ದಕ್ಶಿಣ ಕಾಶಿ ಶಿವಗಂಗೆ (ಕಂತು – 1)

– ಶ್ಯಾಮಲಶ್ರೀ.ಕೆ.ಎಸ್.

ಕಂತು – 1ಕಂತು-2  , ಕಂತು-3, ಕಂತು-4

ಒಮ್ಮೆ ಕಾಶಿ ನೋಡಿ ಬರಬೇಕು ಎನ್ನುವುದು ಅನೇಕರ ಮಹಾದಾಸೆ. ಈ ಹಾದಿಯಲ್ಲಿ ಬಹಳ ಮಂದಿ ತಮ್ಮ ಆಸೆಯನ್ನು ಪೂರೈಸಬಹುದು. ಆದರೆ ಎಲ್ಲರಿಗೂ ಅದು ಸಾದ್ಯವಾಗುವುದಿಲ್ಲ. ಕಾಶಿ ಇರುವುದು ದೂರದ ಉತ್ತರದಲ್ಲಿ. ದಕ್ಶಿಣದಲ್ಲೊಂದು ಕಾಶಿಯಿರುವುದನ್ನು ನಂಬುವಿರಾ? ಹೌದು ದಕ್ಶಿಣ ಕೈಲಾಸ, ದಕ್ಶಿಣ ಕಾಶಿ ಎಂದೇ ಮನೆಮಾತಾಗಿರುವ ಒಂದು ಪುಣ್ಯ ಕ್ಶೇತ್ರ ನಮ್ಮ ನಾಡಿನಲ್ಲಿರುವ ಶಿವಗಂಗೆ ಬೆಟ್ಟ. ಶಿವಗಂಗೆ ಒಂದು ಸುಂದರವಾದ, ಕುತೂಹಲಕಾರಿ ರೋಚಕತೆಯನ್ನು ಒಳಗೊಂಡಿರುವ ಅಪರೂಪದ ಗಿರಿದಾಮ. ಇದು ಕರ‍್ನಾಟಕ ಮಾತ್ರವಲ್ಲದೆ ಇಡೀ ದಕ್ಶಿಣ ಬಾರತದಲ್ಲಿ ಚಿರಪರಿಚಿತವಾಗಿದೆ.

ಶಿವಗಂಗೆಯನ್ನು ಬೆಂಗಳೂರಿನ ಹೆಬ್ಬಾಗಿಲು ಎಂದೇ ಗುರುತಿಸಲಾಗಿರುವುದು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಗಡಿಬಾಗದಲ್ಲಿದೆ ಈ ಶಿವಗಂಗೆ ಬೆಟ್ಟ. ಶಿವಗಂಗೆ ತುಮಕೂರು ಜಿಲ್ಲೆಗೆ ಹತ್ತಿರವಿದ್ದು 26 ಕಿಲೋ ಮೀಟರ್ ದೂರದಲ್ಲಿ ಇದೆ. ಬೆಂಗಳೂರಿನಿಂದ 58 ಕಿ. ಮೀ ದೂರವಿದೆ.

ಬೆಂಗಳೂರಿನಿಂದ ತುಮಕೂರು ಮಾರ‍್ಗವಾಗಿ ನೆಲಮಂಗಲದ ಮೇಲೆ ಹಾದು ಡಾಬಸ್ ಪೇಟೆ ತಲುಪಿ, ಅಲ್ಲಿಂದ ಎಡಗಡೆ ತಿರುಗಿ, ಅಲ್ಲಿಂದ ಮತ್ತೆ 8 ಕಿಲೋಮೀಟರ್ ಸಾಗಿದರೆ ಇತಿಹಾಸ ಪ್ರಸಿದ್ದ ಎತ್ತರವಾದ, ರಮಣೀಯವಾದ ಶಿವಗಂಗೆ ಬೆಟ್ಟ ಕಾಣಸಿಗುತ್ತದೆ. ಶಿವಗಂಗೆ ಚಾರಣಿಗರಿಗೆ ತುಂಬಾ ಪ್ರಿಯವಾಗುವಂತಹ ಸ್ತಳ. ಸಮುದ್ರ ಮಟ್ಟದಿಂದ 1,380ಮೀಟರ್ ಅಂದರೆ 4,547 ಅಡಿ ಎತ್ತರದಲ್ಲಿರುವ ಶಿವಗಂಗೆ ಬೆಂಗಳೂರಿನಿಂದ ಪಶ್ಚಿಮ ದಿಕ್ಕಿನ ಕಡೆಯಿದೆ, ತುಮಕೂರಿನಿಂದ ಪೂರ‍್ವ ದಿಕ್ಕಿಗೆ ಇದೆ.

ಶಿವಗಂಗೆ ಬೆಟ್ಟ ನೋಡಲು ಇದು ಶಂಕಾಕ್ರುತಿಯಲ್ಲಿದ್ದು ಪೂರ‍್ವದಿಂದ ನಂದಿಯಾಕಾರ, ಪಶ್ಚಿಮದಿಂದ ಗಣಪತಿ, ಉತ್ತರದಿಂದ ಶಿವಲಿಂಗ, ದಕ್ಶಿಣದಿಂದ ಸರ‍್ಪದ ಆಕಾರದಲ್ಲಿರುವಂತೆ ಬಾಸವಾಗುತ್ತದೆ. ಹೊನ್ನಾದೇವಿ, ಗಂಗಾಂದರೇಶ್ವರ, ಶಿವಲಿಂಗ, ಪಾತಾಳಗಂಗೆ, ನಂದಿ… ಹೀಗೆ ಹಲವು ದೇವಾಲಯಗಳ ಸಂಗಮದಿಂದ ದಕ್ಶಿಣ ಕಾಶಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಶಿವಗಂಗೆಯ ಕಲ್ಲೆಲ್ಲಾ ಶಿವಲಿಂಗ, ಹುಲ್ಲೆಲ್ಲ ಪತ್ರೆ, ನೀರೆಲ್ಲ ತೀರ‍್ತ ಎಂಬ ನಂಬಿಕೆ ಅಲ್ಲಿನ ಬಕ್ತರಲ್ಲಿದೆ.

ಶಿವಗಂಗೆಯ ದ್ವಾರದಿಂದ ಸ್ವಲ್ಪ ಮೆಟ್ಟಿಲುಗಳನ್ನು ಹತ್ತಿದೊಡನೆ ಗಣಪತಿಯ ಗುಡಿ ಸಿಗುತ್ತದೆ. ಮತ್ತೆ ಮುಂದುವರಿದರೆ ಹೊನ್ನಾದೇವಿ, ಶಿವಲಿಂಗ ರೂಪದಲ್ಲಿರುವ ಗಂಗಾಂದರೇಶ್ವರ, ಪಾತಾಳಗಂಗೆ, ವೀರಬದ್ರೇಶ್ವರ, ಒಳಕಲ್ಲು ತೀರ‍್ತ, ಒಳಕಲ್ಲು ತೀರ‍್ತಕ್ಕೆ ಹೋಗುವ ಗುಹೆ, ಕೆಂಪೇಗೌಡರು ನಿರ‍್ಮಾಣ ಮಾಡಿರುವ ದೇವಸ್ತಾನದ ಶಿಲ್ಪಕಲೆ, ಆದಿಶಂಕರಾಚಾರ‍್ಯರ ಮೂರ‍್ತಿ, ಗಂಗಾದರೇಶ್ವರನ ಗುಡಿಯಲ್ಲಿರುವ ಕೆಂಪೇಗೌಡರ ಸುರಂಗ ಮಾರ‍್ಗ (ಬೆಂಗಳೂರಿನ ಗವಿಪುರದ ಗವಿಗಂಗಾದರೇಶ್ವರ ದೇವಸ್ತಾನಕ್ಕೆ ಮತ್ತು ಹುತ್ರಿದುರ‍್ಗಕ್ಕೂ ಸಂಪರ‍್ಕವಿರುವ ರಹಸ್ಯ ಮಾರ‍್ಗ ಎಂದು ಹೇಳಲಾಗುತ್ತಿದೆ.), ಅಗಸ್ತ್ಯ ರುಶಿಗಳು ಇಲ್ಲಿ ತಪಸ್ಸು ಮಾಡಿದ ಸ್ತಳ ಎನ್ನಲಾದ ಅಗಸ್ತ್ಯ ತೀರ‍್ತದ ಸುತ್ತ ನೂರೆಂಟು ಶಿವಲಿಂಗಗಳು, ವಿಶ್ಣುವರ‍್ದನನ ಪಟ್ಟದರಸಿ ಶಾಂತಲೆ ಆತ್ಮಹತ್ಯೆ ಮಾಡಿಕೊಂಡ ಜಾಗವೆನ್ನಲಾಗುವ ಶಾಂತಲ ಡ್ರಾಪ್, ಇತ್ಯಾದಿ ಇಲ್ಲಿನ ಪ್ರಮುಕ ಆಕರ‍್ಶಣೆಗಳು.

ಶಿವಗಂಗೆ ಬೆಟ್ಟದಲ್ಲಿರುವ ಹಲವು ಗುಡಿಗಳು ಮತ್ತು ನೋಡತಕ್ಕ ತಾಣಗಳ ಕುರಿತ ಮಾಹಿತಿಯನ್ನು ಮುಂದಿನ ಕಂತುಗಳಲ್ಲಿ ನೋಡೋಣ.

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: