ದಿ ಡೆವಿಲ್ಸ್ ಕೆಟಲ್ – ದೆವ್ವದ ಕುಳಿ!?

– .

ಪರ‍್ವತದ ಮೇಲಿಂದ ಒಂದು ನದಿ ಹರಿಯುತ್ತಿರುತ್ತದೆ. ನದಿಯ ಹರಿವಿನ ಮದ್ಯದಲ್ಲಿ ಜ್ವಾಲಾಮುಕಿಯಿಂದ ಸ್ರುಶ್ಟಿಯಾದ ಒಂದು ದೊಡ್ಡ ಶಿಲೆ ಅದರ ಹಾದಿಗೆ ಅಡ್ಡಲಾಗಿ ಬರುವುದರಿಂದ, ನದಿಯ ನೀರು ಎರಡು ಬಾಗವಾಗಿ, ಆ ದೊಡ್ಡ ಶಿಲೆಯನ್ನು ಬಳಸಿಕೊಂಡು ಎರಡೂ ಬದಿಯಲ್ಲಿ ಹರಿಯುತ್ತಾ ಮುಂದೆ ಸಾಗುತ್ತದೆ. ಈ ಎರಡು ಬಾಗಗಳಲ್ಲಿ ಒಂದು ಬಾಗ, ಇಳಿಜಾರು ಇದ್ದಲ್ಲಿ ಹರಿಯುತ್ತಾ ಮುಂದುವರೆಯುತ್ತದೆ; ಮತ್ತೊಂದು ಬಾಗ ಮುಂದಿದ್ದ ದೊಡ್ಡ ಕುಳಿಯಲ್ಲಿ ಬೀಳುತ್ತದೆ. ಹೀಗೆ ಕುಳಿಯಲ್ಲಿ ಬಿದ್ದ ನೀರು ಅಲ್ಲಿಂದ ಕಣ್ಮರೆಯಾಗುತ್ತದೆ. ಎಡೆಬಿಡದೆ ಸುರಿಯುವ ನೀರು, ಆ ಕುಳಿಯಲ್ಲಿ ಬಿದ್ದ ಮೇಲೆ ಹೋಗಿದ್ದಾದರೂ ಏಲ್ಲಿಗೆ? ಎಂದು ತಿಳಿಯಲು ವಿಜ್ನಾನಿಗಳು, ಬೂವಿಜ್ನಾನಿಗಳು ಏನೆಲ್ಲಾ ಪ್ರಯತ್ನ ಪಟ್ಟರೂ, ಅದರ ರಹಸ್ಯವನ್ನು ಬೂತಾಯಿ ಇದುವರೆಗೂ ಬಿಟ್ಟುಕೊಟ್ಟಿಲ್ಲ. ಈ ರಹಸ್ಯ ನದಿಯ ಹೆಸರು ಬ್ರೂಲೆ. ಇದು ಯು.ಎಸ್-ಕೆನಡಾ ಗಡಿಯಲ್ಲಿರುವ ಮಿನ್ನೆಸೋಟಾದಲ್ಲಿನ ನ್ಯಾಯಾದೀಶ ಸಿ.ಆರ್.ಮ್ಯಾಗ್ನೆ ಸ್ಟೇಟ್ ಪಾರ‍್ಕಿನಲ್ಲಿ ಹರಿಯುತ್ತದೆ. ಈ ನದಿಯು 800 ಅಡಿಗಳಶ್ಟು ಇಳಿಜಾರನ್ನು ಕ್ರಮಿಸಲು ಎಂಟು ಮೈಲಿಗಳಶ್ಟು ದೂರ ಹರಿಯುತ್ತದೆ. ಅಲ್ಲಿಂದ ಮುಂದೆ ಇದು ಸುಪೀರಿಯರ್ ಸರೋವರವನ್ನು ಕೂಡುತ್ತದೆ. ಅಶ್ಟರಲ್ಲಿ ಇದು ಅನೇಕ ಮನಮೋಹಕ ನೈಸರ‍್ಗಿಕ ಸುಂದರ ಜಲಪಾತಗಳನ್ನು, ತನ್ನ ಮಾರ‍್ಗದ ಮದ್ಯದಲ್ಲಿ ಸ್ರುಶ್ಟಿಸುತ್ತದೆ. ತನ್ನ ಹರಿವಿನ ಕೊನೆಯಲ್ಲಿ, ಜಲಪಾತವಾಗಿ ಕೆಳಗೆ ದುಮುಕುವ ಒಂದೂವರೆ ಮೈಲಿಗಳಶ್ಟು ಮುನ್ನವೇ, ಇದಕ್ಕೆ ಬಾರಿ ಗಾತ್ರದ ಜ್ವಾಲಾಮುಕಿಯಿಂದ ಸ್ರುಶ್ಟಿಯಾದ ಬಂಡೆಯೊಂದು ಅಡ್ಡ ಬರುವ ಕಾರಣ, ಇದು ಎರಡು ಕವಲಾಗಿ ವಿಬಜನೆಗೊಳ್ಳುತ್ತದೆ.

‘ಡೆವಿಲ್ಸ್ ಕೆಟಲ್'(ದೆವ್ವದ ಕುಳಿ)

ಕವಲಾದ ಪೂರ‍್ವ ಬಾಗದ ನದಿಯು 50 ಅಡಿಯಶ್ಟು ಜಲಪಾತದ ಸ್ರುಶ್ಟಿಗೆ ಕಾರಣವಾಗಿ, ತಳದಲ್ಲಿನ ಸುಪೀರಿಯರ್ ಸರೋವರವನ್ನು ಸೇರುತ್ತದೆ. ಇದು ಪೂರ‍್ವ ಬಾಗದ ನದಿಯಾದರೆ, ಪಶ್ಚಿಮ ಬಾಗದಲ್ಲಿ ಹರಿಯುವ ನದಿಯು ಹತ್ತು ಅಡಿಗಳಶ್ಟು ಎತ್ತರದಿಂದ ‘ಡೆವಿಲ್ಸ್ ಕೆಟಲ್’ ಎಂದು ಕರೆಯಲ್ಪಡುವ ದೊಡ್ಡ ಕುಳಿಯಲ್ಲಿ ಬೀಳುತ್ತದೆ. ಅಲ್ಲಿಂದ ಮುಂದೆ ಅದು ಎಲ್ಲಿಗೆ ಹೋಗುವುದೆಂಬುದು ಇನ್ನೂ ರಹಸ್ಯವಾಗಿಯೇ ಉಳಿದಿದೆ. ಎಲ್ಲೆಲ್ಲಿ ಜಲಪಾತಗಳು ತಳ ಸೇರುತ್ತವೆಯೋ ಅಲ್ಲೆಲ್ಲಾ ಸಾಮಾನ್ಯವಾಗಿ, ಸಣ್ಣ ಮತ್ತು ದೊಡ್ಡದಾದ ಕುಳಿಗಳು ರೂಪುಗೊಳ್ಳುತ್ತವೆ. ಜಲಪಾತದ ನೀರಿನ ಸಂಗಡ ಅದು ಹೊತ್ತು ಬರುವ ಸಣ್ಣ ಪುಟ್ಟ ಕಲ್ಲುಗಳು, ಮರಳು ಒಂದೇ ಸಮನೆ ಅದೇ ಜಾಗದಲ್ಲಿ ನಿರಂತರವಾಗಿ ಸಶಕ್ತವಾಗಿ ಬೀಳುವುದರಿಂದ ಈ ಕುಳಿಗಳು ರೂಪುಗೊಳ್ಳತ್ತವೆ ಮತ್ತು ಆ ರಬಸದ ಹೊಡೆತಕ್ಕೆ ಕುಳಿಗಳು ಬೆಳೆಯುತ್ತಾ ಹೋಗುತ್ತವೆ. ಇಂತಹ ಕುಳಿಗಳಲ್ಲಿ ಬಿದ್ದ ನೀರು ಸಾಮಾನ್ಯವಾಗಿ, ಎಲ್ಲಿಂದಾದರೂ ಹೊರ ಹೋಗಲೇಬೇಕು. ಆದರೆ, ಈ ಡೆವಿಲ್ಸ್ ಕೆಟಲ್‍ನಲ್ಲಿ ಬಿದ್ದ ನೀರು ಅಲ್ಲಿಂದ ಕಣ್ಮರೆಯಾಗುತ್ತದೆ. ಇದೇ ಕಾರಣಕ್ಕೆ ಆ ಕುಳಿಯನ್ನು ‘ಡೆವಿಲ್ಸ್ ಕೆಟಲ್’ (‘ದೆವ್ವದ ಕುಳಿ’) ಎಂದಿರಬೇಕು.

‘ಡೆವಿಲ್ಸ್ ಕೆಟಲ್’ ಸುತ್ತ ನಡೆದ ಸಂಶೋದನೆಗಳು

ದೆವ್ವದ ಕುಳಿಯನ್ನು ಸೇರಿದ ನೀರು ಮತ್ತೆ ಅದೇ ನದಿಯನ್ನು ಸೇರುತ್ತದೆ ಎಂಬುದು ಸಂಶೋದಕರ ಅಂಬೋಣ. ಈ ನಿಟ್ಟಿನಲ್ಲಿ ನಡೆದ ಸಂಶೋದನೆಯೊಂದರಲ್ಲಿ, ಅತ್ಯಂತ ಪ್ರಕರವಾದ ಬಣ್ಣವನ್ನು ‘ಡೆವಿಲ್ಸ್ ಕೆಟಲ್’ನಲ್ಲಿ ಸುರಿಯಲಾಯಿತು. ಆದರೆ ಆ ಬಣ್ಣದ ನೀರು ಎಲ್ಲೂ ಹೊರಬಂದಿದ್ದು ಕಾಣಲೇ ಇಲ್ಲ! ಪ್ರಕರವಾದ ಬಣ್ಣ ಸುರಿಯುವ ಪ್ರಯತ್ನದ ನಂತರದ ಪ್ರಯತ್ನವಾಗಿ ಪಿಂಗ್ ಪಾಂಗ್ ಚೆಂಡುಗಳನ್ನು ಸುರಿದು ಪರೀಕ್ಶಿಸಲಾಯಿತು. ಆದರೆ ಅವುಗಳೂ ಸಹ ಎಲ್ಲೂ ಹೊರ ಬರಲಿಲ್ಲ. ಇದೇ ಕಾರಣಕ್ಕೆ ಈ ಸಿದ್ದಾಂತ ವಿಪಲವಾಯಿತು. ಈ ರಹಸ್ಯವನ್ನು ಬೆನ್ನುಹತ್ತಿದ ಸಂಶೋದಕರು ಮತ್ತು ಬೂವಿಜ್ನಾನಿಗಳು ಹಲವಾರು ವಿವರಣೆಗಳನ್ನು ಮುಂದಿಟ್ಟಿದ್ದಾರೆ. ಅವುಗಳು ಈ ಕೆಳಗಿನಂತಿವೆ;

ಗುಹೆ ಸಿದ್ದಾಂತ ( Cave Theory )

ಈ ಕುಳಿಯಲ್ಲಿ ಬಿದ್ದ ನೀರು, ಅದರಡಿಯಲ್ಲಿನ ಅನೇಕ ಕುಳಿಗಳಲ್ಲಿ ಹಾದು ಬಾರಿ ಗಾತ್ರದ ಬೂಗತ ನದಿಯನ್ನು ಸೇರುತ್ತದೆ ಎಂಬ ಸಾದ್ಯತೆಯನ್ನು ಮುಂದಿಟ್ಟಿದ್ದಾರೆ. ಈ ಸಿದ್ದಾಂತದ ಸಾದ್ಯತೆಯನ್ನು ಪರಿಶೀಲಿಸಿದಾಗ, ಈ ಕುಳಿಯಿರುವಲ್ಲಿ ಗಟ್ಟಿ ಬೂಬಾಗವಿರುವ (ಜ್ವಾಲಾಮುಕಿಯಿಂದ ಉಂಟಾದ ಕಲ್ಲು) ಕಾರಣ ಗುಹೆಗಳ ಸಾಮಾನ್ಯ ರಚನೆ ಅಸಾದ್ಯ. ಇವುಗಳ ರಚನೆ ಏನಿದ್ದರೂ ಸುಣ್ಣದ ಕಲ್ಲು ಮತ್ತು ಮೆದು ಬಂಡೆಗಳಿರುವಲ್ಲಿ ಮಾತ್ರ ಸಾದ್ಯ. ಈ ಪ್ರದೇಶದ ಬೂಗರ‍್ಬವು ಬೂಗತ ನದಿಯ ರಚನೆಗೆ ಬೆಂಬಲಿಸುವುದಿಲ್ಲ ಎಂಬ ಕಾರಣದಿಂದ, ಈ ಸಿದ್ದಾಂತವನ್ನೂ ಅಲ್ಲೆಗಳೆಯಲಾಯಿತು.

ಲಾವಾ ಟ್ಯೂಬ್(ಕೊಳವೆ) ಸಿದ್ದಾಂತ ( Lava Tube )

ಈ ಸಿದ್ದಾಂತದಂತೆ, ಡೆವಿಲ್ಸ್ ಕೆಟಲ್‍ನಲ್ಲಿ ಬಿದ್ದ ನೀರು ಲಾವಾದಿಂದ ರಚಿತವಾದ ಕೊಳವೆಯಲ್ಲಿ ಹಾದು ಹೋಗಿರಬಹುದು ಎನ್ನಲಾಯಿತು. ಈ ಸಿದ್ದಾಂತವನ್ನೂ ಸಹ ಅಲ್ಲಗಳೆಯಲಾಯಿತು. ಇದಕ್ಕೆ ಕಾರಣ ಆ ಕುಳಿಯ ಅಡಿಯಲ್ಲಿದ್ದ ಗಟ್ಟಿ ರಿಯೋಲೈಟ್ ಕಲ್ಲು.

ಪಾಲ್ಟ್ ಲೈನ್ ( Fault Line )

ಈ ವಿವರಣೆಯ ಪ್ರಕಾರ ರಿಯೋಲೈಟ್ ಕಲ್ಲುಗಳ ನಡುವೆ ಉಂಟಾದ ಬಿರುಕುಗಳಲ್ಲಿ, ಈ ಕುಳಿಯಲ್ಲಿ ಬಿದ್ದ ನೀರು ಹರಿದು ಹೋಗಿರಬಹುದು ಎಂಬುದು ಎನ್ನಲಾಗಿದೆ. ಈ ಪ್ರದೇಶದಲ್ಲಿ ಎಲ್ಲಿ ಹುಡುಕಾಡಿದರೂ, ಬಿರುಕುಗಳು ಕಂಡುಬಂದಿಲ್ಲದ ಕಾರಣ ಹಾಗೂ ಆ ಬಿರುಕುಗಳು ಇದ್ದಲ್ಲಿ ಅಶ್ಟು ಪ್ರಮಾಣದ ನೀರು ಹರಿದು ಹೋಗುವ ಸಾದ್ಯತೆ ಬಗ್ಗೆ ಸಹ ಅನುಮಾನ ಹುಟ್ಟಿದ ಕಾರಣ ಈ ಸಿದ್ದಾಂತವನ್ನು ಕೈಬಿಡಲಾಯಿತು.

ಕವಲಾಗಿ ವಿಬಜನೆಯಾಗುವ ಮುನ್ನ ಬ್ರೂಲೇ ನದಿಯ ನೀರಿನ ಪ್ರಮಾಣ, ಸುಪೀರಿಯರ್ ಸರೋವರದ ಪ್ರಮಾಣ, ಇವರೆಡೂ ಸೇರಿದ ನಂತರ ನೀರಿನ ಒಟ್ಟಾರೆ ಪ್ರಮಾಣವನ್ನು ಗಣಕಿಸಿದಾಗ, ಹೆಚ್ಚೂ ಕಡಿಮೆ ಒಂದೇ ಎಂಬ ಅಂಶ ಬೆಳಕಿಗೆ ಬಂದಿದೆ. ಹಾಗಾಗಿ ಬ್ರೂಲೇ ನದಿಯು ಕವಲಾಗಿ ವಿಬಜನೆ ಹೊಂದಿದ ನಂತರ, ದೆವ್ವದ ಕುಳಿಯಲ್ಲಿ ಬಿದ್ದ ನೀರು ಸಹ ಸುಪೀರಿಯರ್ ಸರೋವರವನ್ನೇ ಸೇರುತ್ತದೆ ಎನ್ನುತ್ತದೆ ಮತ್ತೊಂದು ಸಿದ್ದಾಂತ. ಹಾಗಾದರೆ ಇದು ಸೇರುವುದಾದರೂ ಎಲ್ಲಿ? ಅದು ಹೇಗೆ ಬಂದು ಸೇರುತ್ತದೆ ಎಂಬುದರ ಬಗ್ಗೆ ವಿವರ ನೀಡುವಲ್ಲಿ ಈ ಸಿದ್ದಾಂತ ಸೋತಿದೆ. ಬ್ರೂಲೆ ನದಿಯು ಕವಲಾಗಿ ವಿಬಜನೆಗೊಂಡು, ಅದರಲ್ಲಿನ ಅರ‍್ದದಶ್ಟು ನೀರು ಡೆವಿಲ್ಸ್ ಕೆಟಲ್‍ನಲ್ಲಿ ಬಿದ್ದದ್ದು, ಹೋದದ್ದಾರು ಏಲ್ಲಿಗೆ? ಎಂಬುದು ಇಂದಿಗೂ ಬೂ ವೈಜ್ನಾನಿಕ ರಹಸ್ಯವಾಗೇ ಉಳಿದುಕೊಂಡಿದೆ.

( ಮಾಹಿತಿ ಮತ್ತು ಚಿತ್ರ  ಸೆಲೆ:  mysteriousfacts.comsmithsonianmag.com , amusingplanet.com , flickr.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: