ಸಮಸ್ಯೆಗಳಿಗೆ ಎದೆಗುಂದದಿರಿ

–  ಪ್ರಕಾಶ್ ಮಲೆಬೆಟ್ಟು.

ಕೆಲ ವಾರಗಳ ಹಿಂದೆ ಮನಕಲಕುವ ಗಟನೆಯೊಂದು ಮಂಗಳೂರಿನಲ್ಲಿ ನಡೆಯಿತು. ದಂಪತಿಗಳಿಬ್ಬರು ಕೊರೊನಾ ಬಯದಿಂದ ಆತ್ಮಹತ್ಯೆ ಮಾಡಿಕೊಂಡರು. ಎಂತಹ ಆತುರದ ತೀರ‍್ಮಾನ!.ಬಾಳ ಪಯಣದ ದಾರಿ ಯಾವಾಗಲೂ ಹೂವಿನ ದಾರಿಯೇ ಆಗಿರುವುದಿಲ್ಲ. ಅದು ಕಲ್ಲು ಮುಳ್ಳುಗಳಿಂದ ಕೂಡಿದ ಕಟಿಣವಾದ ಹಾದಿಯಾಗಿರಲೂಬಹುದು, ಹೆಜ್ಜೆ ಹೆಜ್ಜೆಗೂ ಸವಾಲುಗಳನ್ನು ಹೊಂದಿರಬಹುದು. ಈ ಸವಾಲುಗಳೇ ಬದುಕನ್ನು ಆಸಕ್ತಿದಾಯಕವಾಗಿಸಿ, ಬದುಕೊಂದು ವಿಸ್ಮಯ ಎಂಬುದನ್ನು ತೋರಿಸಿಕೊಡುತ್ತದೆ. ಆದ ಕಾರಣ ನಾವು ಬದುಕನ್ನು ಸಾದ್ಯವಾದಶ್ಟು ಸುಂದರಗೊಳಿಸಲು  ಪ್ರಯತ್ನ ಪಡಬೇಕು.

ಸಮಸ್ಯೆಗಳ ಪರಿಹಾರಕ್ಕೆ ಹಲವಾರು ದಾರಿಗಳಿರುತ್ತವೆ ಎನ್ನುವ ಸಣ್ಣ ಆಲೋಚನೆಯನ್ನು ಕೂಡ ಮಾಡದಿರುವುದೇ, ನಾವು ಮಾಡುವ ಹಲವಾರು ತಪ್ಪುಗಳಿಗೆ ಕಾರಣವಾಗಿದೆ. ಕೇವಲ ನಮಗೆ ತಿಳಿಯುವ ದಾರಿಯೊಂದೇ ಸರಿ ಅಂದುಕೊಂಡು ಆತುರದ ತೀರ‍್ಮಾನ ತೆಗೆದುಕೊಂಡಲ್ಲಿ,ನಮ್ಮ ಸಮಸ್ಯೆ ಬಗೆಹರಿಯುವುದಿಲ್ಲ. ಇಂತಹ ಸಣ್ಣ ತಿಳುವಳಿಕೆ ನಮ್ಮಲ್ಲಿ ಇರದಿದ್ದರೆ, ನಾವು ಕಶ್ಟದ ಹೊತ್ತಿನಲ್ಲಿ, ಸಮಸ್ಯೆ ಎದುರಿಸಲು ಬೇರೆ ಬೇರೆ ಬಗೆಯ ದಾರಿ ಕೂಡ ಇರಬಹುದೇನೋ ಎಂಬ ಆಲೋಚನೆಯನ್ನೇ ಮಾಡುವುದಿಲ್ಲ. ಆತ್ಮಹತ್ಯೆ ಮಾಡಿಕೊಂಡ ಮಂಗಳೂರಿನ ದಂಪತಿಗಳ ಆ ದುಡುಕಿನ ನಿರ‍್ದಾರಕ್ಕೆ ನಿಜವಾದ ಕಾರಣವನ್ನು ಅವರೇ ಬಲ್ಲರು. ಆದರೆ ಅವರು ಬರೆದಿಟ್ಟ ಪತ್ರದ ಪ್ರಕಾರ ಅವರಿಗೆ ಕೊರೊನಾದ ಲಕ್ಶಣ ಕಾಣಿಸಿಕೊಂಡಿತ್ತು. ಈ ಕೊರೊನಾ ನಮ್ಮನ್ನು ಸಾಯಿಸುವ ಮೊದಲು ನಾವೇ ಸತ್ತು ಹೋಗೋಣವೆಂದು, ಅವರು ತಮ್ಮ ಬದುಕನ್ನು ಕೊನೆಗೊಳಿಸಿದರು. ಇದಲ್ಲದೇ ಮಕ್ಕಳಿಲ್ಲ ಎನ್ನುವ ಚಿಂತೆ ಕೂಡ ಅವರನ್ನು ಕಾಡುತಿತ್ತು ಎನ್ನಲಾಗಿದೆ. ವಿಪರ‍್ಯಾಸ ಏನೆಂದರೆ, ಮರಣೋತ್ತರ ಪರೀಕ್ಶೆಯಲ್ಲಿ ಅವರಿಬ್ಬರಿಗೂ ಕೊರೊನಾ ನೆಗೆಟಿವ್ ಅಂತ ತಿಳಿದುಬಂತು. ದುಡುಕಿಬಿಟ್ಟರು. ಅವರಿಗೆ ಮಕ್ಕಳಿರಲಿಲ್ಲ ನಿಜ. ಆದರೆ ಪೋಶಕರಿಲ್ಲದ ಎಶ್ಟೊಂದು ಮಕ್ಕಳಿಲ್ಲ? ಯಾವುದಾದರೂ ಅನಾತ ಮಗುವಿಗೆ, ಅಪ್ಪ ಅಮ್ಮನ ಪ್ರೀತಿ ಕೊಟ್ಟು ತಮ್ಮ ಜೀವನವನ್ನು ಸಾರ‍್ತಕಗೊಳಿಸಿಕೊಳ್ಳಬಹುದಿತ್ತು. ತಮಗೆ ಕೊರೊನಾ ಬಂದಿದೆ ಎನ್ನುವ ಸಂಶಯ ಬಂದಾಗ ಅವರು ಪರೀಕ್ಶೆಗೆ ಒಳಪಡಿಸಿಕೊಳ್ಳಬಹುದಿತ್ತು. ಕೊರೊನಾ ಮಾರಣಾಂತಿಕ ರೋಗ ನಿಜ. ಆದರೆ ಎಲ್ಲರಿಗೂ ಹಾಗಾಗುವುದಿಲ್ಲ ಅಲ್ವಾ? ಹೀಗೆ ಬದುಕನ್ನು ಕೊನೆಗಾಣಿಸಬಾರದಿತ್ತು. ಈ ಗಟನೆ ಎಲ್ಲರಿಗೂ ಒಂದು ಪಾಟವಾಗಬೇಕು. ಬದುಕನ್ನು ನೋಡುವ ದ್ರಶ್ಟಿಕೋನ ಬದಲಾಗಬೇಕು. ಸಮಸ್ಯೆಗಳಿಗೆ ಪರಿಹಾರ ಹುಡುಕುವ ಹಲವಾರು ಸಾದ್ಯತೆಗಳ ಪರಿಶೀಲನೆ ನಡೆಯಬೇಕು. ಪ್ರತಿದಿನ ಕೊರೊನಾದಿಂದಾಗುವ ಸಾವಿನ ಸಂಕಶ್ಟದ ವಾರ‍್ತೆಗಳನ್ನು ಪ್ರಸಾರ ಮಾಡುವ ಮಾದ್ಯಮಗಳು, ಕೊರೊನಾದ ಬಗ್ಗೆ ಜಾಗ್ರುತಿ ಮೂಡಿಸುವ ಕಾರ‍್ಯಕ್ರಮಗಳನ್ನು ಪ್ರಸಾರ ಮಾಡುವ ದಿಕ್ಕಿನಲ್ಲಿ ಯೋಚನೆ ಮಾಡಬೇಕು. ಜನರಲ್ಲಿ ಬಯ ಹುಟ್ಟಿಸುವುದಕ್ಕಿಂತ ಹೆಚ್ಚು ದೈರ‍್ಯ ತುಂಬುವ ಕೆಲಸ ಮಾದ್ಯಮಗಳಿಂದ ನಡೆಯಬೇಕು. 

ಜನಗಳು ಅಶ್ಟೆ, ಬದುಕಿನಲ್ಲಿ ಬರುವ ಪ್ರತಿಯೊಂದು ಸಂಕಶ್ಟಗಳನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು. ಬದುಕಿನಲ್ಲಿ ಕಟಿಣವಾದ ಪರಿಸ್ತಿತಿ ಎದುರಾದಾಗ, ನಾವು ನಮಗೆ ತಕ್ಶಣಕ್ಕೆ ಕಾಣುವ ಕೆಲವು ಅವಕಾಶಗಳಶ್ಟರಲ್ಲೇ ಪರಿಸ್ತಿತಿಗೆ ಪರಿಹಾರ ಹುಡುಕಬಾರದು. ಅವಕಾಶಗಳನ್ನು ನಾವು ಸ್ರುಶ್ಟಿಸಿಕೊಳ್ಳುವ ಮೂಲಕ ಪರಿಹಾರ ದೊರಕಿಸಿಕೊಳ್ಳಬೇಕು. ಈ ಗಟನೆ ನೆನೆದಾಗ, ಜೀವನದಲ್ಲಿ ಇಂತಹುದೇ ಕಶ್ಟದ ಸಂದರ‍್ಬ ಎದುರಾದಾಗ ಈ ಕತೆಯಲ್ಲಿ ಹುಡುಗಿಯೊಬ್ಬಳು ತೋರಿದ  ಸಮಯ ಪ್ರಜ್ನೆ ನಮಗೆ ಒಂದು ದಾರಿದೀಪವಾಗಿ ಕಾಣುತ್ತದೆ.

ಕಟಿಣವಾದ ಪರಿಸ್ತಿತಿಯಲ್ಲಿ ಎದೆಗುಂದದೆ, ನಮಗೆ ಎದುರಾಗುವ ಸನ್ನಿವೇಶವನ್ನು ಸವಾಲು ಎಂದು ಪರಿಗಣಿಸಿ, ಅದನ್ನು ಪರಿಹರಿಸುವತ್ತ ಗಮನಹರಿಸಬೇಕು. ಬದುಕು ನಮ್ಮ ಜಾಣ್ಮೆಗೆ , ನಮ್ಮ ಆತ್ಮವಿಶ್ವಾಸಕ್ಕೆ , ನಮ್ಮ ನಂಬಿಕೆಗಳಿಗೆ  ಸವಾಲನ್ನು ಒಡ್ಡುತ್ತಲೇ ಇರುತ್ತದೆ. ಆದರೆ ಆ ಸವಾಲುಗಳಿಗೆ ಪರಿಹಾರ ಇದ್ದೇ ಇದೆ. ಎಲ್ಲವೂ ಸುಲಬದಲ್ಲಿ ದಕ್ಕಿ ಬಿಟ್ರೆ ಬದುಕಿನಲ್ಲಿ ಏನು ಮಜಾ ಇರುತಿತ್ತು ಅಲ್ವೇ. ನಾವು ಹೀಗೇ ಬದುಕಬೇಕು, ನನ್ನ ಪ್ರಪಂಚ ಇಶ್ಟೇ, ನಾನೇನು ಮಾಡಕಾಗಲ್ಲ ಅನ್ನುವ ಆಲೋಚನೆಗಳೇ ತಪ್ಪು. ಪ್ರಪಂಚ ವಿಶಾಲವಾಗಿದೆ ಹಾಗು ಅವಕಾಶಗಳಿಗೆ ಕೊರತೆ ಇಲ್ಲ. ಅದನ್ನು ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಮುನ್ನಡೆಯುವುದು ನಮ್ಮ ಕೈಯಲ್ಲೇ ಇದೆ.

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: