ನಾ ನೋಡಿದ ಸಿನೆಮಾ: ಬ್ಯಾಚುಲರ್ ಪಾರ‍್ಟಿ

– ಕಿಶೋರ್ ಕುಮಾರ್.

 

ಸಾಮಾನ್ಯವಾಗಿ ಕಮರ‍್ಶಿಯಲ್ ಸಿನೆಮಾಗಳಲ್ಲಿ ಒಂದು ಮುಕ್ಯ ಪಾತ್ರದ ಸುತ್ತ ಕತೆ ಹೆಣೆಯಲಾಗುತ್ತದೆ, ಕೆಲವೊಮ್ಮೆ ಒಂದಕ್ಕಿಂತ ಹೆಚ್ಚಿನ ಪಾತ್ರಗಳು ಮುಕ್ಯ ಬೂಮಿಕೆಯಲ್ಲಿದ್ದು ಅವುಗಳ ಸುತ್ತ ಕತೆಯನ್ನು ಹೆಣೆಯಲಾಗುತ್ತದೆ. ಈ ಸಿನೆಮಾದಲ್ಲಿ ಚೂರು ಬದಲಾವಣೆ ಇದ್ದು, ಒಂದು ಮುಕ್ಯ ಪಾತ್ರ ಅದಕ್ಕೆ ಬೇಕಾಗುವ ಇನ್ನೆರಡು ಮುಕ್ಯ ಪಾತ್ರಗಳನ್ನು ತಂದು ಕತೆ ಹೆಣೆಯಲಾಗಿದೆ.

ಐಟಿ ಕೆಲಸದಲ್ಲಿರುವವರ ಕೆಲಸ, ಬದುಕು ಹಾಗೂ ಕೆಲಸದ ವಾತಾವರಣದ ಬಗ್ಗೆ ಹಲವಾರು ಸಿನೆಮಾಗಳಲ್ಲಿ ನೋಡಿರುತ್ತೇವೆ. ಇಲ್ಲಿ ಮುಕ್ಯ ಪಾತ್ರದಾರಿ ಕೂಡ ಐಟಿ ಕೆಲಸಗಾರ. ಈತನ ಬದುಕಿನಲ್ಲಿ ಹೆಂಡತಿ, ಒಳ್ಳೆಯ ಕೆಲಸ ಹಾಗೂ ಒಳ್ಳೆಯ ಮನೆ ಎಲ್ಲಾ ಇದ್ದರೂ ನೆಮ್ಮದಿ ಕಾಣದೆ, ಎಲ್ಲವನ್ನು ಅನುಸರಿಸಿಕೊಂಡು, ನೆಮ್ಮದಿಯ ಕನಸು ಕಾಣುತ್ತಾ ಮುಂದೆ ಸಾಗುವ ನಾಯಕ. ಹೆಂಡತಿ ಹಾಗೂ ಮನೆ ಇದಿಶ್ಟೆ ಈತನ ಬದುಕು. ಗಂಡ ಏನೇ ಮಾಡಿದರೂ ಎಲ್ಲದಕ್ಕೂ ಜಗಳ ತೆಗೆಯುವ, ಇಲ್ಲವೇ ಮುನಿಸಿಕೊಳ್ಳುವ ಮಡದಿ. ಗಂಡನ ಬೇಕು ಬೇಡಗಳನ್ನು ಲೆಕ್ಕಕ್ಕೆ ಇಡದೆ, ಗಂಡ ಎಂದರೆ ತನ್ನ ಇಶ್ಟಾರ‍್ತಗಳನ್ನು ಈಡೇರಿಸುವ ವ್ಯಕ್ತಿ ಎಂದಶ್ಟೆ ತಿಳಿದ ಮಡದಿಯನ್ನು ಸಮಾಜಕ್ಕೆ ಹೆದರಿ ಸಹಿಸಿಕೊಳ್ಳುವ ನಾಯಕ. ತನ್ನ ನೋವು ತನ್ನ ಸ್ನೇಹಿತರಿಗೆ ತಿಳಿದಿದ್ದರೂ ಏನು ಗೊತ್ತಿಲ್ಲದವನಂತೆ ನಟಿಸಿ, ಎಲ್ಲರಿಂದ ತುಸು ದೂರ ಉಳಿದವ. ಹೇಗಾದರೂ ಹೆಂಡತಿ‍ಯ ಪ್ರೀತಿಯನ್ನು ಸಂಪಾದಿಸಬೇಕೆಂಬ ಹಂಬಲ. ಅದಕ್ಕೂ ಸಹ ಹೆಂಡತಿಯ ಕೊಂಕು. ಇದನ್ನೆಲ್ಲ ತಿಳಿದ ಸ್ನೇಹಿತ ಎಶ್ಟೇ ಹೇಳಿದರೂ ಕೇಳದೆ, ಆತನನ್ನೇ ದೂರ ಇಡುವ ನಾಯಕ. ಯಾವುದೋ ಒಂದು ಸಂದರ‍್ಬದಲ್ಲಿ ಸಿಕ್ಕ ಸ್ನೇಹಿತ ಹಾಗೂ ಶಾಲೆಯ ಪಿ.ಟಿ.ಮಾಸ್ಟ‍ರ್ ಜೊತೆ ಕುಡಿದ ಅಮಲಿನಲ್ಲಿ ಇನ್ಯಾವುದೋ ಜಾಗಕ್ಕೆ ಬರುವ ನಾಯಕ, ಅಲ್ಲಿ ನಾಯಕನಿಗೆ ಕಾದಿದ್ದ ಆಗಾತ. ತನ್ನ ಬದುಕಿನ ಆಶಾ ಗೋಪುರವೇ ಕಳಚಿ ಬಿದ್ದಾಗ ನಾಯಕ ಮುಂದೇನು ಮಾಡುತ್ತಾನೆ. ಮುಂದೆ ಆತನ ಪಯಣ ಯಾವ ರೀತಿ ಇರುತ್ತದೆ ಎಂಬುದುದನ್ನು ಹಾಸ್ಯಮಯವಾಗಿ ಕೊಂಡೊಯ್ಯಲಾಗಿದೆ. ಮುಂದೆ ಏನಾಗಬಹುದು ಎಂಬ ಕುತೂಹಲವನ್ನು ಸಿನೆಮಾ ನೋಡಿಯೇ ತಿಳಿಯಬೇಕು.

ಮುಕ್ಯ ಪಾತ್ರದಾರಿಯಾಗಿ ದಿಗಂತ್ ನಟಿಸಿದ್ದು, ಇನ್ನುಳಿದ ಎರಡು ಮುಕ್ಯ ಪಾತ್ರಗಳಾದ ಸ್ನೇಹಿತನ ಪಾತ್ರದಲ್ಲಿ ಯೋಗಿ ಹಾಗೂ ಪಿ.ಟಿ. ಮಾಸ್ಟ‍ರ್ ಪಾತ್ರದಲ್ಲಿ ಅಚ್ಯುತ್ ರಾವ್ ನಟಿಸಿದ್ದಾರೆ. ಈ ಮೂವರು ತಮ್ಮ ನಟನೆಯಲ್ಲಿ ಗೆದ್ದಿದ್ದಾರೆ. ಇನ್ನುಳಿದಂತೆ ಸಿರಿ ರವಿಕುಮಾ‍ರ್, ಪವನ್ ಕುಮಾ‍ರ್, ಪ್ರಕಾಶ್ ತುಮಿನಾಡ್ ಹಾಗೂ ಬಾಲಾಜಿ ಮನೋಹ‍ರ್ ನಟಿಸಿದ್ದಾರೆ. ಅಬಿಜಿತ್ ಮಹೇಶ್ ಅವರ ಕತೆ ಹಾಗೂ ನಿರ‍್ದೇಶನವಿದ್ದು, ಜಿ. ಎಸ್. ಗುಪ್ತಾ ಹಾಗೂ ರಕ್ಶಿತ್ ಶೆಟ್ಟಿ ಚಿತ್ರವನ್ನು ನಿರ‍್ಮಿಸಿದ್ದಾರೆ.

ಪರಮ್ವಾಹ್ ಸ್ಟುಡಿಯೋ ಅಡಿಯಲ್ಲಿ ಬಂದಿರುವ ಚಿತ್ರ ಎಂದಮೇಲೆ ಹೆಚ್ಚಿನ ನಿರೀಕ್ಶೆ ಇರುತ್ತದೆ. ಇಲ್ಲಿ ಆ ನಿರೀಕ್ಶೆಯ ಮಟ್ಟಕ್ಕೆ ಸಿನೆಮಾ ಇಲ್ಲ ಎಂಬುದು ಎದ್ದು ಕಾಣುತ್ತದೆ. ಹಾಸ್ಯ ಸನ್ನಿವೇಶಗಳು ಚೆನ್ನಾಗಿದ್ದು, ಎಲ್ಲೂ ಸಿನೆಮಾ ನಿದಾನ ಎನಿಸದೆ ಸಾಗುತ್ತದಾದರೂ, ಏನೋ ಮಿಸ್ ಆಗಿದೆಯಲ್ಲ ಎನ್ನುವ ಬಾವನೆ ನೋಡುಗರಲ್ಲಿ ಮೂಡುತ್ತದೆ. ಹಾಡುಗಳು ಬಂದಾಗ ಇವುಗಳ ಅಗತ್ಯವಿತ್ತೇ ಎಂದೆನಿಸುತ್ತದೆ. ಸಹಜ ಅಬಿನಯದಿಂದ ಹೆಸರಾಗಿರುವ ದಿಗಂತ್ ಹಾಗೂ ಯೋಗಿ ಅವರಿಗೆ ಇನ್ನೂ ಒಳ್ಳೆಯ ಪಾತ್ರಗಳು ಸಿಗಬೇಕು, ಇವರಿಂದ ಇನ್ನೂ ಉತ್ತಮ ಸಿನೆಮಾಗಳ ನಿರೀಕ್ಶೆ ಇದೆ. ಸಮಯ ಕಳೆಯಲು ಒಮ್ಮೆ ನೋಡಬಹುದಾದ ಸಿನೆಮಾ, ಈಗ ಅಮೇಜಾನ್ ಪ್ರೈಮ್ ವೀಡಿಯೋ ದಲ್ಲಿ ಲಬ್ಯವಿದೆ.

(ಚಿತ್ರಸೆಲೆ: imdb.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications