ಕಟ್ಟಡ ಕಟ್ಟುವಿಕೆಯಲ್ಲಿ ಒಂದು ಪವಾಡ!

– ನಿತಿನ್ ಗೌಡ.

‘ಮನೆ‌ ಕಟ್ಟಿ ನೋಡು, ಮದುವೆ ಮಾಡಿ ನೋಡು’  ಎಂಬ ಗಾದೆ ಕೇಳಿರಬಹುದು. ಒಂದು ಮನೆ ಕಟ್ಟುವ ಇಲ್ಲವೆ  ಸಾಂಪ್ರದಾಯಿಕ ಮದುವೆ ಮಾಡುವುದರ ಹಿಂದೆ ಸಾಕಶ್ಟು ಶ್ರಮವಿರುತ್ತದೆ. ಅದರಲ್ಲೂ ಮನೆ ಕಟ್ಟುವುದಕ್ಕೆ ಸಾಕಶ್ಟು ಸಮಯವೂ ಬೇಕಾಗುತ್ತದೆ. ಒಂದು ಮಹಡಿಯ ಪುಟ್ಟ ಮನೆಯನ್ನು ಸಾಂಪ್ರದಾಯಿಕ ವಿದಾನಗಳಿಂದ ಕಟ್ಟಲು ನಮ್ಮಲ್ಲಿ ಅಂದಾಜು  3 ರಿಂದ 4 ತಿಂಗಳಾದರೂ ತೆಗೆದುಕೊಳ್ಳುತ್ತಾರೆ.  ಜಗತ್ತಿನಲ್ಲೇ ಅತಿ ಎತ್ತರದ ಕಟ್ಟಡವಾದ, ದುಬೈನಲ್ಲಿರುವ 163 ಮಹಡಿಯ ಬುರ‍್ಜ್ ಕಲೀಪಾವನ್ನು ಕಟ್ಟಲು ಬರೋಬ್ಬರಿ 5 ವರುಶ ತಗುಲಿದೆ. ಹಾಗೆಯೇ ಜಗತ್ತಿನ  ಎರಡನೇ ಅತಿ ಎತ್ತರದ ಕಟ್ಟಡವಾದ ಚೀನಾದ 127 ಮಹಡಿಗಳುಳ್ಳ  ಶಾಂಗೈ ಟವರ‍್ ಅನ್ನು ಕಟ್ಟಲು 7 ವರುಶ  ತೆಗೆದುಕೊಳ್ಳಲಾಯಿತು.  ಆದರೆ ಇತ್ತೀಚಿಗೆ ಚೀನಾದಲ್ಲೊಂದು ಅಚ್ಚರಿ ನಡೆದಿದೆ. 10 ಅಂತಸ್ತಿನ ಕಟ್ಟಡವನ್ನು ಕೇವಲ 28 ಗಂಟೆ 45 ನಿಮಿಶಗಳಲ್ಲಿ ಚೀನಾದ ಚಾಂಗ್ಸಾ ನಗರದಲ್ಲಿ ಕಟ್ಟಿದ್ದಾರೆ. ಬ್ರಾಡ್ ಗ್ರೂಪ್ ಎಂಬ  ಕಟ್ಟಡ ಕಟ್ಟುವ ಒಂದು ಸಂಸ್ತೆ ಈ ಮೈಲಿಗಲ್ಲನ್ನು ಸಾದಿಸಿದೆ ಮತ್ತು ಅದರ ಬಗೆಗಿನ ಒಂದು ಚಿಕ್ಕ ನೋಡಿಯೋ ಈ ಕೆಳಗಿನ ತುಣುಕಿನಲ್ಲಿದೆ.

ಮೊದಲೇ ಕಟ್ಟಿಕೊಂಡಂತಹ( Pre fabricated)  ಕಟ್ಟಡ ಕಟ್ಟುವ ಏರ‍್ಪಾಡು ಬಳಸಿ ಈ ಸಾದನೆ ಮಾಡಲಾಗಿದೆ. ಕೊಟಡಿ ಮತ್ತು ಕಟ್ಟಡಗಳ ಮಾಡ್ಯೂಲ್‍‍ಗಳನ್ನು ಒಂದು ಕಾರ‍್ಕಾನೆಯಲ್ಲಿ ತಯಾರಿಸಿ, ಒಂದೊಂದರಂತೆ ಇವುಗಳನ್ನು ಟ್ರಕ್ ಮೂಲಕ ಕಟ್ಟಡ ಕಟ್ಟುವೆಡೆಗೆ ಸಾಗಿಸಲಾಗುತ್ತದೆ. ಪ್ರತಿ ಒಂದು ಕಟ್ಟಡದ  ಮಾಡ್ಯೂಲ್ ಸುತ್ತಳತೆ( ಮಡಚಿಟ್ಟಾಗ ), ಮಾಡ್ಯೂಲ್ ಸಾಗಿಸುವ ಕಂಟೈನರ‍್‍‍ನ ಸುತ್ತಳತೆಗೆ ಹೊಂದಿಕೊಳ್ಳುವಂತೆ ಇದ್ದುದ್ದರಿಂದ, ಮಾಡ್ಯೂಲ್‍‍ಗಳನ್ನು ಸುಲಬವಾಗಿ ಸಾಗಿಸಬಹುದಾಗಿದೆ. ಮಾಡ್ಯೂಲ್‍‍ಗಳನ್ನು ಸೈಟ್‍ ಕಡೆಗೆ ಸಾಗಿಸಿದ ನಂತರ, ಅವುಗಳನ್ನು ಒಂದಕ್ಕೊಂದು ಬೆಸೆದು ಜೋಡಿಸಲಾಗುತ್ತದೆ. ಆಮೇಲೆ ನೀರಿನ ಮತ್ತು ಮಿಂಚಿನ(Electricity) ವ್ಯವಸ್ತೆ ಕೂಡ ಕಲ್ಪಿಸಲಾಗಿ, ಒಂದು ಸುಸಜ್ಜಿತ  ಕಟ್ಟಡ  ಕಟ್ಟಲಾಗುತ್ತದೆ. ಈ ಕೆಲಸ ಮಾಡಲು 3 ಕ್ರೇನ್ ಬಳಸಲಾಗಿದೆ. ಈ ಕಟ್ಟಡವು ಬೂಕಂಪವನ್ನು ತಡೆದುಕೊಳ್ಳುವ ಕಸುವು ಹೊಂದಿದ್ದು, ಬೇಕಾದ್ದಲ್ಲಿ; ಮಾಡ್ಯೂಲ್ ಜೋಡಣೆ ಕಳಚಿ ಮತ್ತೆ ಇನ್ನೊಂದೆಡೆ  ಮರುಜೋಡಿಸಿಕೊಳ್ಳಬಹುದಾಗಿದೆ . ತನ್ನ ಈ ಏರ‍್ಪಾಡಿನ ಮೂಲಕ , 200 ಮಹಡಿ ಎತ್ತರದ ಕಟ್ಟಡಗಳನ್ನು ಕಟ್ಟಬಹುದು ಎಂದು ಬ್ರಾಡ್ ಗ್ರೂಪ್ ಕಂಪನಿಯು ಹೇಳಿಕೊಂಡಿದೆ. 

ಈ  ಹಿಂದೆಯೂ ಕಡಿಮೆ ಸಮಯದಲ್ಲಿ ದೊಡ್ಡ ದೊಡ್ಡ ಕಟ್ಟಡ ಕಟ್ಟುವ ಹಲವಾರು ಮೊಗಸುಗಳು  ಜಗತ್ತಿನಲ್ಲಿ ನಡೆದಿವೆ. ಈ ನಿಟ್ಟಿನಲ್ಲಿ ಚೀನಾದ ‘ಬ್ರಾಡ್ ಸಸ್ಟೈನಬಲ್ ಬಿಲ್ಡಿಂಗ್’  ಸಂಸ್ತೆಯು 2011ರಲ್ಲಿ 30 ಮಹಡಿಯ T30 ಎಂಬ ಹೋಟೆಲ್ ಅನ್ನು ಕೇವಲ 15 ದಿನಗಳಲ್ಲಿ, ದಿನಕ್ಕೆ ಎರಡು ಮಹಡಿಗಳಂತೆ  ಕಟ್ಟಿತ್ತು. 2015ರಲ್ಲಿ ಇದೇ ಕಂಪನಿಯು 57 ಮಹಡಿಗಳುಳ್ಳ ಮಿನಿ ಸ್ಕೈ ಸಿಟಿ (Mini Sky City) ಅನ್ನು ಕೇವಲ 19 ದಿನಗಳಲ್ಲಿ ಕಟ್ಟಿತ್ತು. ಬಾರತದ ಮಟ್ಟಿಗೆ 2012ರಲ್ಲಿ, 200 ಜನ ಕೆಲಸಗಾರರು ಸೇರಿ ಮೊಹಾಲಿಯಲ್ಲಿ, ಕೇವಲ 48 ಗಂಟೆಗಳಲ್ಲಿ 10 ಮಹಡಿಯ  ಇನ್ಸ್ಟಕಾನ್(INSTACON) ಎಂಬ ಕಟ್ಟಡ ಕಟ್ಟಿದ್ದರು. ಅಂದಿಗೆ ಇದು ಬಾರತದಲ್ಲಿ ಅತಿ ಬೇಗನೆ ಕಟ್ಟಿ ಮುಗಿಸಿದ ಕಟ್ಟಡವೆಂಬ ಹೆಗ್ಗಳಿಕೆ ಪಡೆದಿತ್ತು. ಡಿಸೆಂಬರ‍್ 2002ರಲ್ಲಿ ಅಲಬಾಮದ  ಶೆಲ್ಬಿ ಕೌಂಟಿ ಎಂಬಲ್ಲಿ ಕೇವಲ  3 ಗಂಟೆ 26 ನಿಮಿಶ 34 ಸೆಕೆಂಡುಗಳಲ್ಲಿ ಒಂದು ಮನೆಯನ್ನು ಕಟ್ಟಲಾಯಿತು ಮತ್ತು ಇದು ಅಂದಿಗೆ ಅತಿ ಬೇಗನೆ ಕಟ್ಟಿದ್ದ ಮನೆಯಾಗಿತ್ತು. ಇತ್ತೀಚಿಗೆ ಮೊದಲೇ ಕಟ್ಟಿಕೊಂಡಂತಹ( Pre fabricated)  ಕಟ್ಟಡ ಕಟ್ಟುವ ಏರ‍್ಪಾಡು ಬಳಸಿ, ಬೆಂಗಳೂರಿನಲ್ಲೂ ಹಲವಾರು ಕಟ್ಟಡಗಳನ್ನು ಕಟ್ಟಲಾಗುತ್ತಿದೆ. ಈಗ 3ಡಿ ಪ್ರಿಂಟಿಂಗ್(3D printing) ಚಳಕ ಬಳಸಿ ಅತಿ ಬೇಗನೆ ಮನೆಗಳನ್ನು ಕಟ್ಟಲಾಗುತ್ತಿದೆ ಮತ್ತು ಹಲವಾರು  ಸ್ಟಾರ‍್ಟ್ ಅಪ್‍‍‍ಗಳು ಈ  ನಿಟ್ಟಿನಲ್ಲಿ ಹುಟ್ಟಿಕೊಂಡಿವೆ.

ಹೀಗೆ  ಮನುಶ್ಯ ಎಡೆಬಿಡದ ಪ್ರಯತ್ನಗಳಿಂದ, ತನ್ನ ಸಾದನೆಯ ಮತ್ತು ಸಾದ್ಯತೆಗಳ ಎಲ್ಲೆಯನ್ನು ಮೀರಿ ಸಾಗುತ್ತಾ ಹೊಸ ಅಳತೆಗೋಲನ್ನು ಹುಟ್ಟುಹಾಕುತ್ತಿದ್ದಾನೆ. ಇಂತಹ, ಹುಬ್ಬೇರಿಸುವಂತಹ ಒಂದು ಮೊಗಸು 3 ದಶಕಕ್ಕಿಂತ ಹಿಂದೆಯೇ ಕನ್ನಡಿಗರಿಂದಲೂ ನಡೆದಿತ್ತು.  ಹೌದು! ಕರುನಾಡ ಮರೆಯಲಾಗದ ಮಾಣಿಕ್ಯ ಶಂಕರ್ ನಾಗ್ ಈ ಸಾಹಸಕ್ಕೆ ಕೈ ಹಾಕಿದ್ದರು. ಕೇವಲ 8 ದಿನಗಳಲ್ಲಿ ಒಂದು ಮನೆಯನ್ನು ಕಡಿಮೆ ದರದಲ್ಲಿ ಕಟ್ಟುವ ಯೋಜನೆಯನ್ನು ಶಂಕರಣ್ಣ ಹೊಂದಿದ್ದರು ಮತ್ತು ಅಂದಿನ ಸರಕಾರದ ಬಳಿ ತಮ್ಮ ಈ  ಹಮ್ಮುಗೆಯನ್ನು ಚರ‍್ಚಿಸಿದ್ದರು. ಅವರು ಬೇಗನೆ ಅಗಲದೆ, ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಈ ಸಾದನೆ ಎಂದೋ ನಡೆದು, ಇತಿಹಾಸದ ಪುಟಗಳನ್ನು ಸೇರುತಿತ್ತೇನೋ!

(ಚಿತ್ರ ಮತ್ತು ಮಾಹಿತಿ ಸೆಲೆ:  pixabay.com , livemint.com , hindustantimes.com , medium.com , timesofindia.indiatimes.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: