ಸುಳಿವುಳಿಕೆಯ ಅಂಗಗಳು: ಒಂದು ನೋಟ

– ಶಿಶಿರ್.

‘ಮಂಗನಿಂದ ಮಾನವ’ ಎಂದು ನೀವು ಹಲವಾರು ಸಲ ಕೇಳಿರುತ್ತೀರಿ. ಆದರೆ ನಾವು ಮಂಗನಿಂದ ಮಾನವರಾಗಿದ್ದರೆ ಮಂಗಗಳಿಗಿರುವಂತಹ ಬಾಲ ನಮಗೇಕೆ ಇಲ್ಲ ಎಂಬ ಯೋಚನೆ ಎಂದಾದರು ಬಂದಿದೆಯೇ? ಮಾನವನ ಹಿಂದಿನ ತಲೆಮಾರುಗಳಿಗೆ ಬಾಲವಿತ್ತು ಎಂದರೆ ನಂಬುತ್ತೀರ? ನಂಬಲೇಬೇಕು! ‘ಸುಳಿವುಳಿಕೆಯ ಅಂಗಗಳು’ ನಿಮ್ಮನ್ನು ನಂಬಿಸುತ್ತವೆ. ಮಾನವನ ದೇಹದಲ್ಲಿ ಹಿಂದೊಮ್ಮೆ ಬಾಲವಿತ್ತು ಎಂಬುದಕ್ಕೆ ಇಂದಿಗೂ ಅವನ ದೇಹದಲ್ಲಿರುವ ಬಾಲಮೂಳೆಯೇ ಸುಳಿವು.

ಮಾನವರ ದೇಹದಲ್ಲಿ ಹಿಂದಿನ ತಲೆಮಾರುಗಳಿಂದ ಮಾಡುತ್ತಿದ್ದ ಮೂಲ ಕೆಲಸವನ್ನು ಇಂದಿನ ಮಾನವನ ದೇಹದಲ್ಲಿ ಮಾಡದೆ ಇರುವ ಅಂಗಗಳಿಗೆ ಸುಳಿವುಳಿಕೆಯ ಅಂಗಗಳು (vestigial organs) ಎಂದು ಹೆಸರು. ಈ ಅಂಗಗಳು ಮಾನವನ ದೇಹದಲ್ಲಿ ತಲೆಮಾರುಗಳಿಂದ ಆದ ಬೆಳವಣಿಗೆಯ ಸುಳಿವಿನ ಉಳಿಕೆಗಳಾಗಿರುವುದರಿಂದ ಅವುಗಳಿಗೆ ಸುಳಿವುಳಿಕೆಯ ಅಂಗಗಳು ಎಂದು ಹೆಸರು. ಸುಳಿವುಳಿಕೆಯ ಅಂಗಗಳು ಜೀವಿಗಳ ಹೊಂದಿಕೆಯನ್ನು (adaptation) ವಿವರಿಸಲು ನೆರವಾಗಿರುವುದರಿಂದ ಬೆಳವಣಿಗೆಗೆ (evolution) ಬೆಂಬಲ ನೀಡುವಲ್ಲಿ ದೊಡ್ಡ ಪಾತ್ರ ವಹಿಸಿವೆ.

ಜೀವಿಗಳಲ್ಲಿ ಕೆಲವು ಅಂಗಗಳ ಬಳಕೆ ಹಾಗು ಅಗತ್ಯತೆಯು ಪೀಳಿಗೆಗಳಿಂದ ಕುಂದುತ್ತಾ ಬಂದು ಕಡೆಗೆ ಕೆಲಸಕ್ಕೆ ಬಾರದಂತಹ ಅತವಾ ಬೇರೆ ಕೆಲಸವನ್ನು ಮಾಡುವಂತಹ ಅಂಗಗಳಾಗಿ ಉಳಿದುಬಿಡುತ್ತವೆ. ಪೀಳಿಗಳ (genes) ಮಾರ್‍ಪಾಡುಗಳಿಂದ ಪ್ರೋಟೀನ್‌ಗಳು ಮಾರ್‍ಪಾಡಾಗಿ ಹಿಂದಿನ ಪೀಳಿಗೆಗಳ ದೇಹದಲ್ಲಿ ಕೆಲಸ ಮಾಡುತ್ತಿದ್ದ ಅಂಗಗಳು, ಇಂದಿನ ಪೀಳಿಗೆಯ ಕೆಲಸ ಮಾಡದ/ಕಡಿಮೆ ಕೆಲಸ‌ ಮಾಡುವ/ಹೊಸ ಕೆಲಸ ಮಾಡುವ ಅಂಗಗಳಾಗುತ್ತವೆ. ಮಾನವರ ದೇಹದಲ್ಲಿರುವ ಅಪೆಂಡಿಕ್ಸ್, ಸುಳಿವುಳಿಕೆಯ ಅಂಗಕ್ಕೆ ಒಂದು ಒಳ್ಳೆಯ ಎತ್ತುಗೆಯಾಗಿದೆ.

ಅಪೆಂಡಿಕ್ಸ್ ಬಹಳ ಸಾಮಾನ್ಯವಾಗಿ ತಿಳಿದಿರುವಂತಹ ಸುಳಿವುಳಿಕೆಯ ಅಂಗವಾಗಿದೆ. ಬೆರಳಿನ ಆಕಾರದಂತಿರುವ, ಒಂದು ಕಡೆ ಮುಚ್ಚಿರುವ ಈ ಅಂಗವು ದೊಡ್ಡ ಕರುಳಿನ ‘ಸೀಸಮ್’ ಗೆ ಅಂಟಿಕೊಂಡಿದೆ. ಹಿಂದಿನ ಪೀಳಿಗೆಗಳಲ್ಲಿ ಈ ಅಂಗವು ದೇಹದಲ್ಲಿ ಸೆಲ್ಯುಲೋಸ್ಅನ್ನು ಅರಗಿಸುವಂತಹ ಕೆಲಸವನ್ನು ಮಾಡುತ್ತಿತ್ತು ಎಂದು ನಂಬಲಾಗಿದೆ. ಇಂದು ಈ ಅಪೆಂಡಿಕ್ಸ್ ಅಂಗವು ಅರಗಿಸಿಕೊಳ್ಳಲು ನೆರವಾಗುವಂತಹ ಉಪಯುಕ್ತವಾದ ‘ಕರಳು ಒಚ್ಚೀರುಗಳನ್ನು’ (gut bacteria) ಹೊಂದಿರುವ ಅಂಗವೆಂದು ಅರಿಮೆಗಾರರು ಊಹಿಸಿದ್ದಾರೆ.

ಮಾನವನ ದೇಹದಲ್ಲಿರುವ ಇನ್ನಶ್ಟು ಸುಳಿವುಳಿಕೆಯ ಅಂಗಗಳು:

1. ಅಪೆಂಡಿಕ್ಸ್‌
2. ಗಂಡಸರ ಮೊಲೆತೊಟ್ಟು
3. ಸೈನಸ್‌ಗಳು
4. ಬಾಲಮೂಳೆ (coccyx/tailbone)
5. ಬುದ್ದಿಹಲ್ಲು (ವಿಸ್ಡಮ್ ಹಲ್ಲು)
6. ಹೊರಗಿವಿ (External Ear/The Helix)
7. ಮಿಟುಕು ಪೊರೆ (Nictitating Membrane)
8. ಟಾನ್ಸಿಲ್ಸ್

ಈ ಸುಳಿವುಳಿಕೆಯ ಅಂಗಗಳ ಬಳಕೆ ಮಾನವನ ದೇಹಕ್ಕೆ ಹೆಚ್ಚಾಗಿ ಇರದೇ ಇದ್ದರೂ, ಈ ಅಂಗಗಳಿಗೆ ಸೋಂಕು ತಗುಲಿದರೆ ಮಾನವರು ಕಡಿಮೆ ಪರದಾಡುವುದಿಲ್ಲ. ಮೇಲೆ ನೀಡಲಾಗಿರುವ ಮಾನವನ ದೇಹದಲ್ಲಿರುವ ಒಂದೊಂದೇ ಕುರುಹು ಅಂಗಗಳ ಎತ್ತುಗೆಗಳ ಬಗ್ಗೆ ಮುಂದಿನ ಬರಹಗಳಲ್ಲಿ ತಿಳಿಯೋಣ.

(ಚಿತ್ರ ಸೆಲೆ: wikimedia.org, pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks