ತಟ್ಟನೆ ಮಾಡಿ ನೋಡಿ ಕೋಳಿ ಹಸಿಮೆಣಸು-ಕಾಳುಮೆಣಸಿನ ಹುರುಕುಲು

– ನಿತಿನ್ ಗೌಡ.

ಬೇಕಾಗುವ ಸಾಮಾನುಗಳು

  • ಕೋಳಿ ಮಾಂಸ – 300 ಗ್ರಾಂ
  • ಈರುಳ್ಳಿ – ಅರ್‍ದ (ಚಿಕ್ಕದು)
  • ಅರಿಶಿಣ – ಅರ್‍ದ ಚಮಚ
  • ಶುಂಟಿ – 2 ಇಂಚು
  • ಹಸಿ‌ಮೆಣಸಿನಕಾಯಿ – 4-5
  • ಬೆಳ್ಳುಳ್ಳಿ – 10 -12 ಎಸಳು
  • ಕಾಳುಮೆಣಸು ಪುಡಿ – ಒಂದು ಚಮಚ( ನಿಮ್ಮ ಅಂದಾಜಿಗೆ ಬೇಕಾದಶ್ಟು)
  • ಉಪ್ಪು – ರುಚಿಗೆ ತಕ್ಕಶ್ಟು
  • ಎಣ್ಣೆ – 10 ಚಮಚ
  • ಸೋಯಾ ಸಾಸ್ – 3-4 ಚಮಚ
  • ನಿಂಬೆ ಹಣ್ಣು – ಅರ್‍ದ ಹೋಳು.

ಮಾಡುವ ಬಗೆ:

ಮೊದಲಿಗೆ ಕೋಳಿಮಾಂಸವನ್ನು ತೊಳೆದುಕೊಂಡು ಅದಕ್ಕೆ ಅರಿಶಿಣ, ಉಪ್ಪು ಹಾಕಿ ಕಲಸಿ ಪಕ್ಕಕ್ಕಿಡಿ. ಈಗ ಶುಂಟಿ, ಬೆಳ್ಳುಳ್ಳಿ ಮತ್ತು ಹಸಿಮೆಣಸಿನಕಾಯಿ, ಈ ಮೂರನ್ನು ಒಟ್ಟಿಗೆ ರುಬ್ಬಿಕೊಳ್ಳಿರಿ. ಆಮೇಲೆ ಒಂದು ಬಾಣಲಿಯಲ್ಲಿ /ಬಾಂಡಲಿಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಕಾಯಿಸಿಕೊಳ್ಳಿರಿ. ಈಗ ಇದಕ್ಕೆ ಕೋಳಿಮಾಂಸವನ್ನು ಹಾಕಿ, ಮಾಂಸ ನೀರುಬಿಟ್ಟು ಬೇಯುವವರೆಗೂ ಹುರಿದುಕೊಂಡು, ಅದನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿರಿ. ಈಗ ಆ ಬಾಣಲೆಗೆ ಕೊಂಚ ಎಣ್ಣೆ, ರುಬ್ಬಿಟ್ಟುಕೊಂಡ ಶುಂಟಿ,ಬೆಳ್ಳುಳ್ಳಿ ಮತ್ತು ಹಸಿಮೆಣಸಿನಕಾಯಿಯ ಗಸಿಯನ್ನು ಹಾಕಿ ಹಸಿಗಮ ಬಿಡುವವರೆಗೂ ಹುರಿದುಕೊಳ್ಳಿರಿ. ಬೇಕಾದಲ್ಲಿ ಒಂದು ಅರ್‍ದ ಚಿಕ್ಕ ಈರುಳ್ಳಿಯನ್ನು ಎಣ್ಣೆಗೆ ಹಾಕಿ, ಚೆನ್ನಾಗಿ ಬಾಡಿಸಿಕೊಳ್ಳಿರಿ. ಈಗ ಇದಕ್ಕೆ ಹುರಿದಿಟ್ಟುಕೊಂಡ ಕೋಳಿಮಾಂಸವನ್ನು ಹಾಕಿರಿ. ಇದಕ್ಕೆ ಚೆನ್ನಾಗಿ ಕಾಳುಮೆಣಸಿನ ಪುಡಿ ಹಾಕಿರಿ. ನಿಮಗೆ ಗಾವು ಎಶ್ಟು ಬೇಕೋ ಅಶ್ಟು ಕಾಳುಮೆಣಸಿನ ಪುಡಿ ಹಾಕಿಕೊಳ್ಳಿರಿ. ಒಂದು ಹಸಿಮೆಣಸಿನಕಾಯಿಯ ಕಾರ ಸಾಲದಿದ್ದಲ್ಲಿ, ಚೂರು ಕಾರದ ಪುಡಿ ಹಾಕಿಕೊಳ್ಳಬಹುದು. ಉಪ್ಪು ಕಡಿಮೆಯನ್ನಿಸಿದಲ್ಲಿ, ಕೊಂಚ ಉಪ್ಪು ಹಾಕಿಕೊಳ್ಳಿರಿ. ಆಮೇಲೆ ಬೇಕಾದಲ್ಲಿ ಸ್ವಲ್ಪ ಸೋಯಾ ಸಾಸ್ ಹಾಕಿಕೊಂಡು ಕೊಂಚ ಬಿಸಿಮಾಡಿ ಒಲೆ ಆರಿಸಿ. ಇಲ್ಲಿ ಕಾರದ ಅಳತೆ ಕೊಂಚ ಹೆಚ್ಚೆನಿಸಿದಲ್ಲಿ, ನಿಮ್ಮ ಅಂದಾಜಿಗೆ ನೀವು ಮಾರ್‍ಪಾಡು ಮಾಡಿಕೊಳ್ಳಬಹುದು. ಈಗ ಇದಕ್ಕೆ ನಿಂಬೆ ಹಣ್ಣಿನ ಹುಳಿಯನ್ನು ಹಿಂಡಬಹುದು. ಇದನ್ನು ಬಿಸಿ ಅನ್ನದ ಜೊತೆ ಕಲಸಿಕೊಂಡು ತಿನ್ನಲು ಬಹಳ ಚೆನ್ನಾಗಿರುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: