ಕೊಲ್ಲಿ ಹಿಲ್ಸ್ ಎಂಬ ಅತ್ಯಂತ ಅಪಾಯಕಾರಿ ಪರ‍್ವತ ರಸ್ತೆ

– .


ದಕ್ಶಿಣ ಬಾರತದ, ಮದ್ಯ ತಮಿಳುನಾಡಿನ, ಪೂರ‍್ವ ಕರಾವಳಿಯಲ್ಲಿರುವ ನಾಮಕ್ಕಲ್ ಜಿಲ್ಲೆಯಲ್ಲಿ ಕೊಲ್ಲಿ ಮಲೈ ಎಂಬ ಸಣ್ಣ ಪರ‍್ವತವೊಂದಿದೆ. ಇದರ ಮೇಲೆ ತಲುಪಲು ನಿರ‍್ಮಿಸಿರುವ 46.7 ಕಿಮೀ ಉದ್ದದ ರಸ್ತೆಯನ್ನು ಅತ್ಯಂತ ಅಪಾಯಕಾರಿ ರಸ್ತೆ ಎಂದು ಪರಿಗಣಿಸಲಾಗಿದೆ. ರಸ್ತೆ ಎಂ.ಡಿ-181 ಎಂದು ಗುರುತಿಸಲಾಗಿರುವ ಈ ರಸ್ತೆಯಲ್ಲಿ 70 ನಿರಂತರ ಹೇರ್ ಪಿನ್ ತಿರುವುಗಳಿವೆ.

ದೇವತೆ ಕಾಯುತ್ತಾಳೆಂಬ ನಂಬಿಕೆ

ನಿರಂತರವಾಗಿ ಅತಿ ಹೆಚ್ಚು ಹೇರ್ ಪಿನ್ ತಿರುವುಗಳಿರುವ ಈ ರಸ್ತೆಯಲ್ಲಿ ಅಪಗಾತಗಳು ಸಂಬವಿಸದಂತೆ ಪರ‍್ವತದ ಮೇಲಿರುವ ಎಟ್ಟುಕೈ ಅಮ್ಮನ್ ಅತವಾ ಕೊಲ್ಲಿಪಾವೈ ಎಂದೂ ಸಹ ಕರೆಯಲಾಗುವ ದೇವತೆ ರಕ್ಶಣೆ ಮಾಡುತ್ತಾಳೆ ಎಂದು ನಂಬಲಾಗಿದೆ. ಈ ದೇವತೆಯ ಹೆಸರಿನಿಂದಲೇ ಇದನ್ನು ಕೊಲ್ಲಿ ಮಲೈ ಎಂದು ಹೆಸರಿಸಲಾಗಿದೆ. ಇದನ್ನು ಮೌಂಟೆನ್ ಆಪ್ ಡೆತ್ ಎಂದೂ ಕರೆಯಲಾಗುತ್ತದೆ.

ಹೇಗಿದೆ ಈ ರಸ್ತೆ?

ಕಾಳಪ್ಪನಾಯಕನಟ್ಟಿಯಿಂದ ಪ್ರಾರಂಬವಾಗುವ ಈ ರಸ್ತೆ, ನಿರಂತರವಾಗಿ 70 ಹೇರ್ ಪಿನ್ ತಿರುವುಗಳನ್ನು ಕ್ರಮಿಸಿ, ಕೊಲ್ಲಿ ಮಲೈ ಅತವಾ ಸಾವಿನ ಪರ‍್ವತದ ತುದಿ ತಲುಪುತ್ತದೆ. ಎಡಬಿಡದೆ ಇರುವ ಇಶ್ಟು ಹೇರ್ ಪಿನ್ ತಿರುವುಗಳಲ್ಲಿ ಪ್ರಯಾಣಿಸುವುದೇ ಒಂದು ರೋಚಕ ಆಹ್ಲಾದಕರ ಅನುಬವ. ಮೊದಲ 25 ಹೇರ್ ಪಿನ್ ತಿರುವುಗಳವರೆಗೂ ರಸ್ತೆ ಉತ್ತಮವಾಗಿದೆ. ನಂತರದ ರಸ್ತೆ ಕೆಟ್ಟದಾಗಿದ್ದು, ರಸ್ತೆಯುದ್ದಕ್ಕೂ ಗುಂಡಿಗಳು ಹಾಗೂ ತೇಪೆ ಹಾಕಿದ ಗುಂಡಿಗಳು ಎದುರುಗೊಳ್ಳುತ್ತವೆ. ಕೆಲವು ಹೇರ್ ಪಿನ್ ತಿರುವುಗಳು ತುಂಬಾ ಕಿರಿದಾಗಿದ್ದು, ಎದುರು ಬದರು ವಾಹನಗಳು ಬಂದರೆ ತಿರುಗಿಸಲು ಬಹಳ ಪಜೀತಿ ಅನುಬವಿಸಬೇಕಾಗುತ್ತದೆ.

ಕಣ್ಣಿಗೆ ಹಬ್ಬ

ವಾಹನದಲ್ಲಿ ಹೋಗುವಾಗ ಕೆಳಗಿನ ಪ್ರದೇಶದ ನೋಟವು ರಮ್ಯರಮಣೀಯವಾಗಿ, ಸುಂದರವಾಗಿ ಕಾಣುತ್ತದೆ. ಉಶ್ಣವಲಯದ ದಟ್ಟ ಹಸಿರು ತುಂಬಿದ ಕಾಡು, ಪ್ರತಿ ಹೇರ್ ಪಿನ್ ತಿರುವುಗಳಲ್ಲೂ ಕಾಣಬರುತ್ತದೆ. ಈ ರಸ್ತೆಯಲ್ಲಿ ಪ್ರಯಾಣಿಸುವ ಎಲ್ಲರನ್ನೂ ಪ್ರಕ್ರುತಿ ಸೌಂದರ‍್ಯ ಬಲವಾಗಿ ಆಕರ‍್ಶಿಸುತ್ತದೆ. ಬಾರತ ಉಪ ಕಂಡದಲ್ಲಿನ ಪಶ್ಚಿಮ ಮತ್ತು ಪೂರ‍್ವಗಟ್ಟಗಳನ್ನು ನೆನಪಿಸುವ ಗಾಟ್ ರಸ್ತೆಯಂತೆ ಇದು ಕಂಗೊಳಿಸುತ್ತದೆ. ಈ ಪರ‍್ವತದಲ್ಲಿ ನಿರ‍್ಮಿಸಿರುವ ರಸ್ತೆಗಳನ್ನು ಗಮನಿಸಿದರೆ, ಅವುಗಳು ಇಂಜಿನಿಯರಿಂಗ್ ಕೌಶಲ್ಯ ಹಾಗೂ ಸಾಹಸಗಳ ಯಶೋಗಾತೆಗೆ ಕನ್ನಡಿ ಹಿಡಿದಂತಿವೆ. ಉಪಕಂಡದ ಗಿರಿದಾಮಗಳಿಗೆ ಸಂಪರ‍್ಕ ಕಲ್ಪಿಸುವ ಬಹುತೇಕ ಗಾಟ್ ರಸ್ತೆಗಳು ಬ್ರಿಟೀಶರ ಕಾಲದಲ್ಲಿ ನಿರ‍್ಮಾಣವಾದವು. ಕೊಲ್ಲಿ ಹಿಲ್ಸ್ ರಸ್ತೆ ಅವುಗಳಲ್ಲಿ ಒಂದು. ಸಮುದ್ರ ಮಟ್ಟದಿಂದ 238 ಮೀಟರ್ ಎತ್ತರದ ಕರಾವಳಿಯಿಂದ ಆರಂಬವಾಗುವ ಈ ಎಪ್ಪತ್ತು ಹೇರ್ ಪಿನ್ ತಿರುವುಗಳ ರಸ್ತೆ, 20.4 ಕಿಲೋಮೀಟರ್ ಉದ್ದವಿದ್ದು, 1198 ಮೀಟರ್ ಎತ್ತರದ ಸೋಲಕ್ಕಾಡ್‍ನಲ್ಲಿ ಕೊನೆಗೊಳ್ಳುತ್ತದೆ. ಇದರಿಂದಾಗಿ ಒಟ್ಟಾರೆ 960 ಮೀಟರ್ ಎತ್ತರಕ್ಕೆ ಏರಿದಂತಾಗುತ್ತದೆ. ಇದರ ಸರಾಸರಿ ಗ್ರೇಡಿಯಂಟ್ 4.70%. ಈ ರಸ್ತೆಯಲ್ಲಿನ ಪ್ರಯಾಣ ಅತಿ ಹೆಚ್ಚು ರೋಮಾಂಚನಕಾರಿಯಾಗಲು, ಪ್ರತಿ ತಿರುವಿಗೂ ಸಂಕ್ಯೆಗಳನ್ನು ನೀಡವುದರ ಜೊತೆಗೆ ಎದುರು ಕಾಣುವ ಕಲ್ಲು ಬಂಡೆಯ ಮೇಲೆ ನೀಲಿ ಮತ್ತು ಹಳದಿ ಬಣ್ಣದಲ್ಲಿ ಚಿತ್ರಗಳನ್ನು ಬಿಡಿಸಲಾಗಿದೆ. ಇದರಿಂದ ಆ ಸ್ತಳಕ್ಕೆ ಬರುವ ಮುನ್ನ ಎಶ್ಟು ಹೇರ್ ಪಿನ್ ತಿರುವುಗಳನ್ನು ಮುಗಿಸಿದ್ದೇವೆ? ಇನ್ನೆಶ್ಟು ಬಾಕಿ ಇದೆ? ಎಂಬುದನ್ನು ಎಣಿಕೆ ಮಾಡಲು ಸಾದ್ಯ. ಮೇಲೆ ಏರುತ್ತಿದ್ದಂತೆ ಮೋಡಗಳ ಹಿಂದೆ ಮರೆಯಾಗುವ ದ್ರುಶ್ಯಾವಳಿ ಪುಳಕಗೊಳಿಸುತ್ತದೆ. ಈ ಸ್ತಳ ಜನಸಂದಣಿಯಿಂದ ದೂರವಿರುವ ಕಾರಣ, ವಾತಾವರಣ ಶುದ್ದ ಹಾಗೂ ತಾಜಾತನದಿಂದ ಕೂಡಿರುತ್ತದೆ. ಪರ‍್ವತದ ಪೂರ‍್ಣ ಎತ್ತರ 20.4 ಕಿಲೋಮೀಟರ್ ಎತ್ತರವಿದ್ದರೂ, 70 ಹೇರ್ ಪಿನ್ ತಿರುವುಗಳು ಇದರಲ್ಲಿ ಸರಿ ಸುಮಾರು 15 ಕಿಲೋ ಮೀಟರ್ ಗಿಂತಲೂ ಹೆಚ್ಚು ದೂರ ಆಕ್ರಮಿಸಿದೆ. ವಾಹನ ಚಾಲಕರಿಗೆ ಇದೊಂದು ಕುಶಿ ಕೊಡುವ ಚಾಲನೆ. ಒಂದಾದ ನಂತರ ಮತ್ತೊಂದು ಅದಾದ ನಂತರ ಮಗದೊಂದು ತಿರುವುಗಳು, ಎಲ್ಲಾ ಹೇರ್ ಪಿನ್ ತಿರುವುಗಳು, ಚಾಲನೆಯ ವ್ರುತ್ತಿಗೆ ಸವಾಲು ಒಡ್ಡುವಂತಹವು.

ಇಲ್ಲಿಗೆ ಬೇಟಿ ನೀಡಲು ಸರಿಯಾದ ಕಾಲ

ಸಮುದ್ರ ಮಟ್ಟದಿಂದ ಇದು ಬಹಳ ಎತ್ತರದಲ್ಲಿರುವುದರಿಂದ, ಜನವರಿಯಲ್ಲಿ ಬಹಳವೇ ತಣ್ಣಗಿನ ವಾತಾವರಣ ಇರುತ್ತದೆ. ಉಳಿದಂತೆ ಒಣ ವಾತಾವರಣವಿದ್ದು, ಬೇಟಿ ಮಾಡಲು ಸೂಕ್ತವಾಗಿರುತ್ತದೆ.  ಪ್ರಕ್ರುತಿ ಹಾಗೂ ಟ್ರಕ್ಕಿಂಗ್ ಪ್ರಿಯರು, ಪಾದ ಯಾತ್ರಿಗಳು, ಪ್ರವಾಸಿಗರೂ ಇಲ್ಲಿಗೆ ಬರುವವರ ಸಂಕ್ಯೆಯಲ್ಲಿ ಸೇರಿದ್ದಾರೆ. ಅತಿ ಪ್ರಶಾಂತವಾದ ವಾತಾವರಣ ಇರುವ ಕಾರಣ ದ್ಯಾನಾಸಕ್ತರೂ ಇಲ್ಲಿಗೆ ಹೆಚ್ಚಿನ ಸಂಕ್ಯೆಯಲ್ಲಿ ಬೇಟಿ ನೀಡುತ್ತಾರೆ. ಇಲ್ಲಿ ಅರಪ್ಪಳೀಶ್ವರ ದೇವಾಲಯವಿದೆ. ಇದರ ಹತ್ತಿರ ಅಗಯಾ ಗಂಗೈ ಎಂಬ ಸಣ್ಣ ಜಲಪಾತ ಸಹ ಇದೆ.

(ಮಾಹಿತಿ ಮತ್ತು ಚಿತ್ರಸೆಲೆ : dangerousroads.org, thomascook.in, namakkal.nic.in, hillsandwills.com, rove.me )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.