ಹನಿಗವನಗಳು

– ವೆಂಕಟೇಶ ಚಾಗಿ.

 

***ಚಿಂತೆ***

ಬೆಳಕು ಕೊಡುವವಗಿಲ್ಲ ಸುಡುವ ಚಿಂತೆ
ಹಸಿವ ನೀಗುವವಗಿಲ್ಲ ಶ್ರಮದ ಚಿಂತೆ
ನಗಿಸಿ ತಾ ನಗುವವಗಿಲ್ಲ ದುಕ್ಕದ ಚಿಂತೆ
ಎಲ್ಲ ಬೇಡುವಗೆಲ್ಲ ಚಿಂತೆ ಮುದ್ದು ಮನಸೆ

***ಬೆಲೆ***

ಜಗವ ಬೆಳಗಿದರೆ ರವಿ ಚಂದ್ರರಿಗೆ ಬೆಲೆ
ಉಸಿರ ನೀಡಿದರೆ ಸುಳಿವ ಗಾಳಿಗೆ ಬೆಲೆ
ಒಳಿತು ಗೈದರೆ ಬುವಿಯ ಬದುಕಿಗೆ ಬೆಲೆ
ಬೆಲೆ ಇಲ್ಲದಿರೆ ಎಲ್ಲಿ ನೆಲೆ ಮುದ್ದು ಮನಸೆ

***ಅರಳುವುದು ಸತ್ಯ***

ಮಾತಿನೊಳು ಹಿತ ತುಂಬಿ ಮದುರವಾಗಿಸಿ
ಮಲ್ಲಿಗೆಯಾಗಿ ಪರಿಮಳವ ಬೀರಿದೊಡೆ
ಜಗದ ಮನವು ಅರಳುವುದು ಸತ್ಯವು
ಅದರೊಳು ಬೇಡ ಕಪಟ ಮುದ್ದು ಮನಸೆ

***ನಿನ್ನಂತೆ ನೀನಾಗು***

ಹೂವಾಗಲಾರೆ! ಹೂವಂತೆ ನಕ್ಕುಬಿಡು
ಮೋಡವಾಗಲಾರೆ! ಮೋಡದಂತೆ ಹಗುರಾಗು
ಅವರಂತೆ ನೀನಾಗಲಾರೆ ನಿನ್ನಂತೆ ನೀನಾಗು
ಜಗಕೆ ಮಾದರಿಯಾಗು ಮುದ್ದು ಮನಸೆ

(ಚಿತ್ರ ಸೆಲೆ: ecosalon.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: