ಹಾಡು ಹಳೆಯದಾದರೇನು, ಬಾವ ನವನವೀನ

– ಮಹೇಶ ಸಿ. ಸಿ.

“ಹಾಡು ಹಳೆಯದಾದರೇನು, ಬಾವ ನವನವೀನ”. ನಾನ್ಯಾಕೆ ಈ ಸಾಲನ್ನು ಹೇಳ್ತಾ ಇದೀನಿ ಅನ್ಸುತ್ತಾ? ಓದುಗರೇ, ಜಿ ಎಸ್ ಶಿವರುದ್ರಪ್ಪ ಅವರು ಬರೆದಿರುವ ಈ ಗೀತೆಯನ್ನು, ಪುಟ್ಟಣ್ಣ ಕಣಗಾಲ್ ಅವರ ನಿರ‍್ದೇಶನದ “ಮಾನಸ ಸರೋವರ” ಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ಆ ಗೀತೆಯನ್ನು ಕೇಳದೆ ಇರುವವರು ಯಾರಿದ್ದಾರೆ ಹೇಳಿ? ಎಂತಹ ಅದ್ಬುತ ಸಾಲುಗಳು ಅಲ್ಲವೇ. ಇದೇ ರೀತಿಯ ಸಾವಿರಾರು ಹಾಡುಗಳು ಕೇಳುಗರಿಗೆ ಮುದವನ್ನು ನೀಡಿವೆ, ನೀಡುತ್ತಿವೆ ಕೂಡಾ!

ಹಾಡುಗಳು ಕೇವಲ ಚಿತ್ರಕ್ಕೆ ಸೀಮಿತ ಎಂದುಕೊಳ್ಳುವುದು ತಪ್ಪು. ಓದುಗರೇ, ಸಂಗೀತ ನಮ್ಮ ಜೀವನದ ಒಂದು ಬಾಗವಾಗಿದೆ. ಸಂಗೀತವನ್ನು ಆಲಿಸದ ಮನಸ್ಸುಗಳೇ ಇಲ್ಲ ಅನಿಸುತ್ತೆ. ಎಂತಹ ವಿಶಮ ಸ್ತಿತಿ ಇದ್ದರೂ ಸಂದರ‍್ಬಕ್ಕೆ ತಕ್ಕಂತೆ ಕೆಲವೊಮ್ಮೆ ಈ ಸಂಗೀತ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ.

ಎಶ್ಟೋ ಮಂದಿ ತಮಗೆ ಈ ಹಾಡು ಬಹಳ ಇಶ್ಟವೆಂದರೆ, ಮತ್ತೆ ಕೆಲವರು ನನಗೆ ಆ ಹಾಡು ಇಶ್ಟ ಎನ್ನುತ್ತಾರೆ. ಸಂಗೀತ ನಮ್ಮ ಮಾನಸಿಕ ಸ್ತಿತಿಯನ್ನು ಉತ್ತಮಗೊಳಿಸುತ್ತದೆ. ಕೇಳಿದ ಗೀತೆಯನ್ನು ಹಲವು ಬಾರಿ ಕೇಳಬೇಕು ಎಂದೆನಿಸುವುದು ಇದೆ. ಕಾರಣ ಆ ಗೀತೆ ಎಲ್ಲೋ ಒಂದು ಕಡೆ ನಮ್ಮ ಜೀವನದ ಯಾವುದೋ ಗಟನೆಯನ್ನು ನಮಗೆ ಮರಳಿ ನೆನಪಿಸುವ ದ್ಯೋತಕವಾಗಿದೆ.

90ರ ದಶಕದಲ್ಲಿ ದೂರದರ‍್ಶನದಲ್ಲಿ ವಾರಕ್ಕೊಮ್ಮೆ ಬರುತ್ತಿದ್ದ ಚಲನಚಿತ್ರ ವೀಕ್ಶಿಸಲು ಹಾಗೂ ಶುಕ್ರವಾರ ಬರುತ್ತಿದ್ದ ಚಿತ್ರಮಂಜರಿ ನೋಡಲು ಕಾತುರದಿಂದ ಕಾಯುತ್ತಿದ್ದ ನಾವು ಇಂದು ಹತ್ತಾರು ಚಾನೆಲ್ ಗಳಲ್ಲಿ ನೂರಾರು ಕಾರ‍್ಯಕ್ರಮ ನೋಡುತ್ತಿದ್ದೇವೆ. ಹಾಗೆಯೇ ಆಕಾಶವಾಣಿಯಲ್ಲಿ ಬರುತ್ತಿದ್ದ ಹಾಡುಗಳಿಗೂ ಕಾಯುತ್ತಿದ್ದ ನಮಗೆ ಇಂದು ಹತ್ತಾರು FM ಸ್ಟೇಶನ್ ಗಳು ಬಹಳಶ್ಟು ಗೀತೆಗಳನ್ನು ಪ್ರಸಾರ ಮಾಡುವ ಮೂಲಕ ಮನರಂಜನೆ ನೀಡುತ್ತಿವೆ.

ಒಂದು ಗೀತೆ ನಮ್ಮ ಮನಸ್ಸನ್ನು ಯಾವ ರೀತಿ ಬೇಕಾದರೂ ಬದಲಾಯಿಸಬಹುದು. ನಮ್ಮ ಬಾಲ್ಯದ ವಿಶಯಗಳಿಂದ ಹಿಡಿದು, ಕೊನೆ ಉಸಿರರ ತನಕ ನಮಗೆ ಹಾಗೂ ನಮ್ಮ ಮನಸ್ಸಿಗೆ ರುಚಿಸುವ ಸಾವಿರಾರು ಹಾಡುಗಳು ನಮ್ಮ ಮೇಲೆ ಪ್ರತೀ ಕ್ಶಣವೂ ಪ್ರಬಾವ ಬೀರುತ್ತಲೇ ಇವೆ.

ನಮ್ಮ ಬಾವನೆಗೆ ತಕ್ಕ ರೀತಿಯ ಹಾಡುಗಳು ಬರುತ್ತಿದ್ದರೆ ನಮಗೆ ಗೊತ್ತಿಲ್ಲದಂತೆ ತಲೆಯಾಡಿಸುತ್ತಿರುತ್ತೇವೆ, ಇಲ್ಲವೇ ತಾಳ ಹಾಕುವುದೂ ಉಂಟು. ನಮ್ಮ ಮಾನಸಿಕ ಸ್ತಿತಿಯು ಆ ಹಾಡಿನ ಮೇಲೆ ಇರುತ್ತದೆ. ಅದು ನಮ್ಮ ಜೀವನದ ಕುಶಿಗೆ ಕಾರಣವೋ ಅತವಾ ದುಕ್ಕಕ್ಕೆ ಕಾರಣವೋ ಅದನ್ನು ಅವರವರೇ ನಿರ‍್ದರಿಸಬೇಕು. ಇದರಲ್ಲಿ ಒಂದಂತೂ ಸತ್ಯ ಆ ಹಾಡಿನ ಪ್ರಬಾವ ಆ ವ್ಯಕ್ತಿಗಳ ಮೇಲೆ ಬಿದ್ದಿರುತ್ತದೆ.

ಹಾಡುಗಳು ಬೀರುವ ಪ್ರಬಾವ ಎಂತದ್ದು ಎಂದರೇ, ಒಂದು ಗೀತೆಯಲ್ಲಿ ಸಂಪೂರ‍್ಣ ಕತೆಯೇ ಅಡಕವಾಗಿರುತ್ತದೆ. ಮತ್ತೆ ಕೆಲವು ನೋವು ಮತ್ತೆ ಕೆಲವು ಸಂತೋಶ, ಅದಲ್ಲದೆ ಕೇಳುಗರಿಗೆ ಸ್ಪೂರ‍್ತಿ ತುಂಬುವ ಹಾಡುಗಳು ಸಹ ಇವೆ. ಎಲ್ಲೋ ಒಂದು ಕಡೆ ಬೇಸರದಲ್ಲಿ ಕುಳಿತ ವ್ಯಕ್ತಿಗೆ ಆತನ ಇಶ್ಟದ ಹಾಡನ್ನು ಕೇಳಿಸಿದರೆ ಆತ ಮಾನಸಿಕವಾಗಿ ಬದಲಾವಣೆ ಹೊಂದುವ ಸಾದ್ಯತೆ ಕೂಡ ಇರುತ್ತದೆ ಎನ್ನುತ್ತವೆ ಸಂಶೋದನೆಗಳು.

“ಬಾನ ದಾರಿಯಲ್ಲಿ ಸೂರ‍್ಯ ಜಾರಿ ಹೋದ”, ಎಂಬ ಪುನೀತ್ ರಾಜಕುಮಾರ್ ಅವರು ಚಿಕ್ಕ ಮಗುವಿದ್ದಾಗ ಹಾಡಿರುವ ಗೀತೆ ಅದ್ಯಾವ ಮಕ್ಕಳಿಗೆ ಇಶ್ಟ ಇಲ್ಲ ಹೇಳಿ? ಇದನ್ನು ಆಲಿಸಿದಾಗ ಅಳುತ್ತಿದ್ದ ಮಗು ಕೂಡಾ ಸುಮ್ಮನಾಗುತ್ತದೆ. ಅಮ್ಮನ ಕೈ ತುತ್ತು ತಿನ್ನದೆ ರಚ್ಚೆ ಹಿಡಿದಿರುವ ಮಗು ಸುಮ್ಮನೇ ಊಟ ಮಾಡುತ್ತದೆ. ಹೀಗೇ ಒಂದು ಗೀತೆ ಅತವಾ ಅದರಲ್ಲಿನ ಸಾಲುಗಳು ಆ ಮಗುವಿನ ಮೇಲೆ ಪ್ರಬಾವ ಬೀರಿದೆ ಎಂದೇ ಅರ‍್ತ ಅಲ್ಲವೇ. ಅಲ್ಲದೆ ಇಂತಹ ಅದೆಶ್ಟೋ ಗೀತೆಗಳನ್ನು ಮಕ್ಕಳು ಕೇಳಿದರೆ ಬಹಳ ಕುಶಿ ಪಡುತ್ತವೆ.

ಇನ್ನು ಒಬ್ಬ ಹುಡುಗ ಅತವಾ ಹುಡುಗಿ ನಡುವೆ ಒಲುಮೆಯಿದ್ದಲ್ಲಿ “ಮುಂಗಾರು ಮಳೆ” ಅತವಾ “ನಗುವ ನಯನ, ಮದುರ ಮೌನ” ಎಂಬಂತಹ ಗೀತೆಗಳನ್ನು ಇಶ್ಟ ಪಡಬಹುದು.! ಪ್ರೀತಿಯ ಬಗ್ಗೆ ಸಾವಿರಾರು ಗೀತೆಗಳಿದ್ದು ಒಬ್ಬೊಬ್ಬರಿಗೆ ಅವರಿಶ್ಟದ ಗೀತೆ ಅವರನ್ನು ಮಾನಸಿಕವಾಗಿ ಬಂದಿಸಿಡುತ್ತದೆ.

ಕೆಲವರು ಪೌರಾಣಿಕ ಇಶ್ಟ ಪಟ್ಟರೆ ಮತ್ತೆ ಕೆಲವರು ಸಾಮಾಜಿಕ ಚಿತ್ರಗಳ ಗೀತೆಯನ್ನು ಇಶ್ಟ ಪಡುತ್ತಾರೆ. ಕೆಲವರು ಶಾಸ್ತ್ರೀಯ ಸಂಗೀತ ಇಶ್ಟ ಪಟ್ಟರೆ ಮತ್ತೆ ಕೆಲವರು ಹಿಂದೂಸ್ತಾನಿ ಸಂಗೀತ ಇಶ್ಟ ಪಡುತ್ತಾರೆ. ಇನ್ನು ಕೆಲವರು ಕರ‍್ನಾಟಕ ಸಂಗೀತ ಇಶ್ಟ ಪಡುತ್ತಾರೆ.

ಡಾ|| ರಾಜಕುಮಾರ್ ಅಬಿನಯದ “ಬಂಗಾರದ ಮನುಶ್ಯ” ಚಿತ್ರದ “ಆಗದು ಎಂದು ಕೈ ಕಟ್ಟಿ ಕುಳಿತರೆ, ಸಾಗದು ಕೆಲಸವು ಮುಂದೆ” ಎಂಬ ಗೀತೆಯೂ ಅದೆಶ್ಟೊ ಯುವಕರ ಬಾಳಲ್ಲಿ ಹೊಸಬೆಳಕ ತಂದದ್ದು ಸುಳ್ಳಲ್ಲ. ಅಂದಿನ ಆ ಗೀತೆಯೂ ಎಂದೆಂದಿಗೂ ಸೂಪರ್ ಹಿಟ್ ಆಗುವುದರ ಜೊತೆಗೆ ಹೊಸ ಹೊಸ ಪೀಳಿಗೆಯ ಯುವಕರ ಸಾದನೆಗೆ ಮುನ್ನುಡಿಯಾಗಿದೆ! ಹೀಗೆ ಒಂದು ಗೀತೆ ಮನುಶ್ಯನ ಜೀವನವನ್ನೇ ಬದಲಾಯಿಸಿದ್ದು ಇದೆ. ಗೀತೆಯ ಸ್ಪೂರ‍್ತಿಯಿಂದ ಸಾದನೆ ಮಾಡಿದವರೂ ಇದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.

ಕ್ಯಾತ ಗಾಯಕರಾದ ಕೆ.ಜೇ ಯೇಸುದಾಸ್ ಇರಬಹುದು, ಎಸ್ ಪಿ ಬಾಲಸುಬ್ರಮಣ್ಯಂ ಅವರು ಇರಬಹುದು, ಜಾನಕಿ ಅಮ್ಮ ಇರಬಹುದು, ಇತ್ತೀಚಿನ ಹಿನ್ನೆಲೆ ಗಾಯಕರಾದ ವಿಜಯ್ ಪ್ರಕಾಶ್ ಇರಬಹುದು, ಇವರ ಗೀತೆಗಳನ್ನು ಕೇಳುವುದರಲ್ಲಿ ಕೆಲವರು ಸಂತೋಶಗೊಂಡರೆ, ಮತ್ತೆ ಕೆಲವರಿಗೆ ಅವರ ಇಶ್ಟದ ಗಾಯಕರ ಗೀತೆಗಳು ಅಂದರೆ ಇಶ್ಟ ಪಡುತ್ತಾರೆ.

ಇನ್ನು ಒಂದು ಗುಂಪು ಅತವಾ ಸಂಗಟನೆಗೆ ಸ್ಪೂರ‍್ತಿಯಾಗಬಲ್ಲ ಸಂಗಟನಾ ಗೀತೆಗಳು ಕೂಡ ಇವೆ. ಇವುಗಳು ಆಯಾ ಸಂಗಟನೆಯ ಚರಿತ್ರೆಯನ್ನು ಸಾರುವ, ಸಂಗಟನೆಯ ಸದಸ್ಯರಿಗೆ ಚಿಲುಮೆಯಂತೆ ಇರುವ ಗೀತೆಗಳು ಸಾಕಶ್ಟು ಇವೆ. ಅಲ್ಲದೇ ದೇಶಬಕ್ತಿ ಗೀತೆಗಳು ಕೂಡ ವ್ಯಕ್ತಿಗಳ ಮನಸ್ಸನ್ನು ದೇಶ ಪ್ರೇಮಕ್ಕಾಗಿ ತುಡಿಯುವಂತೆ ಮಾಡುವ ಶಕ್ತಿಯನ್ನು ಹೊಂದಿವೆ. ಆ ಗೀತೆಯನ್ನು ಕೇಳುತ್ತಿದ್ದರೆ ನರ ನಾಡಿಗಳೆಲ್ಲಾ ರೋಮಾಂಚನವಾಗುವಂತಹ ಸಂದರ‍್ಬ ಸಹ ನಾವು ಅನುಬವಿಸುತ್ತೇವೆ. ಇದು ಆ ಗೀತೆಗೆ ಇರುವ ತಾಕತ್ತು.

ಮುಸ್ಸಂಜೆಯ ಸಮಯದಲ್ಲಿ ಮನೆಯ ಅಂಗಳದಲ್ಲಿ ಚಾ ಹೀರುತ್ತಾ ಸಂಗೀತ ಕೇಳುತ್ತಾ ಕುಳಿತಿದ್ದರೆ ಅದರಂತಹ ಮತ್ತೊಂದು ಸ್ವರ‍್ಗ ಇಲ್ಲವೇನೋ ಎನಿಸುವುದುಂಟು ಅಲ್ಲವೇ ಓದುಗರೆ? ಈ ಗೀತೆಗಳು ನಮ್ಮ ಕರ‍್ಣ ಹಾಗೂ ಮನಸ್ಸಿನ ಸೇತುವೆ ಎಂದರೆ ತಪ್ಪಾಗುವುದಿಲ್ಲ ಅಲ್ಲವೇ?

ಹಾಡುಗಳು ಮನಸ್ಸು ಮನುಸ್ಸುಗಳ ಬೆಸೆಯುವ ಮದ್ಯವರ‍್ತಿಯೂ ಕೂಡ ಆಗಿರುತ್ತವೆ. ಇಶ್ಟೆಲ್ಲಾ ಸೂಕ್ಶ್ಮ ವಿಚಾರಗಳ ಬಂಡಾರ ನಮ್ಮ ಹಾಡುಗಳ ಸಾಲುಗಳಲ್ಲಿ ಅಡಕವಾಗಿರುತ್ತದೆ. ಅಂತಹ ಸಾಲುಗಳನ್ನು ಕೊಟ್ಟಿರುವ, ಕೊಡುತ್ತಿರುವ, ನಮ್ಮ ಕವಿ ಮಹಾಶಯರಿಗೆ ನನ್ನ ಅನಂತ ಅನಂತ ದನ್ಯವಾದಗಳು.

( ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks