ರವೀಂದ್ರನಾತ ಟ್ಯಾಗೋರರ ಕವನಗಳ ಓದು – 2 ನೆಯ ಕಂತು

– ಸಿ.ಪಿ.ನಾಗರಾಜ.

*** ಕವನದ ಹೆಸರು:  ಪರಿಹಾಸಕ ***

ರಾಜಸಭೆಯಲಿ ಅರಸ ಕೋಪವ ತಳೆದು ಮೌನದಿ ಕುಳಿತಿರೆ
ಅವನ ದಳಪತಿ ಬಂದು ವಂದಿಸಿ ಠೀವಿಯಲಿ ಇಂತೆಂದನು
ಧೂಳಿಪಟಗೊಳಿಸಿದೆನು ಹಳ್ಳಿಯ; ಗಂಡಸರು ಹತರಾದರು
ಅಳಲು ಹೆದರುವ ಹೆಂಗಸರು ಕತ್ತಲಲಿ ಮನೆಯೊಳಗುಳಿದರು

ರಾಜಗುರು ಮೇಲೆದ್ದು ನಿಲ್ಲುತ ರಾಜನನು ಬಲು ಹೊಗಳುತ
“ನಿನಗೆ ಮಂಗಳವಾಗಲಿ” ಎಂದನು ಅರಸನಿಗೆ ಶುಭ ಕೋರುತ
ಅಷ್ಟರಲಿ ಪರಿಹಾಸಕನು ಗಹಗಹಿಸಿ ನಕ್ಕನು ಹೆದರದೆ
ಇದನು ಕೇಳುತ ಕೆಂಪಗಾದನು ರಾಜ ಕೋಪವ ತಡೆಯದೆ

ಮಂತ್ರಿವರ್ಯನು ಅರಸನೆದುರಲಿ ತಲೆಯ ಬಾಗಿಸಿ ನುಡಿದನು
“ರಾಜಶಕ್ತಿಗೆ ದೈವಶಕ್ತಿಯು ಕೂಡಿ ಹರಕೆಯ ನೀಡಿತು
ನಮ್ಮ ಸಿಂಹಾಸನದ ಘನತೆಯು ಮೇಲೆ ಗಗನಕೆ ನೆಗೆಯಿತು”
ಅಷ್ಟರಲಿ ಪರಿಹಾಸಕನ ನಗು ಅಟ್ಟಹಾಸವ ಮುಟ್ಟಿತು

“ನೀನು ಘನತೆಯ ಗೆರೆಯ ದಾಟಿದೆ ಇಂಥ ನಗು ತರವಲ್ಲವು”
ಎಂದು ರಾಜನು ಗುಡುಗಿ ನುಡಿಯಲು ಬೆಚ್ಚಿದುದು ಸಭೆಯೆಲ್ಲವು
“ಹಲವು ಹರಕೆಯ ರಕ್ಷೆ ನಿನಗಿದೆ ನಿನ್ನಲಿದೆ ಐಶ್ವರ್ಯವು”
ಎಂದು ಪರಿಹಾಸಕನು ನುಡಿದನು “ನನಗೆ ನಗುವುದೆ ಧರ್ಮವು”

ರಾಜ ಗದ್ದುಗೆಯಿಂದ ಎದ್ದನು ಖಡ್ಗವನು ಹೊರ ಸೆಳೆಯುತ
“ನಿನಗೆ ಮುಳುವಾಗುವುದು ನಿನ್ನೀ ನಗುವ ಧರ್ಮವು” ಎನ್ನುತ
ಲೆಕ್ಕಿಸದೆ ಪರಿಹಾಸಕನು ಮೇಲೆದ್ದು ನಿಂತನು ನಗುತಲಿ
ಖಡ್ಗ ಮಿಂಚಿತು ರಕ್ತ ಚಿಮ್ಮಿತು ಉಸಿರು ನಿಂತಿತು ಕ್ಷಣದಲಿ

ರಾಜಸಭೆಯಲಿ ಮೌನ ತುಂಬಿತು ಅರೆ ಕ್ಷಣದಿ ಆತಂಕದಿ
ದೇವದೇವನ ಗಹನ ಮೌನದಿ ಕೇಳಿಸಿತು ನಗು ದೂರದಿ.

ಆಡಳಿತದ ಗದ್ದುಗೆಯಲ್ಲಿ ಕುಳಿತಿರುವ ವ್ಯಕ್ತಿಯು ವಾಸ್ತವವನ್ನು ಅರಿಯದಿದ್ದಾಗ ಇಲ್ಲವೇ ವಾಸ್ತವವನ್ನು ಎದುರಿಸಲು ಆಗದಿದ್ದಾಗ ಅತ್ಯಂತ ಕ್ರೂರಿಯಾಗುತ್ತಾನೆ ಎಂಬ ಸಂಗತಿಯನ್ನು ಈ ಕವನದಲ್ಲಿ ಹೇಳಲಾಗಿದೆ. ‘ವಾಸ್ತವವನ್ನು ಅರಿಯುವುದುʼ ಎಂದರೆ ಜಗತ್ತಿನಲ್ಲಿ ನಡೆಯುತ್ತಿರುವ ಒಳಿತು ಕೆಡುಕಿನ ಕ್ರಿಯೆಗಳಿಗೆ ನಿಸರ್‍ಗದಲ್ಲಿನ ಆಗುಹೋಗುಗಳು ಮತ್ತು ಮಾನವ ಸಮುದಾಯದ ನಡೆನುಡಿಗಳು ಕಾರಣವೆಂಬುದನ್ನು ತಿಳಿಯುವುದು.

ರಾಜಸಭೆ=ರಾಜನ ಒಡ್ಡೋಲಗ; ಅರಸ=ರಾಜ/ದೊರೆ. ಒಂದು ಸೀಮಿತ ಪ್ರದೇಶದಲ್ಲಿ ನೆಲೆಸಿರುವ ಜನಸಮುದಾಯವನ್ನು ತನ್ನ ಸೇನಾಬಲದಿಂದ ಅಂಕೆಯಲ್ಲಿಟ್ಟುಕೊಂಡು ಆಳುವವನು; ಕೋಪ=ಸಿಟ್ಟು/ಮುನಿಸು; ತಳೆ=ಹೊಂದು; ಮೌನ=ಸುಮ್ಮನಿರುವಿಕೆ; ಕುಳಿತು+ಇರೆ; ಇರೆ=ಇರಲು; ದಳಪತಿ=ಸೇನೆಯನ್ನು ನಿಯಂತ್ರಿಸಿ ಮುನ್ನಡೆಸುವ ನೇತಾರ/ದಂಡನಾಯಕ;

ವಂದಿಸಿ=ನಮಸ್ಕರಿಸಿ; ಠೀವಿ=ಗತ್ತು; ಇಂತು+ಎಂದನು; ಇಂತು=ಈ ರೀತಿ; ಎಂದನು=ಹೇಳಿದನು; ಧೂಳಿಪಟ=ನಾಶವಾಗುವಿಕೆ/ಹಾಳಾಗುವಿಕೆ; ಧೂಳಿಪಟಗೊಳಿಸಿದೆನು=ಎಲ್ಲವನ್ನು ನಾಶಮಾಡಿದೆನು; ಹತರು+ಆದರು; ಹತ=ಕೊಲೆಗೆ ಈಡಾದವನು; ಹತರಾದರು=ಕೊಲೆಯಾದರು; ಅಳಲು=ಸಂಕಟಪಡಲು/ಶೋಕಿಸಲು; ಕತ್ತಲಲಿ=ಕತ್ತಲಿನಲ್ಲಿ; ಮನೆ+ಒಳಗೆ+ಉಳಿದರು;

ರಾಜಗುರು=ರಾಜನಿಗೆ ವಿದ್ಯೆ ಬುದ್ದಿಯನ್ನು ಕಲಿಸಿ, ಅವನ ಆಡಳಿತದ ರೀತಿನೀತಿಗಳಿಗೆ ದಾರಿದೀಪವಾಗಿರುವ ವ್ಯಕ್ತಿ; ಮೇಲೆ+ಎದ್ದು; ಬಲು=ಬಹಳವಾಗಿ/ಹೆಚ್ಚಾಗಿ; ಹೊಗಳು=ಗುಣಗಾನ ಮಾಡು; ಮಂಗಳ=ಒಳಿತು/ಶ್ರೇಯಸ್ಸು; ಕೋರು=ಬಯಸು/ಹಾರಯಿಸು; ಅಷ್ಟರಲಿ=ಆ ಸಮಯದಲ್ಲಿ;

ಪರಿಹಾಸಕ=ಹಾಸ್ಯಗಾರ/ನಗೆಗಾರ. ರಾಜನ ಒಡ್ಡೋಲಗದಲ್ಲಿ ಕವಿಗಳು, ವಿದ್ವಾಂಸರು, ನಾಟ್ಯಗಾರರು, ಸಂಗೀತಗಾರರು, ಕಲಾವಿದರು ಇರುವಂತೆಯೇ ನಗೆಗಾರರು ಇರುತ್ತಿದ್ದರು. ನಗೆಗಾರನು ದಿಟವನ್ನು ತಿಳಿಸುವ ವ್ಯಂಗ್ಯದ ನುಡಿಗಳಿಂದ ಮತ್ತು ಮಾತಿನ ಮೋಡಿಯಿಂದ ರಾಜನ ಮನಸ್ಸನ್ನು ಉಲ್ಲಾಸಗೊಳಿಸುವ ಕಾಯಕದಲ್ಲಿ ತೊಡಗಿರುತ್ತಿದ್ದನು. ರಾಜನು ಕೆಲವೊಮ್ಮೆ ಮಾಡುವ ತಪ್ಪುಗಳನ್ನು ತನ್ನ ಹಾಸ್ಯದ ನಡೆನುಡಿಗಳ ಮೂಲಕ ಅವನಿಗೆ ಎತ್ತಿತೋರಿಸಿ, ಅಂತಹ ತಪ್ಪುಗಳನ್ನು ರಾಜನು ಮತ್ತೆ ಮಾಡದಂತೆ ಅರಿವನ್ನು ಮೂಡಿಸಬಲ್ಲವನಾಗಿದ್ದನು. ರಾಜನಿಗೆ ಆತ್ಮೀಯ ಗೆಳೆಯನಂತೆ ಇರುತ್ತಿದ್ದನು;

ಕೆಂಪಗೆ+ಆದನು; ಕೆಂಪಗಾದನು=ಇದೊಂದು ರೂಪಕವಾಗಿ ಬಳಕೆಗೊಂಡಿದೆ. ಅಪಮಾನ ಮತ್ತು ಕೋಪದಿಂದ ಕೆರಳಿದನು; ತಡೆ=ಸಹಿಸು/ತಾಳು; ಮಂತ್ರಿ=ಆಡಳಿತವನ್ನು ನಡೆಸುವ ರಾಜನಿಗೆ ಸೂಕ್ತವಾದ ಸಲಹೆಗಳನ್ನು ನೀಡಿ, ರಾಜನ ಅಪ್ಪಣೆಗಳನ್ನು ಕಾರ್‍ಯರೂಪಕ್ಕೆ ತರುವವನು; ವರ್ಯ=ಉತ್ತಮನಾದವನು ; ಮಂತ್ರಿವರ್ಯ=ಮಂತ್ರಿಗಳಲ್ಲಿ ಹಿರಿಯನಾದವನು; ಅರಸನ+ಎದುರಲಿ; ತಲೆಯ ಬಾಗಿಸಿ ನುಡಿದನು=ವಿನಯದಿಂದ ಹೇಳಿದನು;

ರಾಜಶಕ್ತಿ=ರಾಜನಾದವನು ಸೇನೆಯ ಬಲದಿಂದ ಜನಗಳನ್ನು ಹೆದರಿಸಿ ಬೆದರಿಸಿ ತನ್ನ ಅಂಕೆಯಲ್ಲಿಟ್ಟುಕೊಂಡಿರುವ ಶಕ್ತಿ. ರಾಜನ ದುರಾಡಳಿತವನ್ನು ಪ್ರಶ್ನೆ ಮಾಡುವ ಇಲ್ಲವೇ ಅನ್ನ, ಬಟ್ಟೆ, ವಸತಿ, ವಿದ್ಯೆ, ಉದ್ಯೋಗ ಮತ್ತು ಆರೋಗ್ಯಕ್ಕಾಗಿ ಬೇಡಿಕೆಯನ್ನೊಡ್ಡುವ ಜನರ ಸೊಲ್ಲನ್ನು ತನ್ನ ಸೇನಾಬಲದಿಂದ ಅಡಗಿಸುವ ಶಕ್ತಿಯನ್ನು ರಾಜನು ಹೊಂದಿರುತ್ತಾನೆ. ರಾಜ ಮತ್ತು ರಾಜಪರಿವಾರದವರು ಮಾಡುತ್ತಿರುವ ಸುಲಿಗೆ ಮತ್ತು ದಬ್ಬಾಳಿಕೆಯ ನಿರಂಕುಶ ಆಡಳಿತಕ್ಕೆ ಎದುರಾದ ಪ್ರಜೆಗಳೆಲ್ಲ ದೇಶದ್ರೋಹಿಗಳು ಇಲ್ಲವೇ ರಾಜದ್ರೋಹಿಗಳು ಎಂಬ ಆಪಾದನೆಗೆ ಗುರಿಯಾಗಿ ಸಾವುನೋವುಗಳಿಗೆ ಈಡಾಗುತ್ತಾರೆ;

ದೈವಶಕ್ತಿ=ದೇವರ ಹೆಸರಿನಲ್ಲಿ ಜನಸಮುದಾಯವನ್ನು ಮಾನಸಿಕವಾಗಿ ಹತೋಟಿಯಲ್ಲಿಟ್ಟಿರುವ ಶಕ್ತಿ. ಮಾನವರ ಹುಟ್ಟು ಬದುಕು ಸಾವುಗಳಿಗೆ ದೇವರೇ ಕಾರಣ. ಮಾನವರ ಸಿರಿತನ ಇಲ್ಲವೇ ಬಡತನಕ್ಕೆ, ಅವರು ಹಿಂದಿನ ಜನ್ಮದಲ್ಲಿ ಮಾಡಿರುವ ಪಾಪ ಪುಣ್ಯಗಳೇ ಕಾರಣ. ಹುಟ್ಟುವಾಗಲೇ ಪ್ರತಿಯೊಬ್ಬ ವ್ಯಕ್ತಿಯ ಬದುಕಿನ ಆಗುಹೋಗುಗಳ ಬಗ್ಗೆ ದೇವರು ಮೊದಲೇ ತೀರ್‍ಮಾನವನ್ನು ಮಾಡಿ ಏನೇನು ಆಗಬೇಕೆಂಬುದನ್ನು ವ್ಯಕ್ತಿಯ ಹಣೆಯಲ್ಲಿ ಬರೆದಿರುತ್ತಾನೆ. ಆದ್ದರಿಂದಲೇ ದೇವರ ಅಪ್ಪಣೆಯಿಲ್ಲದೆ ಈ ಜಗತ್ತಿನಲ್ಲಿ ಒಂದು ಹುಲ್ಲುಕಡ್ಡಿಯೂ ಅಲ್ಲಾಡುವುದಿಲ್ಲ. ರಾಜನು ಕಣ್ಣೆದುರಿನ ದೇವತೆ. ರಾಜನಿಗೆ ತಲೆಬಾಗಿ ನಡೆಯುವುದೇ ಪ್ರಜೆಗಳ ಕರ್‍ತವ್ಯ. ರಾಜನಿಗೆ ಎದುರಾಗಿ ನಡೆದರೆ ಅದು ದೇವರಿಗೆ ಎದುರಾಗಿ ನಡೆದಂತೆ ಎಂಬ ಒಳಮಿಡಿತಗಳನ್ನು ಜನಮನದಲ್ಲಿ ಬಿತ್ತಲಾಗಿದೆ. ದೇವರ ಬಗೆಗಿನ ಇಂತಹ ಸಂಗತಿಗಳಿಂದಾಗಿ ಹಸಿವು, ಬಡತನ ಮತ್ತು ಅಪಮಾನದಿಂದ ನೊಂದು ಬೆಂದು ಬಳಲುತ್ತಿರುವ ದುಡಿಯುವ ಬಡವರ್‍ಗದ ಜನರಲ್ಲಿ ರಾಜನ ಯಾವುದೇ ಬಗೆಯ ಅನ್ಯಾಯವನ್ನು ಪ್ರಶ್ನಿಸುವ ಎದೆಗಾರಿಕೆಯು ಇಲ್ಲವಾಗಿದೆ;

ರಾಜಶಕ್ತಿಗೆ ದೈವಶಕ್ತಿಯು ಕೂಡಿ=ಪ್ರಜೆಗಳು ಬಹಿರಂಗದಲ್ಲಿ ರಾಜನಿಗೆ ಮತ್ತು ಅಂತರಂಗದಲ್ಲಿ ದೇವರಿಗೆ ಅಡಿಯಾಳಾಗಿದ್ದಾರೆ. ಈ ಎರಡು ಶಕ್ತಿಗಳು ಜತೆಗೂಡಿರುವುದರಿಂದಲೇ ರಾಜನ ನಿರಂಕುಶ ಆಡಳಿತ ನಡೆಯುತ್ತಿರುತ್ತದೆ; ಕೂಡಿ=ಜತೆ ಸೇರಿ; ಹರಕೆಯ ನೀಡಿತು=ಒಳ್ಳೆಯದನ್ನು ಫಲವನ್ನು ಕೊಟ್ಟಿತು; ಘನತೆ=ಹಿರಿಮೆ; ಗಗನ=ಆಕಾಶ/ಮುಗಿಲು; ನೆಗೆ=ಹಬ್ಬು/ಆವರಿಸು; ಅಟ್ಟಹಾಸ=ತುಂಬಾ ಹೆಚ್ಚಾಗಿ/ದೊಡ್ಡ ಪ್ರಮಾಣದಲ್ಲಿ; ನಗು ಅಟ್ಟಹಾಸವ ಮುಟ್ಟಿತು=ಇನ್ನು ಜೋರಾಗಿ ನಗತೊಡಗಿದನು;

ಘನತೆ=ಹಿರಿಮೆ/ದೊಡ್ಡಸ್ತಿಕೆ; ಗೆರೆ=ಎಲ್ಲೆ/ಸೀಮೆ; ದಾಟು=ಮೀರು; ‘ಘನತೆಯ ಗೆರೆಯ ದಾಟುವುದುʼ ಎಂಬುದು ಒಂದು ನುಡಿಗಟ್ಟಾಗಿ ಬಳಕೆಯಾಗಿದೆ. ಸಂಪ್ರದಾಯದ ನಡೆನುಡಿಗಳನ್ನು ಕಡೆಗಣಿಸಿ ವರ್‍ತಿಸುವುದು ಎಂಬ ತಿರುಳಿನಲ್ಲಿ ಬಳಕೆಯಾಗಿದೆ; ತರ+ಅಲ್ಲವು; ತರ=ರೀತಿ; ತರವಲ್ಲವು=ಈ ರೀತಿಯ ನಡವಳಿಕೆ ಸರಿಯಲ್ಲ; ಗುಡುಗಿ=ಅಬ್ಬರಿಸಿ; ಬೆಚ್ಚು=ಕಂಪಿಸು/ನಡುಗು; ಸಭೆ+ಎಲ್ಲವು; ಸಭೆಯೆಲ್ಲವು=ಒಡ್ಡೋಲಗದಲ್ಲಿದ್ದವರೆಲ್ಲರು;

ಹರಕೆ=ಆಶೀರ್‍ವಾದ; ರಕ್ಷೆ=ಕಾಪಾಡುವಿಕೆ; ನಿನಗೆ+ಇದೆ; ನಿನ್ನಲಿ+ಇದೆ; ಐಶ್ವರ್ಯ=ಚಿನ್ನಬೆಳ್ಳಿ ಒಡವೆ ವಸ್ತು ಆಸ್ತಿಯಿಂದ ಕೂಡಿರುವ ಸಂಪತ್ತು;

ಹಲವು ಹರಕೆಯ ರಕ್ಷೆ ನಿನಗಿದೆ… ನಿನ್ನಲಿದೆ ಐಶ್ವರ್ಯವು=ದುಡಿಯುವ ವರ್‍ಗದ ಬಡವರ ಬೆವರಹನಿಯಿಂದ ಉತ್ಪಾದನೆಗೊಂಡ ಅಪಾರವಾದ ಸಂಪತ್ತು ನಿನ್ನ ಬಳಿಯಿದೆ. ಇದರಿಂದಾಗಿ ಆಡಳಿತದ ಗದ್ದುಗೆಯಲ್ಲಿರುವ ನಿನಗೆ ಹಲವರಿಂದ ಬೆಂಬಲವಿದೆ. ನಿನ್ನ ಅಪ್ಪಣೆಯಂತೆ ಯಾವುದೇ ಮಾನವೀಯತೆಯಿಲ್ಲದೆ ಜನಗಳನ್ನು ಕೊಲ್ಲುವ ಸೊಕ್ಕಿನ ದಳಪತಿ ನಿನ್ನೊಡನೆ ಇದ್ದಾನೆ; ನಿನ್ನ ಬಳಿ ಇರುವ ರಾಜಗುರುವಿಗೆ ನಾಡಿನ ಜನಸಾಮಾನ್ಯರ ಹಿತಕ್ಕಿಂತ ಆಡಳಿತ ಗದ್ದುಗೆಯಲ್ಲಿರುವ ನಿನ್ನ ಹಿತ ದೊಡ್ಡದು. ಏಕೆಂದರೆ ಸದಾಕಾಲ ಆಡಳಿತ ಮತ್ತು ಸಂಪತ್ತು ಇರುವ ಕಡೆ ಆತ ಇರುತ್ತಾನೆ. ಮಂತ್ರಿಯಾದವನು ತನ್ನ ಉಳಿವಿಗಾಗಿ ನಿನ್ನ ತಾಳಕ್ಕೆ ತಕ್ಕಂತೆ ಕುಣಿಯುತ್ತಾನೆ. ಇವರೆಲ್ಲರ ಬೆಂಬಲದಿಂದ ನೀನು ವಾಸ್ತವವನ್ನು ಅರಿಯದೆ, ಜನರ ಸಂಕಟವೇನೆಂಬುದನ್ನು ತಿಳಿದುಕೊಳ್ಳದೆ, ನಿನ್ನ ಇಚ್ಚೆಗೆ ತಕ್ಕಂತೆ ನಡೆದುಕೊಳ್ಳುತ್ತ, ಜನಸಾಮಾನ್ಯರ ಕಗ್ಗೊಲೆಗೆ ಕಾರಣನಾಗಿರುವೆ;

ನನಗೆ ನಗುವುದೆ ಧರ್ಮವು=ಇದೊಂದು ರೂಪಕವಾಗಿ ಬಳಕೆಯಾಗಿದೆ. ಯಾವುದು ದಿಟವೋ ಅದನ್ನು ನಿನಗೆ ತಿಳಿಯ ಹೇಳುವುದೇ ನನ್ನ ಕರ್‍ತವ್ಯ. ಜನರನ್ನು ಕೊಂದು ಆನಂದದಿಂದ ಅಬ್ಬರಿಸುತ್ತಿರುವ ನಿನ್ನ ನಡೆನುಡಿಯು ಸರಿಯಲ್ಲ;

ಗದ್ದುಗೆ=ಸಿಂಹಾಸನ; ಖಡ್ಗ=ಕತ್ತಿ; ಸೆಳೆ=ಎಳೆ; ಹೊರ ಸೆಳೆಯುತ=ಕವಚದ ಒಳಗಿದ್ದ ಕತ್ತಿಯನ್ನು ಹೊರಕ್ಕೆ ಎಳೆದು; ಮುಳುವು=ಕೇಡು/ನಾಶ;

ನಿನಗೆ ಮುಳುವಾಗುವುದು ನಿನ್ನೀ ನಗುವ ಧರ್ಮವು=ನಿಜ ನುಡಿವ ನಿನ್ನ ಈ ಗುಣವೇ ನಿನ್ನ ಸಾವಿಗೆ ಕಾರಣವಾಗುವುದು; ಲೆಕ್ಕಿಸದೆ=ತಿರಸ್ಕರಿಸಿ/ಕಡೆಗಣಿಸಿ; ಖಡ್ಗ ಮಿಂಚಿತು=ಕತ್ತಿಯು ವೇಗವಾಗಿ ಚಲಿಸಿತು; ರಕ್ತ ಚಿಮ್ಮಿತು=ನೆತ್ತರು ಎಲ್ಲೆಡೆ ಹಾರಿತು; ಉಸಿರು ನಿಂತಿತು=ಜೀವ ಹೋಯಿತು; ಕ್ಷಣದಲಿ=ಮರು ಗಳಿಗೆಯಲ್ಲಿ; ಅರೆ=ತುಸು;

ಅರೆ ಕ್ಷಣದಿ=ತುಸು ಸಮಯದಲ್ಲಿ; ಆತಂಕ=ಹೆದರಿಕೆ/ಚಿಂತೆ; ದೇವದೇವ=ನಿಸರ್‍ಗದ ರೂಪದಲ್ಲಿರುವ ದೇವರು; ಗಹನ=ಹೆಚ್ಚಿನ/ದಟ್ಟವಾದ;

ದೇವದೇವನ ಗಹನ ಮೌನದಿ ಕೇಳಿಸಿತು ನಗು ದೂರದಿ=ಈ ನುಡಿಗಳು ರೂಪಕವಾಗಿ ಬಳಕೆಗೊಂಡಿವೆ. ಆಡಳಿತದ ಗದ್ದುಗೆಯಲ್ಲಿರುವ ರಾಜಶಕ್ತಿಯು ಜನರನ್ನು ಬಹಿರಂಗವಾಗಿ ಹದ್ದುಬಸ್ತಿನಲ್ಲಿಟ್ಟುಕೊಂಡಿದ್ದರೆ, ದೇವರಶಕ್ತಿಯು ಜನರನ್ನು ಮಾನಸಿಕವಾಗಿ ಗುಲಾಮರನ್ನಾಗಿಸಿದೆ. ಈ ಸತ್ಯವನ್ನು/ವಾಸ್ತವವನ್ನು ಜಗತ್ತಿಗೆ ಯಾರು ತಿಳಿಸಲು ಪ್ರಯತ್ನಿಸುತ್ತಾರೆಯೋ ಅಂತಹವರು ನಿಜ ನುಡಿದ ಪರಿಹಾಸಕನಂತೆ ಬಲಿಯಾಗುತ್ತಿರುತ್ತಾರೆ. ಆಡಳಿತ ಗದ್ದುಗೆಯಲ್ಲಿ ಕುಳಿತು ಅಪಾರವಾದ ಸಂಪತ್ತಿಗೆ ಒಡೆಯರಾದವರ ಮನದಲ್ಲಿ ಸಹಮಾನವರ ಬಗ್ಗೆ ಪ್ರೀತಿ, ಕರುಣೆ ಮತ್ತು ಗೆಳೆತನದ ಒಳಮಿಡಿತಗಳು ಇರುವುದಿಲ್ಲ. ಅವರು ತಮ್ಮ ಗದ್ದುಗೆಯ ಉಳಿವಿಗಾಗಿ ಯಾರನ್ನು ಬೇಕಾದರೂ ಬಲಿ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂಬ ಕಟುಸತ್ಯವನ್ನು ಪರಿಹಾಸಕನ ನಗೆಯು ಸದಾಕಾಲ ಅನುರಣಿಸುತ್ತಿದೆ.

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks