟದ ಬಗ್ಗೆ ಎಶ್ಟು ಕಾಳಜಿ ಇತ್ತೆಂದರೆ ಸಹ ಆಟಗಾರರನ್ನು ಕಲೆಹಾಕಿ, ಪಿಚ್ ಅನ್ನು ಗುಡಿಸಿ, ನೀರು ಸಿಂಪಡಿಸಿ, ಮ್ಯಾಟ್ ಹಾಕಿ ಅವರೇ ಆಟಕ್ಕೆ ಅಣಿಮಾಡುತ್ತಿದ್ದರು. ನಂತರ ಸೆಂಟ್ರಲ್ ಕಾಲೇಜ್ ಗೆ ಪದವಿ ಶಿಕ್ಶಣಕ್ಕೆ ಸೇರಿದ ಸುಬ್ರಮಣ್ಯ ಅವರು 1955 ರಿಂದ 1957 ರ ತನಕ ಮೈಸೂರು ವಿಶ್ವವಿದ್ಯಾಲಯದ ಪರ ರೋಹಿಂಗ್ಟನ್ ಬ್ಯಾರಿಯ ಪಂದ್ಯಾವಳಿಯಲ್ಲಿ ಆಡಿದರು. ಬಲಗೈ ಮದ್ಯಮ ವೇಗಿ ಹಾಗೂ ಬಿರುಸಿನ ಹೊಡೆತಗಳ ಮದ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಆಗಿದ್ದ ಅವರು ತಮ್ಮ ಆಲ್ರೌಂಡ್ ಆಟದಿಂದ ಎಲ್ಲರ ಗಮನ ಸೆಳೆದರು. ಚೊಚ್ಚಲ ಪಂದ್ಯದಲ್ಲೇ ಉತ್ಕಲ್ ವಿಶ್ವವಿದ್ಯಾಲಯದ ಎದುರು ಕೇವಲ 21 ರನ್ ನೀಡಿ 5 ವಿಕೆಟ್ ಪಡೆದರು. ಆ ಬಳಿಕ ಗುಜರಾತ್ ವಿಶ್ವವಿದ್ಯಾಲಯದ ವಿರುದ್ದ 76 ರನ್ ಗಳಿಸಿದರೆ ಬರೋಡ ವಿಶ್ವವಿದ್ಯಾಲಯದ ಎದುರು 6 ವಿಕೆಟ್ ಪಡೆದರು. ಹೀಗೆ ವರುಶಗಳ ಕಾಲ ಸ್ತಿರ ಪ್ರದರ‍್ಶನ ನೀಡಿದ ಸುಬ್ರಮಣ್ಯರನ್ನು ಆಯ್ಕೆಗಾರರು ಮೈಸೂರು ರಾಜ್ಯ ರಣಜಿ ತಂಡಕ್ಕೆ ಆಯ್ಕೆ ಮಾಡಿದರು.

ರಣಜಿ ಕ್ರಿಕೆಟ್ ಬದುಕು

1959/60 ರ ಸಾಲಿನಲ್ಲಿ ಎ.ಎಸ್ ಕ್ರಿಶ್ಣಸ್ವಾಮಿಯವರ ಮುಂದಾಳ್ತನದಲ್ಲಿ ಹೈದರಾಬಾದ್ ಎದುರು ಸುಬ್ರಮಣ್ಯ ಮೈಸೂರು ರಾಜ್ಯದ ಪರ ಹೈದರಾಬಾದ್ ನಲ್ಲಿ ತಮ್ಮ ಮೊದಲ ರಣಜಿ ಪಂದ್ಯ ಆಡಿದರು. ನಾಯಕ ಕ್ರಿಶ್ಣಸ್ವಾಮಿಯವರಿಗೆ ಸುಬ್ರಮಣ್ಯರ ಬ್ಯಾಟಿಂಗ್ ಅಳವು ತಿಳಿಯದ್ದಿದ್ದರಿಂದ 10 ನೇ ಕ್ರಮಾಂಕದಲ್ಲಿ ಆಡಿಸಿದರೂ ಅವರು ಔಟಾಗದೆ 32 ಮತ್ತು 16 ರನ್ ಗಳಿಸಿ ಮುಂದಿನ ಪಂದ್ಯದಲ್ಲೇ ಬ್ಯಾಟಿಂಗ್ ಬಡ್ತಿ ಪಡೆದು ಆಂದ್ರ ಎದುರು ಮೊದಲ ಅರ‍್ದಶತಕ ಬಾರಿಸಿದರು. ಅದೇ ಸಾಲಿನ ಪೈನಲ್ ನಲ್ಲಿ ಬಾಂಬೆ ಎದುರು ಮೈಸೂರು ಸೋತರೂ ಸುಬ್ರಮಣ್ಯ 103 ರನ್ ಗಳಿಸಿ ಬಲಿಶ್ಟ ಬಾಂಬೆ ಎದುರು ಶತಕ ಗಳಿಸಿದ ರಾಜ್ಯದ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಬಳಿಕ1963/64 ರ ಸಾಲಿನಲ್ಲಿ ಮೊದಲ ಬಾರಿಗೆ ರಾಜ್ಯ ತಂಡದ ನಾಯಕರಾದ ಸುಬ್ರಮಣ್ಯ ಹೊಸ ಬಗೆಯ ರಣತಂತ್ರದಿಂದ ಚುರುಕಾಗಿ ತಂಡವನ್ನು ಮುನ್ನಡೆಸಿದರೂ ಸೆಮಿ ಪೈನಲ್ ನಲ್ಲಿ ಮತ್ತೊಮ್ಮೆ ಬಾಂಬೆ ಎದುರು ಸೋಲುಣ್ಣುತ್ತಾರೆ. ಅವರು ಗಳಿಸಿದ 99 ರನ್ ಕೂಡ ತಂಡವನ್ನು ಕಾಪಾಡಲಾಗುವುದಿಲ್ಲ. ಅದೇ ರುತುವಿನ ದುಲೀಪ್ ಟ್ರೊಪಿಯಲ್ಲೂ ಸುಬ್ರಮಣ್ಯ ರನ್ ಪೇರಿಸುತ್ತಾರೆ. ದಕ್ಶಿಣ ವಲಯದ ಪರ ದೆಹಲಿಯಲ್ಲಿ ಉತ್ತರ ವಲಯದ ಎದುರು ಶತಕ (124) ಗಳಿಸಿ ರಾಶ್ಟ್ರೀಯ ಆಯ್ಕೆಗಾರರ ಗಮನ ಸೆಳೆದು ತವರಿನಲ್ಲಿ ನ್ಯೂಜಿಲ್ಯಾಂಡ್ ಎದುರು ನಾಲ್ಕನೇ ಟೆಸ್ಟ್ ಗೆ ಬಾರತ ತಂಡದಲ್ಲಿ ಎಡೆ ಪಡೆಯುತ್ತಾರೆ.

ಅಂತರಾಶ್ಟ್ರೀಯ ಕ್ರಿಕೆಟ್ ಬದುಕು

1965 ರಲ್ಲಿ ನ್ಯೂಜಿಲ್ಯಾಂಡ್ ಎದುರು ದೆಹಲಿಯಲ್ಲಿ ಪಟೌಡಿರವರ ನಾಯಕತ್ವದಲ್ಲಿ ಸುಬ್ರಮಣ್ಯ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯ ಆಡಿದರು. ಬ್ಯಾಟಿಂಗ್ ನಲ್ಲಿ 9 ರನ್ ಗಳಿಸಿ ನಿರಾಸೆ ಮೂಡಿಸಿದರೂ ಬೌಲಿಂಗ್ ನಲ್ಲಿ 2 ವಿಕೆಟ್ ಪಡೆದು ತಂಡದ ಗೆಲುವಿಗೆ ನೆರವಾಗುತ್ತಾರೆ. ಬಳಿಕ ಮದ್ರಾಸ್ ನಲ್ಲಿ ತಮ್ಮ ಮೂರನೇ ಟೆಸ್ಟ್ ನಲ್ಲಿ ಅವರು ಬಲಾಡ್ಯ ವೆಸ್ಟ್ ಇಂಡೀಸ್ ಎದುರು ಮೊದಲ ಅರ‍್ದಶತಕ (61) ಗಳಿಸುತ್ತಾರೆ. 1967 ರ ಇಂಗ್ಲೆಂಡ್ ಪ್ರವಾಸದಲ್ಲಿ ಕೇವಲ ಒಂದು ವಿಕೆಟ್ ಪಡೆದು ಬ್ಯಾಟ್ ನಿಂದಲೂ ಹೆಚ್ಚು ರನ್ ಗಳಿಸದೆ ಹೋದರೂ ಸುಬ್ರಮಣ್ಯರ ಆಲ್ರೌಂಡ್ ಚಳಕಕ್ಕೆ ಬೆಲೆ ಕೊಟ್ಟು ಅವರನ್ನು1967/68 ರ ಆಸ್ಟ್ರೇಲಿಯಾ-ನ್ಯೂಜಿಲ್ಯಾಂಡ್ ಅವಳಿ ಪ್ರವಾಸಗಳಿಗೆ ಆಯ್ಕೆ ಮಾಡಲಾಗುತ್ತದೆ. ಆಡಿಲೇಡ್ ನಲ್ಲಿ ತಮ್ಮ ಅತ್ಯದಿಕ ಗಳಿಕೆ 75 ರನ್ ಬಾರಿಸಿದ ಬಳಿಕ ಕ್ರಮವಾಗಿ ಮೆಲ್ಬರ‍್ನ್ ಹಾಗೂ ಆಕ್ಲೆಂಡ್ ಟೆಸ್ಟ್ ಗಳಲ್ಲಿ ವೈಪಲ್ಯ ಅನುಬವಿಸಿದ ಸುಬ್ರಮಣ್ಯರನ್ನು ಬಾರತ ತಂಡದಿಂದ ಕೈಬಿಡಲಾಗುತ್ತದೆ. ಒಟ್ಟು 9 ಟೆಸ್ಟ್ ಗಳಲ್ಲಿ 2 ಅರ‍್ದಶತಕಗಳೊಂದಿಗೆ 263 ರನ್ ಹಾಗೂ 3 ವಿಕೆಟ್ ಪಡೆದ ಅವರ ಟೆಸ್ಟ್ ವ್ರುತ್ತಿ ಬದುಕು ಕೊನೆಗೊಳ್ಳುತ್ತದೆ.

ರಾಜ್ಯ ರಣಜಿ ತಂಡದಲ್ಲಿ ತನ್ನಂಬಿಕೆ ತುಂಬಿದ ಮಹಾನ್ ನಾಯಕ

ಅಂತರಾಶ್ಟ್ರೀಯ ಕ್ರಿಕೆಟ್ ನಲ್ಲಿ ಯಶಸ್ಸು ಕಾಣದ್ದಿದ್ದರೂ ಸುಬ್ರಮಣ್ಯ ಅವರು ರಾಜ್ಯ ತಂಡ ಕಟ್ಟಿದ ಒಬ್ಬ ಮಹಾನ್ ನಾಯಕ. ಎಲ್ಲಾ ಆಟಗಾರರನ್ನು ಹುರಿದುಂಬಿಸಿ ತಂಡಕ್ಕೆ ನೆರವಾಗುವಂತೆ ಮಾಡುವ ಗುಣ ಅವರಲ್ಲಿತ್ತು. ಬಾಂಬೆ ಪ್ರಾಬಲ್ಯವನ್ನು ತಡೆಯಬೇಕು ಎಂದು ರೂಪುರೇಶೆ ಸಿದ್ದಪಡಿಸಿ ವರುಶಗಳ ಕಾಲ ರಾಜ್ಯಾದ್ಯಂತ ಎಲ್ಲಾ ಲೀಗ್ ಪಂದ್ಯಾವಳಿಗಳನ್ನು ಹತ್ತಿರದಿಂದ ನೋಡಿ ಅಳವುಳ್ಳ ಯುವ ಆಟಗಾರರನ್ನು ಗುರುತಿಸಿ ಮೈಸೂರು ರಾಜ್ಯತಂಡಕ್ಕೆ ಆಯ್ಕೆ ಮಾಡಿದ ಹಿರಿಯಣ್ಣ ಸುಬ್ರಮಣ್ಯ ಅವರು. ಅಂತರಾಶ್ಟ್ರೀಯ ದಿಗ್ಗಜರಾದ ಪ್ರಸನ್ನ, ಚಂದ್ರಶೇಕರ್, ವಿಶ್ವನಾತ್ ಹಾಗೂ ಕಿರ‍್ಮಾನಿರೊಂದಿಗೆ ರಾಜ್ಯ ಕ್ರಿಕೆಟ್ ನ ದಿಗ್ಗಜರಾದ ಬ್ರಿಜೇಶ್ ಪಟೇಲ್, ವಿಜಯಕ್ರಿಶ್ಣ ಹಾಗೂ ವಿಜಯಕುಮಾರ್ ರಂತಹ ಆಟಗಾರರನ್ನು ಮೊದಲು ಗುರುತಿಸಿ ಅವರಿಗೆ ಆಡಲು ಒಳ್ಳೆ ಅವಕಾಶ ಮಾಡಿಕೊಟ್ಟ ಸುಬ್ರಮಣ್ಯ, ಬಾಂಬೆಯನ್ನು ಮಣಿಸಿ ರಣಜಿ ಟೂರ‍್ನಿ ಗೆಲ್ಲುವ ಕನಸನ್ನು ಕಂಡಿದ್ದರು. ಸ್ವತ ತಾವೇ ಉತ್ತಮ ಪೀಲ್ಡರ್ ಆಗಿದ್ದ ಅವರು ಸಹ ಆಟಗಾರರಿಗೂ ಪೀಲ್ಡಿಂಗ್ ಅನ್ನು ಗಂಬೀರವಾಗಿ ಪರಿಗಣಿಸುವಂತೆ ಉತ್ತೇಜಿಸಿದರು. ಚೆಂಡು ತಡೆದು ಒಡನೆ ವೇಗವಾಗಿ ಎಸೆಯುವ ಬಗೆ, ಕಶ್ಟಕರ ಕ್ಯಾಚ್ ಗಳನ್ನು ಹಿಡಿಯುವ ಬಗೆ, ಕೈ ಕಾಲುಗಳನ್ನು ಚುರುಕಾಗಿಸಲು ಪ್ರತ್ಯೇಕ ದೈಹಿಕ ಕಸರತ್ತುಗಳ ಬಗ್ಗೆ ಸುಬ್ರಮಣ್ಯ ಹೆಚ್ಚು ಪ್ರಾಶಸ್ತ್ಯ ನೀಡಿದರು. ಪ್ರತೀ ವರುಶ ರಣಜಿ ಟೂರ‍್ನಿ ಮೊದಲಾಗುವ ಒಂದು ತಿಂಗಳ ಮುನ್ನವೇ ನೆಟ್ಸ್ ಅಬ್ಯಾಸಕ್ಕೆಂದು ಆಟಗಾರರನ್ನು ಒಟ್ಟು ಮಾಡಿ, ಹೊತ್ತು ಪೋಲು ಮಾಡದೆ ತಂಡವನ್ನು ಅಣಿ ಮಾಡುತ್ತಿದ್ದರು. ರಾಜ್ಯ ಕ್ರಿಕೆಟ್ ಸಂಸ್ತೆಗೆ ಆಟಗಾರರ ಊಟದ ಶಿಸ್ತಿನ ಬಗೆ ಮನದಟ್ಟು ಮಾಡಿಸಿ ಪಂದ್ಯದ ದಿನಗಳಲ್ಲಿ ಹೆಚ್ಚು ಊಟ ಸೇವಿಸದಂತೆ, ಎಣ್ಣೆಯಿಂದ ತಯಾರಾದ ಪದಾರ‍್ತಗಳನ್ನು ತಿನ್ನದಂತೆ ಕಟ್ಟಪ್ಪಣೆ ಜಾರಿಗೆ ತಂದರು. ಜೊತೆಗೆ ಆಟಗಾರರಿಗೆ ಕೇವಲ ಒಂದೆರಡು ಪಂದ್ಯಗಳಲ್ಲಿ ಮಾತ್ರ ಅವಕಾಶ ನೀಡಿ ಕಡೆಗಣಿಸುವ ಪರಿಪಾಟವನ್ನು ಕೊನೆಗಾಣಿಸಿ ಅಳವುಳ್ಳ ಆಟಗಾರರಿಗೆ ಹೊಂದಿಕೊಳ್ಳಲು ಹೆಚ್ಚು ಅವಕಾಶ ನೀಡಿ ಅವರ ಬೆನ್ನಿಗೆ ನಿಂತರು.

ಲೀಗ್ ಪಂದ್ಯಾವಳಿಗಳಲ್ಲಿ ಕ್ಲಬ್ ಪೈಪೋಟಿ ಒಂದು ಬಗೆಯಲ್ಲಿ ವೈರತ್ವದ ರೂಪ ಪಡೆದುಕೊಂಡಿದ್ದ ಆ ದಿನಗಳಲ್ಲಿ ಅದನ್ನು ಶಮನ ಮಾಡಿ ನಾವೆಲ್ಲರೂ ರಾಶ್ಟ್ರೀಯ ಮಟ್ಟದಲ್ಲಿ ಮೈಸೂರು ರಾಜ್ಯ ತಂಡವನ್ನು ಪ್ರತಿನಿದಿಸುತ್ತಿರುವ ಕನ್ನಡಿಗರು ಎಂದು ಅರಿವು ಮೂಡಿಸಿ ಎಲ್ಲಾ ಆಟಗಾರರನ್ನು ವಿಶ್ವಾಸಕ್ಕೆ ತಗೆದುಕೊಂಡು ಒಗ್ಗಟ್ಟಿನ ಬಲದ ಮೇಲೆ ಗಂಡಬೇರುಂಡ ಪಡೆಯನ್ನು ಕಟ್ಟಿದರು. ಅವರಲ್ಲಿದ್ದ ತನ್ನಂಬಿಕೆ ತಂಡದ ಪ್ರತೀ ಆಟಗಾರರಿಗೂ ಹರಡಿದ್ದು ಸುಳ್ಳಲ್ಲ. ಒಮ್ಮೆ 1966/67 ರಲ್ಲಿ ಮದ್ರಾಸ್ ನಲ್ಲಿ ಮದ್ರಾಸ್ ಎದುರು ರಾಜ್ಯ ತಂಡ 221/9 ಕ್ಕೆ ಕುಸಿದಾಗ ನಾಯಕ ಸುಬ್ರಮಣ್ಯ ಕಡೇ ವಿಕೆಟ್ ಗೆ ಬೌಲರ್ ಚಂದ್ರಶೇಕರ್ ರೊಟ್ಟಿಗೆ 117 ರನ್ ಗಳ ಜೊತೆಯಾಟವಾಡಿ ಗೆಲುವು ತಂದಿತ್ತರು. ಆ ಜೊತೆಯಾಟದಲ್ಲಿ ಬಹುಪಾಲು 105 ರನ್ ಗಳಿಸಿದ ಸುಬ್ರಮಣ್ಯ ಔಟಾಗದೆ ಬರೋಬ್ಬರಿ 213 ಗಳಿಸಿ ರಾಜ್ಯ ತಂಡದ ಪರ ಚೊಚ್ಚಲ ದ್ವಿಶತಕ ಸಿಡಿಸಿದ ಬ್ಯಾಟ್ಸ್ಮನ್ ಎಂಬ ಹಿರಿಮೆಗೆ ಕೂಡ ಪಾತ್ರರಾದರು.. ಚಂದ್ರರಂತಹ ಹನ್ನೊಂದನೇ ಕ್ರಮಾಂಕದ ಬ್ಯಾಟ್ಸ್ಮನ್ ಒಟ್ಟಿಗೆ ಶತಕದ ಜೊತೆಯಾಟ ಆಡುವುದು ಪವಾಡವೇ! ಸುಬ್ರಮಣ್ಯರೊಟ್ಟಿಗೆ ಇದ್ದರೆ ಎಲ್ಲಾ ಆಟಗಾರರು ತನ್ನಂಬಿಕೆಯಿಂದ ತಮ್ಮ ಆಟದ ಸ್ತರವನ್ನು ಏರಿಸಿಕೊಂಡು ಆಡುತ್ತಿದ್ದರು ಎಂಬುದಕ್ಕೆ ಈ ಕಡೇ ವಿಕೆಟ್ ಜೊತೆಯಾಟವೇ ಸೂಕ್ತ ಎತ್ತುಗೆ. ಒಟ್ಟು 27 ರಣಜಿ ಪಂದ್ಯಗಳಲ್ಲಿ ರಾಜ್ಯ ತಂಡವನ್ನು ಮುನ್ನಡೆಸಿದ ಸುಬ್ರಮಣ್ಯ 17 ರಲ್ಲಿ ಗೆಲುವು ಕಂಡು 6 ರಲ್ಲಿ ಸೋಲುಂಡಿದ್ದಾರೆ. ರಾಜ್ಯ ನಾಯಕನೊಬ್ಬನ ಈ ಅತ್ಯದಿಕ ಗೆಲುವುಗಳ ದಾಕಲೆಯನ್ನು ಇನ್ನೊಬ್ಬ ಶ್ರೇಶ್ಟ ನಾಯಕ ದಾವಣಗೆರೆ ಎಕ್ಸ್ಪ್ರೆಸ್ ವಿನಯ್ ಕುಮಾರ್ 2014/15 ರಲ್ಲಿ ಮುರಿದರು. ಆಟಗಾರರ ಪ್ರೀತಿಯ ಹಿರಿಯಣ್ಣ ‘ಕುಂಜುಮಣಿ’ ತಮ್ಮ ವ್ರುತ್ತಿಬದುಕಿನಲ್ಲಿ ರಣಜಿ ಟೂರ‍್ನಿ ಗೆಲ್ಲಲಾಗದ್ದಿದ್ದರೂ ಪ್ರತಿಬೆಯುಳ್ಳ ಆಟಾಗಾರರನ್ನು ಕಲೆಹಾಕಿ ಗೆಲ್ಲುವಂತಹ ತಂಡವನ್ನು ಕಟ್ಟಿ, 1969/70 ರಲ್ಲಿ 34 ರ ಹರೆಯದಲ್ಲಿ ತಮ್ಮ ಕಡೇ ಪಂದ್ಯ ಆಡಿ ನಿವ್ರುತ್ತಿ ಗೋಶಿಸಿ, ಆಸ್ಟ್ರೇಲಿಯಾಕ್ಕೆ ಹೋಗಿ ನೆಲೆಸಿದರು. ಒಟ್ಟು 101 ಮೊದಲ ದರ‍್ಜೆ ಪಂದ್ಯಗಳನ್ನು ಆಡಿದ ಸುಬ್ರಮಣ್ಯ 8 ಶತಕ ಹಾಗೂ 21 ಅರ‍್ದಶತಕಗಳೊಂದಿಗೆ 32ರ ಸರಾಸರಿಯಲ್ಲಿ 4,219 ರನ್ ಜೊತೆಗೆ 70 ವಿಕೆಟ್ ಗಳು ಹಾಗೂ 120 ಕ್ಯಾಚ್ ಅವರ ಆಲ್ರೌಂಡ್ ಆಟಕ್ಕೆ ಸಾಕ್ಶಿ. ರಣಜಿ ಟೂರ‍್ನಿಯಲ್ಲಿ ರಾಜ್ಯ ತಂಡದ ಪರ 44 ಪಂದ್ಯಗಳನ್ನಾಡಿ 40 ರ ಸರಾಸರಿಯಲ್ಲಿ 6 ಶತಕ ಹಾಗೂ 9 ಅರ‍್ದಶತಕಗಳೊಂದಿಗೆ 2,261 ರನ್ ಗಳಿಸಿ 34 ವಿಕೆಟ್ ಪಡೆದಿದ್ದಾರೆ. ಈ ಅಂಕಿ-ಸಂಕಿಗಳಿಂದಾಚೆ ಸುಬ್ರಮಣ್ಯ ತಂಡದ ಒಂದು ಬಹುದೊಡ್ಡ ಶಕ್ತಿಯಾಗಿದ್ದರು.

ಕೊನೆಗೂ ಕೈಗೂಡಿದ ಕನ್ನಡಿಗರ ರಣಜಿ ಗೆಲುವಿನ ಕನಸು

ಸುಬ್ರಮಣ್ಯ ಕಟ್ಟಿದ ತಂಡದ ಹೊಣೆ ಹೊತ್ತು ಪ್ರಸನ್ನ ಮುನ್ನಡೆಸಿದರು. ಸತತ ಪರಿಶ್ರಮದ ಬಳಿಕ ಕಡೆಗೂ 1973/74 ರಲ್ಲಿ ಬಾಂಬೆಯನ್ನು ಸೆಮಿಪೈನಲ್ ನಲ್ಲಿ ಮಣಿಸಿ ಆ ಬಳಿಕ ಪೈನಲ್ ನಲ್ಲಿ ರಾಜಸ್ತಾನದ ಎದುರು ನಿರಾಯಾಸವಾಗಿ ಗೆದ್ದು ರಾಜ್ಯ ತಂಡ ತನ್ನ ಚೊಚ್ಚಲ ರಣಜಿ ಟೂರ‍್ನಿ ಮುಡಿಗೇರಿಸಿಕೊಂಡು ಬೀಗಿತು. ಅದೇ ಗುಂಪಿನ ಆಟಗಾರರು ಒಂದು ಬಲಾಡ್ಯ ತಂಡವಾಗಿ ಗೆಲುವಿನ ನಾಗಾಲೋಟನ್ನು 1977/78 ಹಾಗೂ 1982/83 ರಲ್ಲೂ ಮುಂದುವರೆಸಿದರು. ಕನ್ನಡಿಗರ ಪಡೆ ಇಂದಿಗೆ ಮುಂಬೈ ಬಳಿಕ ಅತ್ಯದಿಕ (8) ರಣಜಿ ಟೂರ‍್ನಿ ಗೆದ್ದಿರುವ ಕೀರ‍್ತಿ ತನ್ನದಾಗಿಸಿಕೊಂಡಿದೆ.

2013 ರಲ್ಲಿ ಅನಿಲ್ ಕುಂಬ್ಳೆ ಅದ್ಯಕ್ಶತೆಯಡಿ ಕರ‍್ನಾಟಕ ರಾಜ್ಯ ಕ್ರಿಕೆಟ್ ಸಂಸ್ತೆ ತನ್ನ ಪ್ಲಾಟಿನಿಯಮ್ ಜುಬಿಲೀ ಆಚರಿಸಿಕೊಂಡಿತು. ಆವೇಳೆ ಸುಬ್ರಮಣ್ಯರನ್ನು ಆಸ್ಟ್ರೇಲಿಯಾದಿಂದ ಕರೆಸಿ ಸನ್ಮಾನ ಮಾಡಲಾಯಿತು. ಸಮಾರಂಬದಲ್ಲಿ ಅವರೊಟ್ಟಿಗೆ ರಾಜ್ಯದ ಎಲ್ಲಾ ಕಾಲದ ಆಟಗಾರರು ಮತ್ತು ಗಾವಸ್ಕರ್, ಬೇಡಿ, ತೆಂಡೂಲ್ಕರ್, ಗಂಗೂಲಿ ಹಾಗೂ ರಿಚರ‍್ಡ್ ಹ್ಯಾಡ್ಲೀ ಹಾಜರಿದ್ದರು. ವೇದಿಕೆ ಮೇಲೆ ಮಾತಾಡಿದ ದಿಗ್ಗಜ ಪ್ರಸನ್ನ, “ನಮ್ಮ ಮೊದಲ ಗೆಲುವುಗಳಿಗೆ ಸೋಪಾನ ಹಾಕಿದವರು ಸುಬ್ರಮಣ್ಯ” ಎಂದು ಹೇಳಿದರೆ ವಿಶ್ವನಾತ್ ಒಂದು ಹೆಜ್ಜೆ ಮುಂದೆ ಹೋಗಿ, “ನಾವು ಗೆದ್ದದ್ದು ಅವರಿಂದಲೇ” ಎಂದು ಹೊಗಳಿದರು. ಬ್ರಿಜೇಶ್ ಪಟೇಲ್ ಕೂಡ ಮಾತಿಗಿಳಿದು, “ಸುಬ್ರಮಣ್ಯ ಅಶ್ಟು ಬೇಗ ಆಟದಿಂದ ದೂರ ಸರಿಯದೆ ನಾಯಕನಾಗಿ ಮುಂದುವರೆದ್ದಿದ್ದರೆ ನಾವು 1974 ಕ್ಕೂ ಮುನ್ನ ಕಂಡಿತ ರಣಜಿ ಗೆಲ್ಲುತ್ತಿದ್ದೆವು” ಎಂದರು. ಈ ಮಾತುಗಳು ತಮ್ಮ ನಾಯಕನ ಬಗ್ಗೆ ಹಾಗೂ ಅವರ ಆಟದ ಬಗ್ಗೆ ಈ ದಿಗ್ಗಜರಿಗಿದ್ದ ಗೌರವವನ್ನು ಸಾರಿ ಹೇಳುತ್ತದೆ.

85 ರ ಹರೆಯದ ಕನ್ನಡ ನಾಡು ಕಂಡ ಶ್ರೇಶ್ಟ ನಾಯಕ ಸುಬ್ರಮಣ್ಯ ಇಂದು ಸಿಡ್ನಿಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಅವರು ಎಲ್ಲೇ ಇದ್ದರೂ ಕರ‍್ನಾಟಕ ಕ್ರಿಕೆಟ್ ಬಗ್ಗೆ ಪ್ರೀತಿ ಅವರಿಗೆ ಕಿಂಚಿತ್ತೂ ಕಡಿಮೆಯಾಗಿಲ್ಲ. 2014 ಮತ್ತು 2015 ರಲ್ಲಿ ವಿನಯ್ ರ ಬಳಗ ಸತತವಾಗಿ ರಣಜಿ ಟೂರ‍್ನಿ ಗೆದ್ದಾಗ ಅವರು ಹೆಚ್ಚು ಸಂತಸ ಪಟ್ಟಿದ್ದರು. ನಮ್ಮ ರಾಜ್ಯ ಕ್ರಿಕೆಟ್ ಬೆಳವಣಿಗೆಗೆ ಅಡಿಪಾಯ ಹಾಕಿ ಯಾರೂ ನೀಡದಶ್ಟು ಕೊಡುಗೆ ನೀಡಿರುವ ಸುಬ್ರಮಣ್ಯರವರ ಹೆಸರು ನಾಡಿನ ಇತಿಹಾಸದಲ್ಲಿ ಸುವರ‍್ಣಾಕ್ಶರಗಳಲ್ಲಿ ಬರೆದಿಡುವಂತಹದು. ಅವರನ್ನು ನಮ್ಮ ನಾಡಿನ ಮುಂದಿನ ಪೀಳಿಗೆ ಮರೆಯದಂತೆ ಅವರ ಸಾದನೆಯನ್ನು ಪರಿಚಯಿಸೋಣ. ಕನ್ನಡಿಗರಾಗಿ ಇದೇ ನಾವು ಈ ದಿಗ್ಗಜನಿಗೆ ನೀಡಬಹುದಾದ ದೊಡ್ಡ ಗೌರವ.

(ಚಿತ್ರ ಸೆಲೆ: thehindu.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: